ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ಮತ್ತೊಂದು ವಿಡಿಯೋ ಸುದ್ದಿ ಮಾಡಿದೆ. ಮಗುವಿನ ಪ್ರಾಣವನ್ನು ಅಪಾಯಕ್ಕೆ ತಳ್ಳಿದ ತಂದೆಯನ್ನು ಬಂಧಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಫೋಟೋ (Photo), ಸೆಲ್ಫಿಗಾಗಿ ಜನ ಜೀವವನ್ನು ಪಣಕ್ಕಿಡ್ತಾರೆ. ಅಪಾಯಕಾರಿ ಸಾಹಸಗಳನ್ನು ಮಾಡಿ ಪ್ರಾಣ ಕಳೆದುಕೊಂಡ ಎಷ್ಟೋ ಘಟನೆಗಳು ವರದಿ ಆಗ್ತಿವೆ. ಬರೀ ತಮ್ಮ ಪ್ರಾಣ ಮಾತ್ರ ಅಲ್ಲ ಮಕ್ಕಳ ಪ್ರಾಣದ ಜೊತೆ ಆಟ ಆಡುವ ಪಾಲಕರ ಸಂಖ್ಯೆ ಕೂಡ ಹೆಚ್ಚಾಗಿದೆ. ಮಗುವಿನ ಫೋಟೋ ತೆಗೆಯುವ ಆತುರದಲ್ಲಿ ಪಾಲಕರು ಮಾಡುವ ಕೆಲಸ ಆತಂಕ ಹುಟ್ಟಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ತಂದೆಯ ವಿಡಿಯೋ ಒಂದು ವೈರಲ್ (viral ) ಆಗಿದೆ. ಈ ವಿಡಿಯೋ ನೋಡಿದ ನೆಟ್ಟಗರು ಕೋಪಗೊಂಡಿದ್ದಾರೆ. ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಹುಲಿ ಜೊತೆ ಸೆಲ್ಫಿ ತೆಗೆಯಲು ಹೋಗಿ ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತಿದೆ. ಕಾಡಿನಲ್ಲಿರಲಿ ಇಲ್ಲ ಝೂ (Zoo)ನಲ್ಲಿರಲಿ, ಪ್ರಾಣಿ ಮನಸ್ಥಿತಿಯನ್ನು ತಿಳಿಯಲು ಸಾಧ್ಯವಿಲ್ಲ. ಸಭ್ಯವಾಗಿದ್ದ ಪ್ರಾಣಿಗೆ ಕಿರಿಕಿರಿಯಾದ್ರೆ ಯಾವುದೇ ಜಾಗದಲ್ಲಾದ್ರೂ ಅದು ತಿರುಗಿ ಬೀಳುತ್ತೆ. ಮೃಗಾಲಯದಲ್ಲಿ ಪ್ರಾಣಿ ಜೊತೆ ಮಂಗಾಟ ಆಡಲು ಹೋಗಿ ಪ್ರಾಣವನ್ನೇ ಬಲಿ ನೀಡಿದ ಅದೆಷ್ಟೋ ಘಟನೆ ಇದ್ರೂ ಜನರಿಗೆ ಬುದ್ಧಿ ಬಂದಿಲ್ಲ. ಮತ್ತೆ ಮತ್ತೆ ಅದೇ ತಪ್ಪನ್ನು ಮನುಷ್ಯ ಮಾಡ್ತಿದ್ದಾನೆ. ಬರೀ ತಮ್ಮ ಜೀವ ಮಾತ್ರವಲ್ಲ ಮಕ್ಕಳ ಜೀವದ ಜೊತೆ ಆಟ ಆಡ್ತಿದ್ದಾರೆ ಅನ್ನೋದಕ್ಕೆ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ತಂದೆ- ಮಗ, ಸಿಂಹದ ಬೋನಿನಲ್ಲಿದ್ದಾರೆ. ತಂದೆ ಮಗನನ್ನು ಎತ್ತಿಕೊಂಡಿದ್ದು, ಸಿಂಹದ ಬೆನ್ನಿನ ಮೇಲೆ ಮಗುವನ್ನು ಕುಳಿಸುವ ಪ್ರಯತ್ನ ನಡೆಸ್ತಿದ್ದಾನೆ. ಇದಕ್ಕೆ ಮಗು ವಿರೋಧ ವ್ಯಕ್ತಪಡಿಸ್ತಿದೆ. ಭಯದಲ್ಲಿ ಅಳ್ತಿದೆ. ಆದ್ರೆ ತಂದೆ ಬಿಡ್ತಿಲ್ಲ. ಒಂದರೆಡು ಬಾರಿ ಮಗುವನ್ನು ಸಿಂಹದ ಬೆನ್ನಿನ ಮೇಲೆ ಕುಳಿಸುವ ಪ್ರಯತ್ನ ನಡೆಸ್ತಾನೆ. ಮಗು ವಿರೋಧಿಸ್ತಾ ಸಿಂಹವನ್ನು ಟಚ್ ಮಾಡಿದೆ. ಸಿಂಹಕ್ಕೆ ಮಗುವಿನ ಉಗುರು ತಾಗಿರಬೇಕು. ತಕ್ಷಣ ತನ್ನ ರಕ್ಷಣೆಗೆ ಸಿಂಹ ತಿರುಗಿದೆ. ಅರೆ ಕ್ಷಣದಲ್ಲಿ ತಂದೆ ಮಗುವನ್ನು ಎತ್ತಿಕೊಂಡು ಅಲ್ಲಿಂದ ಓಡಿದ್ದಾನೆ. ಅದೃಷ್ಟವಾಶಾತ್ ಅಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಮಗುವಿಗೆ ಯಾವುದೇ ರೀತಿಯ ಗಾಯ ಕೂಡ ಆಗಿಲ್ಲ. ಆದ್ರೆ ಇದು ಮಗುವಿನ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುವ ಸಾಧ್ಯತೆ ಇದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ವೇಗವಾಗಿ ವೈರಲ್ ಆಗಿದೆ. ನೆಟ್ಟಿಗರು ತಂದೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಂದೆಯನ್ನು ಬಂಧಿಸುವಂತೆ ಅನೇಕರು ಆಗ್ರಹಿಸಿದ್ದಾರೆ. ಮಗು ಜೀವದ ಜೊತೆ ಆಟ ಆಡಿದ ವ್ಯಕ್ತಿ ತಂದೆಯಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಬಡ ಸಿಂಹ, ಮನುಷ್ಯ ತನ್ನ ಮನರಂಜನೆಗಾಗಿ ಮೂಖ ಪ್ರಾಣಿಗಳಿಗೆ ಹಿಂಸೆ ನೀಡಬಾರದು ಅಂತ ಕಮೆಂಟ್ ಹಾಕಿದ್ದಾರೆ. ಅಪ್ಪ – ಅಮ್ಮ ಮನೋರೋಗಿಗಳು. ಮಗುವಿನ ಭವಿಷ್ಯದ ದೃಷ್ಟಿಯಿಂದ ಮಗುವನ್ನು ಅಪ್ಪ- ಅಮ್ಮನಿಂದ ದೂರು ಮಾಡ್ಬೇಕು ಎನ್ನುವ ಒತ್ತಾಯ ಮಾಡಿದ್ದಾರೆ ನೆಟ್ಟಿಗರು. ಕಾಡಿನಲ್ಲಿರಬೇಕಾಗಿದ್ದ ಸಿಂಹವನ್ನು ಇಲ್ಲಿ ತಂದು ಹಿಂಸೆ ನೀಡಲಾಗ್ತಿದೆ. ಅದೇ ಸಮಯದಲ್ಲಿ ಮಗುವಿಗೂ ಹಿಂಸೆ ನೀಡಲಾಗ್ತಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಟ್ಟ ಪೆರೆಂಟಿಂಗ್ ಎಂಬ ಆರೋಪ ಕೂಡ ಕೇಳಿ ಬಂದಿದೆ. ಮತ್ತೆ ಕೆಲವರು ಇದು ಎಐ ಇರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ತಂದೆ ಇಷ್ಟು ದಡ್ಡನಾಗಿರಲು ಸಾಧ್ಯವಿಲ್ಲ. ಹಾಗಾಗಿ ಇದು ಎಐ ಎಂಬ ಅನುಮಾನ ಅವರಿಗೆ ಬಂದಿದೆ. ಘಟನೆ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ವಿಡಿಯೋ ನೋಡಿ ಬರೀ ಛೀ ಅಂತ ಉಗಿಯೋದಲ್ಲ, ಎಲ್ಲ ಪಾಲಕರು ಇದ್ರಿಂದ ಪಾಠ ಕಲಿಯಬೇಕಿದೆ.
