ಯುವ ರಾಜ್ಯ ಸಭಾ ಸಂಸದನ ಕೈ ಹಿಡಿಯುತ್ತಿರುವ ಮಾಡೆಲ್ ಕೈನಾತ್ ಧರ್ ಯಾರು ಅನ್ನೋ ಹುಡುಕಾಟ ಶುರುವಾಗಿದೆ. ಜುಲೈ 29ಕ್ಕೆ ಎಂಗೇಜ್‌ಮೆಂಟ್ ನಡೆಯಲಿದೆ. ಇದರ ನಡುವೆ ಗೂಗಲ್‌ನಲ್ಲೂ ಸರ್ಚ್ ತೀವ್ರಗೊಳ್ಳುತ್ತಿದೆ.
ಮುಂಬೈ (ಜು.13) ಧುರಂಧರ್ ಸಿನಿಮಾ ಬಳಿಕ ನಿರ್ದೇಶದ ಆದಿತ್ಯ ಧರ್ ಭಾರತ ಮಾತ್ರವಲ್ಲ ಪಾಕಿಸ್ತಾನ ಸೇರಿದಂತೆ ವಿದೇಶಗಳಲ್ಲೂ ಭಾರಿ ಜನಪ್ರಿಯರಾಗಿದ್ದಾರೆ. ಇದೀಗ ಮಾಡೆಲ್ ಕೈನಾತ್ ಧರ್ ಹೆಸರು ಭಾರಿ ಸದ್ದು ಮಾಡುತ್ತಿದೆ. ದಿಢೀರ್ ಕೈನಾತ್ ಧರ್ ಹೆಸರು ಮುಂಚೂಣಿಗೆ ಬರಲು ಕಾರಣ ಎಂಗೇಜ್ಮೆಂಟ್. ರಾಜ್ಯಸಭಾ ಸಂಸದ, ಮಹಾರಾಷ್ಟ್ರದ ದಿವಗಂತ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪುತ್ರ ಪಾರ್ಥ ಪವಾರ್ ಹಾಗೂ ಕೈನಾತ್ ಧರ್ ನಿಶ್ಚಿತಾರ್ಥ ಇದೇ ಜುಲೈ 29ಕ್ಕೆ ನಡೆಯಲಿದೆ. ಇದರ ಬೆನ್ನಲ್ಲೇ ಕೈನಾತ್ ಧರ್ ಯಾರು ಎಂದು ಗೂಗಲ್‌ನಲ್ಲಿ ಭಾರಿ ಹುಡುಕಾಟ ನಡೆಯುತಿದೆ.
ಪಾರ್ಥ ಪವಾರ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಹುಡುಗಿ ಕೈನಾತ್ ಧರ್, ಖ್ಯಾತ ಮಾಡೆಲ್ ಹಾಗೂ ಯಶಸ್ವಿ ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕೈನಾತ್ ಧರ್ ಯಾರು ಎಂದು ಹಲವರು ಗೂಗಲ್ ಮೂಲಕ ಸರ್ಚ್ ಮಾಡುತ್ತಿದ್ದಾರೆ. ಇವರ ಹೆಸರಿನಲ್ಲಿ ಧರ್ ಸರ್ನೇಮ್ ಇರುವ ಕಾರಣ ಹುಡುಕಾಟ ತೀವ್ರಗೊಂಡಿದೆ.
ಯಾರು ಈ ಮಾಡೆಲ್ ಕೈನಾತ್
ಕೈನಾತ್ ಧರ್ ಮಾಡೆಲ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾರ್ಪೋರೇಟ್ ಉದ್ಯಮ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಾರೆ. ಮಾಡೆಲಿಂಗ್‌ನಲ್ಲಿ ಯಶಸ್ವಿಯಾಗಿರುವ ಕೈನಾತ್ ಧರ್, ಫ್ಯಾಶನ್ ಶೋ, ಬ್ರ್ಯಾಂಡ್ ಪ್ರಮೋಶನ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೈನಾತ್ ಧರ್ ಫ್ಯಾಶನ್ ಮೂಲಕ, ಉದ್ಯಮ ಸಾಮ್ರಾಜ್ಯ ಮೂಲಕ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ.
ಕೈನಾತ್ ಧರ್ ಹಲವು ಉದ್ಯಮ ನಡೆಸುತ್ತಿದ್ದಾರೆ. ಮಹತ್ತರ ಜವಾಬ್ದಾರಿ ಹೊತ್ತಿರುವ ಕೈನಾತ್ ಧರ್, ಪ್ರವಾಸೋದ್ಯಮ, ಹಾಸ್ಪಿಟಾಲಿಟಿ, ಫ್ಯಾಶನ್ ಕ್ಷೇತ್ರಗಳ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಾಲಂಬಿ ಮಹಿಳೆಯರ ಪಟ್ಟಿಯಲ್ಲೂ ಕೈನಾತ್ ಧರ್ ಸ್ಥಾನ ಪಡೆದಿದ್ದಾರೆ.
ವಿಮಾನ ದುರಂತದಲ್ಲಿ ಮೃತಪಟ್ಟ ಮಹಾರಾಷ್ಟ್ರದ ಪ್ರಭಾವಿ ನಾಯಕ ಅಜಿತ್ ಪವಾರ್ ಹಿರಿಯ ಪುತ್ರನಾಗಿರುವ ಪಾರ್ಥ ಪವಾರ್ ಇದೀಗ ನಿಶ್ಚಿತಾರ್ಥ ತಯಾರಿಯಲ್ಲಿದ್ದಾರೆ. ರಾಜ್ಯಸಭಾ ಸಂಸದರಾಗಿರುವ ಪಾರ್ಥ ಪವಾರ್ ದೆಹಲಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಾರ್ಥ ಪವಾರ್ ಸೋಲು ಕಂಡಿದ್ದರು. ಆದರೆ ಅಜಿತ್ ಪವಾರ್ ಎನ್‌ಸಿಪಿ ಬಣದ ಪಕ್ಷ ಸಂಘಟನೆ ಹಾಗೂ ರಾಜಕೀಯ ನಡೆಗಳ ಮೂಲಕ ಗುರುತಿಸಿಕೊಂಡಿದ್ದಾರೆ.
ಸದ್ಯ ಮಾಧ್ಯಮಗಳ ವರದಿ ಪ್ರಕಾರ, ಇವರಿಬ್ಬರ ವಿವಾಹ ಪ್ರಸ್ತಾಪಕ್ಕೆ ಎರಡೂ ಕುಟುಂಬಗಳು ಹಸಿರು ನಿಶಾನೆ ತೋರಿದ್ದು, ಜುಲೈ 29ಕ್ಕೆ ಅತ್ಯಂತ ಅದ್ಧೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ.


