ರೋಚಕ ಸವಾಲುಗಳು ಮತ್ತು ಅನಿರೀಕ್ಷಿತ ತಿರುವುಗಳಿಂದ ಕೂಡಿದ್ದ 'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕಂಟೆಂಟ್ ಕ್ರಿಯೇಟರ್ ಶ್ರೇಯಾ ಕಲ್ರಾ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಠಿಣ ಸವಾಲುಗಳು ಮತ್ತು ವಿವಾದಗಳನ್ನು ಎದುರಿಸಿ ಗೆದ್ದ ಶ್ರೇಯಾ, 1 ಕೋಟಿ ರೂಪಾಯಿ ನಗದು ಬಹುಮಾನ ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೈ-ವೋಲ್ಟೇಜ್ ಡ್ರಾಮಾ, ರೋಚಕ ಸವಾಲುಗಳು, ತೀವ್ರ ಸ್ಪರ್ಧೆ ಮತ್ತು ಅನಿರೀಕ್ಷಿತ ಟ್ವಿಸ್ಟ್‌ಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದ ಪ್ರಸಿದ್ಧ ರಿಯಾಲಿಟಿ ಶೋ 'ಲಾಕ್ ಅಪ್ ಸೀಸನ್ 2' (Lock Upp Season 2) ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಬಾರಿಯ ಕಿರೀಟವನ್ನು ಕಂಟೆಂಟ್ ಕ್ರಿಯೇಟರ್ ಹಾಗೂ ಸ್ಪರ್ಧಿ ಶ್ರೇಯಾ ಕಲ್ರಾ (Shreya Kalra) ತಮ್ಮದಾಗಿಸಿಕೊಂಡಿದ್ದಾರೆ. ವಾರಗಳ ಕಾಲ ಜೈಲಿನಂತಹ ಕಠಿಣ ಸವಾಲುಗಳನ್ನು ಎದುರಿಸಿ, ಎಲ್ಲ ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದ ಶ್ರೇಯಾ ಅಂತಿಮವಾಗಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಶ್ರೇಯಾ ಕಲ್ರಾ ಪಡೆದ ಬಹುಮಾನ ಮೊತ್ತ ಎಷ್ಟು?
'ಲಾಕ್ ಅಪ್ ಸೀಸನ್ 2' ವಿನ್ನರ್ ಶ್ರೇಯಾ ಕಲ್ರಾ ಅವರು ಕೇವಲ ಟ್ರೋಫಿ ಮಾತ್ರವಲ್ಲದೆ ಬೃಹತ್ ಮೊತ್ತದ ನಗದು ಬಹುಮಾನವನ್ನು ಮನೆಗೆ ಕೊಂಡೊಯ್ದಿದ್ದಾರೆ. ವಿಜೇತರಾದ ಶ್ರೇಯಾ ಅವರಿಗೆ ಆಯೋಜಕರು 1 ಕೋಟಿ ರೂಪಾಯಿ ನಗದು ಬಹುಮಾನ ಹಾಗೂ ಹೊಳೆಯುವ ವಿನ್ನರ್ ಟ್ರೋಫಿಯನ್ನು ನೀಡಿದ್ದಾರೆ. ಶೋ ಆರಂಭದಲ್ಲೇ 1 ಕೋಟಿ ರೂಪಾಯಿ ನಗದು ಬಹುಮಾನದ ಘೋಷಣೆಯಾಗಿದ್ದು, ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿತ್ತು.
ವಿವಾದಗಳ ನಡುವೆಯೂ ಸಾಗಿದ ಶ್ರೇಯಾ ಜರ್ನಿ:
ಶೋನ ಇಡೀ ಪಯಣದಲ್ಲಿ ಶ್ರೇಯಾ ಕಲ್ರಾ ಅವರ ಹಾದಿ ಸುಲಭವಾಗಿರಲಿಲ್ಲ. ಶೋ ಆರಂಭದಿಂದಲೂ ಅವರನ್ನು 'ಅಹಂಕಾರಿ' ಎಂದು ಕರೆಯಲಾಗುತ್ತಿತ್ತು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಬಾಲಿವುಡ್ ನಟಿ ಶಿಲ್ಪಾ ಶಿಂಧೆ ಜೊತೆಗಿನ ಕಟು ಮಾತುಗಳ ಜಗಳ ಹಾಗೂ ಸ್ಪರ್ಧಿ ಆಕಾಂಕ್ಷಾ ಚಾಮೋಲಾ ಅವರ ರಹಸ್ಯವನ್ನು ಬಹಿರಂಗಪಡಿಸಿದ ಘಟನೆಗಳು ಶೋನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದವು.
ಆದಾಗ್ಯೂ, ಶ್ರೇಯಾ ತಮ್ಮ ನೈಜ ನಡವಳಿಕೆಯಿಂದ ಶೋನ ಟಆರ್‌ಪಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಷ್ಟೇ ಟೀಕೆಗಳು ಬಂದರೂ ಧೃತಿಗೆಡದೆ ತಮ್ಮದೇ ಶೈಲಿಯಲ್ಲಿ ಆಟವಾಡಿ ಇಡೀ ಶೋ ಅನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದರು ಎಂದರೆ ತಪ್ಪಾಗಲಾರದು.
ಮನರಂಜನೆ ನೀಡಿದ ಡ್ರಾಮಾ ಸೀಸನ್:
ಪ್ರಸಿದ್ಧ ನಿರ್ದೇಶಕಿ ಫರಾ ಖಾನ್ ಮತ್ತು ನಟ ರಿತೀಶ್ ದೇಶ್‌ಮುಖ್ ಜಂಟಿಯಾಗಿ ನಿರೂಪಣೆ ಮಾಡಿದ್ದ ಈ 'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಿದೆ. ಅನಿರೀಕ್ಷಿತ ಟ್ವಿಸ್ಟ್‌ಗಳು, ಭಾವನಾತ್ಮಕ ಕ್ಷಣಗಳು ಮತ್ತು ಕಠಿಣ ಟಾಸ್ಕ್‌ಗಳು ಈ ಸೀಸನ್‌ಗೆ ಹೊಸ ಮೆರುಗು ತಂದಿದ್ದವು. ಶೋ ಆರಂಭದಲ್ಲಿ ಸ್ಪರ್ಧಿಗಳ ಆಯ್ಕೆಯ ಬಗ್ಗೆ ಕೆಲ ಅನುಮಾನಗಳಿದ್ದರೂ, ದಿನಗಳು ಕಳೆದಂತೆ ಪ್ರೇಕ್ಷಕರು ಶೋಗೆ ಫಿದಾ ಆಗಿದ್ದರು.
ಪ್ರಸ್ತುತ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್), ಫೇಸ್‌ಬುಕ್ ಮತ್ತು ರೆಡ್ಡಿಟ್‌ಗಳಲ್ಲಿ ಶ್ರೇಯಾ ಕಲ್ರಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ತಮ್ಮ ನೈಜ ವ್ಯಕ್ತಿತ್ವವನ್ನು ಬಿಟ್ಟುಕೊಡದೆ ಆಟವಾಡಿದ ಶ್ರೇಯಾ ಅವರ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.


