18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದೀಗ ಆರ್‌ಸಿಬಿ ತಂಡದಿಂದ ಸ್ಪೂರ್ತಿ ಪಡೆದು ಪ್ಲೇ ಆಫ್‌ಗೇರಲು ಕನಸು ಕಾಣುತ್ತಿದೆ
ಚೆನ್ನೈ: ಕಳೆದ ವರ್ಷ ಕೊನೆಯ 6 ಪಂದ್ಯಗಳನ್ನು ಗೆದ್ದು ಪವಾಡ ಸದೃಶ ರೀತಿಯಲ್ಲಿ ಐಪಿಎಲ್-ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದ್ದ ಆರ್‌ಸಿಬಿ ನಮಗೆ ಸ್ಪೂರ್ತಿ ಎಂದು ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಧಾನ ಕೋಚ್ ಸ್ಟೀಫನ್ ಪ್ಲೆಮಿಂಗ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಾಕಿ ಇರುವ 6 ಪಂದ್ಯಗಳನ್ನೂ ಗೆದ್ದು ಪ್ಲೇ-ಆಫ್ ಪ್ರವೇಶಿಸುವ ವಿಶ್ವಾಸವಿದೆ. ಕಳೆದ ವರ್ಷ ಆರ್‌ಸಿಬಿ ಅದನ್ನು ಮಾಡಿ ತೋರಿಸಿದೆ. ಅದೇ ನಮಗೆ ಸ್ಫೂರ್ತಿ. ಪ್ಲೇ-ಆಫ್‌ಗೇರಲು ನಮಗೆ ಇನ್ನೂ ಅವಕಾಶವಿದೆ' ಎಂದರು.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇದುವರೆಗೂ 8 ಪಂದ್ಯಗಳನ್ನಾಡಿ ಕೇವಲ ಎರಡು ಗೆಲುವು ಹಾಗೂ 6 ಸೋಲು ಸಹಿತ ಕೇವಲ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನೊಂದು ಸೋಲು 5 ಬಾರಿಯ ಚಾಂಪಿಯನ್ ಚೆನ್ನೈ ಪ್ಲೇ ಆಫ್ ಕನಸು ನುಚ್ಚುನೂರು ಮಾಡಲಿದೆ. ಆದರೆ ಇನ್ನುಳಿದ 6 ಪಂದ್ಯಗಳನ್ನು ಭಾರೀ ಅಂತರದಲ್ಲಿ ಜಯಿಸಿ, ಅದೃಷ್ಟ ಕೂಡಾ ಕೈಹಿಡದರಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್‌ಗೇರಲು ಈಗಲೂ ಸಾಧ್ಯವಿದೆ.
ಇಂದು ಸಿಎಸ್‌ಕೆ - ಸನ್ ರೈಸರ್ಸ್ ಮಾಡು ಇಲ್ಲವೇ ಮಡಿ ಫೈಟ್
ಚೆನ್ನೈ: ಅಂಕಪಟ್ಟಿಯ ಕೆಳಭಾಗದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್, ಶುಕ್ರವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆಡಿರುವ 8 ಪಂದ್ಯಗಳಲ್ಲಿ ತಲಾ 6ರಲ್ಲಿ ಸೋತಿರುವ ಉಭಯ ತಂಡಗಳು, ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವ ಆತಂಕದಲ್ಲಿವೆ. ಈ ಪಂದ್ಯದಲ್ಲಿ ಸೋಲುವ ತಂಡದ ಪ್ಲೇ-ಆಫ್ ಕನಸು ಬಹುತೇಕ ಭಗ್ನಗೊಳ್ಳಲಿದೆ.
ಈ ಬಾರಿ ಬಹುತೇಕ ತಂಡಗಳಿಗೆ ತವರಿನ ಲಾಭ ಸಿಗುತ್ತಿಲ್ಲ. ಇದಕ್ಕೆ ಸಿಎಸ್‌ಕೆ ಕೂಡ ಹೊರತಾಗಿಲ್ಲ. ತನ್ನ ಸ್ಪಿನ್ ದಾಳಿಯಿಂದ ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದ ಚೆನ್ನೈ, ಈ ಸಲ ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಿದ್ದರೂ, ಹೆಚ್ಚಿಗೆ ಪ್ರಯೋಜನವಾಗುತ್ತಿಲ್ಲ. ರಚಿನ್ ರವೀಂದ್ರ. ರವೀಂದ್ರ ಜಡೇಜಾ, ಎಂ ಎಸ್ ಧೋನಿ ಸೇರಿದಂತೆ ಯಾರೊಬ್ಬರೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿಲ್ಲ. ಬೌಲಿಂಗ್ ವಿಭಾಗದಲ್ಲಿ ಖಲೀಲ್ ಅಹಮದ್, ನೂರ್ ಅಹಮದ್, ಮತಿರಣ ಮಿಂಚಬೇಕಿದೆ. ಒಟ್ಟಿನಲ್ಲಿ ಧೋನಿ ಪಡೆ ಇಂದು ಸನ್‌ರೈಸರ್ಸ್ ಎದುರು ಗೆಲ್ಲಬೇಕಿದ್ದರೇ, ಸಾಂಘಿಕ ಪ್ರದರ್ಶನ ತೋರಬೇಕಿದೆ.
ಇನ್ನು, ಸನ್‌ರೈಸರ್ಸ್‌ನಲ್ಲಿರುವ ಬ್ಯಾಟರ್‌ಗಳ ಪಟ್ಟಿಯನ್ನು ನೋಡಿದರೆ ಯಾರಿಗಾದರೂ ಹೆದರಿಕೆ ಆಗಲೇಬೇಕು. ಆದರೆ ತಂಡ ತನ್ನ ಘನತೆಗೆ ತಕ್ಕ ಆಟವಾಡುವುದನ್ನು ಮರೆತಿದ್ದು, ಟೂರ್ನಿಯಲ್ಲಿ ಉಳಿದುಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಅಬ್ಬರಿಸಲೇಬೇಕು. ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ಎದುರು ಅಗ್ರಕ್ರಮಾಂಕದ ಬ್ಯಾಟರ್‌ಗಳು ಬ್ಯಾಟಿಂಗ್ ಮರೆತಂತೆ ಬ್ಯಾಟ್ ಬೀಸಿದ್ದರು. ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಹೆನ್ರಿಚ್ ಕ್ಲಾಸೇನ್ ಹಾಗೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಅಭಿನವ್ ಮನೋಹರ್ ಹೊರತುಪಡಿಸಿ ಯಾರೊಬ್ಬರು ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಇನ್ನು ಬೌಲಿಂಗ್ ವಿಭಾಗ ಕೂಡಾ ಮಂಕಾಗಿದೆ. ನಾಯಕ ಪ್ಯಾಟ್ ಕಮಿನ್ಸ್, ಜಯದೇವ್ ಉನಾದ್ಕತ್, ಹರ್ಷಲ್ ಪಟೇಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.ಹೀಗಾಗಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಾದರೂ ಆರೆಂಜ್ ಆರ್ಮಿ ಗೆಲುವಿನ ಹಳಿಗೆ ಮರಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್.
