ಡಾ ಬ್ರೋ ಅವರು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳದೆ ನಾಲ್ಕು ತಿಂಗಳು ಕಳೆದಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್ 12ರಲ್ಲಿ ಅವರು ಭಾಗವಹಿಸುವ ಸಾಧ್ಯತೆ ಇದೆ ಎಂಬ ವದಂತಿಗಳಿವೆ. ಕಿಚ್ಚ ಸುದೀಪ್ ಮುಂದಿನ ನಾಲ್ಕು ಸೀಸನ್‌ಗಳಿಗೆ ನಿರೂಪಣೆ ಮಾಡಲಿದ್ದಾರೆ.

ಕಳೆದ ನಾಲ್ಕು ತಿಂಗಳುಗಳಿಂದ ಒಂದೂ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡದ ಡಾ ಬ್ರೋ ( Dr Bro ) ಅವರು ಈಗ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು-ಮೂರು ಸೀಸನ್‌ಗಳಿಂದಲೂ ಡಾ ಬ್ರೋ ಅವರು ಬಿಗ್‌ ಬಾಸ್‌ ಶೋಗೆ ( Bigg Boss Kannada Season 12 ) ಹೋಗ್ತಾರೆ ಎಂಬ ಮಾತು ಕೇಳಿ ಬರುತ್ತಲೇ ಇದೆ.

ಯಾವಾಗ ಬಿಗ್‌ ಬಾಸ್‌ ಶುರು?

ಹೌದು, ಸೆಪ್ಟೆಂಬರ್‌ ಅಂತ್ಯದಲ್ಲಿ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ ಶೋ ಶುರುವಾಗಲಿದೆ. ಈ ಶೋನಲ್ಲಿ ಡಾ ಬ್ರೋ ಅವರು ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಕಳೆದ ಸೀಸನ್‌ಗಳಿಗೆ ಆಹ್ವಾನ ಕೊಟ್ಟಿದ್ದರೂ ಕೂಡ ಡಾ ಬ್ರೋ ಮಾತ್ರ ಬಂದಿರಲಿಲ್ಲ. ಆದರೆ ಈ ಬಾರಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಾಕೆ ವಿಡಿಯೋ ಅಪ್‌ಲೋಡ್‌ ಮಾಡ್ತಿಲ್ಲ?

ಟ್ರಾವೆಲ್‌ ಏಜೆನ್ಸಿ ನಡೆಸುತ್ತಿರುವ ಡಾ ಬ್ರೋ ಅವರು ಯಾವ ಕಾರಣಕ್ಕೆ ದೇಶ ಸುತ್ತುತ್ತಿಲ್ಲ? ವಿಡಿಯೋ ಮಾಡುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೂ ಕೂಡ ಕಳೆದ ನಾಲ್ಕು ತಿಂಗಳುಗಳಿಂದ ಅವರು ಯುಟ್ಯೂಬ್‌ನಲ್ಲಿ ಯಾವುದೇ ವಿಡಿಯೋ ಅಪ್‌ಲೋಡ್‌ ಮಾಡದೆ ಇರೋದು ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.

Dr Bro ಯಾರು?

ಗಗನ್‌ ಶ್ರೀನಿವಾಸ್‌ ಅವರು ಡಾ ಬ್ರೋ ಎಂದು ಹೆಸರು ಇಟ್ಟುಕೊಂಡಿದ್ದಾರೆ. ಗಗನ್‌ ಅವರು ವಿದೇಶಗಳಿಗೆ ಹೋಗಿ, ಅಲ್ಲಿನ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ವಿಡಿಯೋ ಮಾಡುತ್ತಾರೆ. ಕನ್ನಡ ಜನರಿಗೆ ಹೊರದೇಶದ ಸ್ಥಳ, ಜೀವನಶೈಲಿ ಬಗ್ಗೆ ಮಾಹಿತಿ ಕೊಡುವ ಅವರ ಚಾನೆಲ್‌ಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಪೌರೋಹಿತ್ಯ ವೃತ್ತಿ ಮಾಡ್ತಿದ್ದ ಡಾ ಬ್ರೋ ಅವರು ಕನ್ನಡದ ಟಾಪ್‌ ಯುಟ್ಯೂಬರ್‌ ಎನ್ನಬಹುದು.

ಶೋ ಬಗ್ಗೆ ಆಸಕ್ತಿ ಹೆಚ್ಚಾಗೋದು ಗ್ಯಾರಂಟಿ!

ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಈ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಒಂದು ವೇಳೆ ಬಿಗ್‌ ಬಾಸ್‌ ಶೋಗೆ ಹೋದರೆ ಯಾವ ರೀತಿ ಇರುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಈಗಾಗಲೇ ಕೆಲ ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದ್ದು, ಯಾರು ಯಾರು ದೊಡ್ಮನೆಗೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ಕಿಚ್ಚ ಸುದೀಪ್‌ ನಿರೂಪಣೆ!

ಅಂದಹಾಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಪ್ರಸಾರ ಆಗುತ್ತಿದ್ದ ವೇಳೆಯೇ ಕಿಚ್ಚ ಸುದೀಪ್‌ ಅವರು ಮುಂದಿನ ಸೀಸನ್‌ ನಿರೂಪಣೆ ಮಾಡೋದಿಲ್ಲ ಎಂದು ಹೇಳಿದ್ದರು. ಆ ನಂತರ ಒಂದಿಷ್ಟು ಮನವೊಲಿಸಿದ ಬಳಿಕ ಮುಂದಿನ ನಾಲ್ಕು ಸೀಸನ್‌ಗಳಿಗೆ ನಿರೂಪಣೆ ಮಾಡೋದಿಕ್ಕೆ ಒಪ್ಪಿ ಸಹಿ ಹಾಕಿದ್ದಾರಂತೆ. ಈ ಶೋನಲ್ಲಿ ಕನ್ನಡಕ್ಕೆ ಆದ್ಯತೆ ಕೊಡಬೇಕು ಎನ್ನೋದು ಸುದೀಪ್‌ ಮನವಿ ಆಗಿತ್ತು. ಸ್ಪರ್ಧಿಗಳ ಆಯ್ಕೆ ವಿಷಯದಲ್ಲಿ ತಲೆ ಹಾಕೋದಿಲ್ಲ, ವಿವಿಧ ವ್ಯಕ್ತಿತ್ವಗಳು ನಮಗೆ ಸ್ಪರ್ಧಿಗಳಾಗಿ ಬರಬೇಕು ಎಂದು ಕಿಚ್ಚ ಸುದೀಪ್‌ ಅವರು ಹೇಳಿದ್ದಾರೆ.

ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ನಿರೂಪಣೆ ಮಾಡಲು ಒಪ್ಪಿದ್ದಕ್ಕೆ ಈ ಬಾರಿ ಸೀಸನ್‌ ಮನೆ ಹೇಗಿರುತ್ತದೆ? ಆಟ ಹೇಗಿರುತ್ತದೆ? ಸ್ಪರ್ಧಿಗಳು ಹೇಗಿರ್ತಾರೆ ಎಂಬ ಕುತೂಹಲ ಶುರುವಾಗಿದೆ.