ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿದ ಆರೋಪದಡಿ, ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಯಾದಗಿರಿ (ಜೂ.04): ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿದ ಆರೋಪದಡಿ, ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವನ್ಯಪ್ರಾಣಿಗಳಾದ ಮೊಲ, ನರಿ, ಮುಳ್ಳುಹಂದಿ, ಕೃಷ್ಣಮೃಗ ಹಾಗೂ ಕಾಡು ಹಂದಿಗಳನ್ನು ಬೇಟೆಯಾಡುತ್ತಿರುವ ದೃಶ್ಯಗಳಿರುವ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ಅರಣ್ಯ ಇಲಾಖೆ ತನಿಖೆ ಆರಂಭಿಸಿ ವಿಶೇಷ ಕಾರ್ಯಾಚರಣೆ ನಡೆಸಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನೀರ್ ಅಹ್ಮದ್ ಮತ್ತು ರಮೇಶ ಕನಕಟ್ಟಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಮಂಗಳವಾರ ನಸುಕಿನ ಜಾವ ವಲಯ ಅರಣ್ಯಾಧಿಕಾರಿಗಳಾದ ಭಾಗಪ್ಪಗೌಡ, ಬುರಾನುದ್ದೀನ್, ರೇವಣಸಿದ್ದಪ್ಪ ತಾರಖೇಡ್ ಹಾಗೂ ರಾಹುಲ್ ಸಾದುರೆ ಅವರ ತಂಡ ಕಕ್ಕೇರಾ ಗ್ರಾಮದ ಮಲ್ಲಿಕಾರ್ಜುನ ದೊಡ್ಡಿಗೆ ತೆರಳುವ ಸಿಸಿ ರಸ್ತೆಯ ಸಮೀಪ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿತು.

ಪ್ರಕರಣ ದಾಖಲು

ಬಂಧಿತರನ್ನು ಮೌನೇಶ (19), ದೇವಿಂದ್ರ (19), ಚೆನ್ನಪ್ಪ (18), ಯಂಕಪ್ಪ (40) ಹಾಗೂ ಬಸಣ್ಣ (65) ಎಂದು ಗುರುತಿಸಲಾಗಿದೆ. ಇವರು ಕಕ್ಕೇರಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಹೆಚ್.ಬಿ. ಬಿರಾದಾರ, ರಾಯನಗೌಡ, ಕಾಶಪ್ಪ ಹಾಗೂ ಅರಣ್ಯ ಸಿಬ್ಬಂದಿಗಳಾದ ಕಾಶೀನಾಥ ರಾಠೋಡ್, ಮಲ್ಲಪ್ಪ ಚೌಧರಿ, ಲಾಲಮಹ್ಮದ್, ರಾಜು, ಚಿದಾನಂದಯ್ಯ ಹಿರೇಮಠ, ಅರಣ್ಯ ವೀಕ್ಷಕರಾದ ರವಿಕುಮಾರ, ವರುಣಕುಮಾರ ಮತ್ತು ವಾಹನ ಚಾಲಕ ನಾಗೇಶ ಭಾಗವಹಿಸಿದ್ದರು.