ನೀವು ಕನ್ನಡದಲ್ಲಿ ವಿಡಿಯೋ ಮಾಡುತ್ತೀರಾ, ನಮಗೆ ಇಂಗ್ಲೀಷ್ ಗೊತ್ತಾಗಲ್ಲ ಎಂದು ಬೆಂಗಳೂರಿನ ಮುಗ್ದ ಆಟೋ ಚಾಲಕ ಅಮೆರಿಕನ್ ವ್ಲಾಗರ್‌ಗೆ ಪ್ರಶ್ನಿಸಿದ್ದರೆ, ಅತ್ತ ವ್ಲಾಗರ್, ಇಲ್ಲಾ ನಾನು ಕೆನಾಡಗೆ ಹೋಗಿಲ್ಲ ಎಂದು ಉತ್ತರಿಸಿದ್ದಾನೆ. ಈ ಸಂಭಾಷಣೆ ವಿಡಿಯೋ ಭಾರಿ ವೈರಲ್ ಆಗಿದೆ.
ಬೆಂಗಳೂರು (ಜು.14) ಅಮೆರಿಕದ ವ್ಲಾಗರ್ ಹಾಗೂ ಬೆಂಗಳೂರು ಮುಗ್ದ ಆಟೋ ಚಾಲಕನ ನಡುವಿನ ಸಂಭಾಷಣೆ ಇದೀಗ ಭಾರಿ ವೈರಲ್ ಆಗಿದೆ. ಚಿಕ್ಕಪೇಟೆಗೆ ಹೋಗಬೇಕು ಎಂದು ಆಟೋ ಬಳಿ ಬಂದ ಅಮೆರಿಕನ್ ವ್ಲಾಗರ್ ಜೊತೆ ಆಟೋ ಚಾಲಕನ ಮಾತನಾಡಿದ್ದಾನೆ. ತಾನೀಗ ಶಾಲಾ ಮಕ್ಕಳ ಪಿಕ್ ಅಪ್ ಡ್ರಾಪ್‌ಗೆ ಹೋಗಬೇಕು. ಹೀಗಾಗಿ ತನಗೆ ಈಗ ಸಾಧ್ಯವಿಲ್ಲ ಎಂದಿದ್ದಾನೆ. ಇದರ ನಡುವೆ ಅಮೆರಿಕನ್ ವ್ಲಾಗರ್ ಹಾಗೂ ಆಟೋ ಚಾಲಕನ ನಡುವೆ ಮಹತ್ವದ ಸಂಭಾಷಣೆ ನಡೆದಿದೆ. ಆಟೋ ಚಾಲಕ ತನ್ನ ಮುಗ್ದತೆಯಿಂದ ಕೆಲ ಪ್ರಶ್ನೆಗಳನ್ನು ಕೇಳಿದ್ದಾನೆ. ಇತ್ತ ಅಮೆರಿಕನ್ ವ್ಲಾಗರ್ ತನಗೆ ಅರ್ಥವಾದ ರೀತಿಯಲ್ಲಿ ಮಾತನಾಡಿದ ವಿಡಿಯೋ ಭಾರಿ ವೈರಲ್ ಆಗಿದೆ.
ಶನಿವಾರ, ಬಚ್ಚಾ ಹೇನಾ, ಸ್ಕೂಲ್ ಪಿಕ್ ಅಪ್
ಅಮೆರಿಕನ್ ವ್ಲಾಗರ್ ಪ್ರವಾಸಕ್ಕಾಗಿ ಬೆಂಗಳೂರಿನಗೆ ಆಗಮಿಸಿದ್ದಾರೆ. ಹಲವೆಡೆ ಸುತ್ತಾಡಿದ ವ್ಲಾಗರ್ ಆಟೋ ಬಳಿ ಬಂದಿದ್ದಾನೆ. ತನಗೆ ನಮಸ್ತೆ ಎಂದು ಮಾತು ಆರಂಭಿಸಿದ ಅಮೇರಿಕನ್ ವ್ಲಾಗರ್ ನನಗೆ ಚಿಕ್ಕಪೇಟೆಗೆ ಹೋಗಬೇಕು ಬರುತ್ತೀರಾ ಎಂದು ಕೇಳಿದ್ದಾನೆ. ಇತ್ತ ಇಲ್ಲಾ ಎಂದ ಆಟೋ ಚಾಲಕನಿಗೆ ಯಾಕೆ ಅನ್ನೋ ಮರು ಪ್ರಶ್ನೆ ಬಂದಿದೆ. ಇವತ್ತು ಸ್ಯಾಟರ್‌ಡೇ, ಸ್ಕೂಲ್ ಗೋಯಿಂಗ್, ಪಿಕ್ ಅಪ್, ಬಚ್ಚಾ ಹೇನಾ, ಸ್ಕೂಲ್ ಪಿಕ್ ಅಪ್ ಟೈಮ್ ಎಂದು ತನಗೆ ಗೊತ್ತಿರುವ ಇಂಗ್ಲೀಷ್ ಪದಗಳಲ್ಲಿ ಆಟೋ ಚಾಲಕ ಉತ್ತರಿಸಿದ್ದಾನೆ.
ಮಕ್ಕಳ ಪಿಕ್ಅಪ್ ಇದೆ
ಆಟೋ ಚಾಲಕ ಹೇಳಿದ್ದು ತನಗೆ ಮಕ್ಕಳ ಪಿಕ್ ಅಪ್ ಇದೆ. ಇವತ್ತು ಶನಿವಾರ ಎಂದಿದ್ದಾನೆ. ಇತ್ತ ಅಮೆರಿಕನ್ ವ್ಲಾಗರ್‌ಗೆ ಇದು ಶಾಲಾ ಸಮಯ ಹಾಗಾಗಿ ನಾನು ಚಿಕ್ಕಪೇಟೆಗೆ ಬರುವುದಿಲ್ಲ ಎಂದು ಅರ್ಥ ಮಾಡಿಕೊಂಡಿದ್ದಾನೆ. ಹಾಗಾದರೆ ನಾನು ಯಾವ ಸಮಯ ಚಿಕ್ಕಪೇಟೆಗೆ ಹೋಗಲಿ ಎಂದು ಪ್ರಶ್ನಿಸುತ್ತಾನೆ. ಟೈಮ್ ಎಂಬ ಪದ ಆಟೋ ಚಾಲಕನಿಗೆ ಅರ್ಥವಾಗಿದೆ. ಹೀಗಾಗಿ ನಾನು 10.30ಕ್ಕೆ ಮಕ್ಕಳ ಪಿಕ್ ಅಪ್ ಮಾಡಲು ಹೋಗುತ್ತೇನೆ ಎಂದಿದ್ದಾನೆ. ಇದರ ನಡುವೆ ನಾನು ಚಿಕ್ಕಪೇಟೆಗೆ ಹೋದರೆ ಮಕ್ಕಳಿಗೆ ಸಮಸ್ಯೆಯಾಗುತ್ತೆ ಎಂದಿದ್ದಾನೆ. ಮುಂದೆ ಹೋದರೆ ಬೇರೆ ಆಟೋ ಸಿಗುತ್ತೆ ಎಂದಿದ್ದಾನೆ. ಊಬರ್, ಓಲಾದಲ್ಲಿ ಬುಕ್ ಮಾಡಿ ಸಿಗುತ್ತೆ ಎಂದು ಸಲಹೆ ನೀಡಿದ್ದಾನೆ.
ಕನ್ನಡ, ಕೆನಡಾ ನಡುವೆ ಮಾತುಕತೆ
ಇದರ ನಡುವೆ ತಾನು ವ್ಲಾಗರ್, ನನ್ನ ವಿಡಿಯೋಗಳನ್ನು ನೋಡಿ ಎಂದು ಆಟೋ ಚಾಲಕನಿಗೆ ಸೂಚಿಸಿದ್ದಾನೆ. ಯಾವ ದೇಶ ಎಂದು ಪ್ರಶ್ನಿಸಿದ ಆಟೋ ಚಾಲಕನಿಗೆ ಅಮೆರಿಕ ಎಂದು ವ್ಲಾಗರ್ ಉತ್ತರಿಸಿದ್ದಾನೆ. ಬಳಿಕ ವಿಡಿಯೋ ಪ್ರೊಫೈಲ್ ನೋಡಿದ ಆಟೋ ಚಾಲಕ ಎಲ್ಲಾ ಇಂಗ್ಲೀಷ್, ಹಿಂದಿಯಲ್ಲಿ ಇದೆಯಾ ಎಂದು ಪ್ರಶ್ನಿಸಿದ್ದಾನೆ. ಇಂಗ್ಲಿಷ್ ಎಂದಿದ್ದಕ್ಕೆ ಓಹ್, ಕನ್ನಡದಲ್ಲಿ ಇಲ್ಲವಾ ಎಂದು ಪ್ರಶ್ನಿಸಿದ್ದಾನೆ. ಅಮೆರಿಕನ್ ವ್ಲಾಗರ್‌ಗೆ ಕನ್ನಡ ಪದ ಕೆನಡಾ ಎಂದು ಕೇಳಿಸಿದೆ. ಕೆನಾಡ ವಿಡಿಯೋ ಮಾಡಿಲ್ಲ, ಒಂದು ದಿನ ಮಾಡುತ್ತೇನೆ ಎಂದಿದ್ದಾನೆ. ನಿಮಗೆ ಕೆನಡಾಗೆ ಹೋಗಬೇಕಾ ಎಂದು ಪ್ರಶ್ನೆ ಮಾಡಿದ್ದಾನೆ. ಇಲ್ಲಾ ಕರ್ನಾಟಕ, ಬೆಂಗಳೂರು ಭಾಷೆ ಕನ್ನಡ ಎಂದು ಆಟೋ ಚಾಲಕ ಉತ್ತರಿಸಿ ಎಲ್ಲರ ಹೃದಯ ಗೆದ್ದಿದ್ದಾನೆ.
ಇವರಿಬ್ಬರ ಸಂಭಾಷಣೆ ಭಾರಿ ಸದ್ದು ಮಾಡುತ್ತಿದೆ. ಆಟೋ ಚಾಲಕನಿಗೆ ಇಂಗ್ಲೀಷ್ ಗೊತ್ತಿಲ್ಲ. ಅಮೆರಿಕನ್ ವ್ಲಾಗರ್‌ಗೆ ಇಂಗ್ಲೀಷ್ ಬಿಟ್ಟರೆ ಇನ್ಯಾವ ಭಾಷೆಯೂ ಗೊತ್ತಿಲ್ಲ. ವಿಶೇಷ ಅಂದರೆ ಆಟೋ ಚಾಲಕ ನಡುವೆ ಹಿಂದಿಯಲ್ಲೂ ಮಾತನಾಡಿದ್ದಾನೆ. ಆದರೆ ವ್ಲಾಗರ್ ತನಗೆ ಅರ್ಥವಾದ ರೀತಿಯಲ್ಲಿ ಉತ್ತರಕೊಟ್ಟಿದ್ದಾನೆ. ಈ ಪೈಕಿ ವಿಶೇಷವಾಗಿದ್ದು, ಹಲವು ಬಾರಿ ಮುಗ್ದ ಆಟೋ ಚಾಲಕನ ನಿಮಗೆ ಕನ್ನಡ ಬರಲ್ವಾ? ಕನ್ನಡದಲ್ಲಿ ವಿಡಿಯೋ ಮಾಡಲ್ವಾ ಎಂದು ಪ್ರಶ್ನಿಸಿದ್ದಾನೆ. ಬೆಂಗಳೂರಿನ ಮುಗ್ದ ಆಟೋ ಚಾಲಕನಿಗೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗಿದೆ.


