ಜನಗಣತಿ ಹೇಗೆ ನಡೆಸಬೇಕು ಸೇರಿದಂತೆ ಹಲವು ವಿಚಾರಗಳ ಕುರಿತು ತರಬೇತಿ ಕಾರ್ಯಗಾರದಲ್ಲಿ ಟೀಚರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಈ ಕಾರ್ಯಾಗಾರದಲ್ಲಿ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು.
ಅಹಮ್ಮದಾಬಾದ್ (ಮೇ.22) ಕರ್ನಾಟಕದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಮಟ್ಟದಲ್ಲಿ ಗಣತಿ ನಡೆಸಿದೆ. ಇದೇ ರೀತಿ ಹಲವೆಡೆ ಗಣತಿ ಕಾರ್ಯಗಳು ನಡೆಯುತ್ತಿದೆ. ಹೀಗೆ ಜನಗಣತಿ ನಡೆಸುವ ಮೊದಲು ಶಿತ್ರಕರು, ಪೌರಾಡಳಿತದ ಉದ್ಯೋಗಿಗಳಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ವೇಳೆ ಕೋತಿಯೊಂದು ತರಬೇತಿ ಕಾರ್ಯಾಗಾರಕ್ಕೆ ಆಗಮಿಸಿ ಪ್ರಸೆಂಟೇಶನ್, ಅಧಿಕಾರಿಗಳ ಭಾಷಣ ಆಲಿಸಿದ ಘಟನೆ ನಡೆದಿದೆ. ವಿಶೇಷ ಅಂದರೆ ಸಿಬ್ಬಂದಿಗಳ ಜೊತೆ ಕುಳಿತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಈ ವಿಡಿಯೋ ಭಾರಿ ವೈರಲ್ ಆಗಿದೆ.

ಆಡಿಟೋರಿಯಂಗೆ ಎಂಟ್ರಿಕೊಟ್ಟ ಕೋತಿ
ಗುಜರಾತ್ ಸರ್ಕಾರ ಆಯೋಜಿಸಿದ ಜನಗಣತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಗುಜರಾತ್‌ನಲ್ಲಿ ಕೆಲವೇ ದಿನಗಳಲ್ಲಿ ಜನಗಣತಿ ಆರಂಭಗೊಳ್ಳಲಿದೆ. ಹೀಗಾಗಿ ಸರ್ಕಾರ ಜನಗಣತಿ ನಡೆಸುವ ಶಿಕ್ಷಕರು, ಪೌರಾಡಳಿತ ಕಚೇರಿಯ ಸಿಬ್ಬಂದಿಗಳು ಸೇರಿದಂತೆ ಹಲವರಿಗೆ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಇವರಿಗೆ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ಈ ವೇಳೆ ದಿಢೀರ್ ಆಗಿ ಕೋತಿಯೊಂದು ಆಡಿಟೊರಿಯಂಗೆ ಎಂಟ್ರಿಕೊಟ್ಟಿದೆ.
ಆಡಿಟೋರಿಯಂನಲ್ಲಿ ಸಿಬ್ಬಂದಿಗಳು ಕುಳಿತು ಕಾರ್ಯಾಗಾರ ಆಲಿಸುತ್ತಿದ್ದರು. ಅಧಿಕಾರಿಗಳ ಪ್ರೆಸೆಂಟೇಶನ್ ಸೇರಿದಂತೆ ಭಾಷಣ , ಸಂವಾದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಿಬ್ಬಂದಿಗಳ ಕುರ್ಚಿಯಲ್ಲೇ ಕುಳಿತ ಕೋತಿ ಕಾರ್ಯಾಗಾರ ಆಲಿಸಿದೆ. ಕೆಲ ಸಿಬ್ಬಂದಿಗಳು ಆತಂಕಗೊಂಡರೆ ಬಹುತೇಕರಿಗೆ ಗಂಭೀರ ಕಾರ್ಯಾಗಾರದಲ್ಲಿ ನಗು ತರಿಸಿತ್ತು. ಕೋತಿ ಏನೇ ಮಾಡಿದರೂ ಆಡಿಟೋರಿಯಂ ಬಿಟ್ಟು ತೆರಳಲೇ ಇಲ್ಲ. ಸಿಬ್ಬಂದಿಗಳು ಗದರಿಸಿದರೆ, ಬೇರೆ ಕುರ್ಚಿಯಲ್ಲಿ ಕುಳಿತು ಕಾರ್ಯಾಗಾರ ಆಲಿಸಿದೆ.
ಮಹಿಳೆಯೊಬ್ಬರ ಕುರ್ಚಿಯ ಹಿಂಭಾಗದಲ್ಲೇ ಕುಳಿತ ಕೋತಿ ನೋಡಿ ಆರಂಭದಲ್ಲಿ ಗಾಬರಿಗೊಂಡಿದ್ದರು. ಆದರೆ ಈ ಕೋತಿ ಯಾರಿಗೂ ಹಾನಿ ಮಾಡಿಲ್ಲ. ಹೀಗಾಗಿ ಸಿಬ್ಬಂದಿಗಳು ಕೂಡ ಕೆಲ ಹೊತ್ತು ಕೋತಿ ಜೊತೆ ತಮಾಷೆಯಾಗಿ ಆಟವಾಡಿದ್ದರು. ಕೋತಿ ಮಹಿಳೆಯ ಬುಜದ ಮೇಲೆ ಕಾಲಿಟ್ಟಿತ್ತು. ಇತ್ತ ಮಹಿಳೆ ತಮ್ಮ ಕೈಯಲ್ಲಿದ್ದ ಫೈಲ್ ತಲೆ ಮೇಲೆ ಇಟ್ಟು ಕುಳಿತುಕೊಂಡರೆ ಇತ್ತ ಕೋತಿ ಅದೇ ಫೈಲ್‌ನ್ನು ಹಿಡಿದು ಕೆಲ ಹೊತ್ತು ಕುಳಿತುಕೊಂಡಿದೆ.
ಕೋತಿಯ ಜನಗಣತಿ ಕಾರ್ಯಾಗಾರದ ವಿಡಿಯೋ ಭಾರಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಹಲೆವೆಡೆ ಈ ವಿಡಿಯೋಗಳು ಹರಿದಾಡುತ್ತಿದೆ. ಹಲವರು ಕೋತಿಗಳ ಸೆನ್ಸಸ್ ಮಾಡಲು ಪ್ರತಿನಿಧಿಯಾಗಿ ಕೋತಿ ಆಗಮಿಸಿದೆ ಎಂದು ಕಮೆಂಟ್ ಮಾಡಿದ್ದಾರೆ.


