ಬಿಹಾರದ ಬೋಧ್‌ಗಯಾದ ಪ್ಲಂಬರ್ ವಿಕಾಸ್ ಕುಮಾರ್ ಅವರ ಜಿಯೋ ಪೇಮೆಂಟ್ ಬ್ಯಾಂಕ್ ಖಾತೆಗೆ ಒಂದೇ ದಿನದಲ್ಲಿ 294.80 ಕೋಟಿ ರೂಪಾಯಿ ಜಮೆಯಾಗಿದೆ. ತಿಂಗಳಿಗೆ 10-12 ಸಾವಿರ ಸಂಪಾದಿಸುವ ವಿಕಾಸ್, ಖಾತೆಯಲ್ಲಿನ ಹಣ ನೋಡಿ ತಬ್ಬಿಬ್ಬಾಗಿದ್ದು, ಈ ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು: ಒಂದು ದಿನ ಬೆಳಗ್ಗೆ ಎಚ್ಚರವಾದಾಗ ಇದ್ದಕ್ಕಿದ್ದಂತೆಯೇ ನಿಮ್ಮ ಮೊಬೈಲ್ ಫೋನ್‌ಗೆ ಕೋಟ್ಯಾಂತರ ರುಪಾಯಿ ಡೆಫಾಸಿಟ್ ಆಗಿರುವ ಮೆಸೇಜ್ ನೋಡಿದರೇ ಹೇಗಾಗಬಹುದು?. ಈ ರೀತಿ ಕನಸಿನಲ್ಲಿ ಅಷ್ಟೇ ಆಗಲು ಸಾಧ್ಯ ಅಂದುಕೊಳ್ಳುತ್ತೀರ. ಆದರೆ ಬಿಹಾರದ ಬೋಧ್‌ಗಯಾದ ಮಸ್ತ್ಪುರ ಗ್ರಾಮದ ನಿವಾಸಿ ವಿಕಾಸ್ ಕುಮಾರ್‌ಗೆ ನಿಜ ಜೀವನದಲ್ಲಿ ಇಂತಹದ್ದೇ ಒಂದು ಅಚ್ಚರಿಯ ಘಟನೆ ಸಂಭವಿಸಿದೆ. ಜೂನ್ 04ರಂದು ಬೆಳಗ್ಗೆ ಎದ್ದಾಗ ವಿಕಾಸ್ ಕುಮಾರ್ ಅವರ ಜಿಯೋ ಪೇಮೆಂಟ್ ಬ್ಯಾಂಕ್ ಖಾತೆಗೆ ಕೋಟ್ಯಾಂತರ ರುಪಾಯಿ ಜಮೆಯಾಗಿರುವ ಮೆಸೇಜ್ ನೋಡಿ ಒಂದು ಕ್ಷಣ ತಬ್ಬಿಬ್ಬಾಗಿ ಹೋಗಿದ್ದಾರೆ.
ವಿಕಾಸ್ ಕುಮಾರ್ ಆದಾಯ 10-12 ಸಾವಿರ ರುಪಾಯಿ ಮಾತ್ರ!
ವೃತ್ತಿಯಲ್ಲಿ ಪ್ಲಂಬರ್ ಆಗಿರುವ ವಿಕಾಸ್ ಕುಮಾರ್, ತನ್ನ ಇಡೀ ವೃತ್ತಿಜೀವನದಲ್ಲಿ ಇಷ್ಟೊಂದು ಹಣವನ್ನು ನೋಡಿಯೂ ಇರಲಿಲ್ಲ. ಅದು ಅವರ ಜೀವನದಲ್ಲೇ ಸಂಪದಿಸುವಷ್ಟು ಹಣವೂ ಆಗಿರಲಿಲ್ಲ. ತಿಂಗಳಿಗೆ 10 ಸಾವಿರ ರುಪಾಯಿಯಿಂದ 12,000 ರುಪಾಯಿ ಗಳಿಸುವ ವಿಕಾಸ್ ಬೆಳಗ್ಗೆ ಎದ್ದು ಮೊಬೈಲ್ ನೋಡಿದಾಗ ಅವರ ಬ್ಯಾಂಕ್ ಅಕೌಂಟ್‌ಗೆ ಬರೋಬ್ಬರಿ 94 ಕೋಟಿ ರುಪಾಯಿ ಜಮೆಯಾಗಿತ್ತು. ಇನ್ನು ಸಂಜೆಯ ವೇಳೆಗೆ ಆ ಮೊತ್ತ ಬರೋಬ್ಬರಿ 294.80 ಕೋಟಿ ರುಪಾಯಿಗೆ ಏರಿಕೆಯಾಯಿತು. ಮೊದಲಿಗೆ ನನ್ನ ಅಕೌಂಟ್‌ನಲ್ಲಿ ಕೇವಲ 1300 ರುಪಾಯಿ ಇತ್ತು. ಅದರಲ್ಲಿ 1200 ರುಪಾಯಿ ಹಣ ಟ್ರಾನ್ಸ್‌ಪರ್ ಮಾಡಿದ್ದರಿಂದ ಅಕೌಂಟ್‌ನಲ್ಲಿ ಕೇವಲ ನೂರು ರುಪಾಯಿ ಮಾತ್ರ ಉಳಿದಿತ್ತು ಎಂದು ವಿಕಾಸ್ ವಿವರಿಸಿದ್ದಾರೆ.
ವಿಕಾಸ್ ಅಕೌಂಟ್‌ಗೆ 294.80 ಕೋಟಿ ರುಪಾಯಿ ಜಮೆಯಾಗಿದ್ದು ಹೇಗೆ?
ವಿಕಾಸ್ ಬೆಳಗ್ಗೆ ಎದ್ದು ಮೊಬೈಲ್ ನೋಡಿದಾಗ ಕೋಟ್ಯಾಂತರ ರುಪಾಯಿ ಹಣ ಜಮೆಯಾಗಿರುವುದು ಕಂಡು ಬಂತು. ತಕ್ಷಣ ತಮ್ಮ ಅಕೌಂಟ್‌ನಲ್ಲಿರುವ ಮೊತ್ತವನ್ನು ಚೆಕ್ ಮಾಡಿದಾಗ ವಿಕಾಸ್‌ಗೆ ಅಚ್ಚರಿ ಕಾದಿತ್ತು. ಯಾಕೆಂದರೆ ವಿಕಾಸ್ ಅಕೌಂಟ್‌ನಲ್ಲಿ ಬೆಳ್ಳಂಬೆಳಗ್ಗೆ 94 ಕೋಟಿ ರುಪಾಯಿ ಜಮೆಯಾಗಿತ್ತು. ಏನೋ ಟೆಕ್ನಿಕಲ್ ಪ್ರಾಬ್ಲಂನಿಂದಾಗಿ ಹೀಗೆ ತೋರಿಸುತ್ತಿರಬೇಕು ಎಂದು ವಿಕಾಸ್ ಇದನ್ನು ನಿರ್ಲಕ್ಷ್ಯ ಮಾಡಿದರು. ಆದರೆ ಇದಾದ ಬಳಿಕೆ ಸೈಬರ್ ಕೆಫೆಗೆ ಹೋಗಿ ಫಿಂಗರ್ ಪ್ರಿಂಟ್ ಬಳಸಿ ಅಕೌಂಟ್ ಲಾಗಿನ್ ಆದಾಗ ವಿಕಾಸ್‌ಗೆ ಮತ್ತಷ್ಟು ಅಚ್ಚರಿ ಕಾದಿತ್ತು. ಯಾಕೆಂದರೆ ಆಗ ವಿಕಾಸ್ ಖಾತೆಯಲ್ಲಿ ಬರೋಬ್ಬರಿ 294.80 ಕೋಟಿ ರುಪಾಯಿ ಜಮೆಯಾಗಿತ್ತು. ಒಂದು ಕಡೆ ಗಾಬರಿ ಮತ್ತೊಂದು ಕಡೆ ಇಷ್ಟೊಂದು ಹಣ ನೋಡಿ ಸಂತೋಷವೂ ಆಯಿತು. ಇನ್ನು ವಿಕಾಸ್ ಖಾತೆಗೆ ಇಷ್ಟೊಂದು ಹಣ ಜಮೆಯಾಗಿರುವುದು ತಿಳಿಯುತ್ತಿದ್ದಂತೆಯೇ ಸ್ಥಳೀಯರು ವಿಕಾಸ್ ಮನೆಯತ್ತ ದೌಡಾಯಿಸಲಾರಂಭಿಸಿದರು. ಈ ವಿಚಾರ ಪೊಲೀಸರ ಗಮನಕ್ಕೂ ಬಂದಿದ್ದು, ಈ ಘಟನೆಯ ಸಂಬಂಧ, ಈ ಹಣ ಯಾರಿಗೆ ಸೇರಿದ್ದು? ಯಾಕೆ ವಿಕಾಸ್ ಖಾತೆಗೆ ಜಮೆಯಾಗಿದೆ ಎನ್ನುವ ಕುರಿತಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.


