ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋಕೆ ಟಿಕ್‌ಟಾಕ್ ಸ್ಟಾರ್ ಸ್ಟೀಫನ್ ಹಾರ್ಮನ್, ಟೆಕ್ಸಾಸ್‌ನ ಟಾರ್ಗೆಟ್ ಸ್ಟೋರ್ ಒಳಗೆ ಕುದುರೆ ಸವಾರಿ ಮಾಡಿದ್ದಾನೆ. ಕುದುರೆ ಸ್ಟೋರ್‌ನಲ್ಲೇ ಮಲಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಸಿಬ್ಬಂದಿ ಆತನನ್ನು ಹೊರಹಾಕಿದ್ದಾರೆ.  

ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ 'ವೈರಲ್' ಆಗಲು ಜನ ಎಂತಹ ಹುಚ್ಚಾಟಕ್ಕೂ ಸಿದ್ಧ ಎನ್ನುವುದಕ್ಕೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಟಾರ್ಗೆಟ್ ಸ್ಟೋರ್‌ವೊಂದಕ್ಕೆ ಸಾಮಾನು ಖರೀದಿಸಲು ಬಂದಿದ್ದ ಗ್ರಾಹಕರು ಒಮ್ಮೆಲೇ ದಬ್ಬಾಳಿಕೆಗೆ ಒಳಗಾದಂತೆ ಬೆಚ್ಚಿಬಿದ್ದಿದ್ದಾರೆ. ಕಾರಣ, ಅಲ್ಲಿಗೆ ಬಂದಿದ್ದು ಒಬ್ಬ ವ್ಯಕ್ತಿಯಲ್ಲ, ಬದಲಿಗೆ ಕುದುರೆಯನ್ನೇ ಏರಿ ಬಂದ ಸವಾರ!

ಸ್ಟೋರ್ ಒಳಗೆ ಕುದುರೆ ಸವಾರಿ: ಟಿಕ್‌ಟಾಕ್ ಸ್ಟಾರ್ ಸಾಹಸ!

ಖ್ಯಾತ ಟಿಕ್‌ಟಾಕ್ ಸ್ಟಾರ್ ಸ್ಟೀಫನ್ ಹಾರ್ಮನ್ ಎಂಬಾತ ವಿಚಿತ್ರ ಸಾಹಸಕ್ಕೆ ಕೈಹಾಕಿ ಸುದ್ದಿಯಾಗಿದ್ದಾನೆ. ತನ್ನ ಸ್ನೇಹಿತನ ಜೊತೆಗೂಡಿ ಸ್ಟೀಫನ್ ನೇರವಾಗಿ ಕುದುರೆಯನ್ನೇ ಏರಿಕೊಂಡು ಟಾರ್ಗೆಟ್ ಸ್ಟೋರ್ ಒಳಗೆ ನುಗ್ಗಿದ್ದಾನೆ. ಶಾಪಿಂಗ್ ಶೆಲ್ಫ್‌ಗಳ ನಡುವೆ ಕುದುರೆ ಟಾಪ್ ಟಾಪ್ ಎಂದು ನಡೆಯುತ್ತಿದ್ದರೆ, ಗ್ರಾಹಕರು ಇದನ್ನು ನೋಡಿ ಕಣ್ಣು ಅರಳಿಸಿದ್ದಾರೆ. ಕೆಲವರು ಈ ವಿಚಿತ್ರ ದೃಶ್ಯ ಕಂಡು ಆಶ್ಚರ್ಯಪಟ್ಟರೆ, ಇನ್ನು ಕೆಲವರು ಕುದುರೆಯನ್ನು ಮುದ್ದಾಡುತ್ತಾ ಮಜಾ ತಗೆದುಕೊಂಡಿದ್ದಾರೆ.

ನಂಬಲಾಗದ ಅಸಹ್ಯ: ಸ್ಟೋರ್ ತುಂಬೆಲ್ಲಾ ಮಲಮೂತ್ರದ ವಾಸನೆ!

ಆದರೆ, ಅಸಲಿ ಕಥೆ ಶುರುವಾಗಿದ್ದೇ ಆಮೇಲೆ! ಸ್ಟೋರ್ ಒಳಗೆ ರಾಜಾರೋಷವಾಗಿ ಒಂದು ಸುತ್ತು ಬಂದ ಕುದುರೆ, ಅನಿರೀಕ್ಷಿತವಾಗಿ ಅಲ್ಲಿನ ನೆಲದ ಮೇಲೆಯೇ ಹಲವು ಬಾರಿ ಮಲಮೂತ್ರ ವಿಸರ್ಜನೆ ಮಾಡಿತು. ಇದರಿಂದಾಗಿ ಇಡೀ ಶಾಪಿಂಗ್ ಮಾಲ್ ಗಬ್ಬು ವಾಸನೆ ಹಾಗೂ ಗಲೀಜಿನಿಂದ ತುಂಬಿಹೋಯಿತು. ಇದನ್ನು ಕಂಡು ಕೆರಳಿದ ಸ್ಟೋರ್ ಸಿಬ್ಬಂದಿ, "ನೀವು ಏನು ಮಾಡುತ್ತಿದ್ದೀರಿ? ತಕ್ಷಣ ಕುದುರೆಯೊಂದಿಗೆ ಹೊರಗೆ ಹೋಗಿ" ಎಂದು ಕಿರುಚಾಡಿದ್ದಾರೆ. ಕೊನೆಗೆ ಸೆಕ್ಯುರಿಟಿ ಸಿಬ್ಬಂದಿ ಬಂದು ಹಾರ್ಮನ್‌ನನ್ನು ಸ್ಟೋರ್‌ನಿಂದ ಹೊರಗಟ್ಟಿದ್ದಾರೆ.

Scroll to load tweet…

ಲಕ್ಷಾಂತರ ವೀವ್ಸ್: ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್!

ಜನವರಿ 6 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಆದ ಈ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ. ಆದರೆ ಪ್ರತಿಕ್ರಿಯೆಗಳು ಮಾತ್ರ ಕೆಂಡಕಾರುವಂತಿವೆ. "ಕೇವಲ ಲೈಕ್ಸ್ ಮತ್ತು ವೀವ್ಸ್‌ಗಾಗಿ ಆ ಬಡಪಾಯಿ ಸಿಬ್ಬಂದಿಯಿಂದ ಮಾಲ್ ಕ್ಲೀನ್ ಮಾಡಿಸುವುದು ಎಂತಹ ಮನುಷ್ಯತ್ವ?" ಎಂದು ಕೆಲವರು ಕಿಡಿಕಾರಿದ್ದಾರೆ. ಇನ್ನು ಕೆಲವು ಟೆಕ್ಸಾಸ್ ಜನರು, "ಇದು ನಮ್ಮಲ್ಲಿ ಸಾಮಾನ್ಯ ದಿನ" ಎಂದು ತಮಾಷೆ ಮಾಡಿದ್ದಾರೆ.

ಭದ್ರತೆಗೆ ಸಂಚಕಾರ: ಅಧಿಕಾರಿಗಳ ಎಚ್ಚರಿಕೆ

ಸಾರ್ವಜನಿಕ ಸ್ಥಳಗಳಿಗೆ ಈ ರೀತಿ ಪ್ರಾಣಿಗಳನ್ನು ತರುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಕುದುರೆ ಬೆದರಿ ಜನರನ್ನು ತುಳಿದಿದ್ದರೆ ಅಥವಾ ಕಿಟಕಿಗಳನ್ನು ಹೊಡೆದು ಹಾಕಿದ್ದರೆ ಯಾರು ಹೊಣೆ? ಎಂಬ ಪ್ರಶ್ನೆ ಎದ್ದಿದೆ. ವರದಿಗಳ ಪ್ರಕಾರ, ಅಮೆರಿಕದಾದ್ಯಂತ ಇತ್ತೀಚಿನ ದಿನಗಳಲ್ಲಿ ಇಂತಹ ಸುಮಾರು 13 ವಿಚಿತ್ರ ಘಟನೆಗಳು ಸಂಭವಿಸಿವೆ ಎನ್ನುವುದು ಆತಂಕಕಾರಿ ವಿಷಯ.