'ಸೀತಾರಾಮ' ಧಾರಾವಾಹಿಯ ಪ್ರಿಯಾ ಖ್ಯಾತಿಯ ಮೇಘನಾ ಶಂಕರಪ್ಪ 1996ರಲ್ಲಿ ಜನಿಸಿದ ಜಯಂತ್​ ಅವರೊಂದಿಗೆ ಅರೇಂಜ್ಡ್ ಮ್ಯಾರೇಜ್ ಆಗಲಿದ್ದಾರೆ. ಬಾಡಿ ಶೇಮಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಆರೋಗ್ಯವೇ ಮುಖ್ಯ ಎಂದಿದ್ದಾರೆ. 'ನಮ್ಮನೆ ಯುವರಾಣಿ' ಧಾರಾವಾಹಿಯ ಮೂಲಕ ಪ್ರಸಿದ್ಧರಾದ ಮೇಘನಾ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಸೀತಾರಾಮ ಪ್ರಿಯಾ ಉರ್ಫ್​ ಮೇಘನಾ ಶಂಕರಪ್ಪ ಮದುವೆಗೆ ಸಿದ್ಧರಾಗಿದ್ದು, ತಮ್ಮ ಭಾವಿ ಪತಿ ಜಯಂತ್​ ಅವರನ್ನು ಪರಿಚಯಿಸಿದ್ದಾರೆ. ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವ ವಿಡಿಯೋ ಒಂದನ್ನು ಯುಟ್ಯೂಬ್​ನಲ್ಲಿ ಶೇರ್​ ಮಾಡಿರುವ ನಟಿ, ತಮ್ಮ ಮತ್ತು ಭಾವಿ ಪತಿ ಜಯಂತ್ ಅವರ ವಯಸ್ಸನ್ನೂ ರಿವೀಲ್​ ಮಾಡಿದ್ದಾರೆ. ಜೊತೆಗೆ, ಮೇಘನಾ ಅವರು ತಾವು ದಪ್ಪ ಇರುವ ಕಾರಣ ಎದುರಿಸುತ್ತಿರುವ ಬಾಡಿ ಷೇಮಿಂಗ್​ ಬಗ್ಗೆ ಇದೇ ವಿಡಿಯೋದಲ್ಲಿ ನೊಂದು ಕೂಡ ನುಡಿದಿದ್ದಾರೆ. ಅಷ್ಟಕ್ಕೂ, ಮೇಘನಾ ಶಂಕರಪ್ಪ ಅವರು ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು. 

ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.

ಸೀತಾರಾಮ ಪ್ರಿಯಾ ಮದ್ವೆ ಡೇಟ್​ ರಿವೀಲ್​! ಆ್ಯಕ್ಟಿಂಗ್​ ಬಿಡ್ತಾರಾ? ಹುಡುಗನ ಫುಲ್​ ಡಿಟೇಲ್ಸ್​ ಕೊಟ್ಟ ನಟಿ...

ಇನ್ನು ಇವರ ವಯಸ್ಸಿನ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಮೇಘನಾ ತಾವು ಹುಟ್ಟಿದ್ದು 1996ರಲ್ಲಿ. ತಮ್ಮ ಭಾವಿ ಪತಿ ಜಯಂತ್​ ಕೂಡ ಹುಟ್ಟಿದ್ದು 1996ರಲ್ಲಿಯೇ. ಅವರು ಜೂನ್​ 5ರಂದು ಹುಟ್ಟಿದರೆ, ನಾನು ಅಕ್ಟೋಬರ್​ 14ರಂದು ಹುಟ್ಟಿದ್ದೇನೆ. ನಮ್ಮಿಬ್ಬರ ನಡುವೆ ನಾಲ್ಕು ತಿಂಗಳ ಅಂತರವಷ್ಟೇ ಇರುವುದು ಎಂದಿದ್ದಾರೆ. ಇದೇ ವೇಳೆ ತಮ್ಮದು ಅರೇಂಜ್ಡ್​ ಮ್ಯಾರೇಜ್​ ಎಂದಿದ್ದಾರೆ ಮೇಘನಾ. ತಮಗೆ ಆರ್ಟ್ಸ್​ ತೆಗೆದುಕೊಂಡು ಜರ್ನಲಿಸಂ ಮಾಡುವ ಆಸೆಯಿತ್ತು. ಆದರೆ ಅಮ್ಮನಿಗೆ ಎಂಜಿನಿಯರ್​ ಆಗುವ ಆಸೆಯಿತ್ತು, ಅದಕ್ಕೆ ಒತ್ತಾಯವಾಗಿ ಸೈನ್ಸ್​ ತೆಗೆದುಕೊಳ್ಳಬೇಕಾಯ್ತು. ಇದು ಜೀವನದಲ್ಲಿ ನಾನು ಮಾಡಿರುವ ದೊಡ್ಡ ತಪ್ಪು ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ. 


ಇದೇ ವೇಳೆ ತಾವು ದಪ್ಪ ಇರುವ ಕಾರಣ, ಅನುಭವಿಸಿರುವ, ಅನುಭವಿಸುತ್ತಿರುವ ಬಾಡಿ ಶೇಮಿಂಗ್​ ಬಗ್ಗೆ ನಟಿ ನೊಂದು ನುಡಿದಿದ್ದಾರೆ. ಭಾರತೀಯರ ಬಾಡಿಷೇಪ್​ ರೀತಿಯಲ್ಲಿಯೇ ನಾನು ಇದ್ದೇನೆ. ಇತಿಹಾಸದಲ್ಲಿನ ರಾಣಿಯರನ್ನು ನೀವು ನೋಡಿದರೆ, ಅವರೇನು ಸ್ಲಿಮ್ ಆಗಿ ಇರಲಿಲ್ಲ. ಸ್ಲಿಮ್​ ಇದ್ದರಷ್ಟೇ ಚೆಂದ, ಅದೇ ಅಂದ ಎಂದು ಅಂದುಕೊಳ್ಳುವುದು ಯಾಕೋ ನನಗೆ ಗೊತ್ತಿಲ್ಲ. ಆದರೆ ತುಂಬಾ ಬಾಡಿ ಶೇಮಿಂಗ್​ ಅನುಭವಿಸುತ್ತಿರುವುದು ನನಗೆ ತುಂಬಾ ನೋವು ಕೊಟ್ಟಿದೆ ಎಂದಿದ್ದಾರೆ ಮೇಘನಾ. ನನ್ನ ದೃಷ್ಟಿಯಲ್ಲಿ ಬಾಡಿ ಹೇಗೇ ಇದ್ದರೂ ಆರೋಗ್ಯವಾಗಿ ಇರಬೇಕು ಅಷ್ಟೇ. ಹೆಲ್ತಿಯಾಗಿ ಇರುವ ಖುಷಿ ನನಗೆ ಇದೆ. ಡಾನ್ಸ್ ಕರ್ನಾಟಕ ಡಾನ್ಸ್​ ನೀವು ನೋಡಿದ್ರೆ ನನ್ನ ಎನರ್ಜಿ, ಸ್ಟೆಮಿನಾ ಹೇಗೆ ಇದೆ ಎನ್ನುವುದು ನಿಮಗೆ ಗೊತ್ತಿರುತ್ತದೆ. ಮನೆ ಕೆಲಸ ಎಲ್ಲವನ್ನೂ ಚೆನ್ನಾಗಿ ಮಾಡಬಲ್ಲೆ. ಇಷ್ಟೆಲ್ಲಾ ಇರುವಾಗ ನಿಮ್ಮ ಪ್ರಕಾರ ಫಿಗರ್​ ಅಂದ್ರೆ ಏನು ಎಂದು ಪ್ರಶಸ್ನಿಸಿದ್ದಾರೆ. ನನಗಂತೂ ನಾನು ಓವರ್​ವೇಟ್​ ಅನ್ನಿಸ್ತಿಲ್ಲ. ಹೆಲ್ತಿಯಾಗಿರುವುದೇ ನನಗೆ ಖುಷಿ ಎಂದೂ ನಟಿ ಹೇಳಿದ್ದಾರೆ. 

ಸೀತಾರಾಮ ಸಿರಿಯಲ್‌ ರಾತ್ರಿ ಶೂಟಿಂಗ್‌ ಮಾಡುವಾಗ ಏನೆಲ್ಲಾ ಆಯ್ತು? ನಟಿ ಮೇಘನಾ ರಿವೀಲ್‌

YouTube video player