GowriShankara : ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ 'ಗೌರಿಶಂಕರ' ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಕೌಸ್ತುಭ ಮಣಿ, ದಿವ್ಯಾ ವಾಗುಕರ್ ಹಾಗೂ ರಮೋಲ ಹೀಗೆ ನಾಯಕಿಯರ ಬದಲಾವಣೆಯೇ ಸೀರಿಯಲ್ ಅಂತ್ಯಕ್ಕೆ ಕಾರಣವಾಯ್ತೆ? ಜನಪ್ರಿಯ ಧಾರಾವಾಹಿ ಯಾಕೆ ಮುಕ್ತಾಯ ಆಗುತ್ತಿದೆ ಇಲ್ಲಿದೆ ಮಾಹಿತಿ.
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಂತ್ಯ
ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ 'ಗೌರಿಶಂಕರ' ಶೀಘ್ರದಲ್ಲೇ ತನ್ನ ಪ್ರಯಾಣಕ್ಕೆ ಮುಕ್ತಾಯ ಹಾಡಲು ಸಜ್ಜಾಗಿದೆ. ಸುಮಾರು 950ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿ ವೀಕ್ಷಕರ ಮನ ಗೆದ್ದಿದ್ದ ಈ ಸೀರಿಯಲ್, ಮುಕ್ತಾಯದ ಹಂತ ತಲುಪಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ನಿರಂತರವಾಗಿ ನಾಯಕಿಯರ ಬದಲಾವಣೆಯಿಂದಾಗಿ ಟಿಆರ್ ಪಿ ಕುಸಿತ ಕಂಡಿದ್ದೇ ಧಾರಾವಾಹಿ ಅಂತ್ಯಕ್ಕೆ ಕಾರಣವಾಯ್ತೆ? ಹಾಗಾಗಿ ಧಾರಾವಾಹಿ ಮುಕ್ತಾಯಗೊಳಿಸುತ್ತಿದ್ದಾರೆಯೇ? ಎನ್ನುವ ಪ್ರಶ್ನೆ ವೀಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ.
ಧಾರಾವಾಹಿ ಮುಕ್ತಾಯ ಆಗಲು ನಾಯಕಿಯ ಬದಲಾವಣೆಯೇ ಕಾರಣವಾಯ್ತ?
‘ಗೌರಿಶಂಕರ’ ಧಾರಾವಾಹಿಯಲ್ಲಿ ‘ಗೌರಿ ಮತ್ತು ಶಂಕರ’ ಪಾತ್ರಗಳನ್ನು ಅವರ ಜಗಳವನ್ನು ಜನರು ಇಷ್ಟಪಟ್ಟಿದ್ದರು. ಕಳೆದ ನಾಲ್ಕು ವರ್ಷಗಳಿಂದ ಜನಮನ ಗೆದ್ದು ಪ್ರಸಾರವಾಗುತ್ತಿದ್ದ ಧಾರಾವಾಹಿಯ ಅಂತ್ಯಕ್ಕೆ ನಾಯಕಿಯ ಬದಲಾವಣೆಯೇ ಕಾರಣ ಎನ್ನಲಾಗುತ್ತಿದೆ. 'ಗೌರಿ' ಪಾತ್ರದಲ್ಲಿ ಆರಂಭದಲ್ಲಿ ನಟಿ ಕೌಸ್ತುಭ ಮಣಿ ನಟಿಸಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರಣ ಅವರು, ಧಾರಾವಾಹಿಯಿಂದ ಹೊರಬಂದ್ದಿದ್ದರು, ಬಳಿಕ ನಟಿ ದಿವ್ಯಾ ವಾಗುಕರ್ ನಟಿಸಿದ್ದರು, ಇವರು ಸುಮಾರು ಮೂರು ವರ್ಷಗಳ ಕಾಲ ಗೌರಿ ಪಾತ್ರಕ್ಕೆ ಜೀವತುಂಬಿ ನಟಿಸಿದ್ದರು. ದಿವ್ಯಾ ಮತ್ತು ಯಶವಂತ್ ಜೋಡಿಯನ್ನು ಜನ ಇಷ್ಟಪಟ್ಟಿದ್ದರು. ಆದರೆ ಇತ್ತೀಚೆಗೆ ಆರೋಗ್ಯದ ಸಮಸ್ಯೆಯಿಂದಾಗಿ ದಿವ್ಯಾ ಕೂಡ ಧಾರಾವಾಹಿಯಿಂದ ಹೊರನಡೆದರು. ನಂತರ 'ಕನ್ನಡತಿ' ಖ್ಯಾತಿಯ ರಮೋಲ ಹೊಸ ಗೌರಿಯಾಗಿ ಎಂಟ್ರಿ ಕೊಟ್ಟಿದ್ದರು. ಹೀಗೆ ಪದೇ ಪದೇ ನಾಯಕಿ ಬದಲಾಗಿದ್ದು ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿತ್ತು. ಮುಖ್ಯ ಪಾತ್ರಧಾರಿಗಳ ಬದಲಾವಣೆಯಿಂದಾಗಿ ಕಥೆಯ ಓಟ ಹಾಗೂ ಪಾತ್ರದ ಭಾವನಾತ್ಮಕ ಬೆಸುಗೆಗೆ ಧಕ್ಕೆಯುಂಟಾಯಿತು ಎಂದು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದರು. ಇದೀಗ ಧಾರಾವಾಹಿಯನ್ನು ಇದ್ದಕ್ಕಿದ್ದಂತೆ ಅಂತ್ಯಗೊಳಿಸುತ್ತಿದ್ದು, ‘ಗೌರಿಶಂಕರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಜೊತೆಗೆ ಯಶವಂತ್ ಮತ್ತು ದಿವ್ಯಾ ಜೊತೆಯಾಗಿ ಹೊಸ ಸೀರಿಯಲ್ ನಲ್ಲಿ ನಟಿಸಬೇಕು ಎಂದು ಜನ ಹಾರೈಸುತ್ತಿದ್ದಾರೆ.
ಗೌರಿಶಂಕರ ಧಾರಾವಾಹಿಯ ಹಿಂದಿನ ನಿರ್ದೇಶಕರಿಂದ ಭಾವುಕ ಪೋಸ್ಟ್
ಈ ಹಿಂದೆ ‘ಗೌರಿಶಂಕರ’ ಧಾರಾವಾಹಿ ನಿರ್ದೇಶನ ಮಾಡಿದ ಗಿರೀಶ(ವಿಷ್ಣು) ಅರೆಕಟ್ಟೆದೊಡ್ಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ ಗೌರಿ ಶಂಕರ ನನ್ನ ಬದುಕಿನ ಹೊಸ ಅಧ್ಯಾಯ ಸೃಷ್ಟಿಸಿದ ಧಾರಾವಾಹಿ. ಒಬ್ಬ ಪರಿಪೂರ್ಣ ನಿರ್ದೇಶಕನಾಗಿ ಮಾಡಿದ ಧಾರಾವಾಹಿ. ಇದರಿಂದ ನಾನು ಕಲಿತದ್ದು ಸಾಕಷ್ಟಿದೆ. ಯಾರೋ ಹುಡುಗನಂತೆ ಏನು ಮಾಡುತ್ತಾನೆ? ನೋಡೋಣ ಅಂದೋರು ಶಬ್ಬಾಸ್ ಗಿರಿ ಕೊಟ್ಟಿದ್ದು ಇದೆ. ಒಂದಷ್ಟು ಜನ ನನ್ನ ಪ್ರತಿಭೆಗೆ ಕನ್ನಡಿ ಆದ್ರೆ ಒಂದಷ್ಟು ಜನ ಕನ್ನಡಿ ಹೇಗೇ ಹೊಡಿಯೋದು ಅಂತ ಸಂಚು ರೂಪಿಸಿದ್ರು .18 ಸಂಚಿಕೆ ಇಂದ 518 ಸಂಚಿಕೆ ಪ್ರಯಾಣದಲ್ಲಿ ನನಗೆ ಸಿಕ್ಕ ಅದ್ಭುತ ವ್ಯಕ್ತಿಗಳು ನನ್ನ ತಾಂತ್ರಿಕ ವರ್ಗದವರು. ಪ್ರಸನ್ನ ಸರ್ ಮತ್ತು ಸಿಸಿಎಸ್ (CCS) ಹುಡುಗರು, ಎಸ್ ಎಂ ಕೆ ಜಿ ಕ್ಯಾಮೆರಾ ಹುಡುಗರು,Editor ಕಿರಣ್ ಸರ್, ಗೌತಮ್ ನನ್ನ ಬೆನ್ನಿಗೇ ನಿಂತ ಶಕ್ತಿಗಳ. ಇನ್ನೂ ಕಲಾವಿದರು ಗೌರಿ, ಶಂಕರ, ಶಿವರುದ್ರಪ್ಪ, ಪಾರ್ವತಿ , ನಂಜಮ್ಮ, ರುದ್ರ, ಸುನಂದಾ, ಕೋಲಿ, ಚಿರುಮುರಿ, ಪಂಕಜ, ಆದಿ, ಐಶು, ಶ್ರೀನಿವಾಸ ಮೇಷ್ಟ್ರು, ಗ್ರೀಷ್ಮಾ, ಮೀರಾ, ವಿದ್ಯಾಮ್ಮ, ಮನೋಜ್ ಎಲ್ಲರೂ ಪಾತ್ರಕ್ಕೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜೀವ ತುಂಬಿದರು. ಇದಕ್ಕೆಲ್ಲಾ ಕಾರಣ ಎಸ್ಟ್ರೆಲ್ಲಾ production house, ಸ್ಟಾರ್ ಸುವರ್ಣ. ನಾನು ಅವರಿಗೆ ಸದಾ ಚಿರಋಣಿ. ಪ್ರತಿ ಅಂತ್ಯದ ಹಿಂದೆ ಹೊಸದೊಂದು ಆರಂಭ ಇದೆ. ಎಲ್ಲರಿಗೂ ಒಳ್ಳೆಯದಾಗಲಿ. ಚಿತ್ರಕರಣದ ಪ್ರತಿ ಹಂತವನ್ನು ಒಮ್ಮೆ ಮರುಕಳಿಸಿದರೆ ಕಣ್ಣೀರ ಹನಿಗಳು ನಿಲ್ಲಲು ಹಠ ಮಾಡುತ್ತವೆ . ಗೌರಿ ಶಂಕರ. ಶ್ರೀನಾಥ್ ಸರ್, ಪದ್ದಮ್ಮ ಭುವಿ I LOVE YOU. ಎಂದು ಬರೆದುಕೊಂಡಿದ್ದಾರೆ.


