ಜನಪ್ರಿಯ ಯೂಟ್ಯೂಬರ್ ಸೌರವ್ ಜೋಶಿ ಮತ್ತು ಅವರ ಪತ್ನಿ, ಅವಕಾಶ ವಂಚಿತ ಶಾಲಾ ಮಕ್ಕಳಿಗಾಗಿ ಸಂಪೂರ್ಣ ಇಂಡಿಗೋ ವಿಮಾನವನ್ನು ಬುಕ್ ಮಾಡಿ, ಅವರಿಗೆ ಜೀವನದ ಮೊದಲ ವಿಮಾನಯಾನದ ಸ್ಮರಣೀಯ ಅನುಭವವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮಾನವೀಯ ಕಾರ್ಯವು ಲಕ್ಷಾಂತರ ಜನರ ಪ್ರಶಂಸೆಗೆ ಪಾತ್ರವಾಗಿದೆ.

ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗುತ್ತಿರುವ ಒಂದು ವಿಡಿಯೋ ಲಕ್ಷಾಂತರ ಜನರ ಮನಸ್ಸು ಮುಟ್ಟಿದೆ. ಜನಪ್ರಿಯ ಯೂಟ್ಯೂಬರ್ (YouTuber) ಸೌರವ್ ಜೋಶಿ (Sourav Joshi) ಮತ್ತು ಅವರ ಪತ್ನಿ ಅವಂತಿಕಾ ಭಟ್ (Avantika Bhat) ಅವರು ಮಾಡಿದ ಮಾನವೀಯ ಕಾರ್ಯ ಈಗ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

ಸಾಮಾನ್ಯವಾಗಿ ದುಬಾರಿ ವೆಚ್ಚದ ಕಾರಣದಿಂದ ವಿಮಾನ (Flight) ಪ್ರಯಾಣವೇ ಕನಸಾಗಿರುವ ಬಡ ಮತ್ತು ಅವಕಾಶ ವಂಚಿತ ಶಾಲಾ ಮಕ್ಕಳಿಗಾಗಿ ಈ ದಂಪತಿ ಇಂಡಿಗೋ (IndiGo) ವಿಮಾನದ ಸಂಪೂರ್ಣ ಸೀಟುಗಳನ್ನು ಬುಕ್ ಮಾಡಿ, ಅವರ ಜೀವನದ ಮೊದಲ ವಿಮಾನಯಾನ (First Flight Experience) ಅನುಭವವನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ, ಉತ್ತರಾಖಂಡದ ಹಲ್ದ್ವಾನಿ (Haldwani) ಸಮೀಪದ ಪಂತ್‌ನಗರ (Pantnagar) ವಿಮಾನ ನಿಲ್ದಾಣಕ್ಕೆ ಮಕ್ಕಳನ್ನು ವಿಶೇಷ ಬಸ್‌ನಲ್ಲಿ ಕರೆತರಲಾಯಿತು. ಅಲ್ಲಿ ಪ್ರತಿಯೊಬ್ಬರಿಗೂ ಬೋರ್ಡಿಂಗ್ ಪಾಸ್ (Boarding Pass) ನೀಡಲಾಗಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿ ವಿಶೇಷ ಸ್ವಾಗತ ಕೋರಿದರು.

ವಿಮಾನ ಟೇಕಾಫ್ ವೇಳೆ ಮಕ್ಕಳು ಭಯ

ಮೊದಲ ಬಾರಿಗೆ ವಿಮಾನದಲ್ಲಿ ಕುಳಿತ ಮಕ್ಕಳು ತಮ್ಮ ಸಂತೋಷವನ್ನು ಮಾತಿನಲ್ಲಿ ಹೇಳಲಾಗದಷ್ಟು ಉತ್ಸಾಹದಿಂದ ಕಂಗೊಳಿಸುತ್ತಿದ್ದರು. ಹಲವರಿಗೆ ಇದು ನಿಜವಾಗಿಯೂ ನಡೆಯುತ್ತಿದೆಯೇ ಎಂಬ ಆಶ್ಚರ್ಯವೂ ಇತ್ತು. ವಿಮಾನ ಟೇಕ್‌ಆಫ್ (Take-off) ಆಗುವ ವೇಳೆ ಕೆಲ ಮಕ್ಕಳು ಭಯಗೊಂಡಿದ್ದರೂ, ಸೌರವ್ ಜೋಶಿ ಮತ್ತು ಅವಂತಿಕಾ ಅವರೊಂದಿಗೆ ನಿರಂತರವಾಗಿ ಮಾತನಾಡಿ ಧೈರ್ಯ ತುಂಬಿದರು. ಲ್ಯಾಂಡಿಂಗ್ (Landing) ಸಮಯದಲ್ಲಿಯೂ ಮಕ್ಕಳ ಭಯವನ್ನು ಕಡಿಮೆ ಮಾಡಲು ಅವರು ವಿಶೇಷ ಕಾಳಜಿ ವಹಿಸಿದರು.

ಪ್ರಯಾಣದ ನಂತರ ಎಲ್ಲ ಮಕ್ಕಳನ್ನು ನೋಯ್ಡಾ (Noida) ಪ್ರದೇಶದ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ ಭೋಜನ (Dinner) ವ್ಯವಸ್ಥೆ ಮಾಡಲಾಯಿತು. ಬಳಿಕ ಗೇಮಿಂಗ್ ಆರ್ಕೇಡ್ (Gaming Arcade) ನಲ್ಲಿ ಆಟವಾಡಲು ಅವಕಾಶ ನೀಡಲಾಯಿತು. ಪಿಜ್ಜಾ (Pizza) ಸವಿದು, ಆಟಗಳಲ್ಲಿ ತೊಡಗಿ ಮಕ್ಕಳು ದಿನವಿಡೀ ಸಂತೋಷದಿಂದ ಕಾಲ ಕಳೆಯಿದರು. ಸಂಜೆಯ ವೇಳೆಗೆ ಮಕ್ಕಳನ್ನು ಸುರಕ್ಷಿತವಾಗಿ ಬಸ್‌ನಲ್ಲಿ ಹಿಂದಿರುಗಿಸಿ ಕಳುಹಿಸಿದ ಸೌರವ್ ಮತ್ತು ಅವಂತಿಕಾ, ಅವರು ಹೊರಡುವವರೆಗೂ ಅಲ್ಲಿಯೇ ಇದ್ದರು. ತಮ್ಮ ಯೂಟ್ಯೂಬ್ (YouTube) ವಿಡಿಯೋ ಮತ್ತು ಇನ್‌ಸ್ಟಾಗ್ರಾಂ (Instagram) ಪೋಸ್ಟ್‌ಗಳ ಮೂಲಕ ಈ ನೆನಪಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಬಡ ಮಕ್ಕಳ ಕನಸಿಗೆ ರೆಕ್ಕೆ ಕೊಟ್ಟಿದ್ದೀರಿ

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾವಿರಾರು ಮಂದಿ ಈ ದಂಪತಿಯ ಮಾನವೀಯತೆ, ಮಕ್ಕಳ ಮೇಲಿನ ಪ್ರೀತಿ ಮತ್ತು ಸಮಾಜಕ್ಕೆ ನೀಡಿರುವ ಪ್ರೇರಣೆಯನ್ನು ಕೊಂಡಾಡುತ್ತಿದ್ದಾರೆ. 'ಬಡ ಮಕ್ಕಳ ಕನಸಿಗೆ ರೆಕ್ಕೆ ಕೊಟ್ಟಿದ್ದೀರಿ', 'ಇದು ಹಣಕ್ಕಿಂತ ದೊಡ್ಡ ಮಾನವೀಯತೆ', 'ಮಕ್ಕಳ ಮುಖದ ನಗು ಕಣ್ಣೀರನ್ನು ತರಿಸುತ್ತದೆ' ಎಂಬಂತಹ ಸಾವಿರಾರು ಕಾಮೆಂಟ್‌ಗಳು ಹರಿದು ಬರುತ್ತಿವೆ.

ಈ ಒಂದು ದಿನದ ಪ್ರಯಾಣ ಮಕ್ಕಳಿಗೆ ಕೇವಲ ವಿಮಾನಯಾನವಲ್ಲ, ಜೀವನಪೂರ್ತಿ ಮರೆಯಲಾಗದ ನೆನಪಾಗಿ ಉಳಿದಿದೆ. ಮಾನವೀಯತೆ, ಪ್ರೀತಿ ಮತ್ತು ಹಂಚಿಕೊಳ್ಳುವ ಸಂತೋಷವೇ ನಿಜವಾದ ಶ್ರೀಮಂತಿಕೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

View post on Instagram