ಅಂತಿಮ ವಿದಾಯ ಹೇಳಿದ ಕನ್ನಡತಿ: ಸ್ಕ್ರಿಪ್ಟ್ ಬರೆದ ವಿಕಾಸ್ ಭಾವುಕ ಮಾತು!

'ಕನ್ನಡತಿ' ಧಾರಾವಾಹಿ ವೀಕ್ಷಕರಿಗೆ ಅಂತಿಮ ವಿದಾಯ ಹೇಳಿದೆ. ಅಮ್ಮಮ್ಮ ಮತ್ತು ಭುವಿ ಎರಡು ವಿಶೇಷ ಮಹಿಳಾ ಪಾತ್ರಧಾರಿಗಳ ಮೂಲಕ ಅನೇಕ ಸಂದೇಶಗಳನ್ನು ನೀಡಿರುವ ಈ ಧಾರಾವಾಹಿ ಕನ್ನಡವನ್ನೂ ಕಲಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಸ್ಕ್ರಿಪ್ಟ್ ಬರೆದ ವಿಕಾಸ್ ನೇಗಿಲೋಣಿ ತಮ್ಮ ಜರ್ನಿ ಬಗ್ಗೆ ಬರೆದುಕೊಂಡಿದ್ದು ಹೀಗೆ. 

Script writer Vikas Negiloni writes his journey of script writing of Kannadathi of Colors Kannada

- ವಿಕಾಸ್ ನೇಗಿಲೋಣಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ, ಜನಪ್ರಿಯ ಕನ್ನಡತಿ ಧಾರಾವಾಹಿ ಮುಕ್ತಾಯವಾಗಿದೆ!

ಕಿರುತೆರೆ ಬರವಣಿಗೆಯ ಪಯಣದಲ್ಲಿ ನನ್ನ ನೆಚ್ಚಿನ ಪ್ರಾಜೆಕ್ಟ್- ಕನ್ನಡತಿ. ಇಂಥ ಒಂದು ಪ್ರಾಜೆಕ್ಟ್ ನಾನು ಹಿಂದೆ ಬರೆದಿರಲಿಲ್ಲ, ಮುಂದೆ ಬರೆದರೂ ಅದು ಕನ್ನಡತಿ ಆಗಿರುವುದಿಲ್ಲ. ಬರವಣಿಗೆ, ಸಂಭಾಷಣೆ, ನಿರ್ದೇಶನ, ಛಾಯಾಗ್ರಹಣ, ಸಂಕಲನ, ಪಾತ್ರಧಾರಿಗಳು, ಪ್ರತಿಯೊಬ್ಬರ ನಟನೆ, - ಹೀಗೆ ಎಲ್ಲವೂ ಸೇರಿ ಆದ ಒಂದು ಮ್ಯಾಜಿಕ್ ಅದು!

ನನ್ನ ಕಿರುತೆರೆ ಕರಿಯರ್ ಶುರುವಾಗಿ ಹತ್ತಿರತ್ತಿರ ಹದಿನೇಳು ವರ್ಷಗಳಾದವು. ಶುರುವಾಗಿದ್ದು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ, ವಿನು ಬಳಂಜ ನಿರ್ದೇಶನದ ‘ಜೋಗುಳ’ ಧಾರಾವಾಹಿಗೆ ಟೈಟಲ್ ಸಾಂಗ್ ಬರೆಯುವುದರಿಂದ. ಆಮೇಲೆ ರಮೇಶ್ ಇಂದಿರಾ ನಿರ್ದೇಶನದ ‘ನಮ್ಮಮ್ಮ ಶಾರದೆ’ಗೆ ಸಂಭಾಷಣೆ ಬರೆದೆ, ಆಮೇಲೆ ಕಲರ್ಸ್ ಕನ್ನಡದ (ಆಗ ಅದು ಈ ಟಿವಿ ಕನ್ನಡ) ‘ಯಶೋದೆ’ ಧಾರಾವಾಹಿಗೆ ನಾನು, ಸ್ನೇಹಿತ ಕಾರ್ತಿಕ್ ಪರಾಡ್ಕರ್ ಸೇರಿ ಕತೆ ಮಾಡಿ ಕೊಟ್ಟು, ಅದಕ್ಕೆ ನಾನೇ ಹಾಡು, ಸಂಭಾಷಣೆ ಬರೆದು, ಸ್ನೇಹಿತೆ ಮಧುರಾ ಸೋಮಯಾಜಿ ಚಿತ್ರಕತೆ ಬರೆದು, ವಿನೋದ್ ದೋಂಢಾಳೆ ಅವರು ನಿರ್ದೇಶಿಸಿ- ಧಾರಾವಾಹಿ ಬರವಣಿಗೆಯ ಮತ್ತೊಂದು ಹಂತದ ಜರ್ನಿ ಶುರುವಾಯ್ತು. ಆಮೇಲೆ ಹಲವಾರು ಧಾರಾವಾಹಿಗಳಿಗೆ ಟೈಟಲ್ ಸಾಂಗ್, ಸಂಭಾಷಣೆ, ನಾನ್ ಫಿಕ್ಷನ್ ಶೋಗಳಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದೆ. ಆದರೆ ಒಂದು ಧಾರಾವಾಹಿ ಬರವಣಿಗೆಯಲ್ಲಿನ ಪೂರ್ತಿ ಅನುಭವ, ಅದರ ಸಾಧ್ಯಾಸಾಧ್ಯತೆ, ಇತಿಮಿತಿ, ಸವಾಲು, ಒತ್ತಡ, ಪ್ರಭಾವ, ವರ್ಷಗಟ್ಟಲೆ ಪ್ರಾಜೆಕ್ಟ್ ಮಾಡುವಾಗ ಆಗುವ ಸಂತೋಷ, ತಲೆದೋರುವ ಉದಾಸೀನ, ಆಗಾಗ ಎದುರಾಗುವ ಕಿರಿಕಿರಿ, ಹತಾಶೆ, ನೋವು, ನಲಿವು- ಹೀಗೆ ಎಲ್ಲ ಪ್ಯಾಕೇಜನ್ನೂ, ಒಮ್ಮೆಗೇ ಮೂರು ವರ್ಷಗಳ ಕಾಲ ಕೊಟ್ಟ ಒಂದೇ ಪ್ರಾಜೆಕ್ಟ್- ಕನ್ನಡತಿ. ಹಿಂದಿರುಗಿ ನೋಡಿದಾಗ ಇದು ಕೊಟ್ಟ ಸಾರ್ಥಕತೆ, ಅಚ್ಚರಿ ಸಣ್ಣದಾಗಿ ಭಾವುಕನನ್ನಾಗಿ ಮಾಡುತ್ತಿದೆ. ಬರೆಯುತ್ತಾ ಬರೆಯುತ್ತಾ ನನಗೇ ಗೊತ್ತಿಲ್ಲದೇ ನನ್ನೊಳಗಿಂದ ಹೊರಬಂದ ಕತೆ, ಹೊರಹೊಮ್ಮಿದ ವಿಚಾರ, ವೈವಿಧ್ಯತೆ, ಅದು ಕಲಿಸಿದ ಪಾಠ, ಕೊಟ್ಟ ಜನಪ್ರಿಯತೆ, ಪ್ರೀತಿ, ಆ ಪ್ರೀತಿ ಇರುವುದರಿಂದಲೇ ಪಡೆದ ಬೈಗುಳ- ಎಷ್ಟು ಹೇಳಿದರೂ ವಿವರಿಸಲಾರದ್ದು. ನನ್ನ ನೆಚ್ಚಿನ ಲೇಖಕ ಪಿ. ಲಂಕೇಶ್ ಅವರ ಮಾತಲ್ಲಿ ಹೇಳುವುದಾದರೆ:

800 ಸಂಚಿಕೆ ಮುಗಿಸಿದ ಕನ್ನಡತಿ

ಕೃತಜ್ಞತೆಯ ಕಣ್ಣೀರು!
ಅಷ್ಟೇ!
ಈ ಪ್ರಾಜೆಕ್ಟ್ ಕೊಟ್ಟ ಈ ಧಾರಾವಾಹಿಯ ಮೂಲ ಕತೆಗಾರ, ಕರ್ತೃ, ನನ್ನ ಕಿರುತೆರೆ, ಸಿನಿಮಾ, ಸಾಹಿತ್ಯಾಸಕ್ತಿಯ ಮಾರ್ಗದರ್ಶಕ ಪರಮೇಶ್ವರ್ ಗುಂಡ್ಕಲ್ ಅವರಿಗೆ ಕೃತಜ್ಞತೆ.

ಇದರ ಜರ್ನಿಯ ಬಗ್ಗೆ ಹೇಳಲೇಬೇಕು;
ಕನ್ನಡತಿ ಪ್ರಾರಂಭ ಆಗುವುದಕ್ಕೂ ಮೊದಲ ಆರೇಳು ತಿಂಗಳು ಪ್ರತಿ ನಿತ್ಯ ಈ ಪ್ರಾಜೆಕ್ಟ್ ಗೋಸ್ಕರ ನಾನು ಪರಮ್ ಹಾಗೂ Chitrasri Sunder ಅವರ ಜೊತೆ ಕುಳಿತಿರುತ್ತಿದ್ದೆ, ಮೊದಮೊದಲಿಗೆ ನಾನು ಬರೀ ಬೆರಗಿನ ಕೇಳುಗ. ಅವರು ದಿನಕ್ಕೊಂದು ಐಡಿಯಾ, ಸೀಕ್ವೆನ್ಸ್, ಕತೆಯ ತಿರುವು, ಹೀಗೆ ಮಾಡಬಹುದು, ಹಾಗೆ ಮಾಡೋಣ- ಅಂತೆಲ್ಲ ಚರ್ಚೆ ಮಾಡುತ್ತಿದ್ದರೆ ನನಗೆ ಏನೂ ಹೊಳೆಯದೇ, ಅವರು ಹೇಳುವುದೆಲ್ಲವೂ ಅದೆಷ್ಟು ಚೆನ್ನಾಗಿದೆ, ನಂಗೆ ಈ ಥರ ಕತೆ ಹೊಳೀತಿಲ್ಲ, ನಾನು ನಿಜಕ್ಕೂ ಈ ಪ್ರಾಜೆಕ್ಟ್ ಗೆ ಚಿತ್ರಕತೆ ಬರೀತೀನಾ, ನನಗೆ ಆಗತ್ತಾ ಅಂತ ಚಿಂತೆ, ಆತಂಕಗಳಿಂದ ಕುಳಿತಿರುತ್ತಿದ್ದೆ. ಪರಮ್ ಅವರ ಕನ್ನಡತಿ ಎಂಬ ಈ ಮಾನಸಶಿಶು ದಿನೇದಿನೇ ಬೆಳೆಯುತ್ತಾ ಹೋಯಿತು. ಒಂದು ಪುಟ್ಟ ಪೇಟೆಯಿಂದ ಬೆಂಗಳೂರಿಗೆ ಬರುವ ಕನ್ನಡ ಕಲಿಸುವ ಒಬ್ಬ ಟೀಚರ್ ಕತೆ ಇದು ಅಂತ ಶುರುವಾದ ಎಳೆ ಆಗಿತ್ತು ಇದು. ಇದರ ಹೆಸರೂ ಬೇರೆಯದೇ ಆಗಿತ್ತು, ಪಾತ್ರವರ್ಗಗಳೂ ಬೇರೆಯವೇ ಆಗಿದ್ದವು. ಆಮೇಲೆ ಒಂದಕ್ಕೊಂದು ಸೇರಿ ಕತೆ ಬೆಳೆಯಿತು, ಹಸಿರುಪೇಟೆ ಎನ್ನುವ ಒಂದು ಕಾಲ್ಪನಿಕ ಊರು ಬಂತು, ಕನ್ನಡ ತಾಯಿ ಭುವನೇಶ್ವರಿ ಕಥಾನಾಯಕಿ ಆದಳು, ಹನ್ನೆರಡು ಸಾವಿರ ಇಟ್ಟುಕೊಂಡು ಪುಟ್ಟ ಪೇಟೆಯಿಂದ ಬಂದ ರತ್ನಮಾಲಾ ಎಂಬ ಸಾಮಾನ್ಯ ಹೆಣ್ಮಗಳೊಬ್ಬಳು ಉದ್ಯಮ ಕಟ್ಟಿದ್ದು ಕತೆಯಾಗಿ ರೂಪ ಪಡೆಯಿತು, ಅವಳು ಅಮ್ಮಮ್ಮ ಆದಳು, ಅಮ್ಮಮ್ಮನ ಮೌಲ್ಯಗಳನ್ನು ಮುಂದೆ ತೆಗೆದುಕೊಂಡು ಹೋಗದ, ಪಾರ್ಟಿ ಗೈ, ಎಲ್ಲವನ್ನೂ ಬಿಸಿನೆಸ್ ಅಂತ ನೋಡುವ ಮಗ ಹರ್ಷ ಆದ, ಅವನನ್ನು ಬದಲಾಯಿಸುವ ಚಾಲೆಂಜ್ ಭುವಿ ಪಾತ್ರಕ್ಕೆ ಬಿತ್ತು, ಅಮ್ಮಮ್ಮ ಇಡೀ ಆಸ್ತಿಯನ್ನು ಮಗನಿಗೆ ಬರೆಯುವುದು ಬಿಟ್ಟು, ಯಾವುದೋ ಹಳ್ಳಿಯ ಒಬ್ಬ ಪ್ರಾಮಾಣಿಕ ಟೀಚರ್ ಗೆ ಬರೆಯುವುದು ಇಡೀ ಕಥೆಯ ನಾಟಕೀಯ ಪ್ಲಾಟ್ ಆಯಿತು. ಮದುವೆ ಅಂದರೆ ಮಾರುದೂರ ಓಡುವ ಕಥಾನಾಯಕನ ಹಿಂದೆ ಬೀಳುವ ಹುಡುಗಿಯಾಗಿ ವರುಧಿನಿ ಬಂದಳು, ಮದುವೆ ಮಾಡಿಸುವ ವೆಡ್ಡಿಂಗ್ ಪ್ಲಾನರ್ ಕಂಪನಿ ಕಟ್ಟಿದ ಹುಡುಗಿಯೇ ಆದರೂ ಪ್ರೀತಿ ವಿಚಾರ ಬಂದರೆ ಸೈಕೋ ಆಗಬಲ್ಲಳು ಅಂತ ಮತ್ತೊಂದು ರೋಚಕ ಕಥಾನಕ ಶುರುವಾಯಿತು.

ಹೀಗೆ ಕನ್ನಡತಿ ಪ್ರಾರಂಭ ಆಯಿತು!
ಧಾರಾವಾಹಿ ಶುರುವಾದ ಮೇಲೂ ನನಗೆ ಏನೂ ಚೆನ್ನಾಗಿರುವುದು ಬರಯಲಿಕ್ಕಾಗದೇ, ಪರಮ್ ಅವರೇ ಬರವಣಿಗೆ ಮುಂದುವರಿಸುತ್ತಿದ್ದರು. ಧಾರಾವಾಹಿ ಶುರುವಾಗಿ ತಿಂಗಳಾದರೂ ನನ್ನ ಈ ಪ್ರಾಜೆಕ್ಟ್ ನಿಂದ ಕೈ ಬಿಡುತ್ತಾರೆ, ನಾನು ಬರೆಯುವುದಿಲ್ಲ ಅಂತ ಭಾವಿಸಿಕೊಂಡೇ ಔಟ್ ಸೈಡರ್ ಫೀಲಿಂಗ್ ನಲ್ಲಿ ನರಳಿದ್ದೆ! ಆದರೆ ಹಾಗಾಗಲಿಲ್ಲ, ನಿಧಾನಕ್ಕೆ ನೀನು ಮಾಡಬಲ್ಲೆ ಅಂತ ಪರಮ್, ಚಿತ್ರಶ್ರೀ ಭರವಸೆ ಕೊಟ್ಟರು, ನಂಬಿದರು. ಕನ್ನಡತಿ ಕೂಡ ಕೈ ಹಿಡಿದು ನನ್ನ ತನ್ನೊಳಗೆ ಚೂರು ಚೂರೇ ಬಿಟ್ಟುಕೊಳ್ಳುತ್ತಾ ಹೋಯಿತು, ನಾನೂ ಕತೆಯಲ್ಲಿ ಒಂದಾಗತೊಡಗಿದೆ.

ಆಮೇಲೆ ನಾನು ಸ್ಕ್ರೀನ್ ಬರವಣಿಗೆ ಕಲಿಯುತ್ತಾ, ಪರಮ್ ಅವರ ಜೊತೆ ಸೇರಿ ಚಿತ್ರಕತೆ ಬರೆಯಲು ಶುರು ಮಾಡಿ, ಅದಕ್ಕೆ ಮಂಜುನಾಥ್ ಭಟ್ಟರ ಅದ್ಭುತ ಸಂಭಾಷಣೆ, ಯಶವಂತ್ ಪಾಂಡು ಅವರ ನುರಿತ ನಿರ್ದೇಶನ ಸೇರಿ  ಆಕಾರ ಪಡೆಯುತ್ತಾ ಹೋಯಿತು. ಆಮೇಲೆ ಸೇರಿಕೊಂಡಿದ್ದು ಏನೇನೆಲ್ಲ! ಕರೋನಾ ಸೃಷ್ಟಿಸಿದ ಕ್ವಾರಂಟೈನ್ ಅನ್ನುವುದು ಕನ್ನಡತಿಯಲ್ಲಿ ಹರ್ಷ- ಭುವಿ ಇಬ್ಬರನ್ನೂ ಹತ್ತಿರ ತರುವುದಕ್ಕೆ ವರವಾಗುವ ಎಳೆಯಾಗಿ ಸೇರಿತು, ಆಮೇಲೆ ಕಾರು ಕಲಿಸಲು ಬಂದ ಹರ್ಷನಿಗೆ ಭುವಿ ಕನ್ನಡ ಕಲಿಸಿದಳು, ಕನ್ನಡ ಕಲಿತ ನಾಯಕ ಜೊತೆ ಜೊತೆಗೇ ಪ್ರೀತಿ ಕಲಿತ, ಪ್ರೀತಿ ಕಲಿತ ಮೇಲೆ ಅದನ್ನು ಹೇಳಿಕೊಳ್ಳುವ ಒದ್ದಾಟ ಇದ್ದಿದ್ದೇ. ಆಮೇಲೆ ಒದ್ದಾಟ, ಪ್ರೇಮ ನಿವೇದನೆ, ನಿರಾಕರಣೆ, ವಿರಹ, ಒಪ್ಪಿಗೆ, ಕಡೆಯಲ್ಲಿ ಮದುವೆ. ಮದುವೆಯ ನಂತರದಲ್ಲಿ ನಾಟಕೀಯ ತಿರುವುಗಳು.

Kannadathi : ಬದಲಾದ ಸಾನಿಯಾ ಕಂಡು ದಂಗಾದ ಹರ್ಷ, ವರೂ ಕೊಟ್ಳು ಬಿಗ್ ಶಾಕ್!

ಬರೆಯುತ್ತಾ ಬರೆಯುತ್ತಾ ಕನ್ನಡತಿ ಈ ರೂಪದಲ್ಲಿ ಇವಾಲ್ವ್ ಆಗಿದ್ದು ಈಗಲೂ ನನಗೊಂದು ಅಚ್ಚರಿ.  ಹೊಸ ಜನರೇಶನ್ ಗೆ ಕನ್ನಡ ಕೂಲ್ ಭಾಷೆ ಅಂತ ಮಾಡುವುದು ಹೇಗೆ, ಒಂದು ಮೆಚ್ಯೂರ್ಡ್ ಆದ ಪ್ರೀತಿಯನ್ನು ತೋರಿಸುವುದು ಹೇಗೆ, ಸಾನಿಯಾಳಂಥ ಮಹತ್ವಾಕಾಂಕ್ಷೆಯ ಹೆಣ್ಮಗಳು ಸ್ವಾರ್ಥದಲ್ಲಿ ಬೆಳೆದರೆ ಏನಾಗುತ್ತದೆ, ಒಬ್ಬಳು ಸ್ವತಂತ್ರವಾಗಿ ಯೋಚಿಸುವ ಹುಡುಗಿ ಒಂದು ಮ್ಯಾರೇಜ್ ಇವೆಂಟ್ ಕಂಪನಿ ಕಟ್ಟಿದರೆ ಹೇಗಿರುತ್ತದೆ, ಎಲ್ಲ ಶಕ್ತಿ ಇರುವ ಅದೇ ಸ್ವತಂತ್ರ ಮನೋಭಾವದವಳು ಪ್ರೀತಿಯೆಂಬ ಮೋಹದ ಬಲೆಗೆ ಬಿದ್ದರೆ ಏನಾಗುತ್ತದೆ, ಸ್ನೇಹ ಸ್ವಾರ್ಥವೂ ಆಗಿ ಬದಲಾದರೆ ಏನಾಗುತ್ತದೆ, ಸ್ನೇಹ ಪ್ರೀತಿಯಾಗಿ ತಿರುಗಿದರೆ ಏನಾಗಬಹುದು, ಪ್ರೀತಿಯಲ್ಲಿ ಬಿದ್ದ ಒಬ್ಬ ಹುಡುಗ ಹೇಗೆ ಕನ್ನಡ ಪ್ರೇಮಿಯಾಗಿ ಬದಲಾಗಬಹುದು, ಹುಡುಗಿಯನ್ನು ಪ್ರೀತಿ ಹೇಗೆ ಬದಲಾಯಿಸಬಹುದು, ಹಳ್ಳಿ ಹುಡುಗಿ ಎಂದ ತಕ್ಷಣ ಆಧುನಿಕ ಮನೋಭಾವ ಇರಲಾರದು ಎನ್ನುವ ಮೂಢನಂಬಿಕೆಯನ್ನು ಭುವಿ ಪಾತ್ರ ಹೇಗೆ ಬದಲಾಯಿಸಬಹುದು, ಒಂದು ಬಹುದೊಡ್ಡ ಕಂಪನಿ ಕಟ್ಟಿದ ರತ್ನಮಾಲಾಳಂಥ ಹೆಣ್ಣು ಹೇಗೆ ಚಾಣಕ್ಯನಂತೆ diplomat ಕೂಡ ಹೇಗೆ ಆಗಿರಬೇಕಾಗುತ್ತದೆ- ಎಂಬಿತ್ಯಾದಿ ವಿಚಾರಗಳು ಸೇರುತ್ತಾ ಸೇರುತ್ತಾ ಕತೆ ಬೆಳೆಯಿತು. ಅದೆಲ್ಲಾ ಸೇರಿ ಮೂರು ವರ್ಷಗಳ ಕನ್ನಡತಿ ಜರ್ನಿ ಆಗಿದೆ.

ನಾಳೆಯಿಂದ ಕನ್ನಡತಿ ಇರುವುದಿಲ್ಲ. ಆದರೆ ಅದು ಕೊಟ್ಟ ಅನುಭವದ ಸವಿ ಅಷ್ಟು ಸುಲಭಕ್ಕೆ ಮುಗಿಯುವುದಿಲ್ಲ. ನಾನು ಬರೆದ ಎಷ್ಟೋ ದೃಶ್ಯಗಳನ್ನು ಪರಮ್ ಪ್ರಾರಂಭದಿಂದಲೂ ತಿದ್ದಿ ಸರಿ ಮಾಡಿದ್ದಾರೆ, ಮೊಂಡು ಅನ್ನುವ ಸೀನನ್ನು ಮೊನಚು ಮಾಡಿದ್ದಾರೆ, ಒಂದು ಸಣ್ಣ ಐಡಿಯಾವನ್ನು ಹೀಗೆ ಮಾಡು ಅಂತ ಬೇರೆಯದೇ ದಿಕ್ಕು ತೋರಿಸಿ, ನನಗೆ ಕಲಿಸಿದ್ದಾರೆ. ಹಾಗಂತ ಎಷ್ಟೋ ಕಡೆ ಕಲಿಸಿದರೂ ಕಲಿಯದೇ ನಾನು ತಪ್ಪು ಮಾಡಿದ್ದೇನೆ, ಹಾಗೆ ತಪ್ಪು ಮಾಡಿದ್ದೇನೆ ಅಂತ ಅಲವತ್ತುಕೊಂಡಾಗ ‘ನೋಡು ಧಾರಾವಾಹಿ ಅನ್ನುವುದು ಸಂತೆಯಲ್ಲಿ ತರಕಾರಿ ಮಾರಿದ ಥರ, ಎಷ್ಟೋ ಸಲ ಕೊಳ್ಳಲು ಬಂದವರಿಗೆ ಸಮಯಕ್ಕೆ ಸರಿಯಾಗಿ ತರಕಾರಿ ಕೊಡುವುದು ಮುಖ್ಯವಾಗಿರುತ್ತದೆ. ಏನು ಮಾಡೋದು, ಈ ಸಂತೆಯಲ್ಲಿ ಫ್ರೆಶ್ ತರಕಾರಿಯೂ ಸಿಗುತ್ತೆ, ಕೆಲವೊಮ್ಮೆ ಬಾಡಿದ ತರಕಾರಿಯೂ ಸಿಗುತ್ತೆ’ ಅಂತ ಕಲಿಸಿ ಕೊಟ್ಟಿದ್ದಾರೆ. ಹಾಗಾಗಿ ಆಗಾಗ ಫ್ರೆಶ್, ಆಗಾಗ ಬಾಡಿದ ತರಕಾರಿ ಮಾರುವವನಾಗಿ ಕಂಡಿದ್ದೇನೆ, ಅದಕ್ಕೆ ಕ್ಷಮೆ ಇರಲಿ!

ಇಂದಿನಿಂದ ಕನ್ನಡತಿ ಇತಿಹಾಸ ಮಾತ್ರ, ಆದರೆ ಅದು ಹಲವು ಸಣ್ಣ ಸಣ್ಣದಾದ ಆದರೆ ಬಹಳ ಮುಖ್ಯವಾದ ಇತಿಹಾಸವನ್ನು ಸೃಷ್ಟಿ ಮಾಡಿದೆ, ಅದಕ್ಕೆ ಚಿತ್ರಕತೆಗಾರನಾಗಿ ನಾನೂ ಕಾರಣನಾಗಿದ್ದೇನೆ ಅನ್ನುವ ಹೆಮ್ಮೆ, ಗರ್ವ, ಸಮಾಧಾನ, ಸಾರ್ಥಕತೆ ನನಗಿದೆ. ಈ ಎಲ್ಲವನ್ನೂ ನಾನು ನನ್ನ ಮೆಂಟರ್ ಪರಮ್, ಇದನ್ನು ಅದ್ಭುತವಾಗಿ ನಿರ್ಮಿಸಿದ ಮಿಲನ ಪ್ರಕಾಶ್- ತಶ್ವಿನಿ ಪ್ರಕಾಶ್, ಸಂಭಾಷಣಾಕಾರ ಮಂಜುನಾಥ್ ರಘುಪತಿ, ನಿರ್ದೇಶಕ ಯಶವಂತ್ ಪಾಂಡು ಹಾಗೂ ದರ್ಶನ್ ಗೌಡು- ಇವರ ಜೊತೆ ಹಂಚಿಕೊಳ್ಳುತ್ತೇನೆ. ಹಾಗೇ ಈ ಜರ್ನಿಯಲ್ಲಿ ಜೊತೆಗಿದ್ದ, ಕತೆಗೆ ಸದಾ ಸಲಕರಣೆಗಳನ್ನು, ಆಲೋಚನೆಗಳನ್ನು, ಕತೆಯ ಎಳೆಯನ್ನು ಪ್ರಾರಂಭದಿಂದಲೂ ಕೊಡುತ್ತಿದ್ದ ಕಲರ್ಸ್ ಕನ್ನಡದ ನನ್ನ ಸಹಮಿತ್ರರಾದ ವಿಜಯ್, ಮಾರ್ಟಿನ್, ಜೋಸೆಫ್ ಇವರಿಗೂ ತುಂಬು ಪ್ರೀತಿ.

ವಿದಾಯ ಹೇಳ್ತಿದೆ 'ಕನ್ನಡತಿ' ಧಾರಾವಾಹಿ; ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕಲಾವಿದರು

ಡ್ರೈವಿಂಗ್ ಕಲಿಸಲು ಕನ್ನಡ ಭಾಷೆಯನ್ನು ಬಳಸಿದ್ದು, ನನ್ನ ನೆಚ್ಚಿನ ಕನ್ನಡತಿ ಸೀಕ್ವೆನ್ಸ್, ಕ್ವಾರಂಟೀನ್ ಸಂದರ್ಭದಲ್ಲಿ ಭುವಿ- ಹರ್ಷ ಮಧ್ಯೆ ತಂಡ ಸಹಜ ಸನ್ನಿವೇಶಗಳು ಮತ್ತೊಂದು ನೆಚ್ಚಿನ sequence. ತಂದೆಯ ಅಂತ್ಯ ಸಂಸ್ಕಾರವನ್ನು ಹೆಣ್ಮಗಳೇ ಮಾಡಿದ್ದು ಮತ್ತೊಂದು ಹೆಗ್ಗಳಿಕೆ. ಎಲ್ಲ ಸಂಸ್ಕೃತ ಮಂತ್ರಗಳನ್ನೂ ಅದರ ಕನ್ನಡದ ಅರ್ಥ ಸಹಿತ ಆದಷ್ಟು ತರಲು ಪ್ರಯತ್ನ ಪಟ್ಟಿದ್ದು ಮತ್ತೊಂದು ನಿದರ್ಶನ. ನಮ್ಮ ಪುರಾಣವನ್ನು, ಪುರಾಣದ ಕತೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ ರೀ ಇಂಟ್ರೊಡ್ಯೂಸ್ ಮಾಡಿದ್ದೂ ಪ್ರಯತ್ನವೇ. ಆಡಳಿತದಲ್ಲಿ ಕನ್ನಡ ತರುವ ಬಗ್ಗೆ, ವ್ಯವಹಾರದಲ್ಲಿ ಕನ್ನಡವನ್ನು ಬ್ರಾಂಡ್ ಮಾಡಬೇಕೆನ್ನುವ ಆಲೋಚನೆಯನ್ನು ಬಿತ್ತಿದ್ದು ಕೂಡ ಕನ್ನಡತಿಯ ಸಣ್ಣ ಪ್ರಯತ್ನಗಳಲ್ಲೊಂದು. ಇದೆಲ್ಲಕ್ಕಿಂತ ಹೆಚ್ಚಾಗಿ ದಿನಕ್ಕೊಂದು ಕನ್ನಡ ಪದವನ್ನು ಪರಿಚಯಿಸುವ ‘ಸರಿಗನ್ನಡಂ ಗೆಲ್ಗೆ’ಯನ್ನು ಇಂಟ್ರೊಡ್ಯೂಸ್ ಮಾಡಿದ್ದು ಬಹಳ ಬಹಳ ಮುಖ್ಯವಾದ, ಕನ್ನಡತಿಯ ಸಾಧನೆ. ಅದಕ್ಕೆ ಕಾರಣರಾದ ಮಿತ್ರ ರಘು ಅಪರ ಅವರನ್ನು ಸದಾ ನೆನೆಯುತ್ತೇನೆ.

ಕನ್ನಡವನ್ನು ಬೆಳೆಸುವಷ್ಟು ನಾವ್ಯಾರೂ ದೊಡ್ಡವರಲ್ಲ, ಅದರ ಮೂಲಕ ನಾವು ಬೆಳೆಯುವವರು. ಯಾವತ್ತೂ ಕನ್ನಡವೇ ನನ್ನ ಐಡೆಂಟಿಟಿ. ಆದರೆ ನಮ್ಮ ಭಾಷೆ ಕೂಲ್ ಅಲ್ಲ, ನಮ್ಮ ಮಾತೃಭಾಷೆಯನ್ನು ಸಾರ್ವಜನಿಕವಾಗಿ ಬಳಸುವುದಕ್ಕೆ ಸಂಕೋಚ ಅನ್ನುವ ನಮಗೆಲ್ಲ ನಮ್ಮ ಕನ್ನಡ ದೊಡ್ಡದು ಅಂತ ಅಂದುಕೊಳ್ಳುವುದಕ್ಕೆ ಹೆಮ್ಮೆ ಆಗಿಸುವಂಥ ಹಲವು ಸ್ಫೂರ್ತಿಗಳನ್ನು ತುಂಬಲು ಈ 800 ಎಪಿಸೋಡುಗಳಲ್ಲಿ ಆದಷ್ಟು ಪ್ರಯತ್ನ ಪಟ್ಟೆವು, ನಮ್ಮ ಧಾರಾವಾಹಿಯ ಹೀರೋ ಕನ್ನಡದಲ್ಲಿ ಪ್ರಪೋಸ್ ಮಾಡಿದ, ಕನ್ನಡ ಮದುವೆ ಮಾಡಿಕೊಂಡ, ತನ್ನ ಅಮ್ಮಮ್ಮನ ನೆನಪಲ್ಲಿ ಕೆಫೆಗೆ ಕನ್ನಡ ಹೆಸರನ್ನೇ ನಾಮಕರಣ ಮಾಡಿದ! ಇಂಥ ಹಲವಾರು ಯೋಚನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಮಟ್ಟದಲ್ಲಿ ಜನ ಸ್ವೀಕರಿಸಿದ್ದಾರೆ, ಮೆಚ್ಚಿದ್ದಾರೆ, ಮತ್ತೆ ಮತ್ತೆ ಜ್ಞಾಪಿಸಿ ಪ್ರೀತಿ ತೋರಿಸುತ್ತಿರುದ್ದತ್ತಾರೆ. ದಿನಕ್ಕೆ ನೂರಾರು ಜನ ಪುಟಗಟ್ಟಲೆ ಈ ಕತೆಯ ಬಗ್ಗೆ, ಈ ಕತೆಯ ಸಾಧ್ಯತೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆಯುತ್ತಾ ಬಂದಿರುವುದೂ ಕನ್ನಡತಿಯ ಹೆಗ್ಗಳಿಕೆಗಳಲ್ಲೊಂದು. ಯಾಕೆಂದರೆ ಇವತ್ತು ನಮ್ಮ ಮಾತುಗಳೆಲ್ಲ ಸೂಪರ್ ಅಥವಾ ಇಮೋಜಿಗಳಿಗೇ ಸೀಮಿತವಾಗಿರುವಾಗ ಈ ಧಾರಾವಾಹಿ ಮಾತಾಡುವುದಕ್ಕೆ, ಅಭಿಪ್ರಾಯ ಬರೆಯುವುದಕ್ಕೆ ಅದರಲ್ಲೂ ಅಭಿಪ್ರಾಯಗಳನ್ನು ಕನ್ನಡದಲ್ಲೇ ಬರೆಯುವುದಕ್ಕೆ ಪ್ರೇರಣೆ ಆಗಿದೆಯೆಂದರೆ ಅದಕ್ಕಿಂತ ದೊಡ್ಡ ಹೆಮ್ಮೆ ‘ಕನ್ನಡತಿ’ಗೆ ಬೇರೇನು ಬೇಕು?!

ಒಂದು ಕಮರ್ಶಿಯಲ್ ಎಂಟರ್ ಟೈನ್ ಮೆಂಟ್ ಜಾಗದಲ್ಲಿ ಈ ಪ್ರಯತ್ನ ಮಾಡುವುದು ಸಾಧ್ಯವಾಯಿತು ಎನ್ನುವ ವಿನಮ್ರ ಹೆಮ್ಮೆ ನನಗಿದೆ.
ಥ್ಯಾಂಕ್ಸ್ ಫಾರ್ ಎವೆರಿಥಿಂಗ್, ಕನ್ನಡತಿ!

Latest Videos
Follow Us:
Download App:
  • android
  • ios