ಹೊಸ ಕಾರ್ ಖರೀದಿ ಮಾಡ್ತಿದ್ದೇವೆ ಅಂದ್ರೆ ಅದೊಂತರ ಹಬ್ಬ. ಶೋರೂಮಿನಲ್ಲಿ ಕೂಡ ಕಾರನ್ನು ಸುಂದರವಾಗಿ ಅಲಂಕರಿಸಿ, ಗ್ರಾಹಕರಿಗೆ ಕೊಡ್ತಾರೆ. ಮೆಲ್ಬೋರ್ನ್ ನಲ್ಲಿ ಟೆಸ್ಲಾ ಕಾರು ಖರೀದಿ ಮಾಡಿದ ಭಾರತೀಯರ ಅನುಭವ ಹೇಗಿತ್ತು ಗೊತ್ತಾ?
ಭಾರತದಲ್ಲಿ ಹೊಸ ಕಾರು ಖರೀದಿಸಿದ್ರೆ, ಖರೀದಿ ಮಾಡಿದವ್ರ ಜೊತೆ ಕಂಪನಿ ಸಿಬ್ಬಂದಿಗೂ ಸಂಭ್ರಮ. ಕಾರ್ ಡೆಲಿವರಿ ಟೈಂನಲ್ಲಿ ಗ್ರಾಹಕರಿಗೆ ಅದ್ಧೂರಿ ಸ್ವಾಗತ ನೀಡಿ, ರಿಬ್ಬನ್ ಕಟ್ ಮಾಡಿ, ಸಿಹಿ ನೀಡಿ, ಫೋಟೋ – ವಿಡಿಯೋ ಕ್ಲಿಕ್ ಮಾಡಿ ಕಳಿಸ್ತಾರೆ. ಭಾರತೀಯ ಮೂಲದ ದಂಪತಿ ಭಾರತದ ಮೂಡ್ ನಲ್ಲೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ಗೆ ಕಾರು ಖರೀದಿಸೋಕೆ ಹೋಗಿದ್ರು. ಆದ್ರೆ ಅಲ್ಲಿ ಆಗಿದ್ದೇ ಬೇರೆ.
ಆಸ್ಟ್ರೇಲಿಯಾದಲ್ಲಿ ಟೆಸ್ಲಾ ಕಾರು ಖರೀದಿ
ಮೂಲತಃ ದೆಹಲಿಯವರಾದ ಕಿಮ್ಮಿ ಸೋಹಲ್ ಮತ್ತು ಅವರ ಸಂಗಾತಿ ಮೆಲ್ಬೋರ್ನ್ನಲ್ಲಿ ಟೆಸ್ಲಾ ಕಾರಿನ ಡೆಲಿವರಿ ಪಡೆಯಲು ಶೋರೂಮ್ಗೆ ಹೋಗಿದ್ರು. ಭಾರತದಲ್ಲಿ ಕಾರು ಡೆಲಿವರಿ ವೇಳೆ ಸಿಗುವಂತೆ ಇಲ್ಲಿಯೂ ಉತ್ತಮ ಸ್ವಾಗತ ಸಿಗಬಹುದು, ಕಾರನ್ನು ಬಟ್ಟೆಯಿಂದ ಮುಚ್ಚಿಟ್ಟು ರಿಬ್ಬನ್ ತೆರೆಯುವ ಮೂಲಕ ಸಂಭ್ರಮದಿಂದ ಹಸ್ತಾಂತರಿಸಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಶೋರೂಮ್ಗೆ ಹೋದಾಗ ಅವರಿಗೆ ಅಚ್ಚರಿ ಕಾದಿತ್ತು.
ದಂಪತಿ ಶೋರೂಮ್ಗೆ ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಸುಮಾರು ಒಂದು ಗಂಟೆ ಕಾಲ ಅಲ್ಲಿಯೇ ಕುಳಿತು ಕಾಯಬೇಕಾಯಿತು. ಅಷ್ಟೇ ಅಲ್ಲ, ಕಾಫಿ ಕುಡಿಯಬೇಕೆಂದರೂ ಅವರೇ ಹೋಗಿ ಕಾಫಿ ತಯಾರಿಸಿಕೊಂಡು ಕುಡಿಯಬೇಕಾಯಿತು. ಬಳಿಕ ಸಿಬ್ಬಂದಿ ಬಂದಾಗ ಯಾವುದೇ ಅಲಂಕಾರವಿಲ್ಲದೆ ನಿಂತಿದ್ದ ಕಾರನ್ನು ತೋರಿಸಿದ್ದಾರೆ. ಕಾರಿಗೆ ಯಾವುದೇ ಕವರ್ ಇರಲಿಲ್ಲ. ವಿಶೇಷ ಸ್ವಾಗತವಾಗಲಿ, ಫೋಟೋ ಅಥವಾ ಸೆಲೆಬ್ರೇಷನ್ ಆಗಲಿ ಯಾವುದೂ ಇರಲಿಲ್ಲ. ಸಿಬ್ಬಂದಿ ಸುಮ್ಮನೆ ಕಾರಿನ ಕೀ ಕೊಟ್ಟು, ಏನಾದರೂ ಪ್ರಶ್ನೆಗಳಿದ್ದರೆ ಕೇಳಿ, ಇಲ್ಲದಿದ್ದರೆ ಕಾರನ್ನು ತೆಗೆದುಕೊಂಡು ಹೋಗಬಹುದು ಅಂದ್ರು.
ಫೋಟೋ ಕೂಡ ತಾವೇ ತೆಗೆದುಕೊಂಡ ದಂಪತಿ
ಈ ಅನುಭವದ ವಿಡಿಯೋವನ್ನು ಕಿಮ್ಮಿ ಸೋಹಲ್ , ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾರು ಮಾತ್ರ ಪ್ರೀಮಿಯಂ, ಆದರೆ ಡೆಲಿವರಿ ಮಾತ್ರ ಸೆಲ್ಫ್ ಸರ್ವಿಸ್. ನಮಗಾಗಿ ನಾವೇ ಕಾಫಿ ಮಾಡಿಕೊಂಡೆವು, ಆ್ಯಪ್ ಡೌನ್ಲೋಡ್ ಮಾಡಿಕೊಂಡು ಕಾರಿನ ಸೆಟ್ಟಿಂಗ್ಗಳನ್ನು ನಾವೇ ಮಾಡಿದೆವು. ಫೋಟೋಗಳನ್ನು ನಾವೇ ತೆಗೆದುಕೊಂಡೆವು. ಕೊನೆಗೆ ನಮಗೆ ನಾವೇ ವಿದಾಯ ಹೇಳಿಕೊಂಡು ಹೊರಟೆವು. ಟೆಸ್ಲಾ ಖರೀದಿಸಿದ ಇತರರಿಗೂ ಇದೇ ರೀತಿಯ ಅನುಭವವಾಗಿದೆಯೇ ಅಂತ ಕೇಳಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ನೀವು ಮಾತ್ರವಲ್ಲ, ನಮಗೂ ಟೆಸ್ಲಾ ಡೆಲಿವರಿ ವೇಳೆ ಇದೇ ರೀತಿಯ ಅನುಭವವಾಗಿತ್ತುಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಮುಂದಿನ ಬಾರಿ ರಿಬ್ಬನ್, ಸಿಹಿ ಮತ್ತು ಫೋಟೋಗ್ರಾಫರ್ ಎಲ್ಲವನ್ನೂ ನಾವೇ ಮನೆಯಿಂದ ತೆಗೆದುಕೊಂಡು ಬರುತ್ತೇವೆ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಭಾರತದಲ್ಲಿ ಸ್ಪ್ಲೆಂಡರ್ ಬೈಕ್ ಖರೀದಿಸಿದರೂ ಇದಕ್ಕಿಂತ ಉತ್ತಮವಾದ ಡೆಲಿವರಿ ಸಿಗುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ.












