Paaru Kannada Serial Actor Shridhar Naik Death: ಪಾರು ಧಾರಾವಾಹಿ ನಟ ಶ್ರೀಧರ್ ಅವರು ಮೇ 26ರಂದು ನಿಧನರಾಗಿದ್ದಾರೆ. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅಂತ್ಯಕ್ರಿಯೆಯನ್ನು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ನೆರವೇರಿಸಲಾಗುವುದು.
ಪಾರು ಧಾರಾವಾಹಿ ನಟ ಶ್ರೀಧರ್ ಅವರು ಮೇ 26ರಂದು ರಾತ್ರಿ 10ಗಂಟೆಗೆ ನಿಧನರಾಗಿದ್ದಾರೆ. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್ ಅವರು ನಿಧನರಾಗಿದ್ದಾರೆ ಎಂದು ನಟಿ ಸಪ್ನಾ ದೀಕ್ಷಿತ್, ನಾಗೇಂದ್ರ ಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶ್ರೀಧರ್ ಅಂತ್ಯಕ್ರಿಯೆ!
ಶ್ರೀಧರ್ ಅವರ ಪಾರ್ಥೀವ ಶರೀರವನ್ನು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಬೆಳಗ್ಗೆ 11ಗಂಟೆವರೆಗೆ ಇಡಲಾಗುವುದು, ಆ ಬಳಿಕ ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸೊರಗಿದ್ದ ನಟ ಶ್ರೀಧರ್ ನಾಯ್ಕ್
ಕನ್ನಡ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ನಟ ಶ್ರೀಧರ್ ನಾಯ್ಕ್ (Sridhar Naik) ಅವರು ತಿಂಗಳ ಹಿಂದೆಯೇ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತುಂಬ ಸುಂದರವಾಗಿ ನಗುತ್ತಿದ್ದ ಶ್ರೀಧರ್ ಅವರು ಸಿಕ್ಕಾಪಟ್ಟೆ ಸಣ್ಣ ಆಗಿದ್ದು, ಮುಖದಲ್ಲಿ ಕಳೆ ಕಳೆದುಕೊಂಡಿದ್ದರು. ಗುರುತೇ ಸಿಗದಷ್ಟು ಅವರು ಬದಲಾಗಿದ್ದರು. ಅವರನ್ನು ನೋಡಿದ ಯಾರಿಗೂ ಇವರು ನಟ ಶ್ರೀಧರ್ ಎಂದು ಅನಿಸುತ್ತಿರಲಿಲ್ಲ, ಧ್ವನಿ ಕೂಡ ಬದಲಾಗಿತ್ತು.
ಪಾರು ಧಾರಾವಾಹಿಯಲ್ಲಿ ನಟನೆ!
ಪಾರು ಧಾರಾವಾಹಿಯಲ್ಲಿ (Paaru serial) ಹೀರೋ ಆದಿತ್ಯ ಚಿಕ್ಕಪ್ಪನ ಪಾತ್ರದಲ್ಲಿ ಅವರು ನಟಿಸಿದ್ದರು. ಹೊಸದಾಗಿ ಆರಂಭವಾದ ವಧು ಧಾರಾವಾಹಿಯಲ್ಲಿ ನಾಯಕಿ ವಧುವಿನ ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ನಾಯ್ಕ್ ಅಭಿನಯಿಸಿದ್ದರು. ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾದಲ್ಲೂ ಶ್ರೀಧರ್ ನಟಿಸಿದ್ದಾರೆ. ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ವಿಟಮಿನ್ ಕೊರತೆ ಆಗಿದೆ ಎಂದು ಹೇಳಲಾಗಿತ್ತಂತೆ.
ಧನಸಹಾಯ ಮಾಡಿದ್ದರು!
ಆ ಬಳಿಕ ಇನ್ನೊಂದು ಆಸ್ಪತ್ರೆಗೆ ದಾಖಲಾಗಿದ್ದರು. ಶ್ರೀಧರ್ ನಾಯ್ಕ್ ಅವರು ತೀವ್ರವಾದ ಇನ್‌ಫೆಕ್ಷನ್‌ಗೆ ಒಳಗಾಗಿದ್ದಾರೆ ಎನ್ನಲಾಗಿತ್ತು. ಇದರಿಂದಾಗಿ ಇವರ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗುತ್ತ ಬಂದಿತ್ತು. ಪ್ರತಿದಿನ ಇವರ ಚಿಕಿತ್ಸೆಗೆ 10 ರಿಂದ 15 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಆದಾಯವೇ ಇಲ್ಲದೇ ಧನ ಸಹಾಯ ಮಾಡಿ ಎಂದು ಶ್ರೀಧರ್ ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು.
ಇತ್ತೀಚೆಗೆ ನಟಿ ಸ್ವಪ್ನಾ ದೀಕ್ಷಿತ್ (Swapna Dixith), ಕಮಲಿ ಸೀರಿಯಲ್ ನಟಿ ಅಂಕಿತಾ, ರಘು ವೈನ್ ಸ್ಟೋರ್ ಮುಂತಾದವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಶ್ರೀಧರ್‌ಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಆನಂತರ ನಟಿ ದೀಪಾ ಅಯ್ಯರ್ , ನಟ ನಾರಾಯಣ ಸ್ವಾಮಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ಬಳಿಕ ಸಾಕಷ್ಟು ಜನರು ಇವರಿಗೆ ಹಣ ಸಹಾಯ ಮಾಡಿದ್ದರು, ಅದನ್ನು ಶ್ರೀಧರ್ ಕೂಡ ಸಂದರ್ಶನವೊಂದರಲ್ಲಿ ಹೇಳಿದ್ದರು.
ಶ್ರೀಧರ್ ನಾಯ್ಕ್ ಕೇವಲ ನಟರಲ್ಲ..!
ಶ್ರೀಧರ್ ನಾಯ್ಕ್ ಅವರು ಮೇಕಪ್ ಆರ್ಟಿಸ್ಟ್ (Makeup Artist) ಕೂಡ ಆಗಿದ್ದರು, ಜೊತೆಗೆ ನಿರೂಪಕರಾಇಯು, ಆಕ್ಟಿಂಗ್ ಟ್ರೈನರ್ ಆಗಿಯೂ, ರಂಗ ಶಿಕ್ಷಕನಾಗಿ ಕೆಲಸ ಮಾಡಿದ್ದಾರೆ. ಡಬ್ಬಿಂಗ್ ಕಲಾವಿದರಿಗೆ ವಾಯ್ಸ್ ಟ್ರೈನರ್ ಆಗಿಯೂ ಅವರು ಕೆಲಸ ಮಾಡುತ್ತಿದ್ದರು. ಶ್ರೀಧರ್ ಅವರು ಹಲವು ಮಕ್ಕಳ ಶಿಬಿರ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.
