Viral Video: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡೀಯೋ ಒಂದರಲ್ಲಿ, ಹಿಂದೂ ಮಹಾಸಾಗರದಲ್ಲಿ ತಾಯಿ ಡಾಲ್ಫಿನ್ ಒಂದು ತನ್ನ ಮೃತ ಪಟ್ಟ ಪುಟ್ಟ ಮರಿಯನ್ನು ನೀರಲ್ಲಿ ಮುಳುಗಲು ಬಿಡದೆ, ತನ್ನ ಬೆನ್ನ ಮೇಲೆ ಹೊತ್ತು ಸಾಗಿದ ಮನ ಕಲುಕುವ ಘಟನೆ ನಡೆದಿದೆ.

ಮೃತ ಮರಿಯನ್ನು ಬೆನ್ನ ಮೇಲೆ ಹೊತ್ತು ಸಮುದ್ರ ಸುತ್ತಿದ ಡಾಲ್ಫಿನ್

ಹಿಂದೂ ಮಹಾಸಾಗರದಲ್ಲಿ ನಡೆದ ಮನ ಕಲುಕುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡೀಯೋ ನೋಡಿದ್ರೆ ಎಂತಹ ಕಲ್ಲು ಹೃದಯವೂ ಕರಗುವುದು. ಮಾತೃ ಪ್ರೀತಿ ಅಂದ್ರೆ ಏನು ಎನ್ನುವುದನ್ನು ತಿಳಿಸುತ್ತದೆ. ಮನುಷ್ಯರಲ್ಲಿ ಮಾತ್ರ ಅಲ್ಲ, ಪ್ರಾಣಿಗಳು ಸಹ ತಮ್ಮ ಮರಿಗಾಗಿ ಮಿಡಿಯುತ್ತವೆ ಎನ್ನುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ತಾಯಿ ಡಾಲ್ಫಿನ್ ತನ್ನ ಮೃತಪಟ್ಟ ಮರಿಯನ್ನು ನೀರಿನ ಮೇಲ್ಮೈಯಲ್ಲಿ ತೇಲಿಸುವ ಪ್ರಯತ್ನ ಮಾಡುತ್ತಿರುವ ದೃಶ್ಯ ಕಾಣಿಸುತ್ತದೆ. ಮರಿ ನೀರಿನಲ್ಲಿ ಮುಳುಗದಂತೆ ತಡೆಯಲು ತಾಯಿ ಡಾಲ್ಫಿನ್ ಹಲವು ದಿನಗಳಿಂದ ಅದನ್ನು ತನ್ನ ಬೆನ್ನ ಮೇಲೆ ಹೊತ್ತು ಈಜುತ್ತಿರುವ ದೃಶ್ಯವು ನೋಡುಗರ ಕಣ್ಣಲ್ಲೂ ನೀರು ತರಿಸಿದೆ.

ಈ ಬಾಟಲ್‌ನೋಸ್ ಡಾಲ್ಫಿನ್‌ಗೆ ಸಂಶೋಧಕರು 'ಫ್ರ್ಯಾಗಲ್' (Fragile) ಎಂದು ಹೆಸರು ಇಟ್ಟಿದ್ದಾರೆ. ಆಸ್ಟ್ರೇಲಿಯಾದ ಸಮುದ್ರ ಸಂಶೋಧನಾ ಸಂಸ್ಥೆ ಜಿಯೋಗ್ರಾಫ್ ಮೆರೈನ್ ರಿಸರ್ಚ್ ಈ ವಿಡಿಯೋವನ್ನು ಬಿಡುಗಡೆ ಮಾಡಿದೆ. ವಿಜ್ಞಾನಿಗಳ ಪ್ರಕಾರ, ತನ್ನ ಮರಿಯ ಸಾವಿನ ದುಃಖವನ್ನು ತಾಯಿ ಡಾಲ್ಫಿನ್ ಈ ರೀತಿಯಾಗಿ ವ್ಯಕ್ತಪಡಿಸುತ್ತಿದೆ.

ಇದಕ್ಕೂ ಮೊದಲು ನಾಲ್ಕು ಮರಿಗಳನ್ನು ಕಳೆದುಕೊಂಡಿದ್ದ ಡಾಲ್ಫಿನ್

ಸಂಶೋಧಕರ ಮಾಹಿತಿ ಪ್ರಕಾರ, ಫ್ರ್ಯಾಗಲ್‌ಗೆ ಇದು ಮೊದಲ ದುಃಖದ ಅನುಭವವಲ್ಲ. ಈ ಹಿಂದೆ ಕೂಡ ಅದು ತನ್ನ ನಾಲ್ಕು ಮರಿಗಳನ್ನು ಕಳೆದುಕೊಂಡಿದೆ. ಈ ಬಾರಿ ಚಳಿಗಾಲದಲ್ಲಿ ಜನಿಸಿದ ಮರಿಗೆ ಆರಂಭದಿಂದಲೇ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆದ್ದರಿಂದ ಅದು ಹೆಚ್ಚು ದಿನ ಬದುಕುವುದಿಲ್ಲ ಎಂಬ ಅನುಮಾನ ವಿಜ್ಞಾನಿಗಳಿಗಿತ್ತು.

ಡಾಲ್ಫಿನ್‌ಗಳು ಅತ್ಯಂತ ಬುದ್ಧಿವಂತ ಹಾಗೂ ಸಾಮಾಜಿಕ ಸ್ವಭಾವದ ಸಮುದ್ರ ಜೀವಿಗಳು. ತಮ್ಮ ಕುಟುಂಬ ಮತ್ತು ಮರಿಗಳೊಂದಿಗೆ ಅವುಗಳಿಗೆ ಗಾಢವಾದ ಬಾಂಧವ್ಯವಿರುತ್ತದೆ. ಮರಿ ಮೃತಪಟ್ಟ ನಂತರವೂ ಅದನ್ನು ತನ್ನಿಂದ ದೂರ ಮಾಡಿಕೊಳ್ಳದೆ ಬೆನ್ನ ಮೇಲೆ ಹೊತ್ತು ಸಾಗುತ್ತಿರುವುದು ತಾಯಿ-ಮರಿಯ ನಡುವಿನ ಗಾಢ ಪ್ರೀತಿಯನ್ನು ತೋರಿಸುತ್ತದೆ. ಈ ಘಟನೆ ಪ್ರಾಣಿಗಳಲ್ಲೂ ಮನುಷ್ಯರಂತೆಯೇ ಭಾವನೆಗಳು ಮತ್ತು ದುಃಖವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ತಾಯಿಗೆ ಬೆಂಬಲವಾಗಿ ಜೊತೆಗಿದ್ದ ಇತರೆ ಡಾಲ್ಫಿನ್‌ಗಳು

ವಿಜ್ಞಾನಿಗಳ ಪ್ರಕಾರ, ಡಾಲ್ಫಿನ್‌ಗಳಲ್ಲಿ ಇದು ಒಂದು ರೀತಿಯ ಶೋಕಾಚರಣೆಯಾಗಿದೆ. ಮೃತಪಟ್ಟ ಮರಿಯನ್ನು ಹಲವು ದಿನಗಳ ಕಾಲ ನೀರಿನ ಮೇಲ್ಮೈಯಲ್ಲೇ ಇರಿಸುವ ಮೂಲಕ ಅದು ಕೆಳಗೆ ಮುಳುಗದಂತೆ ನೋಡಿಕೊಳ್ಳುತ್ತವೆ. ಆದರೆ ಕೊನೆಗೆ ತನ್ನ ಬದುಕು ಮತ್ತು ಆಹಾರದ ಹುಡುಕಾಟಕ್ಕಾಗಿ ತಾಯಿ ಮರಿಯನ್ನು ಬಿಡಲೇಬೇಕಾಗುತ್ತದೆ. ಈ ಕಠಿಣ ಸಮಯದಲ್ಲಿ ಡಾಲ್ಫಿನ್ ಗುಂಪಿನ ಇತರ ಸದಸ್ಯರೂ ತಾಯಿಯೊಂದಿಗೆ ಈಜುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅವು ತಾಯಿಗೆ ಬೆಂಬಲ ನೀಡಿ, ಸುರಕ್ಷತೆ ಒದಗಿಸುತ್ತಿರುವ ದೃಶ್ಯಗಳು ಮನಕಲಕುವಂತಿವೆ. ಸಂಖ್ಯೆಯಲ್ಲಿ ಕಡಿಮೆಯಿರುವ ಈ ಡಾಲ್ಫಿನ್‌ಗಳ ನಡುವಿನ ಪರಸ್ಪರ ಪ್ರೀತಿ, ಕಾಳಜಿ ಮತ್ತು ಬಾಂಧವ್ಯವನ್ನು ಕಂಡು ವಿಜ್ಞಾನಿಗಳೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

View post on Instagram