China News: ಚೀನಾದಲ್ಲಿ ಮ್ಯಾಜಿಕ್ ಮಶ್ರೂಮ್ ಹಾಗೂ ಮದ್ಯ ಸೇವಿಸಿ ಅಮರನಾಗಲು ಹೊರಟ ವ್ಯಕ್ತಿಯೊಬ್ಬ 27ನೇ ಮಹಡಿಯ ಫ್ಲ್ಯಾಟ್‌ನಿಂದ ಹೊರಗೆ ಇಳಿದಿದ್ದಾನೆ. ಪೈಪ್ ಮೂಲಕ ಕೆಳಗೆ ಜಾರುತ್ತಿದ್ದಾಗ..

ಮ್ಯಾಜಿಕ್ ಮಶ್ರೂಮ್ (ಲಹರಿ ಅಣಬೆ) ಮತ್ತು ಮದ್ಯವನ್ನು ಒಟ್ಟಿಗೆ ಸೇವಿಸಿ ಫುಲ್ ಹೈ ಆಗಿದ್ದ ವ್ಯಕ್ತಿಯೊಬ್ಬ, ತಾನು ಅಮರನಾಗಬೇಕು ಎಂದು 27ನೇ ಮಹಡಿಯ ಫ್ಲ್ಯಾಟ್‌ನ ಕಿಟಕಿಯಿಂದ ಹೊರಗೆ ಇಳಿದಿದ್ದಾನೆ. ಕಷ್ಟಗಳಿಂದ ಪಾರಾಗಿ ಅಮರತ್ವ ಪಡೆಯಲು ಇದೊಂದು ಸ್ವಯಂ ತರಬೇತಿ ಎಂದು ಆತ ನಂತರ ಹೇಳಿಕೊಂಡಿದ್ದಾನೆ. ನೈಋತ್ಯ ಚೀನಾದ ಯುನಾನ್ ಪ್ರಾಂತ್ಯದಲ್ಲಿ ವಾಸಿಸುವ ಕ್ಸೂ (Xu) ಎಂಬ 40 ವರ್ಷದ ವ್ಯಕ್ತಿಯೇ ಈ ಸಾಹಸಕ್ಕೆ ಕೈಹಾಕಿದವನು. ಈತ ತಿಂದಿದ್ದು 'ಜಿಯಾನ್‌ಶೌಕಿಂಗ್' (Jianshouqing) ಎಂಬ ವಿಶೇಷ ತಳಿಯ ಮ್ಯಾಜಿಕ್ ಮಶ್ರೂಮ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

27ನೇ ಮಹಡಿಯಿಂದ ಅಮರತ್ವದ ಕಡೆಗೆ!

ತಾನು ಅಮಲೇರಿದ ಸ್ಥಿತಿಯಲ್ಲಿ 27ನೇ ಮಹಡಿಯ ಫ್ಲ್ಯಾಟ್‌ನ ಕಿಟಕಿಯಿಂದ ಹೊರಬರಲು ಯತ್ನಿಸಿದ್ದಾಗಿ ಕ್ಸೂ ನಂತರ ತಿಳಿಸಿದ್ದಾನೆ. ಫ್ಲ್ಯಾಟ್‌ನ ಕಿಟಕಿ ಹಿಡಿದು ಮೇಲೆ ಹತ್ತಲು ಪ್ರಯತ್ನಿಸಿ ವಿಫಲನಾದ. ನಂತರ ಪೈಪ್ ಮೂಲಕ ಇಳಿಯಲು ಯತ್ನಿಸಿದ. ಆದರೆ, ಹೊಟ್ಟೆ ಉಜ್ಜಿಕೊಂಡು ಆತ ಕೆಳಗೆ ಜಾರಲಾರಂಭಿಸಿದ. ಈ ಸಮಯದಲ್ಲಿ, 26ನೇ ಮಹಡಿಯಲ್ಲಿದ್ದ ಕ್ಸೂನ ಸ್ನೇಹಿತನಿಗೆ ಶಬ್ದ ಕೇಳಿಸಿದೆ. ಕಿಟಕಿಯಲ್ಲಿ ನೋಡಿದಾಗ ಪೈಪ್ ಮೂಲಕ ಜಾರಿ ಬರುತ್ತಿದ್ದ ಕ್ಸೂ ಕಂಡಿದ್ದಾನೆ. ತಕ್ಷಣವೇ, ಆತ ಕ್ಸೂನನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಎಳೆದುಕೊಂಡು ರಕ್ಷಿಸಿದ್ದಾನೆ ಎಂದು 'ಸೌತ್ ಚೈನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿದೆ.

ಚೀನೀ ಫ್ಯಾಂಟಸಿ ಕಾದಂಬರಿಯ ಪ್ರಭಾವ

ಸ್ನೇಹಿತ ರಕ್ಷಿಸಿದ ತಕ್ಷಣ ಕ್ಸೂನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಲ್ಲಿ ಆತ ಕೋಮಾಗೆ ಜಾರಿದ. ನಂತರ, ಯುನಾನ್ ವಿಶ್ವವಿದ್ಯಾಲಯದ ಸಂಯೋಜಿತ ಆಸ್ಪತ್ರೆಗೆ ಆತನನ್ನು ಸ್ಥಳಾಂತರಿಸಲಾಯಿತು. ಅಲ್ಲಿ, ಮ್ಯಾಜಿಕ್ ಮಶ್ರೂಮ್‌ನಿಂದ ಉಂಟಾಗುವ ಭ್ರಮೆಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಹೆಸರುವಾಸಿಯಾದ ಡಾ. ಕ್ಸೂ ಅವರ ಚಿಕಿತ್ಸೆ ನೀಡಲಾಯಿತು. ವಿಷದ ಪ್ರಮಾಣ ಕಡಿಮೆ ಮಾಡಲು ಕ್ಸೂಗೆ ಹಲವು ಬಾರಿ ಭೇದಿ ಮಾಡಿಸಲಾಯಿತು ಎಂದು ಡಾ. ಕ್ಸೂ ತಿಳಿಸಿದರು. ಕ್ಸೂ 'ಜಿಯಾನ್‌ಶೌಕಿಂಗ್' ಮಶ್ರೂಮ್‌ನ ಎರಡು ಭಾಗಗಳನ್ನು ತಿಂದಿದ್ದ.

ಮೊದಲ ಭಾಗವನ್ನು ಕರಿ ಮಾಡಿ ಮೊದಲ ದಿನ ತಿಂದಿದ್ದ. ಅದರ ಅಮಲು ಇಳಿಯುವ ಮುನ್ನವೇ, ಮರುದಿನ ಬೆಳಿಗ್ಗೆ ಎರಡನೇ ಭಾಗವನ್ನು ಮದ್ಯದ ಜೊತೆ ಸೇವಿಸಿದ್ದ. ಇದರಿಂದಾಗಿ ಅಮಲು ದುಪ್ಪಟ್ಟಾಗಿ ಕ್ಸೂ ತನ್ನ ಪ್ರಜ್ಞೆ ಕಳೆದುಕೊಂಡಿದ್ದ ಎಂದು ಡಾ. ಕ್ಸೂ ವಿವರಿಸಿದರು. "ಕಷ್ಟಗಳನ್ನು ದಾಟಿ ಅಮರತ್ವವನ್ನು ಸಾಧಿಸಲು ಸ್ವತಃ ತರಬೇತಿ ಪಡೆಯಲು" ತನ್ನ ಕುಟುಂಬವೇ ತನ್ನನ್ನು ಕರೆಯುತ್ತಿದೆ ಎಂದು ನಂಬಿ ಕ್ಸೂ 27ನೇ ಮಹಡಿಯಿಂದ ಇಳಿಯಲು ಯತ್ನಿಸಿದ್ದ. ಚೀನೀ ಫ್ಯಾಂಟಸಿ ಕಾದಂಬರಿಗಳಲ್ಲಿ ಈ ರೀತಿಯ ಸನ್ನಿವೇಶಗಳು ಸಾಮಾನ್ಯವಾಗಿ ಕಂಡುಬರುತ್ತವೆ.

'ನೀಲಿ ಕೈ' ಅಣಬೆ

'ನೀಲಿ ಕೈ' (Blue Hand) ಎಂದು ಕರೆಯಲ್ಪಡುವ ಈ 'ಜಿಯಾನ್‌ಶೌಕಿಂಗ್' ಒಂದು ವಿಷಕಾರಿ ಅಣಬೆ. ಇದನ್ನು ಕತ್ತರಿಸಿದಾಗ ಕೈಯಲ್ಲಿ ನೀಲಿ ಬಣ್ಣ ಉಳಿಯುವುದರಿಂದ ಈ ಹೆಸರು ಬಂದಿದೆ. ಇಂತಹ ವಿಷಕಾರಿ ಅಣಬೆಗಳನ್ನು 120 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿದರೆ ಮಾತ್ರ ವಿಷ ಅಂಶ ಹೋಗಿ ತಿನ್ನಲು ಯೋಗ್ಯವಾಗುತ್ತದೆ ಎಂದು ಡಾ. ಕ್ಸೂ ಮಾಹಿತಿ ನೀಡಿದರು. ಯುನಾನ್ ಪ್ರಾಂತ್ಯದಲ್ಲಿ ಪ್ರತಿ ವರ್ಷ ಜೂನ್‌ನಿಂದ ಆಗಸ್ಟ್ ತಿಂಗಳವರೆಗೆ ಇಂತಹ ವಿಷಕಾರಿ ಅಣಬೆಗಳನ್ನು ತಿಂದು ಅಸ್ವಸ್ಥರಾದ ಅನೇಕರು ಆಸ್ಪತ್ರೆಗೆ ಬರುತ್ತಾರೆ ಎಂದೂ ಅವರು ಹೇಳಿದರು.

ಚೇತರಿಸಿಕೊಂಡ ನಂತರ ಮಾತನಾಡಿದ ಕ್ಸೂ, ತಾನು ವರ್ಷಗಳಿಂದ 'ಜಿಯಾನ್‌ಶೌಕಿಂಗ್' ಅಣಬೆಯನ್ನು ಅಡುಗೆ ಮಾಡಿ ತಿನ್ನುತ್ತಿದ್ದೆ, ಆದರೆ ಈ ಬಾರಿ ಸರಿಯಾಗಿ ಬೆಂದಿರಲಿಲ್ಲ, ಅದೇ ಸಮಸ್ಯೆಯಾಯಿತು ಎಂದಿದ್ದಾನೆ. ಈ ಅನುಭವದಿಂದ ತಾನು ತುಂಬಾ ಹೆದರಿದ್ದು, ಇನ್ನು ಮುಂದೆ ಮದ್ಯಪಾನ, ಧೂಮಪಾನ ಅಥವಾ ಮ್ಯಾಜಿಕ್ ಮಶ್ರೂಮ್ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ. ಸ್ನೇಹಿತ ಸಕಾಲದಲ್ಲಿ ನೋಡದೇ ಹೋಗಿದ್ದರೆ, ಕ್ಸೂನ 'ಅಮರತ್ವದ ಹುಡುಕಾಟ' ಸಾವಿನಲ್ಲಿ ಕೊನೆಗೊಳ್ಳುತ್ತಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಕಾಮೆಂಟ್ ಮಾಡಿದ್ದಾರೆ.