ಗೆಳೆಯನ ಸಾವಿನಿಂದ ಜಾಗೃತರಾದ ರಾಘವೇಂದ್ರ ಕುಮಾರ್, 'ಹೆಲ್ಮೆಟ್ ಮ್ಯಾನ್' ಎಂದೇ ಖ್ಯಾತರಾಗಿದ್ದಾರೆ. ತಮ್ಮ ಆಸ್ತಿಯನ್ನೇ ಮಾರಿ 70,000ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಜಾಗೃತಿಗಾಗಿ ದೇಶಾದ್ಯಂತ ಸಂಚರಿಸುತ್ತಿರುವ ರಾಘವೇಂದ್ರ, ಹೆಲ್ಮೆಟ್ ಬ್ಯಾಂಕ್‌ ಸ್ಥಾಪಿಸುತ್ತಿದ್ದಾರೆ.

ದೆಹಲಿ: ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ದುರ್ಘಟನೆ ನಡೆದರೆ ನಾವು ಅದನ್ನು ಕೆಲವು ದಿನಗಳ ನಂತರ ಮರೆತು ಮುಂದೆ ಸಾಗುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬೈಕ್‌ನಲ್ಲಿ ಹೋಗುವಾಗ ತನ್ನ ಗೆಳೆಯ ಹೆಲ್ಮೆಟ್ ಹಾಕದ ಕಾರಣ ಮೃತಪಟ್ಟಿದ್ದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ, ದೇಶದಾದ್ಯಂತ ಹೆಲ್ಮೆಟ್ ಧರಿಸುವುದಕ್ಕೆ ಜಾಗೃತಿ ಅಭಿಯಾನ ಕೈಗೊಂಡಿದ್ದು, ಈವರೆಗೆ 70 ಸಾವಿರಕ್ಕೂ ಅಧಿಕ ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡಿದ್ದಾರೆ. ಉಚಿತ ಹೆಲ್ಮೆಟ್ ನೀಡುವುದಕ್ಕಾಗಿ ತನ್ನ ಆಸ್ತಿ, ಸ್ವಂತ ಮನೆ ಹಾಗೂ ಹೆಂಡತಿಯ ಆಭರಣಗಳನ್ನೂ ಮಾರಾಟ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ.

ಉತ್ತರ ಭಾರತದ ಕಡೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಹೆಲ್ಮೆಟ್ ಮ್ಯಾನ್ ಭಾರೀ ಫೇಮಸ್ ಆಗಿದ್ದಾರೆ. ಬಿಹಾರದ ರಾಜ್ಯದ ಯುವ ರೈತನಾಗಿರುವ ಹೆಲ್ಮೆಟ್ ಮ್ಯಾನ್ ಖ್ಯಾತಿಯ ರಾಘವೇಂದ್ರ ಕುಮಾರ್ 2014ರಿಂದ ಈವರೆಗೆ ಬರೋಬ್ಬರಿ 70,000ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಇವರು ಸಾಮಾನ್ಯ ಜನರು ಮಾತ್ರವಲ್ಲ ಭಾರತೀಯ ಸೈನ್ಯದೊಂದಿಗೆ ಸೇರಿ ದೇಶಾದ್ಯಂತ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ.

ಬೈಕ್ ಸವಾರರಿಗೆ ಹೆಲ್ಮೆಟ್ ವಿತರಣೆ ಹಿಂದಿದೆ ಭಯಾನಕ ಕಾರಣ:

ಕಳೆದ 10 ವರ್ಷಗಳ ಹಿಂದೆ ಅಂದರೆ 2014ರಲ್ಲಿ ರಾಘವೇಂದ್ರ ಕುಮಾರನ ಜೊತೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಆತನ ಆಪ್ತ ಸ್ನೇಹಿತ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ, ಆಗ ಹೆಲ್ಮೆಟ್ ಧರಿಸಿದ್ದ ರಾಘವೇಂದ್ರ ಅವರು ಅದೃಷ್ಟವಶಾತ್ ಬದುಕುಳಿದಿದ್ದರು. ಅಂದಿನಿಂದ ತಮ್ಮ ಜೀವನ ಶೈಲಿಯನ್ನೇ ಬದಲಿಸಿಕೊಂಡರು. ಕಳೆದ 10 ವರ್ಷಗಳಿಂದಲೂ ನಿರಂತರವಾಗಿ ತಮಗೆ ಸಾಧ್ಯವೆನಿಸುವಷ್ಟು ಜನರಿಗೆ ಉಚಿತವಾಗಿ ಹೆಲ್ಮೆಟ್ ನೀಡುವ ಮೂಲಕ ಜಾಗೃತಿ ಮೂಡಿಸಲು ಮುಂದಾದರು. ರಸ್ತೆಯ ಬದಿಯಲ್ಲಿ ನಿಂತುಕೊಂಡು ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಕೈ ಅಡ್ಡ ಹಾಕಿ ಹೆಲ್ಮೆಟ್ ಧರಿಸುವಂತೆ ತಿಳಿ ಹೇಳುತ್ತಾರೆ. ಇನ್ನು ಹೆಲ್ಮೆಟ್ ಇಲ್ಲದವರಿಗೆ ತಾವೇ ಉಚಿತವಾಗಿ ಒಂದು ಗುಣಮಟ್ಟದ ಹೆಲ್ಮೆಟ್ ನೀಡುತ್ತಾರೆ.

ಆರಂಭದಲ್ಲಿ ಎರಡು ವರ್ಷಗಳ ಕಾಲ ಕೆಲಸದ ಬಿಡುವಿನ ವೇಳೆ ಹಾಗೂ ರಜಾ ದಿನಗಳಲ್ಲಿ ಮಾತ್ರ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಆದರೆ, 2016ರಲ್ಲಿ ತಾವು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ಹೆಲ್ಮೆಟ್ ಕುಡಿತ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.

ದೇಶದಾದ್ಯಂತ ತಾವು ಎಲ್ಲಿಗೇ ತೆರಳಿದರೂ ಹೆಲ್ಮೆಟ್ ಬಗ್ಗೆ ಜಾಗೃತಿ ಮಡಿಸಲು ಮುಂದಾದರು. ಜೊತೆಗೆ, ಹೆಲ್ಮೆಟ್ ಇಲ್ಲದವರಿಗೆ ತಮ್ಮ ಸ್ವಂತ ಹಣದಿಂದ ಖರೀದಿ ಮಾಡಿದ ಗುಣಮಟ್ಟದ ಹೆಲ್ಮೆಟ್‌ಗಳನ್ನು ವಿತರಿಸಲು ಮುಂದಾದರು. ತಮ್ಮ ದುಡಿಮೆಯಿಂದ ಸಂಗ್ರಹ ಮಾಡಿದ್ದ ಎಲ್ಲ ಹಣವನ್ನೂ ಹೆಲ್ಮೆಟ್ ಖರೀದಿಸಿ ವಿತರಣೆ ಮಾಡುವುದಕ್ಕೆ ಖರ್ಚು ಮಾಡಿದರು. ಆಗ ಊಟ ಹಾಗೂ ದೈನಿಕ ವೆಚ್ಚಕ್ಕೂ ಪರದಾಡುವ ಸ್ಥಿತಿ ಬಂದಿದ್ದು, ಉಚಿತ ಹೆಲ್ಮೆಟ್ ಕೊಡಲು ಸಾಧ್ಯವಾಗದಂತಾಯಿತು. ಆಗ ರಾಘವೇಂದ್ರ ಅವರು ತಮ್ಮ ಸ್ವಂತ ಮನೆ, ಭೂಮಿ ಹಾಗೂ ಹೆಂಡತಿಯ ಆಭರಣಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಹೆಲ್ಮೆಟ್ ಖರೀದಿಸಿ, ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಿದರು.

View post on Instagram

ಇನ್ನು ರಾಘವೇಂದ್ರ ಅವರ ಖ್ಯಾತಿ ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚಾಗತೊಡಗಿತು. ಸ್ಥಳೀಯವಾಗಿ ಶಾಸಕರು, ಸಚಿವರು, ಮಂತ್ರಿಗಳು, ಸರ್ಕಾರಿ ನೌಕರರು, ಸೇನಾ ಸಿಬ್ಬಂದಿ ಯಾರೇ ಇದ್ದರೂ ಹೆಲ್ಮೆಟ್ ಮ್ಯಾನ್ ರಾಘವೇಂದ್ರ ಅವರನ್ನು ಆತ್ಮೀಯವಾಗಿ ಮಾತನಾಡಿಸಿ, ಜಾಗೃತಿಯ ಬಗ್ಗೆ ಶ್ಲಾಘನೆ ಮಾಡುತ್ತಾರೆ. ಇತ್ತೀಚೆಗೆ ಅವರು ಹೆಲ್ಮೆಟ್ ಜಾಗೃತಿ ಕಾರ್ಯಕ್ರಮಕ್ಕಾಗಿ ದೇಶದಾದ್ಯಂತ ಪ್ರವಾಸ ಮಾಡುತ್ತಾರೆ. ಹೀಗೆ, ಕಾರು, ವಿಮಾನ, ಬಸ್, ರೈಲು ಯಾವುದರಲ್ಲಿಯೇ ಪ್ರಯಾಣ ಮಾಡಿದರೂ ಇವರು ಹೆಲ್ಮೆಟ್ ಮಾತ್ರ ತೆಗೆಯುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸಚಿವರ ಜೊತೆಗಿನ ಕಾರ್ಯಕ್ರಮ ವೇದಿಕೆಗಳನ್ನು ಹಂಚಿಕೊಂಡರೂ ಹೆಲ್ಮೆಟ್ ಧರಿಸಿಕೊಂಡು ಕೂರುತ್ತಾರೆ. ಹೀಗಾಗಿ, 'ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ' (Helmet Man of India) ಎಂದೇ ಫೇಮಸ್ ಆಗಿದ್ದಾರೆ.

ಈಗ ಹೆಲ್ಮೆಟ್ ಮ್ಯಾನ್‌ಗೆ ಕೃಷಿಯೇ ಆದಾಯದ ಮೂಲ. ತಮ್ಮ ಸ್ವಂತ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶಾಲೆ ಹಾಗೂ ಇತರೆ ಸಮುದಾಯಿಕ ಗುಂಪುಗಳಲ್ಲಿ 'ಹೆಲ್ಮೆಟ್ ಬ್ಯಾಂಕ್' ಸ್ಥಾಪಿಸಲು NGO ಒಂದನ್ನು ಆರಂಭಿಸಿದ್ದಾರೆ. ಇನ್ನು ಕೆಲವರು ಬೇಕಾದಾಗ ಹೆಲ್ಮೆಟ್ ತೆಗೆದುಕೊಂಡು, ಬಳಸಿ ಅದನ್ನು ವಾಪಸ್ ಬಂದು ಕೊಡಬಹುದು. ಈಗಾಗಲೇ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಹೆಲ್ಮೆಟ್ ಬ್ಯಾಂಕ್ ಆರಂಭವಾಗಿದೆ. ಈ ಹೆಲ್ಮೆಟ್ ಬ್ಯಾಂಕ್ ಅನ್ನು, ರಾಘವೇಂದ್ರ ಅವರು ದೇಶಾದ್ಯಂತ ವಿಸ್ತರಿಸುವ ಗುರಿಯಲ್ಲಿದ್ದಾರೆ.

ದೇಶದಲ್ಲಿ ವರ್ಷಕ್ಕೆ ಸುಮಾರು 2 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ. ಅರ್ಧದಷ್ಟು ಅಪಘಾತಗಳು ದ್ವಿಚಕ್ರ ವಾಹನಗಳಲ್ಲಿ ಹಲ್ಮೆಟ್ ಇಲ್ಲದ ಸವಾರರು ಸಾವನ್ನಪ್ಪುತ್ತಿದ್ದಾರೆ. ತನ್ನ ಈ ಹೆಲ್ಮೆಟ್ ಜಾಗೃತಿಯ ಅಭಿಯಾನ ಮತ್ತು ಹೋರಾಟವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ ಎಂದು ರಾಘವೇಂದ್ರ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

'ഹെൽമറ്റ് മാൻ ഓഫ് ഇന്ത്യ'; സുഹൃത്തിൻ്റെ മരണം രാജ്യത്തിലുടനീളം ജീവൻ രക്ഷാദൗത്യത്തിന് പ്രചോദനമായ കഥ