ಸೈಕೋ ಜಯಂತ್ ವರ್ತನೆಗೆ ಚಿನ್ನುಮರಿ ಕಣ್ಣೀರು, ನೀನೇ ಮಾಡ್ಕೊಂಡಿದ್ದು, ಅನುಭವಿಸು ಅಂತಿರೋ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಯಂತನ ಪಾತ್ರ ಒಳ್ಳೆಯವನೋ ಕೆಟ್ಟವನೋ ಎಂಬುದು ತಿಳಿಯದೆ ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ. ಜಾಹ್ನವಿಗೆ ಮೊಲವನ್ನು ಉಡುಗೊರೆಯಾಗಿ ನೀಡಿದ ಜಯಂತ, ನಂತರ ಅದನ್ನು ಪೆಟ್ ಕೇರ್‌ಗೆ ಕಳುಪಡಿಸುತ್ತಾನೆ. ಇದರಿಂದ ಜಾಹ್ನವಿ ದುಃಖಿತಳಾಗುತ್ತಾಳೆ.
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸೈಕೋ ಜಯಂತನ ಪಾತ್ರ ಬಂದು ಇಷ್ಟು ಸಮಯ ಆಗಿದ್ರೂ ಈ ಪುಣ್ಯಾತ್ಮ ಒಳ್ಳೆವ್ನಾ ಕೆಟ್ಟವ್ನಾ ಅಂತ ಗೊತ್ತಾಗದೇ ವೀಕ್ಷಕರಿಗೆ ತಲೆಚಿಟ್ಟು ಹಿಡಿಯುತ್ತಿದೆ. ಒಂದು ಕಡೆ ಆತ ಸಿಕ್ಕಾಪಟ್ಟೆ ಒಳ್ಳೆಯವನ ಥರ ಕಾಣಿಸಿಕೊಳ್ತಿದ್ದಾನೆ. ಮರುಕ್ಷಣ ಅದರ ಹಿಂದಿರೋ ಆತನ ವಿಲಕ್ಷಣ ನಗು ವೀಕ್ಷಕರಿಗೆ ಭಯ ಹುಟ್ಟಿಸಿದೆ. ಇನ್ನು ಆತ ಕಟ್ಟಿಕೊಂಡ ಚಿನ್ನುಮರಿ ಅರ್ಥಾತ್ ಜಾಹ್ನವಿ ಒಂಟಿತನದಿಂದ ಒದ್ದಾಡೋ ಹಾಗಾಗ್ತಿದೆ. ಈ ಜಯಂತ್‌ಗೆ ಅವಳ ಬಗ್ಗೆ ಅತಿಯಾದ ಪೊಸೆಸ್ಸಿವ್ ನೆಸ್. ಯಾವ ಲೆವೆಲ್‌ಗೆ ಅಂದರೆ ಆತನಿಗೆ ಅವಳ ಯೋಚನೆಯನ್ನೂ ಬೇರೆಯವರು ಬರಬಾರದು, ಅವಳು ಸದಾ ತನ್ನೊಬ್ಬನ ಬಗ್ಗೆ ಮಾತ್ರ ಯೋಚಿಸಬೇಕು ಅಂದುಕೊಳ್ತಾನೆ. ತನ್ನ ಬಗ್ಗೆ ಅವಳ ಗಮನ ಕೊಂಚ ತಪ್ಪಿದರೂ ಆತನಿಗೆ ಅದನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲ.
ಇಷ್ಟಾದರೂ ಜಾಹ್ನವಿ ಮನೆಯಲ್ಲಿ ಒಂಟಿ ಆಗಿರ್ತಾಳೆ ಅಂತ ಜಯಂತ ಅವಳಿಗೆ ಮೊಲವನ್ನು ಗಿಫ್ಟ್ ಆಗಿ ಕೊಡ್ತಾನೆ. ಆದರೆ ಅವಳು ಅವನ ಅಸ್ತಿತ್ವವನ್ನೂ ಮರೆತು ಮೂರ್ಹೊತ್ತೂ ಮೊಲದ ಮುಂದೆ ಕೂತಿರೋದನ್ನು ಅವನಿಗೆ ಸಹಿಸೋದಕ್ಕೆ ಆಗಲ್ಲ. ಮೊಲ ಬಂದಾಗಿನಿಂದ ಜಾಹ್ನವಿ ಅದರ ಜೊತೆ ಹೆಚ್ಚು ಸಮಯ ಕಳೆಯುವುದನ್ನು ನೋಡಿ ಜಯಂತನಿಗೆ ಮತ್ತೆ ಸೈಕೋತನ ಜಾಗೃತಗೊಳ್ಳುತ್ತದೆ. ಆತ ಅದನ್ನು ಪೆಟ್ ಕೇರ್‌ಗೆ ಬಿಟ್ಟು ಬರುತ್ತಾನೆ. ಆ ವಿಚಾರ ತಿಳಿಯದೆ ಜಾಹ್ನವಿ ಮೊಲವನ್ನು ಎಲ್ಲಾ ಕಡೆ ಹುಡುಕುತ್ತಾಳೆ.
ಜಾಹ್ನವಿ ಮೊಲ ಹುಡುಕುವಾಗ ಕುಕ್ಕರ್ ಸೀಟಿ ಕೂಗುತ್ತದೆ. ಅವಳು ಮೊಲ ಎಲ್ಲಿ ಅಂತ ಜಯಂತನ ಕಡೆ ನೋಡೋದು, ಆತ ಕುಕ್ಕರ್‌ನತ್ತ ನೋಡೋದು, ಕುಕ್ಕರ್ ಸೀಟಿ ಕೂಗೋದು ಏಕಕಾಲಕ್ಕೆ ಆಗಿಬಿಡುತ್ತೆ. ಈ ಹಿಂದೆಯೇ ಮೊಲ ಕುಕ್ಕರ್ ಸೇರುತ್ತೆ ಅನ್ನೋದನ್ನು ಗೆಸ್ ಮಾಡಿದ್ದ ವೀಕ್ಷಕರು ತಮ್ಮ ಗೆಸ್ ನಿಜಕ್ಕೂ ಸ್ಕ್ರೀನ್ ಮೇಲೆ ಬಂದಾಗ ಹೌಹಾರುತ್ತಾರೆ. ಆದರೆ ಇಲ್ಲೂ ವೀಕ್ಷಕರ ಮೂಗಿನ ತುದಿಗೆ ತುಪ್ಪ ಸವರೋ ಸೀರಿಯಲ್ ಟೀಮ್ 'ಎಲ್ಲ ಭ್ರಮೆ' ಅನ್ನೋ ಥರ ವೀಕ್ಷಕರನ್ನು ಫೂಲ್ ಮಾಡಿ ಅದನ್ನು ಜಯಂತ್ ಕುಕ್ಕರ್‌ನೊಳಗೆ ಹಾಕಿಲ್ಲ ಅಂತ ತೋರಿಸ್ತಾರೆ. ಇದೊಂಥರ ಮಕ್ಕಳಿಗೆ ಹೊಡೆತದ ಭಯ ಹುಟ್ಟಿಸಬೇಕು, ಆದರೆ ಹೊಡೀಬಾರದು ಅನ್ನೋ ಥರ. ಇಲ್ಲಿ ಜಯಂತ್ ಪಾತ್ರದ ಬಗ್ಗೆ ಭಯ ಹುಟ್ಟಿಸಬೇಕು, ಆದರೆ ಆತ ವೀಕ್ಷಕರು ಅಂದುಕೊಳ್ಳೋ ಹಾಗೆ ಏನನ್ನೂ ಮಾಡಬಾರದು ಅನ್ನೋ ಕ್ಯಾಲ್ಕುಲೇಶನ್.
ಕಥೆ ವಿಚಾರಕ್ಕೆ ಬಂದರೆ ಜಾಹ್ನವಿ ಭಯದಿಂದ ಅಡುಗೆ ಮನೆಗೆ ಹೋಗಿ ಕುಕ್ಕರ್ ಮುಚ್ಚಳ ತೆಗೆಯುತ್ತಾಳೆ. ಅದರಲ್ಲಿ ಅನ್ನ ಇದ್ದಿದ್ದನ್ನು ನೋಡಿ ನಿಟ್ಟುಸಿರು ಬಿಡುತ್ತಾಳೆ. ನೀವು ಮೊಲದ ಬಗ್ಗೆ ಹೆದರುವ ಅಗತ್ಯವಿಲ್ಲ. ಅದು ಎಲ್ಲಿರಬೇಕೋ ಅಲ್ಲಿದೆ ಎನ್ನುತ್ತಾನೆ ಜಯಂತ. ಅದರರ್ಥ ಏನು ಎನ್ನುತ್ತಾಳೆ. ನಮ್ಮಿಬ್ಬರ ನಡುವೆ ಯಾರು ಬಂದರೂ ಇಷ್ಟವಾಗುವುದಿಲ್ಲ ಎಂದು ನನಗೆ ಗೊತ್ತು. ಅದಕ್ಕಾಗಿ ನಾನು ಅದನ್ನು ಪೆಟ್ ಕೇರ್‌ಗೆ ಬಿಟ್ಟು ಬಂದಿದ್ದೇನೆ ಎನ್ನುತ್ತಾನೆ. ನನಗೆ ಬಹಳ ಕಷ್ಟವಾಗುತ್ತಿದೆ. ಮೊಲ ಬಂದಾಗಿನಿಂದ ನೀವು ನನ್ನ ಕಡೆ ಗಮನ ಕೊಡುತ್ತಿಲ್ಲ ನನಗೆ ಬಹಳ ಹಿಂಸೆ ಆಗುತ್ತಿದೆ ಎಂದು ಜಯಂತ್ ಹೇಳಿದಾಗ ಜಾಹ್ನವಿ ಹಾಗೆಲ್ಲಾ ಆಗುವುದಿಲ್ಲ, ದಯವಿಟ್ಟು ಮೊಲವನ್ನು ವಾಪಸ್ ತಂದುಕೊಡಿ ಎಂದು ಕೇಳುತ್ತಾಳೆ. ಅದರು ಎಂದಿಗೂ ಸಾಧ್ಯವಿಲ್ಲ ಎಂದು ಜಯಂತ್ ಹೇಳುತ್ತಾನೆ. ರಾತ್ರಿ ನಿದ್ರೆ ಬಾರದೆ ಜಾಹ್ನವಿ ಮೊಲದ ಬಗ್ಗೆ, ಗಂಡನ ಬಗ್ಗೆ ಯೋಚಿಸುತ್ತಾಳೆ. ಒಂಟಿಯಾಗಿದ್ದ ನನ್ನ ಬದುಕಲ್ಲಿ ಆ ಮೊಲ ಬಂತು ಅದರ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದೆ, ಈಗ ಅದೂ ದೂರವಾಯ್ತು ಎಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ.
ಡೇಟಿಂಗ್ ಅಂದ್ರೇನು? ಪತ್ನಿ ಮುಂದೆ ಅನುಶ್ರೀಗೆ ಅಜಯ್ ರಾವ್ ಹೇಳಿದ್ರು ಈ ಮಾತು
ಈಗ ಈ ಸೀರಿಯಲ್ ವೀಕ್ಷಕರು ಚಿನ್ನುಮರಿಗೆ ಥರಾವರಿ ಸಲಹೆ ಕೊಡ್ತಿದ್ದಾರೆ. ಕೆಲವರು, 'ಅವಳು ತನ್ನನ್ನು ಹುಚ್ಚರ ಥರ ಪ್ರೀತ್ಸೋರು ಬೇಕು ಅಂತಿದ್ಲು ಅಂಥೋರೆ ಸಿಕ್ಕಿದ್ದಾರೆ, ಎನ್‌ಜಾಯ್ ಚಿನ್ನುಮರಿ' ಎನ್ನುತ್ತಿದ್ದಾರೆ. ಇನ್ನೂ ಕೆಲವರು 'ವಿಶ್ವನನ್ನ ಮದುವೆ ಆಗಿದ್ರೆ ಈ ಕಷ್ಟ ಇರ್ತಿತ್ತಾ' ಅಂತ ಕೇಳಿದ್ದಾರೆ. ಕೆಲವರು, 'ನಿಂಗಿದು ಪಾಠ. ಈಗಲಾದ್ರೂ ಅರ್ಥ ಆಯ್ತಾ' ಅಂತ ಕೇಳ್ತಿದ್ದಾರೆ.