‘ಅರ್ಧರಾತ್ರಿಯ ಕುಟುಕು ನಿದ್ದೆ, ಅರೆ ಎಚ್ಚರದ ಧಾವಂತದಲ್ಲಿ ಏರ್‌ಫೋರ್ಟ್‌ಗೆ ಹೋದ್ರೆ ಮತ್ತೆ ಫ್ಲೈಟ್‌ನಲ್ಲಿ ಸಣ್ಣ ಮಂಪರು. ಎಲ್ಲೋ ಊಟ, ಹೆಕ್ಟಿಕ್‌ ಅನಿಸುವ ದುಡಿಮೆ, ಮನೆ, ಮಗಳು ಎಲ್ಲ ಕನಸಿನಲ್ಲಿ ಕಂಡ ಹಾಗೆ. ಉಫ್‌ ಎಂಥಾ ದಿನಗಳವು!’

- ನಿಟ್ಟುಸಿರಿನೊಂದಿಗೆ ಸಣ್ಣಗೆ ನಗುತ್ತಾರೆ ವಿಜಯಪ್ರಕಾಶ್‌. ಆಗಷ್ಟೇ ನಿದ್ದೆಯಿಂದೆದ್ದ ಕಾರಣಕ್ಕೋ ಏನೋ ತುಸು ಭಾರದ ಧ್ವನಿ. ಸಣ್ಣ ಆಕಳಿಕೆ ತೆಗೆದು ಅವರು ಮಾತು ಮುಂದುವರಿಸುತ್ತಾರೆ.

ಮಾಧುರ್ಯ, ಭಾವುಕತೆ, ಜೋಶ್‌, ತೀವ್ರತೆಗಳ ಎರಕದಂತಿರುವ ವಿಜಯಪ್ರಕಾಶ್‌ ಅಂದರೆ ನಮಗೆಲ್ಲ ‘ಗೊಂಬೆ ಹೇಳುತೈತೆ .. ನೀನೇ ರಾಜಕುಮಾರ’ ದಿಂದ ‘ಜೀವ್ನ ಟಾನಿಕ್‌ ಬಾಟ್ಲು ಕುಡಿಯೋ ಮುಂಚೆ ಅಲ್ಲಾಡ್ಸು’ ತನಕದ ಹಾಡುಗಳು. ಅದರಾಚಿನ ಅವರ ಬದುಕಿನ ರಭಸದ ಅರಿವು ನಮಗಿಲ್ಲ.

ಈ ಗಾಯಕ ಅಂದಿಗೂ ಹಿಟ್ ಇಂದಿಗೂ ಹಿಟ್ ಅಂತಿದಾರೆ ಭಟ್ರು ! ಯಾರಪ್ಪಾ ಅವ್ರು ?

ಆದರೆ ಇಂಜಿನಿಯರಿಂಗ್‌ ಓದುತ್ತಿರುವಾಗಲೇ ಸಂಗೀತದ ಒಲವು ಹೆಚ್ಚಿ ಮನೆಬಿಟ್ಟು ಮುಂಬೈಗೆ ಹೋದದ್ದು, ಅಲ್ಲಿಯ ಕಷ್ಟದ ಬದುಕು, ಜಾಹೀರಾತಿಗೆ ವಾಯ್‌್ಸ ನೀಡಿದ್ದು, ಸೀರಿಯಲ್‌ಗಳಿಗೆ ಹಾಡಿದ್ದು.. ಆ ದಿನಗಳಿಂದ ಇಂದಿನ ಸೂಪರ್‌ಹಿಟ್‌ ಗಾಯಕನಾಗುವವರೆಗಿನ ಅವರ ಜರ್ನಿ ಬಿಡುವಿಲ್ಲದ್ದು. ಈಗ ಸಿಕ್ಕಿರುವ ಬ್ರೇಕ್‌ನಿಂದ ವಿಜಯ್‌ ಅವರಿಗೆ ಫ್ಯಾಮಿಲಿ ಲೈಫ್‌ನ ಖುಷಿ ಸಿಕ್ಕಿದೆ. ಸಣ್ಣ ಸಣ್ಣ ಖುಷಿಗಳನ್ನು ಎನ್‌ಜಾಯ್‌ ಮಾಡುವ ಮೂಲಕ ಬದುಕಿನ ಇತರೆ ಬಣ್ಣಗಳನ್ನೂ ಕಾಣುವಂತಾಗಿದೆ. ಪತ್ನಿ ಮಹತಿ, ಅಮ್ಮ ಲೋಪಮುದ್ರಾ, ಮಗಳು ಕಾವ್ಯಾ ಜೊತೆಗಿನ ಆಪ್ತ ಗಳಿಗೆಗಳನ್ನು ಅವರು ಮನಃಪೂರ್ವಕವಾಗಿ ಸವಿಯುತ್ತಿದ್ದಾರೆ.

ಈ ಬಿಡುವು ದೇವರ ದಯೆ

ಅವರವರ ನೆಲೆಯಲ್ಲಿ ಕಷ್ಟಎಲ್ಲರಿಗೂ ಇದೆ. ಭವಿಷ್ಯದ ಚಿಂತೆಯೂ ಹೆಚ್ಚಾಗಿದೆ. ಆದರೆ ನಾಳೆ ಹೇಗಿರುತ್ತೋ ಯಾರಿಗೆ ಗೊತ್ತು. ಇಂಥದ್ದೊಂದು ದಿನ ಬರಬಹುದು ಅಂತ ಎರಡು ತಿಂಗಳ ಹಿಂದೆ ನಾವು ಯೋಚನೆನಾದ್ರೂ ಮಾಡಿದ್ವಾ, ಓಟ ಓಟ ಓಟ. ಯಾವುದೋ ಪ್ರವಾಹದ ಸೆಳವಿಗೆ ಸಿಕ್ಕಂತೆ, ಏನೋ ಭಯಂಕರವಾದದ್ದು ಸಾಧಿಸ್ತೀವಿ ಅಂತ ಓಟ. ಇದಕ್ಕೆ ಹಿಂದು ಮುಂದಿಲ್ಲ. ಕೊನೆ ಮೊದಲಿಲ್ಲ.. ಆ ರಭಸಕ್ಕೆ ಒಮ್ಮೆಲೇ ಬ್ರೇಕ್‌ ಬಿದ್ದ ಹಾಗಾಗಿದೆ.

ಆ ಗಾಯಕನಿಗಾಗಿ ಮಿಡಿದ ಈ ಗಾಯಕನ ಹೃದಯ; ಕೇಳಲೇ ಬೇಕು 'ಮೇಲೊಬ್ಬ ಮಾಯಾವಿ'!

ನಮ್ಮನ್ನು ನಾವು ಮುಟ್ಟಿನೋಡ್ಕೊಳ್ತಿದ್ದೀವಿ. ಅರೆ, ನಾವ್ಯಾಕೆ ಈ ಪರಿ ಓಡ್ತಾ ಇದ್ದೀವಿ, ಈ ಓಟದಲ್ಲೇ ಎಲ್ಲಿಯವರೆಗೆ ಬಂದು ಬಿಟ್ಟಿದ್ದೀವಿ ಅಂತ. ಕೊರೋನಾ ಅನ್ನುವ ಕಣ್ಣಿಗೆ ಕಾಣದ ವೈರಾಣು ಸೃಷ್ಟಿಸಿ ನಮ್ಮನ್ನು ನಾವು ನೋಡ್ಕೊಳ್ಳೋ ಹಾಗೆ ಭಗವಂತ ಮಾಡಿದ್ದಾನೆ. ದೇವರ ದಯೆಯಿಂದ ಯಾವುದೋ ಸೂತ್ರದ ಹಿಂದೆ ದಿಕ್ಕೆಟ್ಟು ಓಡುತ್ತಿದ್ದ ನಮ್ಮನ್ನು ಹಿಡಿದು ನಿಲ್ಲಿಸಿದ್ದು ದೇವರ ದಯೆ ಎನ್ನುತ್ತಾರೆ ವಿಜಯಪ್ರಕಾಶ್‌.

ಕೆಲವೊಮ್ಮೆ ಬರೀ ಮೂರು ಗಂಟೆ ಮಲಗ್ತಿದ್ದೆ!

ಮಧ್ಯರಾತ್ರಿ ತನಕ ರೆಕಾರ್ಡಿಂಗ್‌. ಅದು ಮುಗಿಸಿ ಬಂದು ಮಲಗಿ ಇನ್ನೇನು ಕಣ್ಣಿಗೆ ನಿದ್ದೆ ಹತ್ತಿತು ಅಂತನ್ನುವಾಗ ಅಲಾರಾಂ ಹೊಡ್ಕೊಳ್ಳುತ್ತೆ. ಮುಚ್ಚಿ ಬರುವ ಕಣ್ಣುಗಳನ್ನು ಬಲವಂತದಲ್ಲಿ ಬಿಡಿಸಿ ರೆಡಿಯಾಗಿ ಏರ್‌ಪೋರ್ಟ್‌ಗೆ ಧಾವಿಸೋದು. ಫ್ಲೈಟ್‌ನಲ್ಲಿ ಸಣ್ಣ ಮಂಪರು. ಎಚ್ಚರಾದಾಗ ಮತ್ತೆಲ್ಲೋ. ಅಲ್ಲೇ ಊಟ, ಬಿರುಸಿನ ಕೆಲಸ.. ಲೈಫು ಹೀಗೆ ಓಡ್ತಿತ್ತು. ದೇವ್ರೇ, ಆರು ಗಂಟೆ ನಿದ್ದೆಯಾದ್ರೂ ಸಿಗಲಪ್ಪ ಅಂದುಕೊಳ್ತಿದ್ದೆ. ನೋಡಿ ಈಗ, ಆರಲ್ಲ, ಎಂಟಲ್ಲ, ಹತ್ತು ಗಂಟೆ ಬೇಕಾದ್ರೂ ನಿದ್ದೆ ಮಾಡಬಹುದು. ಎಚ್ಚರಾದಾಗ ದಣಿವೆಲ್ಲಾ ಮಂಗಮಾಯ’ ಅನ್ನುತ್ತಾ ಸಣ್ಣದಾಗಿ ಆಕಳಿಸುತ್ತಾರೆ. ಅದೊಂಥರ ನಿದ್ದೆ ಒಳಗಿಂದಲೇ ಖುಷಿ ಖುಷಿಯಾಗಿ ಹಾಯ್‌ ಅಂತ ಹೇಳಿದಂತಿರುತ್ತದೆ.

ಹೆಂಡತಿಯ ಅಡುಗೆ ರುಚಿ ಅದ್ಭುತ

ನನ್ನ ಹೆಂಡ್ತಿ ಅದ್ಭುತವಾಗಿ ಅಡುಗೆ ಮಾಡ್ತಾಳೆ. ದಿನಕ್ಕೊಂದು ವೆರೈಟಿ ಇರುತ್ತೆ. ನಮ್ಮೆಲ್ಲರ ಟೇಸ್ಟ್‌ ಅವಳಿಗೆ ಗೊತ್ತು. ಇಷ್ಟುದಿನ ಅವುಗಳನ್ನು ಮಿಸ್‌ ಮಾಡಿಕೊಳ್ತಿದ್ದೆ. ಈಗ ಮನಸಾರೆ ಸವಿಯುತ್ತಿದ್ದೀನಿ. ಹೆಂಡತಿ ನಮಗಿಂತ ಬೇಗ ಎದ್ದು ಅಡುಗೆ ಮಾಡಿಡ್ತಾಳೆ. ಮಗಳು, ನಾನು ಒಂಭತ್ತು ಗಂಟೆಗೆ ಎದ್ದು ಕಿಚನ್‌ಗೆ ಹೋಗ್ತೀವಿ. ಏನೋ ಹರಟುತ್ತಾ ಬ್ರೇಕ್‌ಫಾಸ್ಟ್‌ ಮುಗಿಸ್ತೀವಿ’ ಅಂತಾರೆ ವಿಜಯ್‌ ಪ್ರಕಾಶ್‌.

ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಗಾಯಕ ವಿಜಯ್‌ ಪ್ರಕಾಶ್‌!

ತುಂಬ ಎಚ್ಚರಿಕೆಯಿಂದ ಕಸ ಗುಡಿಸ್ತೀನಿ

ಬಹಳ ಸಿಂಪಲ್‌ ದಿನಚರಿ ಈಗ. ತಿಂಡಿ ಮುಗಿಸಿ ಮಗಳ ಜೊತೆಗೆ ಸ್ವಲ್ಪ ಹೊತ್ತು ಕಳೆದ ಮೇಲೆ ನಾವಿಬ್ರೂ ಮನೆ ಕೆಲಸಕ್ಕೆ ಹೊರಡ್ತೀವಿ. ನನ್ನ ಹೆಂಡತಿ ತುಂಬ ಕ್ಲೀನ್‌. ಅವಳಿಗೆ ಗಲೀಜು ಇರಬಾರದು. ಹಾಗಾಗಿ ಅವಳ ಕೈಲಿ ಬೈಸಿಕೊಳ್ಳಬಾರದು ಅಂತ ಬಹಳ ಎಚ್ಚರದಿಂದ ಕಸ ಗುಡಿಸ್ತೀನಿ, ಮನೆ ಕ್ಲೀನ್‌ ಮಾಡ್ತೀನಿ. ಅವಳಿಂದಾಗಿ ಅಸಡ ಬಸಡಾ ನಾಮ್‌ಕೆ ವಾಸ್ತೆ ಕೆಲಸ ಮಾಡಕ್ಕಾಗಲ್ಲ. ಆದರೆ ಈ ಥರ ಶ್ರದ್ಧೆ, ಜಾಗ್ರತೆಯಿಂದ ಕೆಲಸ ಮಾಡುವ ಕಾರಣ ತಲ್ಲೀನತೆ ಬರುತ್ತೆ. ಮನಸ್ಸಿಗೆ ಕೆಲಸ ಮಾಡಿದ ತೃಪ್ತಿ ಸಿಗುತ್ತೆ.

ಕೆಲಸ ಮಾಡುತ್ತಾ ಗುನುಗೋ ಹಾಡುಗಳು

ಇಂಥದ್ದೇ ಹಾಡು ಅಂತಿಲ್ಲ. ಹೆಂಡತಿಗೆ ಮ್ಯೂಸಿಕ್‌ ಬಗ್ಗೆ ಬಹಳ ಕ್ರೇಜ್‌. ಬೆಳಗಾಗೆದ್ದು ನಾನಾ ಬಗೆಯ ಹಾಡು ಹಾಡ್ತಿರುತ್ತಾಳೆ. ಬೇಕೋ ಬೇಡ್ವೋ ಅದು ಕಿವಿಗೆ ಬೀಳ್ತನೇ ಇರುತ್ತೆ. ಆಮೇಲೆ ಕೆಲಸ ಮಾಡುವಾಗ ಅರಿವಿಲ್ಲದೇ ಆ ಹಾಡುಗಳನ್ನೇ ಗುನುಗುತ್ತಾ ಇರುತ್ತೀನಿ’ ಅನ್ನೋ ವಿಜಯ ಪ್ರಕಾಶ್‌ಗೆ ಬೇರೆ ಬೇರೆ ಹಾಡುಗಳನ್ನು ಕೇಳೋದಿಷ್ಟ. ನಡುವೆ ಅಚಾನಕ್‌ ಆಗಿ ಅವರೇ ಹಾಡಿದ ಹಾಡು ಕಿವಿಗೆ ಬಿದ್ದರೆ ಅದನ್ನೂ ನಿರ್ಲಿಪ್ತವಾಗಿ ಕೇಳುತ್ತಾರೆ. ಆದರೆ ಇಂಥಾ ಏಕಾಂತದಲ್ಲೂ ಅವರ ಹಾಡುಗಳನ್ನು ಅವರೇ ಕೂತು ಕೇಳಿದ್ದು ಕಡಿಮೆ.

ಕವಡೆ ಆಡೋ ಖುಷಿ

ನಮ್ಮ ಪಾರಂಪರಿಕ ಆಟಗಳು ಮನೆ ಮಂದಿಯನ್ನೆಲ್ಲ ಬೆಸೆಯುವ ಹಾಗಿರುತ್ತವೆ. ನಮ್ಮ ಮನೆಯಲ್ಲಿ ಅಮ್ಮ, ನಾನು, ಹೆಂಡತಿ, ಮಗಳು ಕಾವ್ಯಾ ಟೈಮ್‌ ಸಿಕ್ಕಾಗಲೆಲ್ಲ ಕವಡೆ ಆಡ್ತೀವಿ. ಇದು ನಮಗೆಲ್ಲ ಬಹಳ ಖುಷಿ ಕೊಡುವ ಆಟ’ ಅನ್ನೋ ವಿಜಯ್‌ಗೆ ಫ್ಯಾಮಿಲಿ ಟೈಮ್‌ಅನ್ನು ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳುವ ಆಸೆ.

ನಿಮ್ಮಿಷ್ಟದ ಹಾಡು ಕೇಳಿ

ಒಬ್ಬೊಬ್ಬರಿಗೆ ಒಂದೊಂದು ಬಗೆಯ ಮ್ಯೂಸಿಕ್‌ ಇಷ್ಟಆಗುತ್ತೆ. ಉಳಿದ ಟೈಮ್‌ನಲ್ಲಿ ನಿಮಗೆ ಹಾಡು ಕೇಳಲಿಕ್ಕೆ ಬಿಡುವು ಸಿಗಲ್ಲ. ಬರೀ ಹಾಡು ಕೇಳೋದಲ್ಲ. ಹಾಡಿನ ಸಾಧ್ಯತೆಗಳನ್ನ ವಿಸ್ತರಿಸಿ. ಮನೆಯವರೆಲ್ಲ ಕೂತು ಅಂತ್ಯಾಕ್ಷರಿ ಆಡಿ. ಒಬ್ಬೊಬ್ಬರು ಒಂದೊಂದು ಹಾಡು ಹಾಡುತ್ತಾ ಜೊತೆಗೇ ಖುಷಿಯಿಂದಿರಿ. ಇಷ್ಟುದಿನ ಒಬ್ಬೊಬ್ಬರೂ ಅವರವರ ಪಾಡಿಗೆ ಕೆಲಸ ಮಾಡ್ತಾ ಬ್ಯುಸಿಯಾಗಿರುತ್ತಿದ್ದರು. ಈಗ ಹಾಡುಗಳು ನಿಮ್ಮನ್ನೆಲ್ಲ ಬೆಸೆಯಲಿ.

- ಪ್ರಿಯಾ ಕೇರ್ವಾಶೆ