- Home
- Business
- ಯಾವ ಸ್ಕೂಲ್‌ನಲ್ಲಿ ಓದ್ತಿದ್ದಾರೆ ಮುಕೇಶ್ ಅಂಬಾನಿ ಮೊಮ್ಮಗ? ಶಾಲೆಯ ಫೀಸ್ ಕೇಳಿದ್ರೆ ಹೌಹಾರೋದು ಗ್ಯಾರಂಟಿ
ಯಾವ ಸ್ಕೂಲ್‌ನಲ್ಲಿ ಓದ್ತಿದ್ದಾರೆ ಮುಕೇಶ್ ಅಂಬಾನಿ ಮೊಮ್ಮಗ? ಶಾಲೆಯ ಫೀಸ್ ಕೇಳಿದ್ರೆ ಹೌಹಾರೋದು ಗ್ಯಾರಂಟಿ
ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮೊಮ್ಮಗ ಪೃಥ್ವಿ ಅಂಬಾನಿ, ತಮ್ಮದೇ ಕುಟುಂಬದ 'ನೀತಾ ಮುಕೇಶ್ ಅಂಬಾನಿ ಜೂನಿಯರ್ ಸ್ಕೂಲ್'ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಜಾಗತಿಕ ದರ್ಜೆಯ ಈ ಶಾಲೆಯು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ನ ಭಾಗವಾಗಿದೆ.

ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ
ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ತಮ್ಮ ಐಷಾರಾಮಿ ಜೀವನಶೈಲಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ನೀತಾ ಅಂಬಾನಿ ಅವರು ತಮ್ಮ ಹಿರಿಯ ಸೊಸೆ ಶ್ಲೋಕಾ ಮೆಹ್ತಾ, ಮಗ ಆಕಾಶ್ ಅಂಬಾನಿ ಮತ್ತು ಮೊಮ್ಮಗ ಪೃಥ್ವಿ ಅಂಬಾನಿ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಮುಕೇಶ್ ಅಂಬಾನಿ ಅವರ ಹಿರಿಯ ಮೊಮ್ಮಗ ಪೃಥ್ವಿ ಅಂಬಾನಿ ಕಲಿಯುತ್ತಿರುವ ಶಾಲೆ ಹಾಗೂ ಅದರ ಬೃಹತ್ ಶುಲ್ಕದ ವಿವರಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸಾಮಾನ್ಯ ಶಾಲೆಯಲ್ಲ, ಅಂತರರಾಷ್ಟ್ರೀಯ ದರ್ಜೆಯ ವಿದ್ಯಾಲಯ
ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಹಿರಿಯ ಮೊಮ್ಮಗ ಹಾಗೂ ಆಕಾಶ್-ಶ್ಲೋಕಾ ಅಂಬಾನಿ ದಂಪತಿಯ ಹಿರಿಯ ಪುತ್ರನಾಗಿರುವ ಪೃಥ್ವಿ ಅಂಬಾನಿ ಯಾವುದೇ ಸಾಮಾನ್ಯ ಶಾಲೆಯಲ್ಲಿ ಓದುತ್ತಿಲ್ಲ. ಬದಲಿಗೆ ಜಾಗತಿಕ ದರ್ಜೆಯ ಅತ್ಯುನ್ನತ ಮತ್ತು ಅತ್ಯಂತ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಶಾಲೆಯ ಹೆಸರು ಮತ್ತು ವಿಶೇಷ ಮಾನ್ಯತೆ
ಪೃಥ್ವಿ ಅಂಬಾನಿ ಕಲಿಯುತ್ತಿರುವ ಶಾಲೆಯ ಹೆಸರು 'ನೀತಾ ಮುಕೇಶ್ ಅಂಬಾನಿ ಜೂನಿಯರ್ ಸ್ಕೂಲ್' (NMAJS). ಈ ಶಾಲೆಗೆ ವಿಶ್ವದ ಅತ್ಯಂತ ಗೌರವಾನ್ವಿತ ಪಠ್ಯಕ್ರಮ ಸಂಸ್ಥೆಯಾದ 'ಇಂಟರ್ನ್ಯಾಷನಲ್ ಬ್ಯಾಕಲಾರಿಯೇಟ್ ವರ್ಲ್ಡ್ ಸ್ಕೂಲ್' (International Baccalaureate World School) ಮಾನ್ಯತೆ ದೊರೆತಿದೆ.
ಶಿಕ್ಷಣ ಪದ್ಧತಿ ಹಾಗೂ ಬೃಹತ್ ಕ್ಯಾಂಪಸ್‌ಗಳು
ನೀತಾ ಮುಕೇಶ್ ಅಂಬಾನಿ ಜೂನಿಯರ್ ಸ್ಕೂಲ್‌ನಲ್ಲಿ ಮಗುವಿನ ಆರಂಭಿಕ ಹಂತದ ಶಿಕ್ಷಣವು ಇಂಟರ್ನ್ಯಾಷನಲ್ ಬ್ಯಾಕಲಾರಿಯೇಟ್‌ನ 'ಪ್ರೈಮರಿ ಇಯರ್ಸ್ ಪ್ರೋಗ್ರಾಂ' (PYP) ಅಡಿಯಲ್ಲಿ ಆರಂಭವಾಗುತ್ತದೆ. ಅದರ ಮುಂದುವರಿದ ಭಾಗವಾಗಿ 'ಮಿಡಲ್ ಇಯರ್ಸ್ ಪ್ರೋಗ್ರಾಂ' (MYP) ಶಿಕ್ಷಣವನ್ನೂ ಇಲ್ಲೇ ನೀಡಲಾಗುತ್ತದೆ. ಈ ಶಾಲೆಗೆ ಮುಂಬೈನಲ್ಲಿ ಎರಡು ಪ್ರಮುಖ ಹಾಗೂ ಅತ್ಯಾಧುನಿಕ ಕ್ಯಾಂಪಸ್‌ಗಳಿವೆ. ಮೊದಲನೆಯದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿದ್ದರೆ, ಎರಡನೆಯದು ಜಿಯೋ ವರ್ಲ್ಡ್ ಸೆಂಟರ್ ಆವರಣದಲ್ಲಿದೆ.
ವಾರ್ಷಿಕ ಶುಲ್ಕದ ವಿವರ
ವರದಿಗಳ ಪ್ರಕಾರ, ನೀತಾ ಮುಕೇಶ್ ಅಂಬಾನಿ ಜೂನಿಯರ್ ಸ್ಕೂಲ್‌ನ (NMAJS) ವಾರ್ಷಿಕ ಬೋಧನಾ ಶುಲ್ಕವು ತರಗತಿಗಳಿಗೆ ಅನುಗುಣವಾಗಿ ಅಂದಾಜು ರೂ. 14 ಲಕ್ಷದಿಂದ ಆರಂಭವಾಗಿ ರೂ. 20 ಲಕ್ಷದವರೆಗೆ ಇರುತ್ತದೆ. ಈ ಬೃಹತ್ ಶುಲ್ಕದ ವಿವರ ಸಾಮಾನ್ಯ ಜನರಲ್ಲಿ ಆಶ್ಚರ್ಯವನ್ನು ಉಂಟುಮಾಡಿದೆ.
ತಾತನ ಶಾಲೆಯಲ್ಲೇ ಮೊಮ್ಮಗನ ಓದು!
ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಪೃಥ್ವಿ ಅಂಬಾನಿ ಕಲಿಯುತ್ತಿರುವ ಈ 'ನೀತಾ ಮುಕೇಶ್ ಅಂಬಾನಿ ಜೂನಿಯರ್ ಸ್ಕೂಲ್' ಭಾರತದ ನಂಬರ್ ಒನ್ ಅಂತರರಾಷ್ಟ್ರೀಯ ಶಾಲೆಯಾಗಿ ಹೊರಹೊಮ್ಮಿರುವ ಜಾಗತಿಕ ಮಟ್ಟದ 'ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್' (DAIS) ನದೇ ಒಂದು ಭಾಗವಾಗಿದೆ. ಅಂದರೆ, ಪೃಥ್ವಿ ಅಂಬಾನಿ ತನ್ನ ತಾತ ಮುಕೇಶ್ ಅಂಬಾನಿ ಅವರ ಕುಟುಂಬಕ್ಕೆ ಸೇರಿದ ಸ್ವಂತ ಶಾಲೆಯಲ್ಲೇ ಅಕ್ಷರ ಕಲಿಯುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

