ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ಮತ್ತು ಭೂಮಿಕಾ ಎಂಗೇಜ್‌ಮೆಂಟ್‌ ಸೆಲೆಬ್ರೇಶನ್ ಶುರುವಾಗಿದೆ. ಆದರೆ ಭೂಮಿಕಾ ಎಂಗೇಜ್‌ಮೆಂಟಿಗೂ ಚೂಡಿದಾರ್‌ನಲ್ಲೇ ಬಂದಿದ್ದಕ್ಕೆ ವೀಕ್ಷಕರು ತಗಾದೆ ತೆಗೆದಿದ್ದಾರೆ.

ಅಮೃತಧಾರೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್. ರಾಜೇಶ್‌ ನಟರಂಗ, ಛಾಯಾಸಿಂಗ್ ಮುಖ್ಯ ಭೂಮಿಕೆಯಲ್ಲಿರೋ ಈ ಸೀರಿಯಲ್ ವೀಕ್ಷಕರ ಲೆಕ್ಕಾಚಾರಗಳನ್ನೆಲ್ಲ ತಲೆ ಕೆಳಗು ಮಾಡುತ್ತಲೇ ಇದೆ. ಶುರುವಲ್ಲಿ ಹಾವು ಮುಂಗುಸಿ ಥರ ಕಚ್ಚಾಡ್ತಿದ್ದ ಭೂಮಿಕಾ ಮತ್ತು ಗೌತಮ್ ಇದೀಗ ಎಂಗೇಜ್‌ಮೆಂಟ್‌ ಮಾಡ್ಕೊಳ್ಳೋ ಲೆವೆಲ್‌ವರೆಗೂ ಬಂದಿದ್ದಾರೆ. ಸಾಮಾನ್ಯವಾಗಿ ಶುರುವಿಗೆ ಹುಡುಗ ಹುಡುಗಿ ಬದ್ಧದ್ವೇಷಿಗಳ ಹಾಗಿರೋದು, ಕ್ರಮೇಣ ಅವರ ನಡುವೆ ಪ್ರೀತಿ ಹುಟ್ಟೋದು, ಅದಕ್ಕೊಂದಿಷ್ಟು ಅಡೆತಡೆ, ಹೀರೋ ಹೀರೋಯಿನ್ ನಡುವೆ ಸರಸ ವಿರಸ, ಒಮ್ಮೊಮ್ಮೆ ಬ್ರೇಕ್‌ಅಪ್‌, ಒಂದಿಷ್ಟು ಸಮಯದ ನಂತರ ಮತ್ತೆ ಒಂದಾಗೋ ಆಟ, ಹೀಗೆ ದ್ವೇಷದಿಂದ ಶುರುವಾದ ಹುಡುಗ ಹುಡುಗಿ ಜರ್ನಿ ಎಂಗೇಜ್‌ಮೆಂಟ್‌ವರೆಗೂ ಬರುವಾಗ ವರ್ಷವೋ ಎರಡು ವರ್ಷವೋ ಕಳೆದಿರುತ್ತೆ.

ಆದರೆ ಶುರುವಾಗಿ ಇನ್ನೂ ತಿಂಗಳಾಗಿಲ್ಲ, ಆಗಲೇ ಅಮೃತಧಾರೆ ಸೀರಿಯಲ್ ಕಥೆ ಎಂಗೇಜ್‌ಮೆಂಟ್‌ ಲೆವೆಲ್‌ಗೆ ಬಂದಾಯ್ತು. ಈ ಸೀರಿಯಲ್ ಶುರುವಾಗೋ ಮೊದಲು ಪ್ರೊಮೊ ಬಿಟ್ಟಾಗ ವೀಕ್ಷಕರು ಬೈದಿದ್ದೂ ಬೈದಿದ್ದೇ. ಮಧ್ಯ ವಯಸ್ಸಿನ ಆಂಟಿ ಅಂಕಲ್ ಕಥೆ ಬಿಟ್ರೆ ಬೇರೇನೂ ಸಿಗಲ್ವಾ ನಿಮ್ಗೆ ಅಂತಲ್ಲ ಚಾನೆಲ್‌ನವರಿಗೆ ಕ್ಲಾಸ್ ತಗೊಂಡಿದ್ದು ನೋಡಿದ್ರೆ ಈ ಸೀರಿಯಲ್ ಕಥೆ ಗೋವಿಂದ ಅನ್ನೋ ಫೀಲ್ ಹೊರಗಿನವರಿಗೆ ಬರ್ತಿತ್ತು. ಆ ಕಾರಣಕ್ಕೋ ಏನೋ, ಸತ್ಯಾದಂಥ ಸೀರಿಯಲ್ ಮೊದಲೆರಡು ವಾರಗಳಲ್ಲಿ ಟಿಆರ್‌ಪಿ ಹೊಡ್ಕೊಂಡಂಗೆ ಈ ಸೀರಿಯಲ್ ಟಿಆರ್‌ಪಿ ಇರಲಿಲ್ಲ. ಈ ಸೀರಿಯಲ್ ಓಪನಿಂಗ್‌ಅನ್ನು ಭರ್ಜರಿಯಾಗಿ ಜೀ ಕನ್ನಡ ನಡೆಸಿತ್ತು. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಈ ಸೀರಿಯಲ್ ಕ್ಲಿಪ್ಪಿಂಗೇ ಕಾಣುತ್ತಿತ್ತು. ಆದರೆ ಇದ್ಯಾವ ಟ್ರಿಕ್ಸೂ ವರ್ಕೌಟ್ ಆಗಿಲ್ಲ. ಈ ಸೀರಿಯಲ್ ಮೇಲೇಳುತ್ತೋ ಇಲ್ವೋ ಅನ್ನೋ ಕನ್‌ಫ್ಯೂಶನ್‌ನಲ್ಲಿ ಜನ ಇದ್ದಾಗಲೇ ಇದೀಗ ಈ ಸೀರಿಯಲ್ ಟಿಆರ್‌ಪಿ ಯದ್ವಾತದ್ವಾ ಏರಿದೆ. ಬಾಯಿಗೆ ಬಂದಂಗೆ ಬೈದಿದ್ದವರೆಲ್ಲ ಗಪ್‌ಚುಪ್ ಆಗಿ ಸೀರಿಯಲ್ ನೋಡ್ತಿದ್ದಾರೆ. ಆ ಕಾರಣಕ್ಕೆ ಈ ವಾರ ಟಿಆರ್‌ಪಿ ಹೆಚ್ಚಾಗಿದೆ. ಸಡನ್ನಾಗಿ ಮೂರನೇ ಸ್ಥಾನದಲ್ಲಿ ಈ ಸೀರಿಯಲ್ ನಿಂತಿದೆ.

ಭಾಗ್ಯ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಸರ್ಪ್ರೈಸ್ ಗೆಸ್ಟ್… ಯಾರಿರಬಹುದು?

ಹೆಚ್ಚು ಎಳೆತ ಇಲ್ಲದ ಈ ಸೀರಿಯಲ್ ಬಗ್ಗೆ ಜನ ಒಳ್ಳೆಯ ಮಾತುಗಳನ್ನು ಹೇಳ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸರಿ ಕಾಣದ ಅಂಶಗಳ ಬಗ್ಗೆ ವೀಕ್ಷಕರು ನೇರವಾಗಿ ಹೇಳ್ತಾರೆ. ಸದ್ಯಕ್ಕೀಗ ಅವರ ಕಣ್ಣಿಗೆ ಕುಕ್ಕುತ್ತಿರೋದು ಭೂಮಿಕಾ ಡ್ರೆಸ್. ಹೌದು ಈಗ ಸೀರಿಯಲ್‌ನಲ್ಲಿ ಸರಳವಾಗಿ ಗೌತಮ್ ಮತ್ತು ಭೂಮಿಕಾ ಎಂಗೇಜ್‌ಮೆಂಟ್ ನಡೀತಿದೆ. ಎಲ್ಲ ಟ್ರೆಡಿಶನಲ್ ಡ್ರೆಸ್‌ನಲ್ಲಿದ್ದರೆ ಭಾವೀ ಮದುಮಗಳು ಮಾತ್ರ ಚೂಡಿದಾರ್‌ನಲ್ಲಿ ಬಂದಿದ್ದಾಳೆ. ಆ ಡ್ರೆಸ್ ಅವಳಿಗೇನೋ ಚೆಂದವೇ ಕಾಣ್ತಿದೆ. ಆದರೆ ಎಂಗೇಜ್‌ಮೆಂಟ್‌ನಂಥಾ ಸಂದರ್ಭಗಳಲ್ಲಿ ನಾಯಕಿಗೆ ಸೀರೆ ಉಡಿಸಬೇಕಿತ್ತು ಅನ್ನೋದು ವೀಕ್ಷಕರ ಅಭಿಪ್ರಾಯ. ಈ ಸೀರಿಯಲ್‌ನ ಎಂಗೇಜ್‌ಮೆಂಟ್ ಪ್ರೋಮೋಕ್ಕೆ ಅನೇಕ ಜನ ಮೆಚ್ಚುಗೆ ಸೂಚಿಸಿದ್ದಾರೆ. ಒಂದಿಷ್ಟು ಮಂದಿ ಇದನ್ನು ಮೆಚ್ಚಿಕೊಂಡೇ ಭೂಮಿಕಾಗೆ ಸೀರೆ ಉಡಿಸಿ ಅಂತಿದ್ದಾರೆ. ಅಷ್ಟಕ್ಕೂ ಎಂಗೇಜ್‌ಮೆಂಟ್‌ ಎಪಿಸೋಡ್ ಇವತ್ತು ಪ್ರಸಾರವಾಗಬೇಕು. ಈ ವಾರ ಇಡೀ ಬಹುಶಃ ಎಂಗೇಜ್‌ಮೆಂಟ್ ಎಪಿಸೋಡ್ ಇರಬಹುದೇನೋ.

ಇದಕ್ಕೂ ಮುನ್ನ ಗೌತಮ್ ಹಾಗೂ ಭೂಮಿಕಾ ಮನೆಯವರು ಇವರಿಬ್ಬರಿಗೂ ಎಂಗೇಜ್‌ಮೆಂಟ್ ಮಾಡಲು ನಿರ್ಧರಿಸಿದ್ದರು. ಆದರೆ ಬದ್ಧ ಶತ್ರುಗಳಂತಿದ್ದ ಈ ಇಬ್ಬರೂ ಎಂಗೇಜ್‌ಮೆಂಟ್‌ ವಿಚಾರವನ್ನು ಸಾರಾ ಸಗಟಾಗಿ ತಿರಸ್ಕರಿಸಿದರು. ಈ ನಡುವೆ ಮನೆಯರ ಫೋರ್ಸ್‌ಗೆ ಗೌತಮ್, ಭೂಮಿ ಜೊತೆಗೆ ಕೂತಿದ್ದಾಗ ಭೂಮಿಕಾ ರಿಂಗ್ ಕೆಳಗೆ ಬೀಳುತ್ತೆ. ಅದನ್ನು ಗೌತಮ್ ಹೆಕ್ಕಿ ಅವಳ ಕೈಗೆ ನೀಡುವಷ್ಟರಲ್ಲಿ ಮೀಡಿಯಾದವರೆಲ್ಲ ಅವರಿಬ್ಬರ ಫೋಟೋ ಕ್ಲಿಕ್ಕಿಸುತ್ತಾರೆ. ಮರುದಿನ ನ್ಯೂಸಲ್ಲಿ ಇದನ್ನೆಲ್ಲ ನೋಡೋ ಮನೆಯವರ ಸಂತೋಷ ಹೇಳತೀರದು. ಮನೆಯವರ ಸಂತೋಷ ಕಂಡು ಅದನ್ನು ನಿರಾಸೆಯಾಗಿ ಮಾರ್ಪಡಿಸಲು ಇಚ್ಛಿಸದ ಗೌತಮ್ ಮತ್ತು ಭೂಮಿಕಾ ಮದುವೆ ಆಗಲು ನಿರ್ಧರಿಸುತ್ತಾರೆ. ಈ ನಡುವೆ ಮೊದಲ ಹಂತವಾಗಿ ಎಂಗೇಜ್‌ಮೆಂಟ್ ನಡಿಯುತ್ತೆ. ಅಲ್ಲಿಗೆ ಭೂಮಿಕಾ ಸೀರೆ ಉಟ್ಟುಕೊಳ್ಳದೇ ಬಂದಿರೋದು ವೀಕ್ಷಕರಿಗೆ ಸಮಾಧಾನ ನೀಡಿಲ್ಲ.

ಮದುವೆ ಇಲ್ದೆ ಹೆಣ್ಣಿಗೆ ಅಸ್ತಿತ್ವ ಇಲ್ವಾ? ಹೆಣ್ಮಕ್ಕಳ ಮೂಕ ವೇದನೆಗೆ ದನಿಯಾದ 'ಅಮೃತಧಾರೆ'ಯ ಭೂಮಿಕಾ!