ನೆಲಮಂಗಲ ಬಳಿ ಬಿಎಂಟಿಸಿ ಬಸ್ ಹತ್ತಲು ಯತ್ನಿಸಿದ ಭಿಕ್ಷುಕನಿಗೆ ಕಂಡಕ್ಟರ್ ಒದ್ದು ಹಲ್ಲೆ ನಡೆಸಿದ್ದಾರೆ. ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶದ ನಂತರ ನಿರ್ವಾಹಕ ಕೃಷ್ಣಮೂರ್ತಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.

ದಾಬಸ್‍ಪೇಟೆ (ಆ.6): ಬಸ್ ಹತ್ತಲು ಹೋಗಿದ್ದ ಭಿಕ್ಷುಕನನ್ನು ಕಂಡಕ್ಟರ್‌ ಒದ್ದು ಬಿಳಿಸಿ ದರ್ಪ ತೋರಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಬಳಿಯ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ಮಂಗಳವಾರ ನಡೆದಿದೆ. 

ಬೆಂಗಳೂರು ಕಡೆಯಿಂದ ನೆಲಮಂಗಲ ಕಡೆಗೆ ಬರುತ್ತಿದ್ದ ಬಿಎಂಟಿಸಿ ಬಸ್(BMTC Bus) ಅನ್ನು ಹತ್ತಲು ಭಿಕ್ಷುಕ ಮುಂದಾದಾಗ ಬಸ್ಸು ಚಲಿಸುವಾಗಲೇ ಕಂಡಕ್ಟರ್ ಭಿಕ್ಷುಕನಿಗೆ ಒದ್ದಿದ್ದಾನೆ. ನಂತರ ಬಸ್‌ನಿಂದ ಇಳಿದ ಕಂಡಕ್ಟರ್ ಭಿಕ್ಷುಕನನ್ನು ಕೆಳಗೆ ಬೀಳಿಸಿ ಹೊಡೆದಿದ್ದಾನೆ. ಈ ಘಟನೆ ದೃಶ್ಯ ಸ್ಥಳೀಯ ಬೈಕ್ ಸವಾರನ ಹೆಲ್ಮೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಕಂಡಕ್ಟರ್ ದರ್ಪಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಂಡಕ್ಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರಯಾಣಿಕನಿಗೆ ಹಲ್ಲೆ ಮಾಡಿದ ಬಿಎಂಟಿಸಿ ನಿರ್ವಾಹಕ ಅಮಾನತು

ಬೆಂಗಳೂರು: ಪ್ರಯಾಣಿಕರೊಬ್ಬರನ್ನು ಕಾಲಿನಿಂದ ಒದ್ದು ಬಿಎಂಟಿಸಿ ಬಸ್‌ನಿಂದ ಕೆಳಗಿಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಾಹಕ ಕೃಷ್ಣಮೂರ್ತಿ ಅವರನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶಿಸಿದೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ನೆಲಮಂಗಲ ಬಳಿಯ ಬೈರನಾಯಕನಹಳ್ಳಿ ಮಾರ್ಗವಾಗಿ ಸಂಚರಿಸುವ ಕೆಎ 57 ಎಫ್‌ 1104 ಬಸ್‌ನ ನಿರ್ವಾಹಕ ಕೃಷ್ಣಮೂರ್ತಿ ಎಂಬುವವರು ಆ. 2ರಂದು ಬಸ್‌ ಹತ್ತಲು ಬಂದ ಪ್ರಯಾಣಿಕರೊಬ್ಬರನ್ನು ತಳ್ಳಿ, ಕಾಲಿನಿಂದ ಒದ್ದು ಹಲ್ಲೆ ಮಾಡಿ ಬಸ್‌ನಿಂದ ಕೆಳಗಿಳಿಸಿದ್ದಾರೆ. 

ಘಟನೆ ಕುರಿತು ಸಮಗ್ರ ತನಿಖೆಗೆ ಆದೇಶ

ಈ ಘಟನೆಯ ದೃಶ್ಯ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನಿರ್ವಾಹಕರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಗುತ್ತಿದೆ. ಹೀಗಾಗಿ ನಿರ್ವಾಹಕನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶಿಸಿದೆ. ಅಲ್ಲದೆ, ಇಡೀ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವುದಾಗಿ ತಿಳಿಸಲಾಗಿದೆ. ಅದಕ್ಕಾಗಿ ನಿರ್ವಾಹಕ, ಪ್ರಯಾಣಿಕ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿ, ಬಸ್‌ನಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ತನಿಖೆ ನಡೆಸುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.