ಗುಜರಾತ್‌ನ ಡುಮಾಸ್ ಬೀಚ್‌ನಲ್ಲಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಸ್ಟಂಟ್ ಮಾಡಲು ಹೋದ ಪ್ರವಾಸಿಗರು ಮರಳಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.

ಕೆಲ ಸಮಯದ ಹಿಂದಷ್ಟೇ ಉತ್ತರಾಖಂಡ್‌ನಲ್ಲಿ ಪ್ರವಾಸಿಗರು ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಮಹೀಂದ್ರಾ ಥಾರ್ ಗಾಡಿಯನ್ನು ಓಡಿಸಿ ಕಾರು ನೀರಿನಲ್ಲಿ ಕೆಲ ಮೀಟರ್ ದೂರ ಕೊಚ್ಚಿ ಹೋದಂತಹ ಘಟನೆ ನಡೆದಿತ್ತು. ಅದೇ ರೀತಿಯ ಮತ್ತೊಂದು ಘಟನೆ ಈಗ ಗುಜರಾತ್‌ನಿಂದ ವರದಿಯಾಗಿದೆ. ಕೆಲ ಪ್ರವಾಸಿಗರು ಬೀಚ್‌ನಲ್ಲಿ ಐಷಾರಾಮಿ ಮರ್ಸಿಡಿಸ್ ಬೇಂಜ್ ಕಾರಿನಲ್ಲಿ ಸ್ಟಂಟ್‌ ಮಾಡಲು ಹೋಗಿ ಕಾರು ಮರಳಿನಲ್ಲಿ ಸಿಲುಕಿ ಹಾಕಿಕೊಂಡಿದೆ. ಗುಜರಾತ್‌ನ ಸೂರತ್ ಬಳಿಯ ಡುಮಾಸ್ ಬೀಚ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೀಚ್‌ನ ಜೌಗು ಮರಳಿನಲ್ಲಿ ಕಾರಿನಚಕ್ರಗಳು ಸಿಲುಕಿಕೊಂಡು ಹೊರಬರಲಾಗದೇ ಕಾರು ಸ್ಟಂಟ್ ಮಾಡಲು ಹೋದವರು ಪೇಚಿಗೆ ಸಿಲುಕಿದ್ದಾರೆ. ಅಲ್ಲದೇ ಕಾರನ್ನು ಹೊರಗೆ ತರುವುದು ಹೇಗೆ ಎಂಬುದನ್ನು ತಿಳಿಯದೇ ಕಾರಿನಲ್ಲಿ ಅಸಹಾಯಕತೆಯಿಂದ ನೋಡುವುದನ್ನು ವೀಡಿಯೋದಲ್ಲಿ ವೈರಲ್ ಆಗಿದೆ.

ಡುಮಾಸ್ ಬೀಚ್‌ ಪ್ರದೇಶದಲ್ಲಿ ಸುರಕ್ಷತೆ ಮತ್ತು ಪರಿಸರ ಕಾಳಜಿಯಿಂದಾಗಿ ಈ ಕಾರು ಸ್ಟಂಟ್‌ಗಳನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಇದರ ಜೊತೆಗೆ ಇಲ್ಲಿ ಈ ರೀತಿ ಸ್ಟಂಟ್ ಮಾಡದಂತೆ ತಡೆಯುವುದಕ್ಕಾಗಿ ಪೊಲೀಸ್ ಅಧಿಕಾರಿಗಳು ಸದಾ ಗಸ್ತು ತಿರುಗುತ್ತಿರುತ್ತಾರೆ. ಆದರೂ ಈ ಮರ್ಸಿಡಿಸ್ ಬೇಂಜ್ ಕಾರಿನಲ್ಲಿ ಬಂದ ಗುಂಪು ಪೊಲೀಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಬೀಚ್‌ನಲ್ಲಿ ಕಾರು ಓಡಿಸಿ ಸ್ಟಂಟ್ ಮಾಡಲು ಹೋಗಿದ್ದಾರೆ. ಆದರೆ ಜೌಗು ಮರಳಿನಲ್ಲಿ ಕಾರು ಹೂತು ಹೋಗಿ ಎಡವಟ್ಟಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ವಾಹನವನ್ನು ಸಮುದ್ರದ ನೀರು ಬಂದು ತಲುಪುವಷ್ಟ ಹತ್ತಿರದಲ್ಲಿ ತೀರದಲ್ಲಿ ನಿಲ್ಲಿಸಲಾಗಿತ್ತು. ಅದರೆ ಅಲೆಗಳ ಉಬ್ಬರವಿಳಿತದಿಂದಾಗಿ ನೀರು ಕಡಿಮೆ ಆದಾಗ ಕಾರು ಮೃದುವಾದ, ಜೌಗು ಮರಳಿನಲ್ಲಿ ಆಳವಾಗಿ ಮುಳುಗಿದ್ದು, ಮುಂದೆ ಚಲಿಸಲು ಸಾಧ್ಯವಾಗದೇ ಅಲ್ಲೇ ಸಿಲುಕಿಕೊಂಡಿದೆ.

ಸ್ಥಳೀಯರ ಪ್ರಕಾರ, ಇಂತಹ ಘಟನೆಗಳು ಇಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿವೆ. ಪೊಲೀಸರ ಪೆಟ್ರೋಲಿಂಗ್ ನಡುವೆಯೂ ಹೀಗೆ ಕೆಲವರು ಬೀಚ್‌ಗೆ ವಾಹನಗಳನ್ನು ತರುತ್ತಿರುವುದು ಹೇಗೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಪದೇ ಪದೇ ಎಚ್ಚರಿಕೆಗಳು ಮತ್ತು ಚಿಹ್ನೆಗಳ ಹೊರತಾಗಿಯೂ, ಚಾಲಕರು ನಿಷೇಧವನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡರಷ್ಟೇ ಇಂತಹ ಘಟನೆಗಳಿಗೆ ಫುಲ್ ಸ್ಟಾಪ್ ಬೀಳಲಿದೆ.

Scroll to load tweet…