ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ವಿಳಂಬಕ್ಕೆ ಭಾರತವೇ ಕಾರಣ ಎಂದು ಜಪಾನ್ ಆರೋಪಿಸಿದ್ದು, ಭಾರತ ಇದನ್ನು ತಳ್ಳಿಹಾಕಿದೆ. ತಾಂತ್ರಿಕ ಬದಲಾವಣೆಗಳು, ವೆಚ್ಚದ ಭಾರಿ ಏರಿಕೆ ಮತ್ತು ದೇಶೀಯ ರೈಲುಗಳ ಬಳಕೆಯ ನಿರ್ಧಾರದಿಂದಾಗಿ ಈ ಹೈ-ಸ್ಪೀಡ್ ಯೋಜನೆ ಸಂಕೀರ್ಣವಾಗಿದೆ. ಗೊಂದಲಗಳ ನಡುವೆಯೂ 2027ರ ವೇಳೆಗೆ ಗುಜರಾತ್ ವಿಭಾಗದ ಮೊದಲ ಹಂತವನ್ನು ಆರಂಭಿಸುವ ಗುರಿ ಹೊಂದಲಾಗಿದೆ.

ಭಾರತ ಮತ್ತು ಜಪಾನ್ ನಡುವಿನ ಅತ್ಯಂತ ಪ್ರಷ್ಠೆಯ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (BULLET TRAIN) ಯೋಜನೆ ಈಗ ಮತ್ತೆ ಭಾರಿ ಸುದ್ದಿಯಲ್ಲಿದೆ. ಆದರೆ, ಈ ಬಾರಿ ಈ ಯೋಜನೆ ಸುದ್ದಿಯಲ್ಲಿರುವುದು ಅದರ ವೇಗಕ್ಕಾಗಲಿ ಅಥವಾ ಕ್ರಾಂತಿಕಾರಿ ತಂತ್ರಜ್ಞಾನಕ್ಕಾಗಲಿ ಅಲ್ಲ, ಬದಲಾಗಿ ವಿಳಂಬ, ಆರೋಪ-ಪ್ರತ್ಯಾರೋಪ ಹಾಗೂ ತಾಂತ್ರಿಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ!

ಜಪಾನ್ ಸಚಿವರ ಆರೋಪ ಮತ್ತು ಭಾರತದ ತಿರುಗೇಟು!

ಜಪಾನ್‌ನ ಮಾಜಿ ನ್ಯಾಯ ಸಚಿವ ಹಿಡೆಕಿ ಮಕಿಹರಾ ಅವರು ಈ ಯೋಜನೆಯ ವಿಳಂಬಕ್ಕೆ "೧೦೦ ಪ್ರತಿಶತ ಭಾರತವೇ ಜವಾಬ್ದಾರಿ" ಎಂದು ಬಹಿರಂಗವಾಗಿ ದೂಷಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಮಾತುಕತೆಗಾರರು ಪದೇ ಪದೇ ತಮ್ಮ ನಿಲುವುಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಜಪಾನ್-ಭಾರತ ಮೂಲಸೌಕರ್ಯ ಸಹಕಾರದ ಸಂಕೇತವಾಗಬೇಕಿದ್ದ ಯೋಜನೆಯೊಂದಕ್ಕೆ ಜಪಾನ್‌ನಿಂದ ಇಂತಹ ತೀಕ್ಷ್ಣ ಪ್ರತಿಕ್ರಿಯೆ ಬಂದಿರುವುದು ಅಸಾಧಾರಣ. ಆದರೆ, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇವು "ವೈಯಕ್ತಿಕ ಅಭಿಪ್ರಾಯಗಳು" ಮತ್ತು "ಸತ್ಯಕ್ಕೆ ದೂರವಾದ ಹೇಳಿಕೆಗಳು" ಎಂದು ಸ್ಪಷ್ಟಪಡಿಸಿದ್ದಾರೆ. ಮಾತುಕತೆಗಳು ಸರಿಯಾದ ದಾರಿಯಲ್ಲೇ ಸಾಗುತ್ತಿವೆ ಎಂದು ಭಾರತ ಪ್ರತಿಪಾದಿಸಿದರೂ, ರಾಯಭಾರ ಮಟ್ಟದಲ್ಲಿ ಸೃಷ್ಟಿಯಾಗಿರುವ ಈ ಭಿನ್ನಾಭಿಪ್ರಾಯವನ್ನು ಮುಚ್ಚಿಡಲು ಸಾಧ್ಯವಾಗಿಲ್ಲ.

508 ಕಿ.ಮೀ ಕಾರಿಡಾರ್ ಹಾಗೂ ಬದಲಾದ ದಿನಾಂಕಗಳು!

508 ಕಿ.ಮೀ ಉದ್ದದ ಈ ಯೋಜನೆಗೆ ೨೦೧೭ ರಲ್ಲಿ ಚಾಲನೆ ನೀಡಲಾಗಿತ್ತು. 2023ಕ್ಕೆ ಪೂರ್ಣಗೊಳ್ಳಬೇಕಿದ್ದ ಯೋಜನೆ ಇಂದಿಗೂ ಅಪೂರ್ಣವಾಗಿಯೇ ಉಳಿದಿದೆ. ಕೇವಲ ಸಿಮೆಂಟ್, ಉಕ್ಕು ಮತ್ತು ರೈಲು ಹಳಿಗಳಷ್ಟೇ ಅಲ್ಲದೆ; ಆಡಳಿತ, ಆಮದು ಅವಲಂಬನೆ ಹಾಗೂ ಯೋಜನೆ ನಿರ್ವಹಣೆಯ ವಿಫಲತೆಯೇ ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.

ತಂತ್ರಜ್ಞಾನ ವಿಭಜನೆ ಮತ್ತು 'ಮೇಕ್ ಇನ್ ಇಂಡಿಯಾ' ಸವಾಲು!

ಈ ಯೋಜನೆಯ ಮೂಲ ವಿನ್ಯಾಸದಲ್ಲಾದ ತಾಂತ್ರಿಕ ಬದಲಾವಣೆಗಳು ಎರಡೂ ದೇಶಗಳ ನಡುವೆ ಅಂತರ ಹೆಚ್ಚಿಸಿವೆ. ಜಪಾನ್‌ನ 'ಶಿಂಕನ್ಸೆನ್ DS-ATC' ಸಿಗ್ನಲಿಂಗ್ ವ್ಯವಸ್ಥೆಯ ಬದಲಿಗೆ ಭಾರತವು ಯುರೋಪಿಯನ್ 'ETCS-L2' ಮಾನದಂಡವನ್ನು ಅಳವಡಿಸಿಕೊಂಡಿದೆ. ಸಿಗ್ನಲಿಂಗ್ ಒಪ್ಪಂದವು ಸೀಮೆನ್ಸ್ (Siemens) ಕಂಪನಿಯ ಕೈಸೇರಿದೆ. ಇನ್ನೊಂದೆಡೆ, ಜಪಾನ್‌ನ 'E10 ಶಿಂಕನ್ಸೆನ್' ರೈಲುಗಳು ಇಂದಿಗೂ ಅಭಿವೃದ್ಧಿ ಹಂತದಲ್ಲಿದ್ದು, ೨೦೩೦ ರ ನಂತರವಷ್ಟೇ ಲಭ್ಯವಾಗಲಿವೆ. ಹೀಗಾಗಿ, ಭಾರತವು ಆರಂಭಿಕ ಕಾರ್ಯಾಚರಣೆಗಾಗಿ ಸ್ವದೇಶಿ ನಿರ್ಮಿತ 'B28' ರೈಲುಗಳನ್ನು (BEML ಮತ್ತು ICF ಅಭಿವೃದ್ಧಿಪಡಿಸಿದ) ಬಳಸಲು ನಿರ್ಧರಿಸಿದೆ. ಇದು ಭಾರತದ ಉತ್ಪಾದನಾ ರಂಗಕ್ಕೆ ಪೂರಕವಾಗಿದ್ದರೂ, ಜಪಾನಿ ತಂತ್ರಜ್ಞಾನ ಮತ್ತು ಭಾರತೀಯ ಉತ್ಪಾದನೆಯನ್ನು ಸಂಯೋಜಿಸುವುದು ಯೋಜನೆಯ ಸಂಕೀರ್ಣತೆ ಹಾಗೂ ಸವಾಲುಗಳನ್ನು ಹೆಚ್ಚಿಸಿದೆ.

ವೆಚ್ಚ ಭಾರಿ ಹೆಚ್ಚಳ!

ಪ್ರಾರಂಭದಲ್ಲಿ ₹೧.೦೮ ಟ್ರಿಲಿಯನ್ ಅಂದಾಜಿಸಲಾಗಿದ್ದ ಯೋಜನಾ ವೆಚ್ಚವು ಈಗ ಬರೋಬ್ಬರಿ ಶೇ. ೮೩ ರಷ್ಟು ಏರಿಕೆಯಾಗಿ ₹1.98 ಟ್ರಿಲಿಯನ್‌ಗೆ ತಲುಪಿದೆ. ಜಪಾನ್ ಸರ್ಕಾರ ಈ ಯೋಜನೆಗೆ ಶೇ. 0.1ರಷ್ಟು ಅತ್ಯಂತ ಕಡಿಮೆ ಬಡ್ಡಿದರದಲ್ಲಿ 50ವರ್ಷಗಳ ಅವಧಿಗೆ ಸಾಲ ಒದಗಿಸಿದ್ದು, ಶೇ. 80ರಷ್ಟು ವೆಚ್ಚ ಭರಿಸುತ್ತಿದೆ. ಉದಾರ ಸಾಲ ನೀಡಿದ್ದರೂ ಯೋಜನೆ ವಿಳಂಬವಾಗುತ್ತಿರುವುದು ಜಪಾನ್‌ಗೆ ಅಸಮಾಧಾನ ತಂದಿದ್ದರೆ, ಭಾರತಕ್ಕೆ ದೇಶೀಯ ರಾಜಕೀಯ ಒತ್ತಡ ಹಾಗೂ ಯೋಜನೆಯ ಮೇಲಿನ ನಿಯಂತ್ರಣ ಮುಖ್ಯವಾಗಿದೆ.

ಆರೋಪಗಳ ನಡುವೆ ಜಪಾನ್‌ನಿಂದ ದರಪಟ್ಟಿ ಕೊರತೆ!

ಮಕಿಹರಾ ಅವರ ವಿಳಂಬದ ಆರೋಪಕ್ಕೆ ಪ್ರತಿಯಾಗಿ ಭಾರತೀಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು, "ಜಪಾನ್ ಇಂದಿಗೂ E10 ರೈಲುಗಳು, ಸಿಗ್ನಲಿಂಗ್ ಮತ್ತು ಕಂಟ್ರೋಲ್ ಸೆಂಟರ್ ಸಿಸ್ಟಮ್‌ಗಳಿಗೆ ಅಗತ್ಯವಿರುವ ಅಧಿಕೃತ ದರಪಟ್ಟಿಗಳನ್ನು (Quotes) ಒದಗಿಸಿಲ್ಲ" ಎಂದು ತಿರುಗೇಟು ನೀಡಿದ್ದಾರೆ. ಇದು ವಾಣಿಜ್ಯಿಕ ಸಮನ್ವಯದಲ್ಲಿ ಎಷ್ಟರಮಟ್ಟಿಗೆ ಲೋಪವಾಗಿದೆ ಎಂಬುದನ್ನು ತೋರಿಸುತ್ತದೆ.

2027ರ ಗುರಿ ಮತ್ತು ಭವಿಷ್ಯ!

ಎಲ್ಲಾ ಗೊಂದಲಗಳ ನಡುವೆಯೂ, ಯೋಜನೆಯ ಮೊದಲ ಭಾಗವಾದ ಗುಜರಾತ್ ವಿಭಾಗವನ್ನು ಆ.15, 2027 ರಂದು ಉದ್ಘಾಟಿಸುವ ಗುರಿ ಹೊಂದಲಾಗಿದೆ. ಆ ವೇಳೆಗೆ ದೇಶೀಯ B28 ಹೈ-ಸ್ಪೀಡ್ ರೈಲುಗಳು ಸಿದ್ಧವಾಗುವ ನಿರೀಕ್ಷೆಯಿದೆ. ಈ ಹೈ-ಸ್ಪೀಡ್ ರೈಲು ಕಾರಿಡಾರ್ ಕೇವಲ ಎರಡು ದೇಶಗಳ ನಡುವಿನ ಜಗಳವಲ್ಲ. ವಿದೇಶಿ ತಂತ್ರಜ್ಞಾನ, ಸ್ಥಳೀಯ ಕೈಗಾರಿಕಾ ನೀತಿ ಮತ್ತು ಬೃಹತ್ ಅನುದಾನಗಳನ್ನು ಸಂಯೋಜಿಸಿ ಜಾಗತಿಕ ಮಟ್ಟದ ಯೋಜನೆಯೊಂದನ್ನು ತಲುಪಿಸುವುದು ಎಷ್ಟು ಕಷ್ಟಕರ ಎಂಬುದಕ್ಕೆ ಈ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ಈಗ ಅತ್ಯಂತ ದೊಡ್ಡ ಉದಾಹರಣೆಯಾಗಿದೆ.