ಅಪಘಾತದಲ್ಲಿ ಮೃತಪಟ್ಟವರನ್ನು ಸ್ಮಶಾನದಲ್ಲಿ ಸುಟ್ಟ ನಂತರ ಅವರ ದೇಹದಲ್ಲಿದ್ದ ನಟ್ ಬೋಲ್ಟ್‌ಗಳಿವು. ಯೂಟ್ಯೂಬರ್ ವಿಜೆ ವಿಖ್ಯಾತ್ ಸುಳ್ಯದ ಹಿಂದೂ ರುದ್ರಭೂಮಿಯಲ್ಲಿ ಕೆಲಸ ಮಾಡುವ ಗುರುವಪ್ಪ ಎಂಬುವವರನ್ನು ಮಾತನಾಡಿಸಿದ್ದು, ಈ ವೇಳೆ ಅವರು ತೋರಿಸಿದ ನಟ್ಟು ಬೋಲ್ಟ್‌ಗಳು ಎಂಥವರಿಗೂ ಗಾಬರಿ ಹುಟ್ಟಿಸಿದೆ.

ಇಂದಿನ ವೇಗದ ಜೀವನ ಪದ್ಧತಿಯಲ್ಲಿ ಜನರಿಗೆ ತಾಳ್ಮೆ ಎಂಬುದೇ ಇಲ್ಲವಾಗಿದೆ. ಇದೇ ಕಾರಣಕ್ಕೆ ಪ್ರತಿದಿನವೂ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಪ್ರತಿದಿನವೂ ಜನ ಸಾಯುತ್ತಲೇ ಇದ್ದಾರೆ. ಭಾರತದಲ್ಲಿ ಅಪಘಾತದಿಂದ ಪ್ರತಿದಿನವೂ ಸಂಭವಿಸುವ ಸಾವಿನ ಸಂಖ್ಯೆ ಬರೋಬ್ಬರಿ 474 ಇದು 2023ರ ಅಂಕಿ ಅಂಶವಾಗಿದ್ದು, ಈ ವರ್ಷದ ಅಂಕಿ ಅಂಶದ ಬಗ್ಗೆ ಮಾಹಿತಿ ಇಲ್ಲ, ಬಹುಶಃ ಈ ಸಂಖ್ಯೆ ಹೆಚ್ಚಿದ್ದರೂ ಇರಬಹುದು. 2023ರ ಲೆಕ್ಕ ತೆಗೆದುಕೊಂಡರೆ ಪ್ರತಿ ಮೂರು ನಿಮಿಷಗಳಿಗೊಮ್ಮೆ ಒಬ್ಬರು ಸಾವು ಕಾಣುತ್ತಿದ್ದಾರೆ.

ಬಹುತೇಕ ಅಪಘಾತಗಳು ನಿರ್ಲಕ್ಷ್ಯದ ಕಾರಣಕ್ಕೆ ವೇಗವಾಗಿ ತಲುಪಬೇಕು ಎಂಬ ಕಾರಣಕ್ಕೆ ಸಂಭವಿಸುತ್ತದೆ. ಬಹುತೇಕರು 10 ನಿಮಿಷದಲ್ಲಿ ಹೋಗುವ ದೂರವನ್ನು ತಡವಾಗಿ ಹೊರಟು 5 ನಿಮಿಷದಲ್ಲಿ ತಲುಪುವುದಕ್ಕೆ ನೋಡುತ್ತಾರೆ. ಈ ವೇಳೆ ಸಂಭವಿಸುವ ಅಪಘಾತಗಳಿಂದ ಕೇವಲ ಅವರು ಮಾತ್ರವಲ್ಲ, ಅವರ ಕುಟುಂಬದವರು ಬಂಧುಗಳು ಆಪ್ತರು ಎಲ್ಲರೂ ನೋವನುಭವಿಸುತ್ತಾರೆ. ಆದರೂ ಜನ ಪಾಠ ಕಲಿಯುವುದಿಲ್ಲ, ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.

ಆದರೆ ಇಲ್ಲೊಂದು ಕಡೆ ಸ್ಮಶಾನದ ಸಿಬ್ಬಂದಿ ತಮ್ಮ ಶವಾಗಾರದಲ್ಲಿ ಶವ ಸುಟ್ಟ ನಂತರ ಅವರ ದೇಹದಲ್ಲಿ ಸಿಕ್ಕಂತಹ ಕಬ್ಬಿಣದ ನಟ್ಟು ಬೋಲ್ಟ್‌ ರಾಡುಗಳನ್ನು ತೆಗೆದಿಟ್ಟಿದ್ದು, ಈ ದೃಶ್ಯವನ್ನು ನೋಡಿದರೆ ಎಂಥಹವರು ವೇಗವಾಗಿ ಹೋಗುವ ವೇಳೆ ಖಂಡಿತ ಯೋಚನೆ ಮಾಡಬಹುದು. ಹೌದು ಸಾಮಾನ್ಯವಾಗಿ ವಾಹನ ಅಪಘಾತಕ್ಕೀಡಾಗ ಕೈ ಕಾಲುಗಳು ಬೆನ್ನು ಮೂಳೆ ಹೀಗೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗುತ್ತವೆ. ಕೆಲವು ದೇಹದ ಭಾಗಗಳನ್ನು ಮತ್ತೆ ಮೊದಲಿನಂತೆ ಮಾಡುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಹೀಗಾದಾಗ ವೈದ್ಯರು ಲೋಹದ ರಾಡುಗಳನ್ನು ಸ್ಕ್ರೂಗಳನ್ನು ನಟ್ಟು ಬೋಲ್ಟ್‌ಗಳನ್ನು ಬಳಸಿ ದೇಹಕ್ಕೆ ಸ್ವಲ್ಪ ಮಟ್ಟಿನ ಆಧಾರ ನೀಡುವುದಕ್ಕೆ ಪ್ರಯತ್ನ ಪಟ್ಟು ರೋಗಿ ಚೇತರಿಸಿಕೊಳ್ಳುವಂತೆ ಮಾಡುತ್ತಾರೆ.

View post on Instagram

ಬಹುತೇಕರಿಗೆ ಅಪಘಾತಗಳಾದಾಗ ಕೈಗೆ ರಾಡ್ ಹಾಕಿದ್ದಾರೆ, ಸೊಂಟಕ್ಕೆ ಸ್ಕ್ರೂ ಹಾಕಿದ್ದಾರೆ. ಕಾಲಿಗೆ ರಾಡ್ ಹಾಕಿದ್ದಾರೆ ಅಂಥೆಲ್ಲಾ ಹೇಳುವುದನ್ನು ನೀವು ಕೇಳಿರಬಹುದು. ಆದರೆ ಆ ರಾಡ್‌ಗಳು ಸ್ಕ್ರೂಗಳು ಹೇಗಿರಬಹುದು, ಅದನ್ನು ಹೇಗೆ ಹಾಕಿರಬಹುದು ಎಂದು ಊಹಿಸಿದರೆ ನೀವು ಪ್ರಜ್ಞೆ ಕಳೆದುಕೊಳ್ಳುವುದು ಪಕ್ಕಾ. ವೈದ್ಯ ವೃತ್ತಿಯಲ್ಲಿರುವವರನ್ನು ಬಿಟ್ಟು ಸಾಮಾನ್ಯ ಜನರಿಗೆ ಇದು ತಿಳಿದಿರುವುದಕ್ಕೆ ಸಾಧ್ಯವಿಲ್ಲ.

ಹೌದು ಯೂಟ್ಯೂಬರ್ ವಿಜೆ ವಿಖ್ಯಾತ್ ಎಂಬುವವರು ಸುಳ್ಯದ ಹಿಂದೂ ರುದ್ರಭೂಮಿಯಲ್ಲಿ ಕೆಲಸ ಮಾಡುವ ಗುರುವಪ್ಪ ಎಂಬುವವರನ್ನು ಮಾತನಾಡಿಸಿದ್ದು, ಈ ವೇಳೆ ಅವರು ತೋರಿಸಿದ ನಟ್ಟು ಬೋಲ್ಟ್‌ಗಳು ಎಂಥವರಿಗೂ ಗಾಬರಿ ಉಂಟು ಮಾಡಿದೆ. ಸ್ಮಶಾನದಲ್ಲಿ ಕುಟುಂಬದವರು ಶವ ಸುಟ್ಟ ನಂತರ ಬೂದಿಯನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಸಾವಿಗೂ ಮೊದಲು ಮನುಷ್ಯ ಜೀವಂತವಾಗಿದ್ದಾಗ ಅವರ ದೇಹಕ್ಕೆ ಹಾಕಿದ ರಾಡುಗಳು ಬೆಂಕಿಯಲ್ಲಿ ಕರಗದೇ ಬೂದಿಯ ನಡುವೆ ಸಿಗುತ್ತದೆ. ಹೀಗೆ ಸಿಕ್ಕ ನಟ್ಟು ಬೋಲ್ಟ್‌ ರಾಡುಗಳನ್ನು ಸ್ಮಶಾನದಲ್ಲಿ ಕೆಲಸ ಮಾಡುವ ಗುರುವಪ್ಪ ಅವರು ತೆಗೆದಿರಿಸಿದ್ದಾರೆ. ಅವರನ್ನು ಯೂಟ್ಯೂಬರ್ ವಿಜೆ ವಿಖ್ಯಾತ್ ಅವರು ಮಾತನಾಡಿಸಿದ್ದು, ಅವರು ಇದು ಸ್ಮಶಾನದಲ್ಲಿ ಮನುಷ್ಯರ ದೇಹವನ್ನು ಸುಟ್ಟ ನಂತರ ಸಿಕ್ಕ ವಸ್ತುಗಳು ಎಂದು ಹೇಳಿದ್ದಾರೆ.

ಈ ವೀಡಿಯೋ ನೋಡಿದ ಅನೇಕರು ಗಾಬರಿಗೊಂಡಿದ್ದಾರೆ. ಬಹುತೇಕರಿಗೆ ಅಪಘಾತಗಳಾದಾಗ, ಅಥವಾ ಎಲ್ಲೋ ಆಕಸ್ಮಿಕವಾಗಿ ಬಿದ್ದು ಮೂಳೆ ಮುರಿದುಕೊಂಡಾಗ ಕೈ ಕಾಲಿಗೆ ರಾಡು ಹಾಕುತ್ತಾರೆ ಎಂಬುದು ಗೊತ್ತು. ಅದು ಇಂಥಹಾ ರಾಡ್ ಎಂಬುದು ಗೊತ್ತಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

YouTube video player

ಬಹುಶಃ ಸಂಚಾರ ಜಾಗೃತಿ ಮೂಡಿಸುವ ಪೊಲೀಸರು ಈ ನಟ್ ಬೋಲ್ಟ್‌ಗಳ ಫೋಟೋಗಳನ್ನು ರಸ್ತೆ ಬದಿ ನೇತು ಹಾಕಿ ಜಾಗೃತಿ ಮೂಡಿಸುವ ಹೊಸ ಪ್ರಯತ್ನ ಮಾಡಿದರೆ ಯುವ ಸಮುದಾಯ ಎಚ್ಚೆತುಕೊಳ್ಳಬಹುದೇನೋ? ಈ ಬಗ್ಗೆ ನಿಮಗೇನನಿಸ್ತಿದೆ…