ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಸಾರಿಕಾ ಯಾದವ್ ಅಲ್ಲಿನ ಜನರ ಬೇಗ ಊಟ ಮಾಡುವ ಮತ್ತು ಮಲಗುವ ಅಭ್ಯಾಸದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಇದು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲ, ಬದಲಾಗಿ ನಮ್ಮದೇ ಸನಾತನ ಪದ್ಧತಿ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಈ ಅಭ್ಯಾಸವು ಆರೋಗ್ಯಕ್ಕೂ ಅತ್ಯುತ್ತಮ ಎಂದು ಆಯುರ್ವೇದ ಮತ್ತು ವಿಜ್ಞಾನ ಹೇಳುತ್ತದೆ.
ಭಾರತ ತೊರೆದು ವಿದೇಶಗಳಿಗೆ ಹೋದವರು ಹಲವರು. ಅಮೆರಿಕಗೆ ಹೋಗಿ ನೆಲೆಸಿದವರೂ ಅನೇಕರು ಇದ್ದಾರೆ. ನಿಮಗೆ ಗೊತ್ತಾ ಅಮೆರಿಕ ಜನರ ಬದುಕು ಹೇಗಿರುತ್ತದೆ? ಅಲ್ಲಿನ ಜೀವನ ಶೈಲಿ ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ಅನೇಕರಲ್ಲಿ ಕುತೂಹಲ ಇರುತ್ತದೆ. ಈ ಕುರಿತ ಒಂದು ಅನುಭವನ್ನು ಕಂಟೆಂಟ್ ಕ್ರಿಯೇಟರ್ ಸಾರಿಕಾ ಯಾದವ್ (Sarika Yadav) ಹಂಚಿಕೊಂಡಿದ್ದಾರೆ.
ಸಾರಿಕಾ ಯಾದವ್, ಭಾರತೀಯ ಮೂಲದವರು. ಅಮೆರಿಕದಲ್ಲಿ ನೆಲೆಸಿರುವ ಅವರು.. ಅಲ್ಲಿನ ಜನರ ಆಹಾರ ಮತ್ತು ನಿದ್ದೆಯ ಸಮಯವನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸ್ನೇಹಿತೆಯರೊಂದಿಗೆ ಮಾತನಾಡಿದಾಗ ಏನು ಆಯಿತು ಅನ್ನೋದನ್ನ ವಿವರಿಸಿರುವ ಸಾರಿಕಾ.. ಭಾರತೀಯರಾದ ನಾವು ರಾತ್ರಿ ವೇಳೆ 9 ರಿಂದ 10 ಗಂಟೆ ವೇಳೆಗೆ ಊಟ ಮಾಡಿ 11-12 ಗಂಟೆಗೆ ನಿದ್ದೆ ಮಾಡುತ್ತೇವೆ ಎಂದೆ. ಅದಕ್ಕೆ ಅವರು ಶಾಕ್ ಆಗಿದ್ದಾರೆ. ಆಘಾತಕಾರಿ ರೀತಿಯಲ್ಲಿ ಅವರು ನನ್ನನ್ನು ನೋಡಿದರು. ಅಲ್ಲಿಗೆ ನಮ್ಮ ಸಂಭಾಷಣೆ ನಿಲ್ಲಲಿಲ್ಲ. ಮುಂದುವರಿದಿತ್ತು.. ಅವರು ನನ್ನನ್ನು ಹಾಗೆ ನೋಡಲು ಕಾರಣವಿತ್ತು. ಅಮೆರಿಕನ್ನರು ಸಂಜೆ 6 ರಿಂದ 6:30ರ ಒಳಗೆ ರಾತ್ರಿಯ ಊಟ ಮುಗಿಸಿ, ರಾತ್ರಿ 7:30 ರಿಂದ 8:30ರ ನಡುವೆ ಮಲಗಿಬಿಡುತ್ತಾರೆ! ಇನ್ನು ಮುಂಜಾನೆ 4 ಅಥವಾ 4:30ಕ್ಕೆಲ್ಲ ಎದ್ದು ದಿನದ ಚಟುವಟಿಕೆ ಆರಂಭಿಸುತ್ತಾರೆ ಎಂದಿದ್ದಾರೆ.
ನೆಟ್ಟಿಗರು ಏನಂದ್ರು?
ಅಮೆರಿಕದಲ್ಲಿ ಬೆಳಗಿನ ಸಂಸ್ಕೃತಿ ತುಂಬಾನೇ ಅದ್ಭುತವಾಗಿದೆ. ಅಲ್ಲಿ ಜಿಮ್ ಹಾಗೂ ಮಳಿಗೆಗಳು ಮುಂಜಾನೆ 6-7 ಗಂಟೆಗೆಲ್ಲ ತೆರೆಯುತ್ತವೆ. ಕೆಲಸಗಳು ಬೇಗ ಮುಗಿಯೋದ್ರಿಂದ ಸಂಜೆ ವೇಳೆ ಕುಟುಂಬ ಮತ್ತು ಸ್ನೇಹಿತರ ಜೊತೆ ಕಳೆಯಲು ಹೆಚ್ಚು ಸಮಯ ಸಿಗಲಿದೆ ಎಂದು ತಿಳಿಸಿದ್ದಾರೆ. ಈ ವಿಡಿಯೋವನ್ನು ಸಾರಿಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಂತೆಯೇ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲ, ಅಪ್ಪಟ ಭಾರತೀಯ ಸನಾತನ ಪದ್ಧತಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ನಮ್ಮ ದೇಶದ ಹಳ್ಳಿಗಳಲ್ಲಿ ಇಂದಿಗೂ ಸೂರ್ಯ ಮುಳುಗುತ್ತಿದ್ದಂತೆ ಊಟ ಮಾಡಿ, ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ (4:30ಕ್ಕೆ) ಏಳುವ ಅಭ್ಯಾಸ ಇದೆ. ಆದರೆ ಇಂದಿನ ಆಧುನಿಕ ನಗರ ಜೀವನ, ನೈಟ್ ಶಿಫ್ಟ್ ಮತ್ತು ಮೊಬೈಲ್ ಬಳಕೆಯಿಂದಾಗಿ ನಾವಿದನ್ನು ಮರೆತಿದ್ದೇವೆ ಅಷ್ಟೇ. ಹಳ್ಳಿಗಳಲ್ಲಿ ಈ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಹಾಗೆ ನೋಡಿದರೆ ಅಮೆರಿಕದ ಮಾರ್ನಿಂಗ್ ಕಲ್ಚರ್‍ನಲ್ಲಿ ಭಾರತದ ಸನಾತನ ಪದ್ಧತಿ ಇದೆ. ಭಾರತೀಯ ಹಳ್ಳಿಗಳು ಒಂದೇ ರೀತಿಯ ಅಭ್ಯಾಸಗಳನ್ನು ಹೊಂದಿವೆ. ಇದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಸೂರ್ಯೋದಯಕ್ಕೆ ಮೊದಲು ಎಲ್ಲರೂ ಎದ್ದೇಳಿ ಎಂದು ಕೆಲವರು ಬರೆದುಕೊಂಡಿದ್ದಾರೆ. ಜೊತೆಗೆ ಇದು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲ, ಇದು ಸಂಪೂರ್ಣವಾಗಿ ಸನಾತನ ಸಂಸ್ಕೃತಿ ಎಂದಿದ್ದಾರೆ.
ಸಂಜೆ 7 ಗಂಟೆಯೊಳಗೆ ಊಟ ಮುಗಿಸುವುದ ಮತ್ತು ಮುಂಜಾನೆ ಬೇಗ ಏಳುವುದರಿಂದ ತುಂಬಾ ಪ್ರಯೋಜನ ಇದೆ. ಜೀರ್ಣಕ್ರಿಯೆ, ಮೆಟಬಾಲಿಸಂ ಹಾಗೂ ಗಾಢ ನಿದ್ರೆಗೆ ಅತ್ಯುತ್ತಮ ಎಂದು ಆಯುರ್ವೇದ ಮಾತ್ರವಲ್ಲದೆ ಇಂದಿನ ವೈದ್ಯಕೀಯ ವಿಜ್ಞಾನವೂ ಅದನ್ನೇ ಹೇಳುತ್ತದೆ.


