ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆ ಬಳಿ ಆಕಾಶದಲ್ಲಿ ರಾಕೆಟ್ ಮಾದರಿಯ ನಿಗೂಢ ವಸ್ತುವೊಂದು ಕಾಣಿಸಿಕೊಂಡು ಚರ್ಚೆಗೆ ಕಾರಣವಾಗಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ರಾಕೆಟ್, ಯುಎಫ್‌ಒ ಅಥವಾ ಜೆಟ್ ಇರಬಹುದೇ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಬೆಂಗಳೂರು (ಜೂ.07): ಸಿಲಿಕಾನ್ ಸಿಟಿ ಬೆಂಗಳೂರಿನ ಆಕಾಶದಲ್ಲಿ ಕಳೆದ ಎರಡು ದಿನಗಳ ಹಿಂದೆ ಕಂಡುಬಂದ ಅಪರೂಪದ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಕಾಶದಿಂದ ಭೂಮಿಗೆ ರಾಕೆಟ್ ಮಾದರಿಯ ವಸ್ತುವೊಂದು ಹೊಗೆಯನ್ನು ಉಗುಳುತ್ತಾ ಧುಮ್ಮಿಕ್ಕುತ್ತಿರುವಂತೆ ಕಾಣುವ ದೃಶ್ಯ ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿದೆ. ಇದನ್ನು ನೋಡಿದ ತಕ್ಷಣ ಯಾವುದಾದರೂ ನಕ್ಷತ್ರ ಅಥವಾ ಆಕಾಶದ ತುಂಡೊಂದು ಭೂಮಿಗೆ ಅಪ್ಪಳಿಸುತ್ತಿದೆಯೇ ಎಂಬಂತೆ ಭಾಸವಾಗುತ್ತಿತ್ತು. ಆದರೆ, ಇಷ್ಟಕ್ಕೂ ಆಕಾಶದಲ್ಲಿ ಕಂಡ ಆ ನಿಗೂಢ ವಸ್ತು ಏನು ಎಂಬುದು ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆ ಬಳಿ ಕಂಡ ದೃಶ್ಯ:

ರಾಘವೇಂದ್ರ ಗುಡಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ರೋಮಾಂಚಕ ದೃಶ್ಯ ಸೆರೆಯಾಗಿದೆ. ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ರಸ್ತೆ ಮೇಲ್ಸೇತುವೆಯಲ್ಲಿ (KR Market road flyover) ಶುಕ್ರವಾರ ಸಂಜೆ ವೇಳೆ ಈ ವಿಚಿತ್ರ ದೃಶ್ಯ ಗೋಚರಿಸಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಬೆಂಕಿ ಅವಘಡ ಅಥವಾ ಕಟ್ಟಡ ನೆಲಸಮದ ವೇಳೆ ಧೂಳು ಮತ್ತು ಹೊಗೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಅವುಗಳು ಆಕಾಶದಲ್ಲಿ ಅಷ್ಟೊಂದು ಎತ್ತರಕ್ಕೆ ಹೋಗುವುದಿಲ್ಲ. ಗಗನಚುಂಬಿ ಕಟ್ಟಡಗಳು ಗಾಳಿಯನ್ನು ತಡೆಗಟ್ಟುವುದರಿಂದ ಇಂತಹ ದೃಶ್ಯಗಳು ಬೆಂಗಳೂರಿನಲ್ಲಿ ಅಪರೂಪ.

ರಾಕೆಟ್? ಯುಎಫ್‌ಒ? ನೆಟ್ಟಿಗರ ಪ್ರಶ್ನೆಗಳ ಸುರಿಮಳೆ:

ಈ ವಿಡಿಯೋದಲ್ಲಿ, ಬಾಹ್ಯಾಕಾಶದ ವಸ್ತುವೊಂದು ಅಥವಾ ಮಾನವ ನಿರ್ಮಿತ ರಾಕೆಟ್ ಮಾದರಿಯ ವಸ್ತುವೊಂದು ದಟ್ಟವಾದ ಹೊಗೆಯನ್ನು ಬಿಡುತ್ತಾ ಭೂಮಿಯತ್ತ ಬರುತ್ತಿರುವಂತೆ ಭಾಸವಾಗುತ್ತದೆ. ಆಶ್ಚರ್ಯಚಕಿತರಾದ ಅವರು ತಕ್ಷಣವೇ ಅದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು, ನೆಟ್ಟಿಗರ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ.

‘ಬೆಂಗಳೂರಿನಲ್ಲಿ ಇಂದು ನಾನು ಕಂಡ ದೃಶ್ಯ. ಇದು ಆಪ್ಟಿಕಲ್ ಇಲ್ಯೂಷನ್, ಹೊಗೆ ಏನಾದ್ರೂ ಬಂದಿರೋದ? ಅಥವಾ ಅನ್ ಐಡೆಂಟಿಫೈಡ್ ಫಾರಿನ್ ಅಬ್ಜೆಕ್ಟ? ಇದು optical illusion ಅಂತೂ ಅಲ್ಲ. ಯಾಕಂದ್ರೆ ನಾನೇ ಕಣ್ಣಾರೆ ಕಂಡು, ನನ್ನ ಕೈಯಾರೆ ಮೊಬೈಲ್ ಅಲ್ಲಿ ತೆಗೆದ ದೃಶ್ಯ ಇದು. ಹಾಗಿದ್ರೆ ಏನಿದು?’ ಎಂದು ಅವರು ತಮಗಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಉತ್ತರ ಹುಡುಕಿದ ನೆಟ್ಟಿಗರು:

ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಲು ಪ್ರಯತ್ನಿಸಿದ್ದಾರೆ. ಒಬ್ಬ ಬಳಕೆದಾರರು, 'ಸಹೋದರ, ಅದು ಜೆಟ್ (Jet), ನನ್ನ ಬಳಿ ವಿಡಿಯೋ ಇದೆ, ಇದು ಯುಎಫ್‌ಒ ಅಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಘವೇಂದ್ರ ಗುಡಿ ಅವರು, ‘ಓಹ್ ಓಕೆ. ಆದರೆ ನಾನು ಗಮನಿಸಿದ ಹಾಗೆ ವಿಮಾನದ ಶಬ್ದ ಕೇಳಿಸಲಿಲ್ಲ. ಬಹುಶಃ ಇದು ಯುಎವಿ (UAV - ಮಾನವರಹಿತ ವಿಮಾನ) ಕೂಡ ಆಗಿರಬಹುದು’ ಎಂದು ಊಹಿಸುವ ಮೂಲಕ ತಮ್ಮ ಕುತೂಹಲಕ್ಕೆ ಸಮಾಧಾನ ತಂದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕುತೂಹಲ ಕೆರಳಿಸಿದೆ.

View post on Instagram