ಲಕ್ಷಾಂತರ ರೂಪಾಯಿ ಮ್ಯೂಚುವಲ್ ಫಂಡ್ ಮತ್ತು ಹೆಲ್ತ್ ಇನ್ಶೂರೆನ್ಸ್ ಇದ್ದರೂ, ವ್ಯಕ್ತಿಯೊಬ್ಬರು ತಾಯಿಯ ತುರ್ತು ಚಿಕಿತ್ಸೆಗೆ ಮಧ್ಯರಾತ್ರಿ ಹಣವಿಲ್ಲದೆ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು (ಸೆ.30): ನಮ್ಮ ಬಳಿ ಲಕ್ಷಾಂತರ ರೂಪಾಯಿ ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ ಹೂಡಿಕೆಗಳು ಹಾಗೂ ಕಂಪನಿ ನೀಡಿದ ಹೆಲ್ತ್ ಇನ್ಶೂರೆನ್ಸ್ ಕವರ್ ಇದ್ದರೆ 'ನಮ್ಮ ಭವಿಷ್ಯ ಸುರಕ್ಷಿತ' ಎಂದು ಭಾವಿಸುತ್ತೇವೆ. ಆದರೆ, ಅರ್ಧರಾತ್ರಿಯಲ್ಲಿ ಎದುರಾಗುವ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಇವೆಲ್ಲವೂ ತಕ್ಷಣಕ್ಕೆ ಕೈಗೆ ಸಿಗುವುದಿಲ್ಲ ಎಂಬ ಆಘಾತಕಾರಿ ಸತ್ಯವನ್ನು ವ್ಯಕ್ತಿಯೊಬ್ಬರು ಎದುರಿಸಿದ ಘಟನೆ ಬೆಳಕಿಗೆ ಬಂದಿದೆ. ತಮ್ಮ ತಾಯಿಗೆ ಎದುರಾದ ಅರ್ಧರಾತ್ರಿಯ ಹೆಲ್ತ್‌ ಎಮರ್ಜೆನ್ಸಿ ಸಂದರ್ಭದಲ್ಲಿ ಅನುಭವಿಸಿದ ಕಹಿ ಘಟನೆಯನ್ನು 'ರೆಡ್ಡಿಟ್' (Reddit) ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, "ದಾಖಲೆಗಳಲ್ಲಿ ಶ್ರೀಮಂತನಾಗಿರುವುದು ಬೇರೆ, ತುರ್ತು ಸಂದರ್ಭಕ್ಕೆ ತಕ್ಷಣವೇ ಬಳಸಲು ಸಿಗುವ ಹಣ ಹೊಂದಿರುವುದು ಬೇರೆ" ಎಂದು ತಮ್ಮ ಕಣ್ಣು ತೆರೆಸಿದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಅರ್ಧರಾತ್ರಿ 2 ಗಂಟೆಗೆ ಎದುರಾದ ತೊಂದರೆ: ಅಕೌಂಟ್‌ನಲ್ಲಿತ್ತು ಬರೀ ₹18,000!

"ಕಳೆದ ಎರಡು ವಾರಗಳ ಹಿಂದೆ ಮಧ್ಯರಾತ್ರಿ 2 ಗಂಟೆಗೆ ನನ್ನ ತಾಯಿಯ ಆರೋಗ್ಯ ತೀವ್ರವಾಗಿ ಕ್ಷೀಣಿಸಿ, ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ (Casualty Ward) ಸೇರಿಸಬೇಕಾಯಿತು. ಆಸ್ಪತ್ರೆಯವರು ರೋಗಿಯನ್ನು ದಾಖಲಿಸಿಕೊಳ್ಳಲು ತಕ್ಷಣವೇ ₹1.5 ಲಕ್ಷ ಮುಂಗಡ ಠೇವಣಿ (Advance Deposit) ಪಾವತಿಸುವಂತೆ ತಿಳಿಸಿದರು. ಕಾಗದಪತ್ರಗಳ ಲೆಕ್ಕಾಚಾರದಲ್ಲಿ ನಾನು ಉತ್ತಮ ಆರ್ಥಿಕ ಸ್ಥಿತಿಯಲ್ಲಿದ್ದೆ. ನನ್ನ ಬಳಿ ಮ್ಯೂಚುವಲ್ ಫಂಡ್ ಮತ್ತು ಷೇರುಗಳಲ್ಲಿ ₹12 ಲಕ್ಷ ಹೂಡಿಕೆ ಹಾಗೂ ₹10 ಲಕ್ಷ ಮೊತ್ತದ ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಇತ್ತು. ಆದರೆ, ನನ್ನ ಬ್ಯಾಂಕ್ ಖಾತೆಯಲ್ಲಿ ತಕ್ಷಣಕ್ಕೆ ಲಭ್ಯವಿದ್ದದ್ದು ಕೇವಲ ₹18,000 ಮಾತ್ರ!" ಎಂದು ಅವರು ಬರೆದುಕೊಂಡಿದ್ದಾರೆ. ಅರ್ಧರಾತ್ರಿಯಾಗಿದ್ದರಿಂದ ಆಸ್ಪತ್ರೆಯ ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ (TPA Office) ಕಚೇರಿ ಬೆಳಿಗ್ಗೆಯವರೆಗೆ ತೆರೆಯುವುದಿಲ್ಲವಾದ್ದರಿಂದ ಕ್ಯಾಶ್‌ಲೆಸ್ ಇನ್ಶೂರೆನ್ಸ್ ಪ್ರಕ್ರಿಯೆ ತಕ್ಷಣಕ್ಕೆ ಕಷ್ಟಕರವಾಗಿತ್ತು.

ಸ್ನೇಹಿತನಿಗೆ ಫೋನ್ ಮಾಡಿ ಯುಪಿಐ ಪಾವತಿ

ಇನ್ಶೂರೆನ್ಸ್‌ನಿಂದ ತಕ್ಷಣಕ್ಕೆ ಯಾವುದೇ ಪರಿಹಾರ ಸಿಗದಿದ್ದಾಗ, ಆ ವ್ಯಕ್ತಿ ತಡರಾತ್ರಿಯಲ್ಲಿ ತಮ್ಮ ಸ್ನೇಹಿತರೊಬ್ಬರನ್ನು ನಿದ್ದೆಯಿಂದ ಎಬ್ಬಿಸಿ ಯುಪಿಐ (UPI) ಮೂಲಕ ಹಣ ವರ್ಗಾಯಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಹೇಗೋ ಆಸ್ಪತ್ರೆಯ ಮುಂಗಡ ಹಣವನ್ನು ಪಾವತಿಸಿದ್ದಾರೆ.

"ಸದ್ಯ ನನ್ನ ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಘಟನೆ ನನಗೆ ದೊಡ್ಡ ಪಾಠ ಕಲಿಸಿದೆ. ಷೇರುಗಳು ಹಾಗೂ ದೀರ್ಘಾವಧಿ ಫಂಡ್‌ಗಳಲ್ಲಿ ಹೆಚ್ಚಿನ ಲಾಭ ಗಳಿಸುವ ಗಡಿಬಿಡಿಯಲ್ಲಿ, ತಡರಾತ್ರಿ ತುರ್ತು ಪರಿಸ್ಥಿತಿ ಎದುರಾದಾಗ 'ಈಕ್ವಿಟಿ' ಎನ್ನುವುದು ತಕ್ಷಣದ ನಗದಾಗಿ (Liquid Cash) ಬದಲಾಗುವುದಿಲ್ಲ ಎಂಬುದನ್ನೇ ನಾವು ಮರೆತುಬಿಡುತ್ತೇವೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಹೆಚ್ಚಾಗಿ ಕಾಗದಪತ್ರಗಳ ವಿಳಂಬದಲ್ಲಿ ಸಿಲುಕಿಕೊಳ್ಳುತ್ತವೆ ಅಥವಾ ರೀಇಂಬರ್ಸ್‌ಮೆಂಟ್ ಹೆಸರಿನಲ್ಲಿ ಕೈಯಿಂದ ಹಣ ಕೊಡುವಂತೆ ಮಾಡುತ್ತವೆ. ಹೀಗಾಗಿ ತಕ್ಷಣಕ್ಕೆ ಹಣ ಬಳಸಲು ಸಾಧ್ಯವಾಗದಿದ್ದರೆ ಕಾಗದದ ಮೇಲಿನ ಶ್ರೀಮಂತಿಕೆಗೆ ಬೆಲೆಯೇ ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ತುರ್ತು ನಿಧಿ (Emergency Fund) ಮತ್ತು ನಗದು ಸೌಲಭ್ಯದ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ:'ಯಾವಾಗಲೂ ಆಪತ್ಕಾಲಕ್ಕೆಂದು ಪ್ರತ್ಯೇಕ 'ರೇನಿ ಡೇ ಫಂಡ್' (Rainy Day Corpus) ಕಾಯ್ದಿರಿಸಿ. ಮನೆಯ ಪ್ರತಿಯೊಬ್ಬರಿಗೂ ವೈಯಕ್ತಿಕ ಇನ್ಶೂರೆನ್ಸ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ' ಎಂದಿದ್ದಾರೆ.

"ನಿಮ್ಮ ತಂದೆ/ತಾಯಿ ಬೇಗ ಗುಣಮುಖರಾಗಲಿ. ಕನಿಷ್ಠ 6 ರಿಂದ 8 ತಿಂಗಳ ಖರ್ಚಿಗೆ ಆಗುವಷ್ಟು ಲಿಕ್ವಿಡ್ ಕ್ಯಾಶ್ (ತಕ್ಷಣ ಸಿಗುವ ನಗದು) ಇಟ್ಟುಕೊಳ್ಳಿ. ಇಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ' ಎಂದಿದ್ದಾರೆ. "ಯಾವುದೇ ಕಾರಣಕ್ಕೂ ಮುಟ್ಟದಂತೆ ಕನಿಷ್ಠ ₹5 ಲಕ್ಷ ಹಣವನ್ನು ಬ್ಯಾಂಕ್ ಖಾತೆಯಲ್ಲಿ ನಗದಾಗಿ ಇಡಬೇಕು. ಅಥವಾ ಕನಿಷ್ಠ ₹3 ರಿಂದ ₹4 ಲಕ್ಷ ಲಿಮಿಟ್ ಇರುವ ಕ್ರೆಡಿಟ್ ಕಾರ್ಡ್ ಕಾಯ್ದಿರಿಸಿರಬೇಕು. ಇಂತಹ ಘಟನೆಗಳು ಸಾಮಾನ್ಯ. ಬೇಕಾದ ಸಂದರ್ಭಕ್ಕೆ ಸಿಗದೇ ಹೋದರೆ ಆ ಹಣದಿಂದ ಏನು ಪ್ರಯೋಜನ?" ಎಂದು ಕಾಮೆಂಟ್ ಮಾಡಿದ್ದಾರೆ.