ಪೊಲೀಸ್ ಸ್ಟೇಷನ್ ಮುಂದೆ ಬಂದ ಅಜ್ಜಿಯೊಬ್ಬರು ತಮ್ಮ ಕೈಯಲ್ಲಿ ಒಂದು ಕೋಳಿ ಹಿಡಿದು ಅಳುತ್ತಾ ನಿಂತುಕೊಂಡಿದ್ದಾರೆ. ನನ್ನ ಕೋಳಿಗೆ ನೀವು ಹೇಗಾದರೂ ಮಾಡಿ ನ್ಯಾಯ ಕೊಡಿಸಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಗಮ್ಮಜ್ಜಿಯ ಮುಗ್ಧತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪೊಲೀಸ್ ಸ್ಟೇಷನ್ ಮುಂದೆ ಬಂದ ಅಜ್ಜಿಯೊಬ್ಬರು ತಮ್ಮ ಕೈಯಲ್ಲಿ ಒಂದು ಕೋಳಿ ಹಿಡಿದು ಅಳುತ್ತಾ ನಿಂತುಕೊಂಡಿದ್ದಾರೆ. ಆಗ ಪೊಲೀಸರು ಅಜ್ಜಿಯ ಬಳಿಬಂದು ಏನಾಯಿತು ಎಂದು ಕೇಳಿದ್ದಾರೆ. ಅದಕ್ಕೆ ನೋವಿನಿಂದಲೇ ಮಾತನಾಡಿದ ಅಜ್ಜಿ, ನನ್ನ ನೆರೆಮನೆಯವರು ನನ್ನ ಕೋಳಿ ಕಾಲು ಮುರಿದಿದ್ದಾರೆ. ನನಗೆ ನ್ಯಾಯ ಬೇಕು, ಈ ಕೋಳಿಗೆ ನ್ಯಾಯ ಕೊಡಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಹೌದು, ನನಗೆ ಅನ್ಯಾಯವಾಗಿದೆ ಎಂದು ನ್ಯಾಯ ಕೇಳುವುದಕ್ಕೆ ಪೊಲೀಸ್ ಠಾಣೆಗೆ ಬರುವವರ ಸಂಖ್ಯೆಯೇ ವಿರಳವಾಗಿರುವಾಗ ಇಲ್ಲೊಬ್ಬ ಅಜ್ಜಿ ತನ್ನ ಸಾಕಿದ್ದ ಕಾಲು ಮುರಿದ ಕೋಳಿಯನ್ನು ಹಿಡಿದುಕೊಂಡು ಪೊಲೀಸ್ ಠಾಣೆಯ ಮುಂದೆ ಬಂದು ನ್ಯಾಯ ಕೊಡಿಸಿ ಎಂದು ಹೇಳುತ್ತಿರುವ ಮಾತನ್ನು ಕೇಳಿದ ಪೊಲೀಸರಿಗೆ ಶಾಕ್ ಆಗಿದೆ. ಈ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ ಅಂತ ವರದಿಗಳು ಹೇಳುತ್ತಿವೆ. ಪೊಲೀಸ್ ಸ್ಟೇಷನ್ ಮುಂದೆ ಅಜ್ಜಿ ಮತ್ತು ಪೊಲೀಸರ ನಡುವಿನ ಮಾತುಕತೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಅಜ್ಜಿ ಕೋಳಿಯ ಮೇಲಿಟ್ಟಿರುವ ಪ್ರೀತಿಯ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದಾರೆ.
ನನ್ನ ಕೋಳಿಯನ್ನು ಪ್ರತಿನಿತ್ಯದಂತೆ ಮೇಯಲು ಹೊರಗೆ ಬಿಟ್ಟಿದ್ದೆ. ಆಗ ನೆರೆಮನೆಯವರು ಕಣದಲ್ಲಿ ಮೇಲೆ ಹಾಕಿದ್ದ ದವಸ ದಾನ್ಯದ ಚೀಲದ ಬಳಿ ಹೋಗಿ ಕಾಳುಗಳನ್ನು ತಿನ್ನಲು ಮುಂದಾಗಿದೆ. ಆಗ ಚೀಲವನ್ನು ಕೋಳಿ ಕುಕ್ಕಿ ತೂತು ಮಾಡಿದ್ದರಿಂದ ಬೇಸರಗೊಂದ ನೆರೆಮನೆಯ ವ್ಯಕ್ತಿ ದೂರದಿಂದ ಕೋಲನ್ನು ತೆಗೆದುಕೊಂಡು ಕೋಳಿಗೆ ಹೊಡೆದಿದ್ದಾನೆ. ಆಗ ನನ್ನ ಕೋಳಿ ಕಾಲು ಮುರಿದು ಬಿದ್ದು, ಸಹಾಯಕ್ಕಾಗಿ ತುಂಬಾ ಜೋರಾಗಿ ಕೂಗಿಕೊಂಡಿದೆ. ಕೋಳಿಯನ್ನು ಶಬ್ದ ಮಾಡಿ ಓಡಿಸಿದ್ದರೆ ಮುಗಿಯುತ್ತಿತ್ತು. ಆದರೆ, ತಾನು ಪ್ರೀತಿಯಿಂದ ಸಾಕಿದ್ದ ಕೋಳಿಯ ಎರಡೂ ಕಾಲನ್ನು ಮುರಿದು ಅದರ ಜೀವನಕ್ಕೆ ಹಾನಿ ಮಾಡಿದ್ದಾನೆ ಎಂದು ಅಜ್ಜು ತೀವ್ರ ನೊಂದುಕೊಂಡು, ಮನೆಯ ಬಳಿ ಕಣ್ಣೀರನ್ನೂ ಹಾಕಿದ್ದಾರಂತೆ. ಆಗ ನೆರೆಮನೆಯವರಿಗೆ ನ್ಯಾಯ ಕೇಳಿದರೆ, ನಿನ್ನ ಕೋಳಿ ಕಾಳು ತಿನ್ನಲು ಬಂದಿತ್ತು, ಹೊಡೆದು ಕಾಲು ಮುರಿದಿದ್ದೇನೆ. ನೀನೇನು ಮಾಡಿಕೊಳ್ತೀಯೋ ಮಾಡಿಕೋ ಎಂದು ಅಜ್ಜಿಗೆ ಬೈದು ಕಳಿಸಿದ್ದಾನೆ.
ಇದರಿಂದ ಮನನೊಂದ ಅಜ್ಜಿ ಎರಡೂ ಕಾಲು ಮುರಿದಿದ್ದ ತನ್ನ ಕೋಳಿಯನ್ನು ಹಿಡಿದುಕೊಂಡು ರಾತ್ರಿ ಹೊತ್ತು ಪೊಲೀಸ್ ಸ್ಟೇಷನ್‌ಗೆ ಬಂದಿದ್ದಾರೆ. ಗೊಲ್ಲಗುಡೆಮ್‌ನ ಗಂಗಮ್ಮ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ನೆರೆಮನೆಯವರು ಕೋಲಿನಿಂದ ಕೋಳಿ ಕಾಲು ಮುರಿದಿದ್ದಾರೆ ಅಂತ ಆಕೆ ದೂರಿದ್ದಾರೆ. ಪೊಲೀಸರ ಜೊತೆ ಮಾತನಾಡುವಾಗ ಆಕೆ ಭಾವುಕರಾಗಿದ್ದು ವಿಡಿಯೋದಲ್ಲಿ ಕಾಣಬಹುದು. ಪೊಲೀಸರೊಂದಿಗೆ ಮಾತನಾಡಿದ ಅಜ್ಜಿ 'ಈ ಘಟನೆಯಿಂದ ನನಗೆ ತುಂಬಾ ಬೇಜಾರಾಗಿದೆ. ನನ್ನ ಕೋಳಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಅದಕ್ಕೆ ನ್ಯಾಯ ಕೊಡಿಸಿ' ಅಂತ ಗಂಗಮ್ಮ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಕೋಳಿ ಕಾಲು ಮುರಿದ ನೆರೆಮನೆಯವನ ಮೇಲೆ ಕೇಸ್ ಹಾಕಬೇಕು ಅಂತಲೂ ಕೇಳಿದ್ದಾರೆ. 'ದಿನಾ ಹೊಲದಲ್ಲಿ ತಿರುಗಾಡುವ ಕೋಳಿ ಸಾಯಂಕಾಲ ಮನೆಗೆ ಬರುತ್ತದೆ. ಆದರೆ, ಈ ದಿನ ಮೇವಿನ ಬಣವೆ ಹತ್ತಿರ ಕೋಳಿ ಇದ್ದಾಗ ನೆರೆಮನೆಯ ರಾಕೇಶ್ ಕೋಲಿನಿಂದ ಹೊಡೆದು ಕಾಲು ಮುರಿದಿದ್ದಾನೆ ಅಂತ ಆಕೆ ಹೇಳಿದ್ದಾರೆ. ಇನ್ನು ಕೋಳಿಯ ಕಾಲು ಮುರಿದಿದ್ದಕ್ಕೆ ನನಗೆ ಹಣ ಬೇಡ, ಪರಿಹಾರ ಬೇಡ, ಆದರೆ ನ್ಯಾಯ ಬೇಕು. ನೀವು ಕೋಳಿಯ ಕಾಲು ಮುರಿದ ನೆರೆಮನೆಯ ರಾಕೇಶನ ಮೇಲೆ ಕ್ರಮ ಕೈಗೊಳ್ಳಿ' ಅಂತ ಗಂಗಮ್ಮ ಪಟ್ಟು ಹಿಡಿದಿದ್ದಾರೆ.
ಪೊಲೀಸರು ಅಜ್ಜಿಯೊಂದಿಗೆ ಮಾತನಾಡುತ್ತಾ ಈ ಕೋಳಿಯ ಕಾಲು ಮುರಿದಿದ್ದಕ್ಕೆ ಪರಿಹಾರ ಕೇಳಿ ಅಂದಾಗ, 'ನನಗೆ ಪರಿಹಾರ ಬೇಡ' ಅಂತ ಹೇಳಿದ್ದಾರೆ. 'ನನ್ನ ಕೋಳಿಗೆ ಈಗ ಸರಿಯಾಗಿ ನಡೆಯೋಕೆ ಆಗ್ತಿಲ್ಲ' ಅಂತಲೂ ಹೇಳಿದ್ದಾರೆ. ಕೊನೆಗೆ ಪೊಲೀಸರು, 'ನಾಳೆ ನಿಮ್ಮ ಊರಿಗೆ ಬಂದು ಪಂಚಾಯಿತಿ ಮಾಡಿ ಇತ್ಯರ್ಥ ಮಾಡುತ್ತೇವೆ' ಎಂದು ಗಂಗಮ್ಮಜ್ಜಿಗೆ ಸಮಾಧಾನ ಹೇಳಿ ಕಳಿಸಿದ್ದಾರೆ.
