ಮುಂಬೈನಲ್ಲಿ ವ್ಯಕ್ತಿಯೊಬ್ಬ ಓದಿದ್ದು ಇಂಜಿಯರ್ ಆದರೂ ಆ ಕೆಲಸ ಬಿಟ್ಟು ಕ್ಯಾಬ್ ಓಡಿಸೋಕೆ ಶುರು ಮಾಡಿದ್ದಾರೆ ಇಂಜಿಯರ್‌ಗಿಂತಲೂ ಕ್ಯಾಬ್ ಡ್ರೈವಿಂಗ್ ಮಾಡೋದ್ರಲ್ಲೇ ಹೆಚ್ಚು ದುಡಿಬಹುದು ಅಂತಾರೆ. ಇನ್ನು ಆ ವ್ಯಕ್ತಿಯ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ. ತಿಂಗಳಿಗೆ ಎಷ್ಟು ಗಳಿಸ್ತಾರೆ?
ಒಂದು ಕಾಲದಲ್ಲಿ ಇಂಜಿಯರ್ ಓದಿದ್ದಾನೆಂದ್ರೆ ಜನ, ಊರು ಹುಬ್ಬೇರಿಸುತ್ತಿತ್ತು. ಹೌದು ಹಾಗೆ ಇದೇ ಕಾಲದಲ್ಲೇ ವ್ಯಕ್ತಿಯೊಬ್ಬ ಕ್ಯಾಬ್ ಓಡಿಸಿಕೊಂಡು ಜೀವನ ಮಾಡ್ತಿದ್ದಾನೆ ಅಂದ್ರೆ ಅಯ್ಯೋ ಪಾಪ ಬಡವ ಎನ್ನುತ್ತಿದ್ದರು. ಆದರೆ ಈಗ ಕಾಲ ಎಷ್ಟು ಬದಲಾವಣೆ ಆಗಿದೆಯೆಂದರೆ ಮುಂಬೈನ ಈ ವ್ಯಕ್ತಿಯ ಕೈಯಲ್ಲಿ ಇಂಜಿನಿಯರಿಂಗ್ ಡಿಗ್ರಿ ಇದೆ, ತಿಂಗಳಿಗೆ 20,000 - 30,000 ಸಂಬಳದ ಕೆಲಸದ ಆಫರ್‌ಗಳು ಬಂದವು. ಆದರೆ ಈ ವ್ಯಕ್ತಿ ಇಂಜಿನಿಯರಿಂಗ್ ಕೆಲಸಕ್ಕೆ ಹೋಗದೆ ಸೀದಾ ಕ್ಯಾಬ್ ಡ್ರೈವರ್ ಆದ! ಇಪ್ಪತ್ತು ಮೂವತ್ತು ಸಾವಿರ ಸಂಬಳ ಪಡೆದು ಇಂಜಿನಿಯರ್ ಅನ್ನಿಸಿಕೊಳ್ಳೋದಕ್ಕಿಂತ, ಸ್ವಂತ ಬ್ಯುಸಿನೆಸ್ ಕಟ್ಟಿ ಕೈತುಂಬಾ ಕಾಸು ಮಾಡೋದು ಲೇಸು ಎಂದು ಕ್ಯಾಬ್ ಡ್ರೈವರ್ ಆದ ವ್ಯಕ್ತಿ ಈಗ ತಿಂಗಳಿಗೆ ಸುಮಾರು ಎರಡು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ!
ಬೆಂಗಳೂರು ಮೂಲದ ಕೆನಡಿಯನ್ ಕಂಟೆಂಟ್ ಕ್ರಿಯೇಟರ್ ಕಾಲೇಬ್ ಫ್ರೈಸೆನ್ ಜೊತೆಗಿನ ಸಂಭಾಷಣೆಯಲ್ಲಿ ಈ ಡ್ರೈವರ್ ತಮ್ಮ ಕಥೆ ಹೇಳಿಕೊಂಡಿದ್ದಾರೆ. ತಮ್ಮ ಬ್ಯುಸಿನೆಸ್ ಅನ್ನು ಒಂದೇ ಒಂದು ಗಾಡಿಯಿಂದ ಶುರು ಮಾಡಿದ್ದಾಗಿ ಅವರು ತಿಳಿಸಿದ್ದಾರೆ.
ಹಾಗಾದರೆ ವಿಡಿಯೋದಲ್ಲಿ ಏನು ಹೇಳಿದ್ದಾರೆ? ಈ ವಿಡಿಯೋವನ್ನು ಕಾಲೇಬ್ ಫ್ರೈಸೆನ್ ಅವರು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಬ್ಯುಸಿನೆಸ್ ಅಥವಾ ಒಂದು ಕೆಲಸ ಶುರು ಮಾಡುವಾಗ ಆರಂಭದಲ್ಲಿ ಹಿನ್ನಡೆ ಆಗಬಹುದು, ಆದರೆ ಅದಕ್ಕೆ ಹೆದರಿ ಹಿಂದೆ ಸರಿಯಬಾರದು ಎಂದು ಈ ಡ್ರೈವರ್ ಹೇಳುತ್ತಾರೆ. ಎಲ್ಲಾ ದೊಡ್ಡ ಬ್ಯುಸಿನೆಸ್‌ಗಳು ಮೊದಲು ಚಿಕ್ಕದಾಗಿಯೇ ಶುರುವಾಗುತ್ತವೆ ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ..
ಸ್ವಂತ ಬ್ಯುಸಿನೆಸ್ ಅಂದ್ರೆನೇ ರಿಸ್ಕ್ ಅಲ್ವಾ? ಎಂದು ಫ್ರೈಸೆನ್ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಡ್ರೈವರ್, 'ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲೇಬೇಕು, ಇಲ್ಲದಿದ್ದರೆ ಬೇರೆಯವರಿಗಾಗಿ ದುಡಿಯಬೇಕಾಗುತ್ತದೆ. 60 ವರ್ಷದ ನಂತರ ನಿಮಗೆ ಯಾರೂ ಕೆಲಸ ಕೊಡುವುದಿಲ್ಲ' ಎಂದು ಖಡಕ್ಕಾಗಿ ಹೇಳುತ್ತಾರೆ. ಇದು ನಿಜ ಅಲ್ವೇ? ಒಬ್ಬ ಹತ್ತು ವರ್ಷ ಒಂದೇ ಕಂಪನಿಯಲ್ಲಿ 20 ಸಾವಿರ ಸಂಬಳಕ್ಕೆ ದುಡಿದರೆ ಇನ್ನೊಬ್ಬ ಸ್ವಂತ ವ್ಯಾಪಾರಕ್ಕಿಳಿಯುತ್ತಾನೆ ಹತ್ತು ವರ್ಷದ ಬಳಿಕ ಸ್ವಂತ ವ್ಯಾಪಾರ ಮಾಡಿದವನ ಬಳಿಕ ಸಂಪತ್ತು ಹೆಚ್ಚಿರುತ್ತೆ. ಸಂಬಳಕ್ಕಾಗಿ ದುಡಿದವನು ಅದೇ ಸಂಬಳಕ್ಕೆ ದುಡಿಯುತ್ತಲೇ ಇರುತ್ತಾನೆ.
ಕ್ಯಾಬ್ ಡ್ರೈವರ್ ಹೇಳುವಂತೆ, ಆತನ ಬಳಿ ಈಗ ನಾಲ್ಕು ಕಾರುಗಳಿವೆ. ಅವುಗಳ ಪೈಕಿ ಮೂರು ಕಾರುಗಳನ್ನ ಬೇರೆ ಡ್ರೈವರ್‌ಗಳು ಓಡಿಸುತ್ತಿದ್ದಾರೆ. ಒಂದನ್ನು ತಾನೇ ಓಡಿಸುತ್ತಾನೆ. ಆ ಡ್ರೈವರ್‌ಗಳು ತಮ್ಮ ಸಂಪಾದನೆಯ ಒಂದು ಭಾಗವನ್ನು ನನಗೆ ಕೊಡುತ್ತಾರೆ. ತಿಂಗಳಿಗೆ ನಾನು 2 ಲಕ್ಷ ರೂಪಾಯಿವರೆಗೆ ಗಳಿಸುತ್ತೇನೆ. ಕೆಲವು ಕಾರುಗಳಿಗೆ ಲೋನ್ ಇದೆ. EMI ಎಲ್ಲ ಕಳೆದ ನಂತರ ನನ್ನ ಕೈಗೆ 1.7 ಲಕ್ಷ ರೂಪಾಯಿ ಉಳಿಯುತ್ತದೆ' ಎಂದು ವಿವರಿಸಿದ್ದಾರೆ.
ಇಂಜಿನಿಯರಿಂಗ್ ಮುಗಿಸಿದರೂ 20,000-30,000 ರೂಪಾಯಿ ಸಂಬಳದ ಕೆಲಸ ಸಿಕ್ಕಿತ್ತು. ಅದರಿಂದ ಏನು ಪ್ರಯೋಜನ? ಅದಕ್ಕಾಗಿಯೇ ಇಂಜಿನಿಯರ್ ಕೆಲಸಕ್ಕೆ ಗುಡ್‌ಬೈ ಹೇಳಿ ಬ್ಯುಸಿನೆಸ್‌ಗೆ ಬಂದೆ ಎಂದು ಈ ಯುವಕ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾನೆ. ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದು, ಯುವಕನ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ.


