Japan public toilets facilities ಭಾರತೀಯ ಮಹಿಳೆಯೊಬ್ಬರು ಜಪಾನ್‌ನ ಸಾರ್ವಜನಿಕ ಶೌಚಾಲ ಸ್ವಚ್ಛತೆ, ಮಹಿಳೆಯರಿಗಾಗಿ ಇರುವ ವಿಶೇಷ ಸೌಲಭ್ಯಗಳ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಮೇಕಪ್ ಕೌಂಟರ್, ಮಕ್ಕಳ ಸೀಟ್ ಮತ್ತು ಬಟ್ಟೆ ಬದಲಿಸುವ ಬೋರ್ಡ್‌ನಂತಹ ವ್ಯವಸ್ಥೆಗಳನ್ನು ಕಂಡು ಅವರು ಭಾವುಕರಾಗಿದ್ದಾರೆ.

ಶಿಸ್ತಿಗೆ ಇನ್ನೊಂದು ಹೆಸರೇ ಜಪಾನ್. ಅಷ್ಟರಮಟ್ಟಿ ಜಪಾನ್ ಎಲ್ಲದರಲ್ಲೂ ಅಚ್ಚುಕಟ್ಟು. ಜಪಾನೀಯರು ಮನೆಯೊಳಗೆ ಹೇಗೋ ಹೊರಗಿನ ಪರಿಸರವೂ ಅಷ್ಟೇ ಸ್ವಚ್ಛ. ಅದು ಸಾರ್ವಜನಿಕ ಸ್ಥಳಗಳು ಮನೆಯಂಗಳದಷ್ಟೇ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಅಲ್ಲಿ ಹುಡುಕಿದರೂ ಒಂದು ಕಸ ಕಾಣುವುದಿಲ್ಲ. ಅಲ್ಲಿನ ಸಾರ್ವಜನಿಕ ಶೌಚಾಲಯಗಳು, ಮಹಿಳೆಯರಿಗೆ ಅಲ್ಲಿನ ಸೌಲಭ್ಯಗಳು ಹೇಗಿವೆ ಎಂದರೆ ಭಾರತೀಯರು ಯಾರಾದರೂ ಜಪಾನ್‌ಗೆ ಹೋದರೆ ಅಲ್ಲಿನ ಶೌಚಾಲಯ ಕಂಡು ಅಚ್ಚರಿಪಡಬಹುದು. ಏಕೆಂದರೆ ಸಾರ್ವಜನಿಕ ಶೌಚಾಲಯದಲ್ಲೂ ಅದರ ಸ್ವಚ್ಛತೆಗೆ ಇನ್ನಿಲ್ಲದ ಕಾಳಜಿ.

ನಮ್ಮ ಭಾರತದಲ್ಲಿನ ಸಾರ್ವಜನಿಕ ಶೌಚಾಲಯ ಪರಿಸ್ಥಿತಿ ಹೇಳುವುದೇ ಬೇಡ. ದೇಶದ ಯಾವುದೇ ಮೂಲೆಗೆ ಹೋದರೂ ಅಲ್ಲಿನ ಸಾರ್ವಜನಿಕ ಶೌಚಾಲಯಗಳು ಮಹಿಳೆಯರಿಗೆ ಆರಾಮ ಎನಿಸುವುದೇ ಇಲ್ಲ. ಬಸ್ ನಿಲ್ದಾಣದಲ್ಲಂತೂ ಮಹಿಳೆಯರು ಶೌಚಾಲಯಕ್ಕೆ ಹೋಗಿಬರಲು ಹೆದರುತ್ತಾರೆ. ಒಳಗೆ ಹೋದರೆ ಉಸಿರಾಡುವುದು ಕಷ್ಟ. ಅಷ್ಟರಮಟ್ಟಿಗೆ ಗಲೀಜು ವಾತಾವರಣ.

ಇದೆಲ್ಲ ಪೀಠಿಕೆ ಏಕೆಂದರೆ ಭಾರತೀಯ ಮೂಲದ ಮಹಿಳೆಯೊಬ್ಬರು ಜಪಾನ್‌ಗೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕ ಬಾತ್‌ರೂಂ ಶೌಚಾಲಯಗಳು ಅಲ್ಲಿನ ಸೌಲಭ್ಯಗಳ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡುತ್ತಿದ್ದಂತೆ ಜಪಾನ್ ಜನರ ಜೀವನಶೈಲಿ, ಸಾರ್ವಜನಿಕ ಸ್ಥಳಗಳಲ್ಲಿನ ಸ್ವಚ್ಛತೆ, ಮಹಿಳೆಯರಿಗೆ ಆದ್ಯತೆ ಕಂಡು ತುಂಬಾ ಹೆಮ್ಮೆ ಪಡುವಂತಾಗುತ್ತೆ.

ಅಂಕಿತಾ ಸಹಿಗಲ್ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಜಪಾನ್‌ನ ಬಾತ್‌ರೂಂಗಳಲ್ಲಿರುವ ಚಿಕ್ಕ ಚಿಕ್ಕ ಆದರೆ ಗಮನ ಸೆಳೆಯುವ ಸೌಲಭ್ಯಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲೂ ಮಹಿಳೆಯರು ಮಕ್ಕಳಿಗೆ ಅಲ್ಲಿನ ಸೌಲಭ್ಯಗಳಲ್ಲಿ ವಿಶೇಷ ಗಮನ ನೀಡಿರುವ ಬಗ್ಗೆ ವಿಶೇಷವಾಗಿ ಹೇಳಿದ್ದಾರೆ

ಜಪಾನ್‌ನಲ್ಲಿನ ಬಾತ್‌ರೂಂ ನೋಡಿದಾಗ ನಾನು ಭಾವುಕಳಾಗುತ್ತೇನೆ. ಇಂಥ ಸೌಲಭ್ಯಗಳು ಭಾರತದಲ್ಲೇಕಿಲ್ಲ? ಎಂದು ಪ್ರಶ್ನೆ ಎದುರಾಗಿ ಬೇಸರವಾಗುತ್ತೆ ಎಂದು ಹೇಳಿಕೊಂಡಿದ್ದಾರೆ.

ಜಪಾನ್‌ನ ಶೌಚಾಲಯಗಳಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯ

ಅಂಕಿತಾ ಸಹಿಗಲ್(Ankita Sahigal) ಹೀಗೆ ಹೇಳ್ತಾರೆ. 'ನಾನು ಜಪಾನ್‌ನಲ್ಲಿದ್ದೇನೆ. ಇಲ್ಲಿನವರು ಬಾತ್‌ರೂಂಗಳಿಗೆ ಇಷ್ಟೊಂದು ಕಾಳಜಿ, ಗೌರವ ನೀಡಿದ್ದಾರೆ ಎಂದರೆ ನಾನು ಪ್ರತಿ ಬಾರಿ ವಾಶ್‌ರೂಂಗೆ ಹೋದಾಗ ಭಾವುಕಳಾಗುತ್ತೇನೆ. ಅದು ಚಿಕ್ಕ ಬಾತ್‌ರೂಂ ಆಗಿರಲಿ ಅಥವಾ ದೊಡ್ಡದಾಗಿರಲಿ. ಒಮ್ಮೆ ನೋಡಿ. ಇಲ್ಲಿ ಪ್ರತಿಯೊಂದು ಬಾತ್‌ರೂಂನಲ್ಲೂ ಮೇಕಪ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಇದೆ. ಮೇಕಪ್ ಮಾಡಿಕೊಳ್ಳಲು ಪ್ರತ್ಯೇಕ ಕೌಂಟರ್‌ಗಳು ಸಿಗುತ್ತವೆ. ಅದು ಎಷ್ಟೇ ಚಿಕ್ಕದಾಗಿದ್ದರೂ ಇರುತ್ತದೆ' ಎಂದು ಸಹಿಗಲ್ ಹೇಳಿದ್ದಾರೆ.

ಬಳಿಕ ಅವರು ಚಿಕ್ಕ ಮಕ್ಕಳೊಂದಿಗೆ ವಾಶ್‌ರೂಂಗೆ ಬರುವ ತಾಯಂದಿರಿಗಾಗಿ ಮಾಡಿರುವ ಮತ್ತೊಂದು ಸೌಲಭ್ಯವನ್ನು ತೋರಿಸಿದ್ದಾರೆ.

'ಮಕ್ಕಳೊಂದಿಗೆ ಬಾತ್‌ರೂಂಗೆ ಬರುವ ಎಲ್ಲಾ ತಾಯಂದಿರಿಗಾಗಿ ಇಲ್ಲಿ ಒಂದು ಸೀಟ್ ಇದೆ. ಮಕ್ಕಳು ಆ ಸೀಟ್‌ನಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದು! ನೋಡಿ ಜಪಾನೀಯರು ಎಷ್ಟೊಂದು ಯೋಚಿಸಿ ಈ ವ್ಯವಸ್ಥೆ ಮಾಡಿದ್ದಾರೆ ಎಂದು ವಿಡಿಯೋ ಮೂಲಕ ತೋರಿಸಿದ್ದಾರೆ.

ಬಟ್ಟೆ ಬದಲಿಸಲು ವಿಶೇಷ ಬೋರ್ಡ್ ನೋಡಿ ಅಚ್ಚರಿ

ಸಹಿಗಲ್ ಮಾತನಾಡುತ್ತಾ ಅಲ್ಲಿನ ಬಾತ್‌ರೂಮ್‌ಗಳಲ್ಲಿ ಬಟ್ಟೆ ಬದಲಿಸಲು ಇರುವ ವ್ಯವಸ್ಥೆ ಬಗ್ಗೆಯೂ ವಿಡಿಯೋದಲ್ಲಿ ತೋರಿಸಿದ್ದಾರೆ. ನೆಲದ ಮೇಲೆ ಅಳವಡಿಸಿರುವ ಬಟ್ಟೆ ಬದಲಿಸುವ ಬೋರ್ಡ್‌ನ್ನೂ ತೋರಿಸುತ್ತಾ, ಆರಂಭದಲ್ಲಿ ಇದನ್ನು ಮಗುವಿನ ಡೈಪರ್ ಬದಲಿಸಲು ಬಳಸುವ ವ್ಯವಸ್ಥೆ ಎಂದುಕೊಂಡಿದ್ದರಂತೆ. ಅದೇ ರೀತಿ ಇನ್ನೊಂದು ಸೌಲಭ್ಯ ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು. ನನ್ನ ಕಣ್ಣು ಈ ಬೋರ್ಡ್ ಮೇಲೆ ಬಿತ್ತು. ನೆಲದ ಮೇಲೆ ಈ ಚೇಂಜಿಂಗ್ ಬೋರ್ಡ್ ಅಳವಡಿಸಲಾಗಿದೆ. ಫ್ಲಶ್ ಬಳಿ ಇಷ್ಟು ಕೆಳಗೆ ಡೈಪರ್ ಬದಲಿಸುವುದೇ? ಹೀಗೆ ಹೇಗೆ ಬದಲಿಸಲು ಸಾಧ್ಯ ಎಂದುಕೊಂಡೆ. ಆದರೆ ನಾನಂದುಕೊಂಡ ಹಾಗೆ ಅಲ್ಲ ಅದು!

ಒಂದು ವೇಳೆ ಬಾತ್‌ರೂಂನ ನೆಲ ಒದ್ದೆಯಾಗಿದ್ದರೆ ಅಥವಾ ಕೊಳಕಾಗಿದ್ದರೆ ಅಲ್ಲಿ ಬಟ್ಟೆ ಬದಲಿಸುವುದು ಅಸಾಧ್ಯ. ಹೀಗಾಗಿಯೇ ಅಲ್ಲೊಂದು ಕೆಳಗೆ ಬೋರ್ಡ್ ಇದೆ. ಅದರ ಮೇಲೆ ಬಟ್ಟೆ ಬದಲಿಸಲು ಈ ವ್ಯವಸ್ಥೆ ಮಾಡಲಾಗಿದೆ. ನೆಲದ ಮೇಲೆ ನೀರು ಚೆಲ್ಲಿದ್ದರೆ ಅಥವಾ ಕೆಳಗೆ ಕೊಳಕಾಗಿದ್ದರೆ, ಇದರ ಮೇಲೆ ನಿಂತುಕೊಂಡು ಬೇಕಾದ ಬಟ್ಟೆ ಬದಲಿಸಬಹುದು. ನಮ್ಮ ಬಗ್ಗೆ ಇಷ್ಟೊಂದು ಯೋಚಿಸುವುದು ಹೇಗೆ? ನನಗೆ ಅರ್ಥವಾಗುತ್ತಿಲ್ಲ. ತಮ್ಮ ನಾಗರಿಕರ ಬಗ್ಗೆ ಒಂದು ದೇಶ ಇಷ್ಟೊಂದು ಯೋಚಿಸಲು ಹೇಗೆ ಸಾಧ್ಯ? ಅದರಲ್ಲೂ ಮಹಿಳೆಯರ ಬಗ್ಗೆ? ಭಾರತದಲ್ಲಿ ಇದೆಲ್ಲ ವ್ಯವಸ್ಥೆ ಕನಸಿನ ಮಾತು. ಇಂಥ ವ್ಯವಸ್ಥೆ ಬಿಡಿ, ಸಾರ್ವಜನಿಕ ಶೌಚಾಲಯಳು ಹೇಗಿವೆ ಎಂಬುದು ಗೊತ್ತೇಇದೆ. ಅಂಥದ್ದರಲ್ಲಿ ಮಹಿಳೆಯರಿಗೆ ಮಕ್ಕಳಿಗೆ ಜಪಾನ್‌ ರೀತಿ ಯೋಚಿಸಿ ವ್ಯವಸ್ಥೆ ಮಾಡಿಯಾರೇ? ಎಂದು ಯೋಚಿಸುವಂತಿದೆ ಅಲ್ಲಿನ ವ್ಯವಸ್ಥೆ.

ಈ ವಿಡಿಯೋವನ್ನು 'ಜಪಾನ್‌ನಲ್ಲಿ ನನಗೆ ಅತ್ಯಂತ ಇಷ್ಟವಾದದ್ದು ಅವರ ಬಾತ್‌ರೂಂ! ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

View post on Instagram
 

ಜಪಾನ್ ಸೌಲಭ್ಯಗಳ ಬಗ್ಗೆ ನೆಟಿಜನ್ ಮೆಚ್ಚುಗೆ

ಈ ಪೋಸ್ಟ್‌ಗೆ ಹಲವು ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ. 'ಜಪಾನ್ ನಿಜವಾಗಿಯೂ ಎಲ್ಲವನ್ನೂ ಯೋಚಿಸುತ್ತದೆ' ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, 'ಇದು ನಿಜವಾಗಿಯೂ ತುಂಬಾ ಚೆನ್ನಾಗಿ ಯೋಚಿಸಿ ಮಾಡಿರುವ ವ್ಯವಸ್ಥೆ' ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೇ ವ್ಯಕ್ತಿ, 'ಸಾರ್ವಜನಿಕ ಶೌಚಾಲಯಗಳು ಎಲ್ಲೆಡೆಯೂ ಹೀಗೆಯೇ ಇರಬೇಕು' ಎಂದು ಹೇಳಿದ್ದಾರೆ.

ಇನ್ನೊಬ್ಬರು, 'ಜಪಾನ್ ಎಂದಿಗೂ ಅಚ್ಚರಿ ಮೂಡಿಸುವುದನ್ನು ನಿಲ್ಲಿಸುವುದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ಗಮನಿಸಿ: ಈ ಲೇಖನ ಬಳಕೆದಾರರು ಸೃಷ್ಟಿಸಿದ ವಿಷಯವನ್ನು ಆಧರಿಸಿದೆ. ಮೂಲ ಪೋಸ್ಟ್‌ನಲ್ಲಿ ಮಾಡಲಾಗಿರುವ ಹೇಳಿಕೆಗಳನ್ನು ಏಷಿಯಾನೆಟ್ ನ್ಯೂಸ್ ಸ್ವತಂತ್ರವಾಗಿ ಪರಿಶೀಲಿಸಿಲ್ಲ.