ರಷ್ಯಾದ ವಿಮಾನ ನಿಲ್ದಾಣದಲ್ಲಿ ಒಂದೂವರೆ ವರ್ಷದ ಪುಟ್ಟ ಮಗುವನ್ನು ವ್ಯಕ್ತಿಯೊಬ್ಬ ಎತ್ತಿ ನೆಲಕ್ಕೆಸೆದ ಪರಿಣಾಮ ಮಗು ಕೋಮಾಗೆ ಜಾರಿದೆ.
ಎಷ್ಟು ವಿಕೃತ ಮನಸ್ಥಿತಿಯ ಮನುಷ್ಯರು ಇರುತ್ತಾರೆ ಎಂಬುದಕ್ಕೆ ನಮ್ಮ ನಡುವೆಯೇ ನಡೆಯುವ ಹಲವು ಘಟನೆಗಳು ಸಾಕ್ಷಿ, ತಮಗೇನು ಮಾಡದ ತಮ್ಮಷ್ಟಕ್ಕೆ ತಾವಿರುವ ಮೂಕ ಜೀವಿಗಳ ಮೇಲೂ ಕೆಲವರು ವಿಚಿತ್ರವಾದ ಪ್ರತಾಪವನ್ನು ತೋರಿ ಬಿಡುತ್ತಾರೆ. ಬರೀ ಇಷ್ಟೇ ಅಲ್ಲ, ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಪ್ರಾಣಿಗಳ ಮೇಲೆ ವಿಕೃತ ಕಿರುಕುಳಗಳು ಇಂತಹ ಮನುಷ್ಯರ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ. ಅದೇ ರೀತಿ ಇಲ್ಲೊಂದು ಕಡೆ ವ್ಯಕ್ತಿಯೋರ್ವ ಪುಟ್ಟ ಬಾಲಕನ ಮೇಲೆ ತೋರಿರುವ ಕ್ರೌರ್ಯವೊಂದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಭಯ ಹುಟ್ಟಿಸುವಂತಿದೆ.
ಮಗುವನ್ನು ಎತ್ತಿ ನೆಲಕ್ಕೆಸೆದ ಪಾಪಿ
ರಷ್ಯಾದ ಮಾಸ್ಕೋ ಒಬ್ಲಾಸ್ಟ್‌ನ ಶೆರೆಮೆಟಿಯೆವೊ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗೆ ಏರ್‌ಪೋರ್ಟ್‌ನಲ್ಲಿದ್ದ ಒಂದೂವರೆ ವರ್ಷದ ಪುಟ್ಟ ಮಗುವನ್ನು ಅಲ್ಲಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಎತ್ತಿ ನೆಲದ ಮೇಲೆ ಕುಕ್ಕಿದ್ದು, ಇದರಿಂದ ಮಗು ಕೋಮಾಗೆ ಜಾರಿದೆ. ವಿಮಾನ ನಿಲ್ದಾಣದ ಎರೈವಲ್ ಹಾಲ್‌ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಆಗಿದೆ. ತಾಯಿಯೊಬ್ಬಳು ಮಗುವನ್ನು ಏರ್‌ಪೋರ್ಟ್‌ಗೆ ಕರೆದುಕೊಂಡು ಬಂದ ಕೆಲ ಕ್ಷಣಗಳ ನಂತರ ಈ ಪೈಶಾಚಿಕ ಕೃತ್ಯ ನಡೆದಿದೆ.
ತಾಯಿ ಬೇಬಿ ಸಿಟ್ಟರ್ ಚೇರ್(Baby Stroller)ತರಲು ಹೋದಾಗ ದುರಂತ
ಅಲ್ಲಿನ ಆಂಗ್ಲ ಮಾಧ್ಯಮ ದಿ ಸನ್ ವರದಿ ಮಾಡಿದಂತೆ ಈ ಘಟನೆಯಲ್ಲಿ ಮಗುವಿನೆ ತಲೆಗೆ ಪ್ಯಾಕ್ಚರ್ ಆಗಿದ್ದು, ಮಗುವಿನ ಹಲವು ನರಹುರಿಗಳು ಗಾಯಗೊಂಡಿವೆ. ಈ ಮಗುವಿನ ತಾಯಿ ಗರ್ಭವತಿಯಾಗಿದ್ದು, ಏರ್‌ಪೋರ್ಟ್‌ಗೆ ಬಂದ ಬಳಿಕ ಮಗುವನ್ನು ಅಲ್ಲಿ ಬಿಟ್ಟು ಮಕ್ಕಳನ್ನು ಕೂರಿಸಿಕೊಂಡು ಹೋಗುವ ತಳ್ಳುವ ಚೇರ್‌ಗಾಗಿ ಅಲ್ಲಿಂದ ತುಸು ಆಚೇ ಹೋದ ಸಮಯದಲ್ಲಿ ಈ ಪಾಪಿ ಕಿರಾತಕ ವ್ಯಕ್ತಿ ಅತ್ತಿತ್ತ ನೋಡಿ ಮಗುವಿನ ಮೇಲೆ ತನ್ನ ಪೈಶಾಚಿಕ ಕೃತ್ಯವೆಸಗಿದ್ದಾನೆ. ಹೀಗೆ ಮಗುವಿನ ಮೇಲೆ ಕೃತ್ಯವೆಸಗಿದವನನ್ನು ಬೆಲರಾಸ್ ಮೂಲದ 31 ವರ್ಷದ ವ್ಲಾದಿಮಿರ್ ವಿಟ್ಕೊವ್ ಎಂದು ಗುರುತಿಸಲಾಗಿದೆ.
ಕ್ಷಣದಲ್ಲಿ ನಡೆದು ಹೋಯ್ತು ಅನಾಹುತ
ವೈರಲ್ ಆದ ವೀಡಿಯೋದಲ್ಲಿ ಆರೋಪಿ ತನ್ನಮ್ಮ ಇಟ್ಟು ಹೋದ ಬ್ಯಾಗ್‌ನ ಬಳಿ ಅತ್ತಿತ್ತ ನೋಡುತ್ತಿರುವ ಮಗುವನ್ನು ಆರೋಪಿ ಸೂಕ್ಷ್ಮವಾಗಿ ಗಮನಿಸಿದ್ದು, ಕೆಲ ಸೆಕೆಂಡ್‌ಗಳ ಕಾಲ ಯಾರಾದರೂ ನೋಡುತ್ತಿದ್ದಾರೋ ಎಂದು ಆತ ಸುತ್ತಲೂ ನೋಡುತ್ತಾನೆ. ಬಳಿಕ ಒಮ್ಮಿಂದೊಮ್ಮೆಲೇ ಮಗುವಿನ ಬಳಿ ಹೋಗಿ ಮಗುವನ್ನು ತಲೆಕೆಳಗೆ ಮಾಡಿ ಮೇಲಿನಿಂದ ರಭಸವಾಗಿ ನೆಲಕ್ಕೆ ಬಡಿಯುತ್ತಾನೆ. ಈ ವೇಳೆ ಅಲ್ಲಿದ್ದ ಇದರಿಂದ ಮಗು ಅಲ್ಲಿಯೇ ನಿಶ್ಚಲವಾಗಿದೆ. ಇದನ್ನು ನೋಡಿ ಅಲ್ಲಿದ್ದ ವ್ಯಕ್ತಿಯೊಬ್ಬರು ಓಡಿ ಬಂದು ಮಗುವನ್ನು ಮೇಲೆತ್ತಿದ್ದಾರೆ. ಅಷ್ಟರಲ್ಲಿ ಮಗುವಿನ ತಾಯಿಯೂ ಅಲ್ಲಿಗೆ ಬಂದಿದ್ದಾರೆ. ಅತ್ತ ಆರೋಪಿ ತನ್ನ ತಲೆಯಲ್ಲಿದ್ದ ಕನ್ನಡಕವನ್ನು ಕಣ್ಣಿಗೆ ಹಾಕಿಕೊಳ್ಳುತ್ತಾ ಮಗು ಬಿದ್ದ ಜಾಗದಲ್ಲೇ ತಾನು ಒಮ್ಮೆ ಕುಳಿತು ಕಾಲುಗಳನ್ನು ಹೊರಳಾಡಿಸಿ ಬಳಿಕ ಅಲ್ಲಿಂದ ಎದ್ದು ಓಡಿ ಹೋಗಿದ್ದಾನೆ. ಈ ಭಯಾನಕ ವೀಡಿಯೋ ನೋಡುಗರ ಎದೆ ಒಡೆಯುವಂತೆ ಮಾಡಿದೆ.
ಆಶ್ರಯ ಅರಸಿ ಇರಾನ್‌ನಿಂದ ರಷ್ಯಾಗೆ ಬಂದಿದ್ದ ಕುಟುಂಬ
ರಷ್ಯಾದ ಮಾಧ್ಯಮಗಳ ಪ್ರಕಾರ, ಈ ಕುಟುಂಬವೂ ಇರಾನ್ ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಅಲ್ಲಿಂದ ಸುರಕ್ಷಿತ ಸ್ಥಳವನ್ನು ಅರಸಿ ರಷ್ಯಾಗೆ ಬಂದಿತ್ತು. ಇರಾನ್‌ನಿಂದ ಅಫ್ಘಾನಿಸ್ತಾನಕ್ಕೆ ಬಂದು ಅಲ್ಲಿಂದ ರಷ್ಯಾಗೆ ಬಂದು ತಲುಪಿತ್ತು. ಆದರೆ ದುರಾದೃಷ್ಟ ಈ ಕುಟಂಬವನ್ನು ಹೇಗೆ ಬೆನ್ನತಿದೆ ನೋಡಿ, ಪುಟ್ಟ ಮಕ್ಕಳ ಭವಿಷ್ಯಕ್ಕಾಗಿ ಯುದ್ಧದಿಂದ ತಪ್ಪಿಸಿಕೊಂಡು ದೇಶವನ್ನು ತೊರೆದು ಪರದೇಶಕ್ಕೆ ಬಂದ ಈ ಕುಟುಂಬವೀಗ ಮಗುವನ್ನು ಕೋಮಾದಲ್ಲಿ ನೋಡುವಂತಾಗಿದೆ.
ಈ ಕೃತ್ಯದ ಹಿಂದೆ ಆರೋಪಿ ಏನಾದರೂ ಜನಾಂಗೀಯ ಬೇಧದ ಪ್ರೇರಣೆಯಿಂದ ಮಾಡಿದ್ದಾನೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತ ರಷ್ಯಾ ಪೊಲೀಸ್ ಅಧಿಕಾರಿಗಳು ಈ ಘಟನೆಯ ವೇಳೆ ಆರೋಪಿ ಮಾದಕ ವಸ್ತುವನ್ನು ಸೇವಿಸಿದ್ದು, ಅದರ ಪ್ರಭಾವದಲ್ಲಿದ್ದ ಎಂದು ತಿಳಿಸಿದ್ದಾರೆ. ಈತನನ್ನು ಬಂಧಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ ಆತನ ರಕ್ತದಲ್ಲಿ ಗಾಂಜಾ ಪತ್ತೆಯಾಗಿದೆ. ಅಲ್ಲದೇ ಆತ ತನ್ನ ಬಳಿ ಗಾಂಜಾ ಇಟ್ಟುಕೊಂಡಿದ್ದ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.
ಸೈಪ್ರಸ್ ಅಥವಾ ಈಜಿಪ್ಟ್ ಮೂಲದ ಆತ ಇತ್ತೀಚೆಗಷ್ಟೇ ರಷ್ಯಾಗೆ ಬಂದಿದ್ದ. ಇನ್ನು ಈ ಕೃತ್ಯದ ಬಗ್ಗೆ ಆತನನ್ನು ಪೊಲೀಸರು ವಿಚಾರಿಸಿದಾಗ ಆತ ವಿವರಿಸಲು ಸಾಧ್ಯವಾಗಿಲ್ಲ. ನಾನು ತಪ್ಪು ಮಾಡಿದೆ ಎಂದಷ್ಟೇ ಆತ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾನೆ ಎಂದು ವರದಿಯಾಗಿದೆ.
ಮಗುವಿನ ಮೇಲಿನ ಈ ಪೈಶಾಚಿಕ ಕೃತ್ಯವನ್ನು ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣ ಸಮಿತಿ ತೀವ್ರವಾಗಿ ಖಂಡಿಸಿದೆ. ಡ್ರಗ್‌ನಿಂದ ಪ್ರಭಾವಿತನಾಗಿದ್ದ ರಾಕ್ಷಸನೋರ್ವ ಮಗುವನ್ನು ವಿಮಾನ ನಿಲ್ದಾಣದ ಆರೈವರಲ್ ಹಾಲ್‌ನಲ್ಲಿ ಎತ್ತಿ ನೆಲಕ್ಕೆ ಎಸೆದಿದ್ದು, ಆತನ ಈ ಕೃತ್ಯವನ್ನು ಅರಗಿಸಿಕೊಳ್ಳಲಾಗದು. ಆ ಮಗುವಿನ ಪೋಷಕರಿಗೆ ಇದನ್ನು ಸಹಿಸುವ ಶಕ್ತಿ ಸಿಗಲಿ ಎಂದು ಅದು ಹೇಳಿದೆ ಎಂದು ರಷ್ಯನ್ ಮಾಧ್ಯಮಗಳು ವರದಿ ಮಾಡಿವೆ.
ಆರೋಪಿಯನ್ನು ಈಗ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಆರೋಪಿಯೂ ಆತ ನೆಲಕ್ಕೆಸೆದ ಮಗುವಿನ ಪ್ರಾಯದಷ್ಟೇ ವಯಸ್ಸಿನ ಮಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
