ಕೋಲಿಗೆ ಮೊಳೆ ಹೊಡೆದು ರಸ್ತೆಯಲ್ಲಿ ಟ್ರಕ್ ಚಾಲಕರನ್ನು ಬೆದರಿಸಿ ಇಬ್ಬರು ಮಹಿಳೆಯರು ಹಣ ವಸೂಲಿ ಮಾಡುತ್ತಿರುವ ಘಟನೆಯ ವೀಡಿಯೋ ವೈರಲ್ ಆಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಈ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ರಸ್ತೆಯಲ್ಲಿರುವ ಸಣ್ಣ ಮೊಳೆಯೊಂದು ವಾಹನವೊಂದರ ಮುಂದಕ್ಕೆ ಚಲಿಸದಂತೆ ಮಾಡುವುದಕ್ಕೆ ಸಾಕಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಇಬ್ಬರು ಮಹಿಳೆಯರು ಕೋಲೊಂದಕ್ಕೆ ಮೊಳೆ ಹೊಡೆದು ರಸ್ತೆ ಪಕ್ಕ ನಿಂತುಕೊಂಡು ಟ್ರಕ್ ಚಾಲಕರನ್ನು ಬೆದರಿಸುತ್ತಿರುವ ಘಟನೆ ನಡೆದಿದೆ. ಈ ಕೃತ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ಮಹಿಳೆಯರು ಹಾಗೂ ಇದರ ಹಿಂದಿರುವ ಇತರ ಖದೀಮರ ಬಂಧನ ಮಾಡುವಂತೆ ಜನ ಆಗ್ರಹಿಸಿದ್ದಾರೆ.. ಇದರ ವೀಡಿಯೋ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಆಗಿದ್ದು, ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ವೀಡಿಯೋದಲ್ಲಿ ಕಾಣಿಸುತ್ತಿರುವ ಟ್ರಕ್‌ಗಳು ಪಶ್ಚಿಮ ಬಂಗಾಳ ವಾಹನ ನೋಂದಣಿ ಸಂಖ್ಯೆಯನ್ನು ಹೊಂದಿವೆ. ಘಟನೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದರೆ ಅನೇಕರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ನ್ಯಾಯಕ್ಕೆ ಆಗ್ರಹಿಸಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಇಬ್ಬರು ಮಹಿಳೆಯರು ಉದ್ದನೇಯ ಕೋಲೊಂದಕ್ಕೆ ಮೊಳೆ ಬಡಿದು ವಾಹನಗಳು ಸಾಗುತ್ತಾ ಬರುತ್ತಿದ್ದಂತೆ ಅವುಗಳನ್ನು ತೋರಿಸಿ ವಾಹನಗಳನ್ನು ನಿಲ್ಲಿಸುತ್ತಾರೆ. ನಂತರ ಅವರಿಂದ ಹಣ ವಸೂಲಿ ಮಾಡುತ್ತಾರೆ. ಹಣ ಕೊಡದೇ ಹೋದರೆ ಮೊಳೆ ಇರುವ ಕೋಲನ್ನು ವಾಹನಗಳ ಚಕ್ರದ ಕೆಳಗೆ ಇಡುವುದಾಗಿ ಬೆದರಿಸುತ್ತಾರೆ. ಇದು ಟ್ರಕ್ ಚಾಲಕರನ್ನು ಬೆದರಿಸುವ ಯತ್ನ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

@Khurpenchinfra ಎಂಬ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಇದು ರಸ್ತೆಗ ಕಟ್ಟುವ ತೆರಿಗೆ ಅಲ್ಲ, ಬೆದರಿಸಿ ವಸೂಲಿ ಮಾಡುತ್ತಿರುವ ಸುಲಿಗೆ ಇವರ ಕೈಯಲ್ಲಿ ಮೊಳೆ ಇದೆ, ಕಾನೂನು ಎಲ್ಲಿ ನಾಪತ್ತೆಯಾಗಿದೆ. ಇದು ಯಾವ ರೀತಿಯ ವ್ಯವಸ್ಥೆ? ಸರ್ಕಾರ ಅಥವಾ ಕಾನೂನು ಇದರ ಬಗ್ಗೆ ಏಕೆ ಗಮನಹರಿಸುತ್ತಿಲ್ಲ?ಎಂದು ಪ್ರಶ್ನೆ ಮಾಡಲಾಗಿದೆ. ಆದರೆ ಈ ಘಟನೆ ಯಾವಾಗ ಅಥವಾ ಎಲ್ಲಿ ನಡೆಯಿತು ಎಂಬುದರ ಬಗ್ಗೆ ಪೋಸ್ಟ್‌ನಲ್ಲಿ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ಸಹಜ ಹೆರಿಗೆ: 10 ಹೆಣ್ಣು ಮಕ್ಕಳ ನಂತರ ಕಡೆಗೂ ಜನಿಸಿದ ಗಂಡು ಮಗ: ದಿಲ್‌ಖುಷ್ ಅಂತ ಹೆಸರಿಟ್ಟ ಕುಟುಂಬ

ಈ ವೀಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಟ್ರಕ್‌ಗಳು ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವಾಗ ಇಂತಹ ವಸೂಲಿಗಳು ಸಾಮಾನ್ಯವಾಗಿವೆ. ಆದರೆ ಇನ್ನೂ ಕೆಲವರು ಈ ವೀಡಿಯೋ ಬಿರ್ಬುಮ್ ಜಿಲ್ಲೆಯದ್ದು ಎಂದು ಹೇಳಿದ್ದಾರೆ. ಮತ್ತೆ ಕೆಲವರು ಇದನ್ನು ಸಮರ್ಥಿಸಿದ್ದು, ಕಲ್ಲಿದ್ದಲು ಹಾಗೂ ಗಣಿಗಾರಿಕೆ ಸಂಬಂಧಿ ವಸ್ತುಗಳ ಸಾಗಣೆ ಮಾಡುವ ಟ್ರಕ್‌ಗಳ ಚಾಲನೆಯಿಂದ ಸ್ಥಳೀಯ ಜನರು ಧೂಳು ಹಾಗೂ ವಾಯುಮಾಲಿನ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಬಹುತೇಕರು ಇದನ್ನು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿಗ್ ಧಿರಿಸಿ ಬೋಳು ತಲೆ ಮುಚ್ಚಿಟ್ಟು ಮದುವೆಯಾದ ವ್ಯಕ್ತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

Scroll to load tweet…