19 ವರ್ಷದ ಲುಕಾಸ್ ಗೇಬ್ರಿಯಲ್ ಎಂಬ ಯುವಕ ಕಂಪ್ಯೂಟರ್ ಸೌಲಭ್ಯವಿಲ್ಲದೆ ಪೆನ್ನಿನಿಂದ ಬರೆದ ಕೈಬರಹದ ರೆಸ್ಯೂಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಂದಿ ಆಯುವ ಕೆಲಸ ಮಾಡುವ ಈತ, ತನ್ನ ಬಡತನ ಮತ್ತು ಕಷ್ಟಗಳನ್ನು ಪ್ರಾಮಾಣಿಕವಾಗಿ ವಿವರಿಸಿ ಉದ್ಯೋಗಕ್ಕಾಗಿ ಮನವಿ ಮಾಡಿದ್ದಾನೆ. ಈತನ ಸುಂದರ ಕೈಬರಹ ಮತ್ತು ದೃಢಸಂಕಲ್ಪ ನೆಟ್ಟಿಗರ ಗಮನ ಸೆಳೆದಿದೆ.

ದೃಢವಾದ ಸಂಕಲ್ಪವಿದ್ದಾಗ ಮುನ್ನಡೆಯುವ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. 19 ವರ್ಷದ ಲುಕಾಸ್ ಗೇಬ್ರಿಯಲ್ ಡಾ ಸಿಲ್ವಾ ಎಂಬ 19 ವರ್ಷದ ಯುವಕ ಕಥೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಕಂಪ್ಯೂಟರ್ ಅಥವಾ ಪ್ರಿಂಟರ್ ಸೌಲಭ್ಯವಿಲ್ಲದಿದ್ದರೂ, ಲುಕಾಸ್ ಸಾಮಾನ್ಯ ಕಾಗದದ ಹಾಳೆಯ ಮೇಲೆ ನೀಲಿ ಬಣ್ಣದ ಪೆನ್ ಬಳಸಿ ತಮ್ಮ ರೆಸ್ಯೂಮೆಯನ್ನು ಸಿದ್ಧಪಡಿಸಿದ್ದಾನೆ. ಪ್ರಭಾವಶಾಲಿ ಶೈಕ್ಷಣಿಕ ಪದವಿಗಳನ್ನು ಪಟ್ಟಿ ಮಾಡುವ ಬದಲು, ಈತ ತನ್ನ ಜೀವನದ ನೈಜ ಸಂಕಷ್ಟಗಳನ್ನು ಅದರಲ್ಲಿ ವಿವರಿಸಿದ್ದಾನೆ.

ಸಾಮಾನ್ಯವಾಗಿ ಬಯೋಡೇಟಾ, ರೆಸ್ಯೂಮೆಗಳಲ್ಲಿ ತಮ್ಮ ಶೈಕ್ಷಣಿಕ ಸಾಧನೆ, ಅನುಭವ ಸೇರಿದಂತೆ ಹಲವಾರು ವಿಷಯಗಳು ಒಳಗೊಂಡಿರುತ್ತವೆ. ಇದನ್ನು ನೋಡಿಯೇ ಉದ್ಯೋಗಕ್ಕೆ ಆಫರ್‌ ಬರುವುದು ಇದೆ. ಸಂದರ್ಶನಕ್ಕೆ ಕರೆ ಬರಬೇಕು ಎಂದರೆ ರೆಸ್ಯೂಮೆ ಬಹುದೊಡ್ಡ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ, ಬಯೋಡೇಟಾ ಅನ್ನು ಅತ್ಯಂತ ಸುಂದರವಾಗಿ ಬರೆದು, ಅದರ ಪ್ರಿಂಟ್‌ಔಟ್‌ ಕಳಿಸುವುದು ಇದೆ. ಕೆಲವೊಮ್ಮೆ ಅದರಲ್ಲಿ ಒಳಗೊಂಡಿರುವ ಅಂಶಗಳು ಸುಳ್ಳು ಎಂದು ಸಾಬೀತಾಗುವುದೂ ಇದೆ. ಆದರೆ ಒಟ್ಟಿನಲ್ಲಿ ರೆಸ್ಯೂಮೆ ಬಹುದೊಡ್ಡ ಪಾತ್ರ ವಹಿಸುತ್ತದೆ.

ಆದರೆ ಇಲ್ಲೊಂದು ರೆಸ್ಯೂಮೆ ವೈರಲ್‌ ಆಗಿದೆ. ಆದರೆ ಅದರಲ್ಲಿ ದೊಡ್ಡ ದೊಡ್ಡ ಶಿಕ್ಷಣವಿಲ್ಲ, ಬದಲಿಗೆ ಬದುಕಿನ ನೋವಿದೆ. ಕೆಲಸ ಮಾಡುವ ತುಡಿತವಿದೆ. ದಿನನಿತ್ಯ ಅನುಭವಿಸುತ್ತಿರುವ ನೋವಿನ ಗಾಥೆ ಇದೆ. ಆದರೂ ಇದು ಸೋಷಿಯಲ್ ಮೀಡಿಯಾದಲ್ಲಿ ಸಕತ್‌ ವೈರಲ್‌ ಆಗ್ತಿರಲು ಕಾರಣ, ಈ ಯುವಕ ಸುಂದರ ಕೈಬರಹ.

19 ವರ್ಷದ ಲುಕಾಸ್‌ನ ಭಾವುಕ ಕಥೆ

'ಪ್ಲಾನ್‌ಲಿಯಾ' (planlea) ವರದಿಯ ಪ್ರಕಾರ, ಲುಕಾಸ್ ಪ್ರತಿದಿನ ಮುಂಜಾನೆ ಎದ್ದು ಚಿಂದಿ ಆಯುವ ಕೆಲಸ ಮಾಡುತ್ತಾನೆ. ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸುತ್ತಾನೆ. ಈ ಕೆಲಸದಿಂದಲೇ ಆತನ ಕುಟುಂಬದ ಜೀವನ ಸಾಗುತ್ತದೆ. ಯುವಕ, ತನ್ನ ತಾಯಿ ಮತ್ತು ಇಬ್ಬರು ಕಿರಿಯ ಒಡಹುಟ್ಟಿದವರೊಂದಿಗೆ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದಾನೆ. ಲುಕಾಸ್ ಚಿಕ್ಕ ಮಗುವಾಗಿದ್ದಾಗಲೇ ಅವರ ತಂದೆ ಕುಟುಂಬವನ್ನು ತೊರೆದು ಹೋಗಿದ್ದರು.

ಅವಕಾಶಕ್ಕಾಗಿ ಹುಡುಕಾಟ: ಕೈಬರಹದ ರೆಸ್ಯೂಮೆ

ಈ ಕಷ್ಟಗಳ ನಡುವೆ, ಕುಟುಂಬದವರು ಅನೇಕ ರಾತ್ರಿಗಳನ್ನು ಹಸಿವಿನಿಂದಲೇ ಕಳೆದಿದ್ದಾರೆ ಮತ್ತು ದಣಿವು ಹಾಗೂ ಹತಾಶೆಯಿಂದ ಕಣ್ಣೀರು ಹಾಕಿದ್ದಾರೆ. ಜೀವನದಲ್ಲಿ ಸೋಲೊಪ್ಪಿಕೊಂಡು ಎಲ್ಲವನ್ನೂ ಬಿಟ್ಟುಬಿಡುವ ಆಲೋಚನೆ ಹಲವು ಬಾರಿ ಮನಸ್ಸಿಗೆ ಬಂದರೂ, ನಾನು ಎಂದಿಗೂ ಧೃತಿಗೆಡಲಿಲ್ಲ ಎಂದಿರುವ ಲುಕಾಸ್‌, ನನ್ನ ಮುಂದೆ ಒಂದೇ ಗುರಿಯಿದೆ: ಕೆಲಸ ಮಾಡುವುದು, ನನ್ನ ಶಿಕ್ಷಣವನ್ನು ಪೂರ್ಣಗೊಳಿಸುವುದು ಮತ್ತು ತಾಯಿಗೆ ಹೆಮ್ಮೆ ತರುವುದು. ವೈರಲ್ ಆದ ತಮ್ಮ ರೆಸ್ಯೂಮೆನಲ್ಲಿ, ತಾವು ಯಾವುದೇ ವಿಶೇಷ ಉಪಕಾರವನ್ನು ಕೇಳುತ್ತಿಲ್ಲ, ಬದಲಿಗೆ ಕೇವಲ ಒಂದು ಅವಕಾಶವನ್ನು ಮಾತ್ರ ಬಯಸುತ್ತಿದ್ದೇನೆ ಎಂದು ಆತ ಬರೆದಿದ್ದಾನೆ. ಅವರ ಸರಳತೆ ಮತ್ತು ಕಠಿಣ ಪರಿಶ್ರಮದ ದೃಢನಿಶ್ಚಯವು ಅಂತರ್ಜಾಲದ ಗಮನ ಸೆಳೆದಿದೆ; ಸಾವಿರಾರು ಜನರು ಅವರ ಈ ಕೈಬರಹದ ಟಿಪ್ಪಣಿಯನ್ನು ಹಂಚಿಕೊಂಡಿದ್ದು, ಈತನಿಗೆ ಉದ್ಯೋಗ ನೀಡುವಂತೆ ಹಲವರು ವಿವಿಧ ಕಂಪೆನಿಗಳಿಗೆ ಒತ್ತಾಯಿಸುತ್ತಿದ್ದಾರೆ.