ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಕಡಿಮೆ ರಕ್ತದೊತ್ತಡದಿಂದಾಗಿ ನಿಧನರಾಗಿದ್ದಾರೆ. ತಂದೆಯನ್ನು ಕಳೆದುಕೊಂಡು, ತಂಗಿ ರಕ್ಷಿತಾಳ ಮದುವೆಯ ನಂತರ ತಮ್ಮ ವಿವಾಹದ ಯೋಜನೆಯಲ್ಲಿದ್ದರು. ದಿವ್ಯಾ, ಲೋಕೇಶ್, ಯೋಗರಾಜ್ ಭಟ್ ಸೇರಿದಂತೆ ಸೆಲೆಬ್ರಿಟಿಗಳು ರಾಕೇಶ್‌ರ ಪ್ರತಿಭೆ, ಮುಗ್ಧತೆ ಹಾಗೂ ನಿಷ್ಕಲ್ಮಶ ಹೃದಯವನ್ನು ಸ್ಮರಿಸಿದ್ದಾರೆ. ಅವರ ಆಕಸ್ಮಿಕ ನಿಧನ ಕನ್ನಡ ಮನರಂಜನಾ ಲೋಕಕ್ಕೆ ಬಹುದೊಡ್ಡ ನಷ್ಟ.

ಇಂದು ಬೆಳ್ಳಂಬೆಳಗ್ಗೆ ಕರುನಾಡಿಗೆ ಒಂದು ಶೋಕದ ವಿಚಾರ ಬರಸಿಡಿಲಿನ ಥರ ಎರಗಿತ್ತು. ʼಕಾಮಿಡಿ ಕಿಲಾಡಿಗಳು ಶೋʼ ಖ್ಯಾತಿಯ ರಾಕೇಶ್‌ ಪೂಜಾರಿ ಅವರು ಲೋ ಬಿಪಿ ಆಗಿ ನಿಧನರಾಗಿದ್ದಾರೆ. ಎರಡು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ರಾಕೇಶ್‌ ಅವರು ತಂಗಿ ರಕ್ಷಿತಾಳ ಮದುವೆ ಮಾಡಿ, ತಾವು ಕೂಡ ಮದುವೆ ಆಗಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಬಗ್ಗೆ ಕೆಲ ಸೆಲೆಬ್ರಿಟಿಗಳು ಮಾಧ್ಯಮದ ಜೊತೆ ಮಾತನಾಡಿದ್ದಾರೆ.


ಕಾಮಿಡಿ ಕಿಲಾಡಿಗಳು ದಿವ್ಯಾ ಹೇಳಿದ್ದೇನು?
“ನನ್ನ ಮಗು ಪ್ರಗ್ನೆನ್ಸಿ ಟೈಮ್ ಅಲ್ಲಿ ನನ್ನ ಜೊತೆ ಫೋನ್ ಕಾಂಟ್ಯಾಕ್ಟ್ ಅಲ್ಲಿದ್ದನು. ಚೆನ್ನಾಗಿ ತಿನ್ನಬೇಕು ಆಯ್ತಾ? ಜ್ಯೂನಿಯರ್ ಜಿಜಿ ಬೇಕು ಆಯ್ತಾ? ಹಾಗೆ ಹೀಗೆ ಅಂತೆಲ್ಲ ಹೇಳ್ತಿದ್ದ. ಮಗು ಆದಮೇಲೆ ನನ್ನ ಮಗು ಜೊತೆಗೆ ನೋಡೋಕೆ ಬಂದಿದ್ದನು. ಅನೀಶ್ ಅವರ ʼದಸ್ಕತ್ʼ ಅಂತ ಸಿನಿಮಾ ಬಂದಾಗ ಪ್ರೀಮಿಯರ್ ಶೋಗೆ ಹೋಗಿದ್ವಿ. ನನ್ನ ಮಗುವನ್ನು ಅವನ ತೊಡೆ ಮೇಲೆ ಕೂರಿಸ್ಕೊಂಡು ಇಡೀ ಸಿನಿಮಾ ನೋಡಿದ್ದಾನೆ. ಮಗು ಹತ್ರ ಮಾತಾಡಿಕೊಂಡು ಗೇಲಿ ಮಾಡ್ಕೊಂಡಿದ್ದ” ಎಂದು ದಿವ್ಯಾ ಹೇಳಿದ್ದಾರೆ. 

ನನಗೆ ತುಳು ಬರುತ್ತದೆ, ನಿನ್ನ ಗಂಡನಿಗೆ ಬೈಯ್ಯೋಕೆ ಆಗಲ್ಲ ಅಂತ ನೀನು ನಿನ್ನ ಗಂಡನಿಗೆ ತುಳು ಕಲಿಸಲಿಲ್ಲ ಅಲ್ವಾ ಅಂತ ಅವನು ರೇಗಿಸ್ತಾ ಇದ್ದ. ಕಾಂತಾರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ನಮಗೆ ಸಿನಿಮಾ ಸಿಕ್ರೂ ಕೂಡ ಫೋನ್‌ ಮಾಡಿ ವಿಶ್‌ ಮಾಡ್ತಿದ್ದನು. ಅವರ ತಾಯಿ ಈ ನೋವನ್ನು ಹೇಗೆ ಸಹಿಸಿಕೊಳ್ತಾರೋ ಗೊತ್ತಿಲ್ಲ. ಅವರು ಮಗನ ಬಗ್ಗೆ ತುಂಬಾ ಕನಸು ಕಟ್ಟಿದ್ರು. ತಂಗಿ ಕೂಡ ರಕ್ಷಿತಾ ಅಂತ. ತುಂಬ ಒಳ್ಳೆಯ ಹುಡುಗಿ ಅದು. ತಂಗಿ ಮದುವೆ ಆಗಲಿ, ಆಮೇಲೆ ನಾನು ಮದುವೆ ಆಗ್ತೀನಿ ಅಂತ ಹೇಳಿದ್ದನು” ಎಂದು ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ದಿವ್ಯಾ ಅವರು ಹೇಳಿದ್ದಾರೆ.

ಕಾಮಿಡಿ ಕಿಲಾಡಿ ಲೋಕೇಶ್!‌ 
“ನಾವು ಅವನಿಗೆ ಯಾವಾಗಲೂ ಹೆಬ್ಬಾವು ಅಂತ ಕರೆಯುತ್ತಿದ್ದೆವು, ಕುಡುಕನ ಪಾತ್ರ ಮಾಡಿದಾಗೆಲ್ಲ ಏನೋ ರಾಕೇಶ್‌, ಸಕ್ಕತ್ತಾಗಿ ಮಾಡ್ತೀಯಲ್ಲೋ ಅಂತ ಹೊಗಳುತ್ತಿದ್ದೆವು. ಎಂದಿಗೂ ಅವನು ಕಷ್ಟ ಹೇಳಿಕೊಂಡಿರಲಿಲ್ಲ. ಈಗ ಅವನ ಮನೆ ಹೇಗೆ ನಡೆಯತ್ತೋ ಏನೋ! ಈ ಖುಷಿಯನ್ನು ದೇವರು ಕಿತ್ಕೊಂಡ. ರಕ್ಷಿತಾ ಪ್ರೇಮ್‌ ಅವರಿಗೆ ರಾಕೇಶ್‌ ಅಂದ್ರೆ ತುಂಬ ಇಷ್ಟ. ಜಡ್ಜ್‌ಗಳೆಲ್ಲರೂ ಅವನ ಮುಗ್ಧತೆಗೆ ಮನಸೋತಿದ್ದರು” ಎಂದು ಲೋಕೇಶ್‌ ಹೇಳಿದ್ದಾರೆ.

ಯೋಗರಾಜ್‌ ಭಟ್‌ ಹೇಳಿದ್ದೇನು?
“ನನಗೆ ಅತಿಯಾದ ಮುದ್ದು ರಾಕೇಶ್. ಅವನಿಗೆ ಯಾವುದೇ ಹಿನ್ನೆಲೆ ಇಲ್ಲ. ಪ್ರತಿಭೆಯಿಂದಲೇ ಒಬ್ಬ ವ್ಯಕ್ತಿ ಬಂದು ಸ್ವಂತದ ಬದುಕು ಕಟ್ಟಿ, ಎತ್ತರಕ್ಕೆ ಬೆಳೆದಿದ್ದ. ಅವನು ತುಂಬಾ ಜನರಿಗೆ ಪರಿಚಿತ. ಕರ್ನಾಟಕದಲ್ಲಿ ಒಬ್ಬನ ಧನಿ ಒಬ್ಬನ ಮುಖನ ಕಂಡು ಹಿಡಿಬೇಕು ಅಂದ್ರೆ ಸಾಕಷ್ಟು ಸಾಧನೆ ಮಾಡಬೇಕು. ಕೇವಲ ಪ್ರತಿಭೆ ಇಟ್ಟುಕೊಂಡು ಇಷ್ಟು ದೂರ ನಡೆದಂತಹ ಅಪರೂಪದ ಮುದ್ದಿನ ಕಲಾವಿದ ಅವನು. ನನಗಾಗಲಿ, ಜಗ್ಗೇಶ್, ರಕ್ಷಿತಾ ಅವರಿಗಾಗಲೀ ರಾಕೇಶ್ ವಿಪರೀತ ಇಷ್ಟ” ಎಂದು ಯೋಗರಾಜ್‌ ಭಟ್‌ ಹೇಳಿದ್ದಾರೆ.

ಅವನು ವೇದಿಕೆಗೆ ಬಂದರೆ ಆವರಿಸಿಕೊಂಡು ಬಿಡೋನು. ಬದುಕು ಗೊತ್ತಿದ್ರೆ ಮಾತ್ರ ಅಕ್ಕಪಕ್ಕದ ಕಲಾವಿದರ ಜೊತೆಗೆ ಆ ಕಥೆಯನ್ನು ಅರ್ಥ ಮಾಡಿಕೊಂಡು, ಆ ರೀತಿ ಪಾತ್ರವನ್ನು ಮಾಡೋಕೆ ಸಾಧ್ಯ ಆಗತ್ತೆ. ತುಂಬಾ ನೋವು ಗೊತ್ತಿದ್ರೆ ಮಾತ್ರ ನಗಿಸೋದಕ್ಕೆ ಸಾಧ್ಯ ಅದು. ಇಷ್ಟೊಳ್ಳೆಯ ಹೃದಯ ಒಂದು ದಿನ ರಾತ್ರಿ ನಿಲ್ಲತ್ತೆ ಅಂದರೆ ಬೇಸರ ಆಗುತ್ತದೆ.