ಚಲಿಸುವ ರೈಲಿನಲ್ಲಿ ಅರ್ಚಕರು ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಚರ್ಚೆಗೆ ಕಾರಣವಾಗಿತ್ತು. ಇದು ಸಾಮಾನ್ಯ ಕೋಚ್ ಅಲ್ಲ, ಬದಲಿಗೆ ಐಆರ್‌ಸಿಟಿಸಿ ಮೂಲಕ 3 ಲಕ್ಷಕ್ಕೂ ಹೆಚ್ಚು ಹಣ ಪಾವತಿಸಿ ಬುಕ್ ಮಾಡಲಾಗಿದ್ದ ಖಾಸಗಿ 'ಸಲೂನ್ ಕಾರ್' ಎಂದು ಉತ್ತರ ರೈಲ್ವೆ ಸ್ಪಷ್ಟಪಡಿಸಿದೆ.
ನವದೆಹಲಿ: ಇತ್ತೀಚೆಗಷ್ಟೇ ರೈಲೊಂದರ ಕೋಚ್ ಅನ್ನು ಹನಿಮೂನ್ ಕೋಚ್ ರೀತಿ ಅಲಂಕರಿಸಿದ್ದ ವಿಡಿಯೋ ವೈರಲ್ ಆಗಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಬೆನ್ನಲ್ಲೇ ಈಗ ಚಲಿಸುವ ರೈಲಿನಲ್ಲಿ ಅರ್ಚಕರು ಮತ್ತು ಭಕ್ತರು ಸೇರಿ ಪೂಜೆ ಮಾಡ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರೈಲಿನಲ್ಲಿ ಇಂತಹ ಧಾರ್ಮಿಕ ವಿಧಿವಿಧಾನಗಳಿಗೆ ಅವಕಾಶವಿದೆಯೇ? ಎಂಬ ಪ್ರಶ್ನೆಗಳು ಕೇಳಿಬಂದ ಬೆನ್ನಲ್ಲೇ ಉತ್ತರ ರೈಲ್ವೆ (Northern Railway) ಈ ಬಗ್ಗೆ ಸ್ಪಷ್ಟನೆ ನೀಡಿದೆ.
ವೈರಲ್ ವಿಡಿಯೋದಲ್ಲೇನಿದೆ?
ಟ್ವಿಟರ್ (X) ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ರೈಲ್ವೆ ಕೋಚ್‌ನ ನೆಲದ ಮೇಲೆ ಅರ್ಚಕರೊಬ್ಬರು ಕುಳಿತು ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಅವರ ಸುತ್ತಲೂ ಬಿಳಿ ಬಟ್ಟೆ ಧರಿಸಿದ ಹಲವಾರು ಭಕ್ತರು ಕುಳಿತು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಇದು ಸಾಮಾನ್ಯ ಪ್ರಯಾಣಿಕರ ಕೋಚ್ ಇರಬಹುದು ಎಂದು ಭಾವಿಸಿದ ನೆಟ್ಟಿಗರು ರೈಲ್ವೆ ಇಲಾಖೆಯನ್ನು ಪ್ರಶ್ನಿಸಿದ್ದರು.
ರೈಲ್ವೆ ಇಲಾಖೆಯ ಸ್ಪಷ್ಟನೆ
ವಿಡಿಯೋ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಉತ್ತರ ರೈಲ್ವೆ, ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದೆ. ಈ ಪೂಜೆ ನಡೆದಿರುವುದು ಸಾಮಾನ್ಯ ಪ್ರಯಾಣಿಕರ ಕೋಚ್‌ನಲ್ಲಿ ಅಲ್ಲ, ಬದಲಾಗಿ ಖಾಸಗಿಯಾಗಿ ಬುಕ್ ಮಾಡಲಾದ 'ಸಲೂನ್ ಕಾರ್' (Saloon Car) ಒಳಗೆ ಎಂದು ಇಲಾಖೆ ತಿಳಿಸಿದೆ.
ಬಾಡಿಗೆ ಬರೋಬ್ಬರಿ 3 ಲಕ್ಷ ರೂಪಾಯಿ!
ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ಸಲೂನ್ ಕಾರ್ ಅನ್ನು ಐಆರ್‌ಸಿಟಿಸಿ (IRCTC) ಮೂಲಕ ಖಾಸಗಿ ಪಾರ್ಟಿಯೊಂದು ಜುಲೈ 8 ರಂದು ಬುಕ್ ಮಾಡಿತ್ತು. ಈ ವಿಶೇಷ ಕೋಚ್‌ಗಾಗಿ ಬರೋಬ್ಬರಿ 3,08,580 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆ. ಜುಲೈ 10 ರಂದು ನವದೆಹಲಿಯಿಂದ ಮುಂಬೈಗೆ ತೆರಳುವ 'ಪಶ್ಚಿಮ ಎಕ್ಸ್‌ಪ್ರೆಸ್' (ರೈಲು ಸಂಖ್ಯೆ 12926) ರೈಲಿಗೆ ಈ ಕೋಚ್ ಅನ್ನು ಜೋಡಿಸಲಾಗಿತ್ತು.
ಏನಿದು ಸಲೂನ್ ಕಾರ್?
ಸಲೂನ್ ಕಾರ್ ಎಂಬುದು ರೈಲ್ವೆಯ ಅತ್ಯಂತ ಐಷಾರಾಮಿ ಕೋಚ್ ಆಗಿದ್ದು, ಇದನ್ನು ಸಾಮಾನ್ಯವಾಗಿ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ವಿಐಪಿಗಳು ಬಳಸುತ್ತಾರೆ. ಇದು ಚಲಿಸುವ ಮನೆಯಂತೆಯೇ ಇರುತ್ತದೆ. ಇದರಲ್ಲಿ, ಹವಾನಿಯಂತ್ರಿತ ಮಲಗುವ ಕೋಣೆಗಳು (AC Bedrooms), ಸಣ್ಣ ಅಡುಗೆ ಮನೆ (Kitchenette), ಲಿವಿಂಗ್ ಮತ್ತು ಡೈನಿಂಗ್ ರೂಮ್, ಅಟ್ಯಾಚ್ಡ್ ಶೌಚಾಲಯಗಳು ಮತ್ತು ಎಲ್ಲಾ ಆಧುನಿಕ ಸೌಲಭ್ಯಗಳಿರುತ್ತವೆ, ಖಾಸಗಿ ವ್ಯಕ್ತಿಗಳು ಹಣ ಪಾವತಿಸಿ ಈ ಕೋಚ್ ಅನ್ನು ಬುಕ್ ಮಾಡಬಹುದಾಗಿದ್ದು, ಅಂತಹ ಒಂದು ಖಾಸಗಿ ಬುಕಿಂಗ್‌ನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆದಿದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಈ ಮೂಲಕ ರೈಲಿನಲ್ಲಿ ಪೂಜೆ ನಡೆದ ವಿವಾದಕ್ಕೆ ತೆರೆ ಬಿದ್ದಂತಾಗಿದೆ.


