ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನ 59 ವರ್ಷ ಹಳೆಯ ಬಿಲ್ ಒಂದು ವೈರಲ್ ಆಗಿದ್ದು, 1966ರಲ್ಲಿ ಒಂದು ರಾತ್ರಿ ತಂಗಲು ಕೇವಲ ₹127 ವೆಚ್ಚವಾಗಿತ್ತು ಎಂದು ತೋರಿಸುತ್ತದೆ. ಅಂದಿನ ಚಿನ್ನದ ಬೆಲೆಗೆ ಹೋಲಿಸಿದಾಗ, ಆ ಕಾಲದಲ್ಲೂ ಇದು ಅತ್ಯಂತ ಐಷಾರಾಮಿ ತಾಣವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.

ಬೆಂಗಳೂರು (ಮೇ.20): ದೇಶದ ಆರ್ಥಿಕ ರಾಜಧಾನಿ ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಎದುರು, ಅರಬ್ಬಿ ಸಮುದ್ರದ ತೀರದಲ್ಲಿ ಭವ್ಯವಾಗಿ ನಿಂತಿರುವ 'ದಿ ತಾಜ್ ಮಹಲ್ ಪ್ಯಾಲೇಸ್' (The Taj Mahal Palace) ಹೋಟೆಲ್ ಜಾಗತಿಕ ಮಟ್ಟದಲ್ಲಿ ಅತ್ಯಂತ ಐಷಾರಾಮಿ ಮತ್ತು ಐತಿಹಾಸಿಕ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಮುಂಬೈಗೆ ಬರುವ ಪ್ರತಿಯೊಬ್ಬ ಟೂರಿಸ್ಟ್‌ ಕೂಡ ಈ ಭವ್ಯ ಹೋಟೆಲ್ ಮುಂದೆ ನಿಂತು ಒಂದು ಫೋಟೋ ಕ್ಲಿಕ್ಕಿಸಿಕೊಳ್ಳ ಆಸೆಪಡುತ್ತಾನೆ. ಇಂತಹ ಜಗತ್ಪ್ರಸಿದ್ಧ ಹೋಟೆಲ್‌ನಲ್ಲಿ ದಶಕಗಳ ಹಿಂದೆ, ಅಂದರೆ ಸುಮಾರು 59 ವರ್ಷಗಳ ಹಿಂದೆ ಒಂದು ರಾತ್ರಿ ತಂಗಲು ಎಷ್ಟು ವೆಚ್ಚವಾಗುತ್ತಿತ್ತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

Add Asianetnews Kannada as a Preferred SourcegooglePreferred

ರೆಡ್ಡಿಟ್ (Reddit) ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿರುವ ದಶಕಗಳಷ್ಟು ಹಳೆಯ ಹೋಟೆಲ್ ಬಿಲ್ ಒಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ಅಂದಿನ ಕಾಲದ ಐಷಾರಾಮಿ ಜೀವನದ ಅಪರೂಪದ ನೋಟವನ್ನು ಬಿಚ್ಚಿಟ್ಟಿದೆ.

ಕೇವಲ 127 ರೂಪಾಯಿಗೆ ತಾಜ್ ಹೋಟೆಲ್ ವಾಸ್ತವ್ಯ!

ರೆಡ್ಡಿಟ್ ಬಳಕೆದಾರರಾದ @Clumsy_cap ಎಂಬುವವರು ಈ 59 ವರ್ಷ ಹಳೆಯ ಅಪರೂಪದ ಬಿಲ್ ಅನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 1966ರ ಈ ಬಿಲ್ ಪ್ರಕಾರ, ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಕೇವಲ 127 ರೂಪಾಯಿ ಪಾವತಿಸಿ ಒಂದು ರಾತ್ರಿ ಐಷಾರಾಮಿ ವಾಸ್ತವ್ಯ ಹೂಡಬಹುದಾಗಿತ್ತು! ಈ ಪೋಸ್ಟ್ ಆನ್‌ಲೈನ್‌ನಲ್ಲಿ ಭಾರಿ ಅಚ್ಚರಿ ಮೂಡಿಸಿದ್ದು, ಅಂದಿನ ಬೆಲೆ ಮತ್ತು ಇಂದಿನ ಹಣದುಬ್ಬರವನ್ನು ನೋಡಿ ನೆಟ್ಟಿಗರು ಆಶ್ಚರ್ಯಪಟ್ಟೊದ್ದಾರೆ.

ಮತ್ತೊಬ್ಬ ರೆಡ್ಡಿಟ್ ಬಳಕೆದಾರರು ಹಂಚಿಕೊಂಡಿರುವ ದರ ಪಟ್ಟಿಯ (Rate List) ಪ್ರಕಾರ, 1966ರ ಜನವರಿ 10 ರಂದು ತಾಜ್ ಹೋಟೆಲ್‌ನ ಒಂದು ರೂಮ್‌ನ ಮೂಲ ಬಾಡಿಗೆ ಕೇವಲ 105 ರೂಪಾಯಿ ಆಗಿತ್ತು. ಅದಕ್ಕೆ ಹೆಚ್ಚುವರಿಯಾಗಿ 11 ರೂಪಾಯಿ ಸೇವಾ ತೆರಿಗೆ (Service Tax) ಮತ್ತು 70 ಪೈಸೆ ಸಿಬ್ಬಂದಿ ಶುಲ್ಕವನ್ನು (Staff Charges) ಸೇರಿಸಲಾಗಿತ್ತು. ಇದರಿಂದಾಗಿ ಒಟ್ಟು ಮೊತ್ತ 116.70 ರೂಪಾಯಿ ಆಗಿತ್ತು. ಇದಕ್ಕೆ ಇತರೆ ಸಣ್ಣಪುಟ್ಟ ಶುಲ್ಕಗಳನ್ನು ಒಳಗೊಂಡಂತೆ ಗ್ರಾಹಕರು ಪಾವತಿಸಿದ ಅಂತಿಮ ಬಿಲ್ ಮೊತ್ತ 127.70 ರೂಪಾಯಿ ಆಗಿತ್ತು. ಇನ್ನು ಈ ಬಿಲ್ ಪಾವತಿಯ ರಶೀದಿಯ ಮೇಲೆ ಅಂದಿನ ಕಾಲದ ಪದ್ಧತಿಯಂತೆ 'ರೆವೆನ್ಯೂ ಸ್ಟ್ಯಾಂಪ್' (ಕಂದಾಯ ಚೀಟಿ) ಅಂಟಿಸಿರುವುದೂ ಸಹ ಬಿಲ್‌ನಲ್ಲಿ ಕಂಡಿದೆ.

ಪ್ರಸ್ತುತ ದಿನಗಳಲ್ಲಿ ಅದೇ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು ಕನಿಷ್ಠ ಆರಂಭಿಕ ದರವೇ ಸುಮಾರು 34,000 ರೂಪಾಯಿಗಳಷ್ಟಿದೆ. ಇದು ದಶಕಗಳ ಅವಧಿಯಲ್ಲಿ ದೇಶದ ಆರ್ಥಿಕತೆ ಮತ್ತು ಐಷಾರಾಮಿ ಮಾನದಂಡಗಳು ಎಷ್ಟು ಬದಲಾಗಿವೆ ಎಂಬುದನ್ನು ತೋರಿಸುತ್ತದೆ.

1966ರ ಬಂಗಾರದ ಬೆಲೆ ಮತ್ತು 127 ರೂಪಾಯಿಯ ಅಸಲಿ ಮೌಲ್ಯ!

ಮೇಲ್ನೋಟಕ್ಕೆ 127 ರೂಪಾಯಿ ತೀರಾ ಕಡಿಮೆ ಎನಿಸಿದರೂ, 1966ರ ಕಾಲಘಟ್ಟದಲ್ಲಿ ಈ ಮೊತ್ತ ಸಣ್ಣದೇನಲ್ಲ. ಅಂದಿನ ಕಾಲದ ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಅಂದಿನ ಚಿನ್ನದ ಬೆಲೆಯನ್ನು ಗಮನಿಸಬೇಕು. 1966ರಲ್ಲಿ ಭಾರತದಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ ಕೇವಲ 84 ರೂಪಾಯಿ ಇತ್ತು! ಅಂದರೆ, ಚಿನ್ನದ ಬೆಲೆಗಿಂತಲೂ ಹೋಟೆಲ್‌ನ ಒಂದು ರಾತ್ರಿಯ ಬಾಡಿಗೆ ಹೆಚ್ಚಾಗಿತ್ತು. ಇದರರ್ಥ, ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಅಂದಿನ ಕಾಲದಲ್ಲೂ ದೇಶದ ಅತ್ಯಂತ ದುಬಾರಿ ಮತ್ತು ಶ್ರೀಮಂತರ ಹೋಟೆಲ್ ಆಗಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ನೆಟ್ಟಿಗರ ಸ್ವಾರಸ್ಯಕರ ಕಮೆಂಟ್‌ಗಳು

ಈ ವೈರಲ್ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಣದುಬ್ಬರವನ್ನು (Inflation) ಲೆಕ್ಕಹಾಕಿ ಕಮೆಂಟ್ ಮಾಡಿರುವ ಯೂಸರ್‌ ಒಬ್ಬರು, "1966ರ 100 ರೂಪಾಯಿಯ ಮೌಲ್ಯವು ಇಂದಿನ ಮಾರುಕಟ್ಟೆಯಲ್ಲಿ ಸರಿಸುಮಾರು 8,000 ರೂಪಾಯಿಗಳಿಗೆ ಸಮಾನವಾಗಿದೆ" ಎಂದು ವಿಶ್ಲೇಷಿಸಿದ್ದಾರೆ. ಇನ್ನು ಇಷ್ಟು ಹಳೆಯ ಬಿಲ್ ಎಲ್ಲಿಂದ ಸಿಕ್ಕಿತು ಎಂದು ನೆಟ್ಟಿಗರು ಪ್ರಶ್ನಿಸಿದಾಗ, ಪೋಸ್ಟ್ ಮಾಡಿದ ವ್ಯಕ್ತಿಯು "ಇದು ನನ್ನ ಸ್ನೇಹಿತನ ಕುಟುಂಬದವರು ದಶಕಗಳಿಂದ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಟ್ಟಿದ್ದ ಅಪರೂಪದ ಬಿಲ್" ಎಂದು ಉತ್ತರಿಸಿದ್ದಾರೆ.