ನಾಲ್ಕು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ ಉದ್ಯೋಗಿಯೊಬ್ಬರು ಹೊಸ ಉದ್ಯೋಗಕ್ಕಾಗಿ ಎರಡು ವಾರದ ನೋಟಿಸ್ ನೀಡಿ ರಾಜೀನಾಮೆ ನೀಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅವರ ಆಫೀಸ್ ಆಕ್ಸೆಸ್ ಸ್ಥಗಿತಗೊಳಿಸಿ, ತಂಡಕ್ಕೆ ವಿದಾಯ ಹೇಳಲೂ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. Reddit ಪೋಸ್ಟ್ ವೈರಲ್ ಆಗಿದ್ದು, ಕಂಪನಿ ನಿಷ್ಠೆ ಕುರಿತು ಚರ್ಚೆ ಹುಟ್ಟಿಸಿದೆ.
4 ವರ್ಷ ದುಡಿದ ಉದ್ಯೋಗಿ ರಾಜೀನಾಮೆ ನೀಡಿದ; ಮುಂದೆ ನಡೆದಿದ್ದು ಅಚ್ಚರಿ
ಒಂದು ಕಂಪನಿಯಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ ಬಳಿಕ ರಾಜೀನಾಮೆ ನೀಡುವುದು ಸಾಮಾನ್ಯ ಸಂಗತಿ. ಆದರೆ, ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿ, ಹೊಸ ಉದ್ಯೋಗ ಸಿಕ್ಕ ಹಿನ್ನೆಲೆಯಲ್ಲಿ ಸರಿಯಾದ ರೀತಿಯಲ್ಲಿ ರಾಜೀನಾಮೆ ನೀಡಲು ಮುಂದಾದ ಉದ್ಯೋಗಿಯೊಬ್ಬರ ಅನುಭವ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
Redditನಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಉದ್ಯೋಗಿ ಸುಮಾರು ನಾಲ್ಕು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಸಮಯ ಕೆಲಸ ಮಾಡಿದ ಅನುಭವವಿದ್ದ ಅವರು, ಮತ್ತೊಂದು ಸಂಸ್ಥೆಯಲ್ಲಿ ಉತ್ತಮ ಅವಕಾಶ ಸಿಕ್ಕ ಬಳಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಈ ಘಟನೆಯ ವಿವರಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.
ಎರಡು ವಾರದ ನೋಟಿಸ್, ಹ್ಯಾಂಡೋವರ್ ಕೂಡ ಸಿದ್ಧ
ಉದ್ಯೋಗಿ ತಮ್ಮ ಮ್ಯಾನೇಜರ್ ಜೊತೆ ಮಾತನಾಡಿ ವೃತ್ತಿಪರ ರೀತಿಯಲ್ಲಿ ಎರಡು ವಾರಗಳ ನೋಟಿಸ್ ನೀಡಿದ್ದಾಗಿ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಕೆಲಸಗಳ ಹಸ್ತಾಂತರ ಸುಗಮವಾಗಲು ವಿವರವಾದ ಹ್ಯಾಂಡೋವರ್ ಡಾಕ್ಯುಮೆಂಟ್ ಕೂಡ ಸಿದ್ಧಪಡಿಸಿದ್ದರಂತೆ.
ಆದರೆ, ರಾಜೀನಾಮೆಯ ವಿಚಾರ ತಿಳಿದ ನಂತರ ಮ್ಯಾನೇಜರ್‌ರಿಂದ ತಕ್ಷಣವೇ ಅಸಮಾಧಾನದ ಪ್ರತಿಕ್ರಿಯೆ ಬಂದಿತ್ತೆಂದು ಉದ್ಯೋಗಿ ಹೇಳಿದ್ದಾರೆ. ಬ್ಯುಸಿ ಕ್ವಾರ್ಟರ್‌ನಲ್ಲಿ ರಾಜೀನಾಮೆ ನೀಡಿರುವುದರಿಂದ ತಮಗೆ ‘ವಂಚನೆ’ಯಾದಂತೆ ಭಾಸವಾಗಿದೆ ಎಂದು ಮ್ಯಾನೇಜರ್ ಹೇಳಿದ್ದರೆಂದು ಅವರು ವಿವರಿಸಿದ್ದಾರೆ.
20 ನಿಮಿಷದಲ್ಲೇ ಆಫೀಸ್ ಆಕ್ಸೆಸ್ ಕಟ್?
ಪೋಸ್ಟ್ ಪ್ರಕಾರ, ಮ್ಯಾನೇಜರ್ ಜೊತೆಗಿನ ಮಾತುಕತೆ ಮುಗಿದ ಸುಮಾರು 20 ನಿಮಿಷಗಳ ಬಳಿಕ ಉದ್ಯೋಗಿಯ Slack ಮತ್ತು ಇಮೇಲ್ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ HR ಸಂಪರ್ಕಿಸಿ, ಅವರ ಉದ್ಯೋಗ ತಕ್ಷಣದಿಂದಲೇ ಕೊನೆಗೊಂಡಿದೆ ಎಂದು ತಿಳಿಸಿತ್ತೆಂದು ಹೇಳಲಾಗಿದೆ.
ಇದಕ್ಕಿಂತ ಹೆಚ್ಚು ಬೇಸರ ತಂದ ಸಂಗತಿಯೆಂದರೆ, ತಮ್ಮ ತಂಡದ ಸದಸ್ಯರಿಗೆ ವಿದಾಯ ಹೇಳಲು ಅಥವಾ ತಮ್ಮ ಡೆಸ್ಕ್‌ನಲ್ಲಿದ್ದ ಕಾಫಿ ಮಗ್ ತೆಗೆದುಕೊಂಡು ಹೋಗಲು ಕೂಡ ಅವಕಾಶ ನೀಡಲಿಲ್ಲ ಎಂದು ಉದ್ಯೋಗಿ ಆರೋಪಿಸಿದ್ದಾರೆ.
‘ಕಂಪನಿ ನಿಷ್ಠೆ ಅನ್ನೋದೇ ಸ್ಕ್ಯಾಮ್’
ಈ ಅನುಭವದ ಬಳಿಕ ಉದ್ಯೋಗಿ ಕಂಪನಿಯ ಮೇಲಿನ ನಿಷ್ಠೆ ಮತ್ತು ಉದ್ಯೋಗದ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅವರ ಪ್ರಕಾರ, ಉದ್ಯೋಗಿಗಳು ಸಂಸ್ಥೆಗೆ ವರ್ಷಗಳ ಕಾಲ ಕೊಡುಗೆ ನೀಡಿದರೂ, ಕಂಪನಿಗಳು ಅವರನ್ನು ಅಗತ್ಯವಿದ್ದಾಗ ಮಾತ್ರ ಉಳಿಸಿಕೊಳ್ಳುವ ದೃಷ್ಟಿಕೋನ ಹೊಂದಿರಬಹುದು.
ಈ ಪೋಸ್ಟ್‌ಗೆ ಹಲವು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಉದ್ಯೋಗಿಯ ಪರವಾಗಿ ಮಾತನಾಡಿದ್ದರೆ, ಕೆಲವು ಉದ್ಯೋಗಗಳಲ್ಲಿ ಭದ್ರತೆ, ಕಂಪನಿಯ ಗೌಪ್ಯ ಮಾಹಿತಿ ಮತ್ತು ಪ್ರಮುಖ ಡೇಟಾ ರಕ್ಷಣೆಯ ಕಾರಣದಿಂದ ರಾಜೀನಾಮೆ ನೀಡಿದ ತಕ್ಷಣ ಪ್ರವೇಶ ಸ್ಥಗಿತಗೊಳಿಸುವುದು ಸಾಮಾನ್ಯವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ, ಈ ಘಟನೆ ಉದ್ಯೋಗಿ-ಕಂಪನಿ ಸಂಬಂಧದಲ್ಲಿ ನಿಷ್ಠೆ, ನಂಬಿಕೆ ಮತ್ತು ವೃತ್ತಿಪರ ವಿದಾಯದ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.


