ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಆಂಧ್ರಪ್ರದೇಶದಲ್ಲಿ ₹2200 ಕೋಟಿ ವೆಚ್ಚದ ಬೃಹತ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ, ಇದು 5000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ಇದೇ ಸಮಯದಲ್ಲಿ, ಕರ್ನಾಟಕದ ಕೋಲಾರದಲ್ಲಿ ನಾಮಫಲಕ ವಿಚಾರವಾಗಿ ರಾಯಲ್ ಎನ್‌ಫೀಲ್ಡ್ ಶೋರೂಮ್ ದಾಳಿ ನಡೆಸಿದ ಘಟನೆ ನಡೆದಿದೆ.
ಬೆಂಗಳೂರು (ಮೇ.8): ಒಂದೆಡೆ ರಾಜ್ಯದಲ್ಲಿ ಕನ್ನಡ ಕಾರ್ಯಕರ್ತರು ರಾಯಲ್ ಎನ್‌ಫೀಲ್ಡ್ ಶೋರೂಮ್‌ನಲ್ಲಿ ಕನ್ನಡ ವಿಚಾರವಾಗಿ ದಾಳಿ ಮಾಡಿರುವ ದಿನವೇ ಕಂಪನಿ ಆಂಧ್ರಪ್ರದೇಶದಲ್ಲಿ ತನ್ನ ಮೇಜರ್ ಪ್ಲ್ಯಾಂಟ್ ಘೋಷಣೆ ಮಾಡಿದೆ. ಈ ಎರಡೂ ವಿಚಾರ ಕಾಕತಾಳೀಯವಾಗಿದ್ದರೂ, ಹೂಡಿಕೆಯ ವಿಚಾರದಲ್ಲಿ ಕರ್ನಾಟಕ ಮತ್ತೊಂದು ಪ್ರಮುಖ ಅವಕಾಶವನ್ನು ತಪ್ಪಿಸಿಕೊಂಡಂತಾಗಿದೆ. ಅದಾಗಲೇ ತಮಿಳುನಾಡಿನಲ್ಲಿ ಒಂದು ಉತ್ಪಾದನಾ ಘಟಕ ಹೊಂದಿರುವ ರಾಯಲ್ ಎನ್‌ಫೀಲ್ಡ್ ತಮಿಳುನಾಡು ಹೊರತಾಗಿ ಮತ್ತೊಂದು ರಾಜ್ಯದಲ್ಲಿ ಉತ್ಪಾದನಾ ಘಟಕವನ್ನು ತೆರೆಯುವ ಬಗ್ಗೆ ವರ್ಷಗಳ ಹಿಂದೆ ವಿಚಾರ ಮಾಡಿತ್ತು. ಈಗ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ನೀಡಿದ ಆಫರ್ ಒಪ್ಪಿರುವ ಕಂಪನಿ, ಅಂದಾಜು 2200 ಕೋಟಿ ರೂಪಾಯಿ ಹೂಡಿಕೆಯ ಪ್ಲ್ಯಾಂಟ್‌ಅನ್ನು ರಾಯಲ್‌ಸೀಮಾ ಭಾಗದಲ್ಲಿ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಂಡಿದೆ.

ಖ್ಯಾತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ 'ರಾಯಲ್ ಎನ್‌ಫೀಲ್ಡ್' (Royal Enfield), ಆಂಧ್ರಪ್ರದೇಶದಲ್ಲಿ ತನ್ನ ನೂತನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. 1950ರ ದಶಕದಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ, ಕಂಪನಿಯು ತಮಿಳುನಾಡಿನಿಂದ ಹೊರಗೆ ಸ್ಥಾಪಿಸುತ್ತಿರುವ ಮೊದಲ ಬೃಹತ್ ಉತ್ಪಾದನಾ ಘಟಕ ಇದಾಗಲಿದೆ.
ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯ ಸಮೀಪವಿರುವ ತಿರುಪತಿ ಜಿಲ್ಲೆಯ ಸತ್ಯವೇಡು ಎಂಬಲ್ಲಿ ಈ ನೂತನ ಘಟಕ ತಲೆ ಎತ್ತಲಿದೆ. ಆಂಧ್ರಪ್ರದೇಶ ರಾಜ್ಯ ಹೂಡಿಕೆ ಉತ್ತೇಜನಾ ಮಂಡಳಿಯ (SIPB) ಭಾಗವಾಗಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಯೋಜನೆಗೆ ವೈಯಕ್ತಿಕವಾಗಿ ಅನುಮೋದನೆ ನೀಡಿದ್ದಾರೆ ಎಂದು ವರದಿಯಾಗಿದೆ.
5 ಸಾವಿರಕ್ಕೂ ಅಧಿಕ ಉದ್ಯೋಗ
ಎರಡು ಹಂತಗಳಲ್ಲಿ ಕಂಪನಿಯು ಸುಮಾರು 2,200 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಈ ಘಟಕವು ವಾರ್ಷಿಕ 9 ಲಕ್ಷ ಯುನಿಟ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಯೋಜನೆಯಿಂದ ಈ ಭಾಗದಲ್ಲಿ ಸುಮಾರು 5,000 ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
ವೆಂಡರ್ ಪಾರ್ಕ್ ಸೌಲಭ್ಯ
ಕಂಪನಿಗೆ ಸುಮಾರು 267 ಎಕರೆ ಭೂಮಿಯನ್ನು ನಿಗದಿಪಡಿಸಲಾಗಿದ್ದು, ಉತ್ಪಾದನಾ ಘಟಕದ ಜೊತೆಗೆ ಪ್ರತ್ಯೇಕ 'ವೆಂಡರ್ ಪಾರ್ಕ್' (Vendor Park) ಅನ್ನು ಕೂಡ ಇಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಬಿಡಿಭಾಗಗಳ ಪೂರೈಕೆ ವ್ಯವಸ್ಥೆ ಸುಗಮವಾಗಲಿದ್ದು, ಸಾರಿಗೆ ವೆಚ್ಚ ಕಡಿಮೆಯಾಗುವುದಲ್ಲದೆ ಉತ್ಪಾದನಾ ಪ್ರಕ್ರಿಯೆಯೂ ವೇಗವನ್ನು ಪಡೆದುಕೊಳ್ಳಲಿದೆ.
ಯೋಜನೆಯ ಕಾಲಮಿತಿ
ರಾಯಲ್ ಎನ್‌ಫೀಲ್ಡ್‌ನ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತವು 2029 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಮತ್ತು ಎರಡನೇ ಹಂತವು 2032 ರ ವೇಳೆಗೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇರುವ ಭಾರಿ ಬೇಡಿಕೆಯನ್ನು ಪೂರೈಸಲು ಈ ಘಟಕವು ಪೂರಕವಾಗಲಿದೆ.
ಕೋಲಾರದಲ್ಲಿ ರಾಯಲ್ ಎನ್‌ಫೀಲ್ಡ್ ಶೋರೂಮ್ ಮೇಲೆ ದಾಳಿ
ಒಂದೆಡೆ ಕಂಪನಿ ತನ್ನ ಪ್ರಮುಖ ಉತ್ಪಾದನಾ ಘಟಕವನ್ನು ಘೋಷಣೆ ಮಾಡಿರುವ ದಿನವೇ ಸೋಶಿಯಲ್ ಮೀಡಿಯಾದಲ್ಲಿ ಕರ್ನಾಟಕದ ಕೋಲಾರದಲ್ಲಿರುವ ರಾಯಲ್ ಎನ್‌ಫೀಲ್ಡ್ ಶೋರೂಮ್ ಮೇಲೆ ಕನ್ನಡ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಕನ್ನಡ ನಾಮಫಲಕದ ವಿಚಾರವಾಗಿ ದಾಳಿ ಮಾಡಿರುವ ಕರ್ನಾಟಕ ನಾಡು ನುಡಿ ಸ್ವಾಭಿಮಾನಿ ವೇದಿಕೆ, ಶೋರೂಮ್‌ನ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಚ್ಚರಿಸಿದ್ದಾರೆ.


