ಕೆಲ್ಸ ಸಿಕ್ಕ ಮೊದಲ ದಿನ ಭಯದ ಜೊತೆ ಖುಷಿ ಇರೋದು ಸಾಮಾನ್ಯ. ಆರಂಭದಲ್ಲಿ ಕೆಲ್ಸ ಕಷ್ಟ ಅನ್ನಿಸೋದು ಕೂಡ ಕಾಮನ್. ಆದ್ರೆ ಈ ಉದ್ಯೋಗಿ ಹೊಂದಾಣಿಕೆಗೆ ಟೈಂ ಕೊಡದೆ ಮೊದಲೇ ದಿನವೇ ಕೆಲ್ಸ ಬಿಟ್ಟಿದ್ದಾರೆ.ಎಚ್ ಆರ್ ಪೋಸ್ಟ್ ಈಗ ವೈರಲ್ ಆಗಿದೆ.
ಭಾರತ (India )ದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ, ಕೆಲ್ಸ ಸಿಗ್ತಿಲ್ಲ ಎನ್ನುವ ಕೂಗು ಒಂದ್ಕಡೆಯಾದ್ರೆ ಮತ್ತೊಂದು ಕಡೆ ಕೆಲ್ಸ ಕೊಡ್ತೆನೆ ಅಂದ್ರೂ ಜನ ಬರ್ತಿಲ್ಲ. ಕೆಲ ಸೆಕ್ಟರ್ ಗಳಲ್ಲಿ ಉದ್ಯೋಗಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಆದ್ರೆ ಕಷ್ಟಪಟ್ಟು ದುಡಿಯೋ ತಾಳ್ಮೆ ಈಗಿನ ಮಕ್ಕಳಿಗಿಲ್ಲ. ಬಹುತೇಕ ಎಲ್ಲ ಕಂಪನಿಗಳು 18 ರಿಂದ 30 ವರ್ಷದೊಳಗಿನ ಉದ್ಯೋಗಿಗಳನ್ನು ಕೆಲ್ಸಕ್ಕೆ ಆಯ್ಕೆ ಮಾಡ್ತಿವೆ. ಯುವಕರು, ಉತ್ಸಾಹದಿಂದ ಕೆಲ್ಸ ಮಾಡ್ತಾರೆ ಎನ್ನುವ ನಂಬಿಕೆಯಲ್ಲಿ ಕಂಪನಿ ವಯಸ್ಸಿನ ಮಿತಿ ನೀಡಿದೆ. ಆದ್ರೆ ಈ ವಯಸ್ಸಿನ ಅನೇಕ ಯುವಕರ ಡಿಮ್ಯಾಂಡ್ ಕಂಪನಿಗಳಿಗೆ ತೊಂದರೆಯುಂಟು ಮಾಡ್ತಿದೆ. ಕುಳಿತಲ್ಲೇ ಕೆಲ್ಸ ಆಗ್ಬೇಕು, ಹೆಚ್ಚು ಪರಿಶ್ರಮದ ಕೆಲ್ಸ ಇರ್ಬಾರದು, ಬಾಸ್ ದೊಡ್ಡ ಧ್ವನಿಯಲ್ಲಿ ಮಾತನಾಡ್ಬಾರದು, ವರ್ಷ ವರ್ಷಕ್ಕೆ ಭರ್ಜರಿ ಹೈಕ್ ಬೇಕು, ಒಳ್ಳೆ ಪ್ಯಾಕೇಜ್ ಸ್ಯಾಲರಿ ಬೇಕು, ಬೇಕಾದಾಗ ರಜೆ ಕೊಡ್ಬೇಕು. ಬರೀ ಇಷ್ಟೆ ಆದ್ರೆ ಸಾಲೋದಿಲ್ಲ, ಆಫೀಸ್ ನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಸರಿಯಾಗಿರ್ಬೇಕು. ಟೀ, ಆಹಾರ ಫ್ರೀಯಾಗಿರ್ಬೇಕು. ಮದುವೆ ಆಗೋ ವರ- ವಧು ಕೇಳೋದಕ್ಕಿಂತ ಹೆಚ್ಚು ಡಿಮ್ಯಾಂಡ್ ನೌಕರಿಗೆ ಸೇರೋ ಹುಡುಗ್ರದ್ದಿರುತ್ತೆ. ಕೆಲ ದಿನಗಳ ಹಿಂದೆ, ಎಸಿ ಕೆಳಗೆ ನನ್ನ ಸೀಟಿದೆ ಎನ್ನುವ ಕಾರಣಕ್ಕೆ ಉದ್ಯೋಗಿಯೊಬ್ಬ ಕೆಲ್ಸ ಬಿಟ್ಟಿದ್ದ. ಈಗ ಇಂಥಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಯಾವುದೇ ಮನುಷ್ಯನಾಗ್ಲಿ, ಯಾವುದೇ ಕಂಪನಿ ಆಗ್ಲಿ, ಯಾವುದೇ ವಸ್ತುವಾಗ್ಲಿ. ಒಂದೇ ದಿನಕ್ಕೆ ಅವರನ್ನು ಅರ್ಥ ಮಾಡಿಕೊಳ್ಳೋಕೆ, ಸರಿಯಾಗಿ ಬಳಸೋಕೆ ಸಾಧ್ಯವಿಲ್ಲ. ಒಂದೇ ದಿನದಲ್ಲಿ ಕಂಪನಿ ಹೇಗಿದೆ ಅನ್ನೋದನ್ನು ನೀವು ಅರ್ಥಮಾಡಿಕೊಳ್ಳೋದು ಸಾಧ್ಯವೇ ಇಲ್ಲ. ದಿನ ಕಳೆದಂತೆ ಕಂಪನಿ, ಅಲ್ಲಿನ ಕೆಲ್ಸ ಹಾಗೂ ಅಲ್ಲಿನ ಉದ್ಯೋಗಿಗಳ ಜೊತೆ ಹೊಂದಿಕೊಂಡು ಹೋಗೋದು ಅಭ್ಯಾಸವಾಗುತ್ತೆ. ಆದ್ರೆ ಇಲ್ಲೊಬ್ಬಉದ್ಯೋಗಿ,ಕೆಲ್ಸ ಸಿಕ್ಕ ದಿನವೇ ತನ್ನ ಕೆಲ್ಸಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲ್ಸ ಬಿಡೋಕೆ ಕಾರಣ ಏನು ಎಂಬುದನ್ನ ಸ್ಪಷ್ಟಪಡಿಸಿಲ್ಲ.
ನೋಯ್ಡಾ ಮೂಲದ ಕಂಪನಿಯ ಎಚ್ ಆರ್ ಟೀಂ (HR Team) ಈ ವಿಷ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಒಂದೇ ದಿನದಲ್ಲಿ ಉದ್ಯೋಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ವಿಚಿತ್ರವಾಗಿದೆ ಅಂತ ಬರೆದುಕೊಂಡಿದ್ದಾರೆ. ಸೇಲ್ಸ್ ಕೆಲ್ಸಕ್ಕೆ ಬಂದಿದ್ದ ಉದ್ಯೋಗಿ, ತನ್ನ ಮೊದಲ ದಿನದ ಕೆಲ್ಸ ಮುಗಿಯುತ್ತಿದ್ದಂತೆ ನನಗೆ ಮೆಸ್ಸೇಜ್ ಕಳುಹಿಸಿದ್ರು. ನನಗೆ ಈ ಕೆಲ್ಸ ಇಷ್ಟವಿಲ್ಲ ಎಂಬ ಮೆಸ್ಸೇಜ್ ಬಂದಿತ್ತು. ಕೆಲ್ಸ ಸ್ವಲ್ಪ ಚಾಲೆಂಜಿಂಗ್ ಆಗಿತ್ತು. ಅಭ್ಯರ್ಥಿ ಆಯ್ಕೆ ಟೈಂನಲ್ಲಿಯೇ ಇದನ್ನು ಅಭ್ಯರ್ಥಿಗೆ ಹೇಳಲಾಗಿತ್ತು. ಆಗ ಕೆಲ್ಸ ಒಪ್ಪಿಕೊಂಡಿದ್ದರು ಅಂತ ಎಚ್ ಆರ್ ಖುಷಿ ಚೌರಾಸಿಯಾ ಬರೆದಿದ್ದಾರೆ.
ಅವರು ಉದ್ಯೋಗಿ ಜೊತೆಗಿನ ಚಾಟ್ ಸ್ಕ್ರೀನ್ ಚಾಟ್ ಶೇರ್ ಮಾಡಿದ್ದಾರೆ. ಅಲ್ಲದೆ ಉದ್ಯೋಗಿಗಳು ಏನೆಲ್ಲ ತಿಳಿದುಕೊಳ್ಬೇಕು ಎಂಬುದನ್ನು ಹೇಳಿದ್ದಾರೆ. ಯಾವುದೇ ಉದ್ಯೋಗಿ ಮೊದಲ ದಿನವೇ ಕೆಲ್ಸ ಕಲಿಯಲು ಸಾಧ್ಯವಿಲ್ಲ. ಹಾಗೆಯೇ ಆತನಿಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು, ಸಂತೋಷದ, ಆರಾಮದಾಯಕ ವಾತಾವರಣವನ್ನು ಕಂಪನಿ ಒದಗಿಸಲು ಸಾಧ್ಯವಿಲ್ಲ. ಕೆಲ್ಸಕ್ಕೆ ಸಮಯ, ಶಕ್ತಿ ಹಾಗೂ ಮನಸ್ಸು ಕೊಟ್ಟಲ್ಲಿ ಮಾತ್ರ ಕೆಲ್ಸ ಆರಾಮದಾಯಕವಾಗುತ್ತದೆ ಎಂದು ಖುಷಿ ಹೇಳಿದ್ದಾರೆ. ಕೆಲ್ಸಕ್ಕೆ ಸೇರುವ ಮೊದಲೇ ಸ್ವಲ್ಪ ಸಮಯ ತೆಗೆದುಕೊಳ್ಬೇಕು. ಕೆಲ್ಸ ಬಿಡುವಾಗ ಹೆಚ್ ಆರ್ ಜೊತೆ ಮಾತುಕತೆ ನಡೆಸ್ಬೇಕು ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಕೆಲವರು ಉದ್ಯೋಗಿ ಪರ ಮಾತನಾಡಿದ್ದಾರೆ. ತಕ್ಷಣ ಈ ನಿರ್ಧಾರ ತೆಗೆದುಕೊಂಡು ಒಳ್ಳೆ ಕೆಲ್ಸ ಮಾಡಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಒಂದೇ ದಿನದಲ್ಲಿ ನಮಗೆ ಈ ಕೆಲ್ಸ ಸೂಕ್ತವೇ ಅನ್ನೋದು ಗೊತ್ತಾಗಿಬಿಡುತ್ತೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
