ಕನ್ನಡ ಬಿಗ್‌ಬಾಸ್‌ ಪ್ರವೇಶಕ್ಕಾಗಿ ನಡೆಯುತ್ತಿರುವ 'ಅಗ್ನಿಪರೀಕ್ಷೆ' ಶೋನಲ್ಲಿ ನಾಟಕೀಯ ಘಟನೆಗಳು ನಡೆದಿವೆ. ಸೋಶಿಯಲ್ ಮೀಡಿಯಾ ಸ್ಟಾರ್ ಗಂಗಾ ಅವರ ವರ್ತನೆಯನ್ನು 'ಕ್ರಿಂಜ್' ಎಂದು ಕರೆದು ಸಂಗೀತಾ ಶೃಂಗೇರಿ ತಿರಸ್ಕರಿಸಿದರೆ, ಇನ್ನೊಬ್ಬ ಸ್ಪರ್ಧಿ ವಿನಯ್ ಗೌಡರ ಅರ್ಹತೆಯನ್ನೇ ಪ್ರಶ್ನಿಸಿದ್ದಾರೆ.

ನ್ನಡ ಬಿಗ್‌ಬಾಸ್‌ ಸೀಸನ್‌ಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಬಾರಿಯ ಬಿಗ್‌ಬಾಸ್‌ ಆರಂಭವೇ ವಿಶೇಷವಾಗಿರುತ್ತೆ. ಫ್ಯಾನ್ಸ್‌ಗಳಿಗೂ ಈ ಬಾರಿ ಬಿಗ್‌ಬಾಸ್‌ ಎಂಟ್ರಿಗೆ ಅವಕಾಶವಿದೆ. ಅದಕ್ಕಾಗಿ ಅವರು ಬಿಗ್‌ಬಾಸ್‌ ಅಗ್ನಿಪರೀಕ್ಷೆ ಅನ್ನೋ ಶೋನಲ್ಲಿ ತಮ್ಮ ಸಾಮರ್ಥ್ಯ ತೋರಬೇಕಿದೆ. ಈಗಾಗಲೇ ಕಲರ್ಸ್‌ ಕನ್ನಡ ಅಗ್ನಿಪರೀಕ್ಷೆ ಶೋನ ಹಲವು ಪ್ರೋಮೋಗಳನ್ನು ಬಿಡುಗಡೆ ಮಾಡಿದೆ. ಒಂದು ಪ್ರೊಮೋದಲ್ಲಂತೂ ಅಭ್ಯರ್ಥಿಯೊಬ್ಬರು ವಿನಯ್‌ ಗೌಡಗೆ ನಿಮಗೆ ಜಡ್ಜ್‌ ಆಗೋ ಅರ್ಹತೆಯೇ ಇಲ್ಲ ಎಂದು ಅವರ ಫೋಟೋಗೆ ಬೆಂಕಿ ಇಟ್ಟಿದ್ದಾರೆ.

ಅದೇ ಪ್ರೋಮೋದಲ್ಲಿ ಸಂಗೀತಾ ಶೃಂಗೇರಿ ಕೂಡ ಖಡಕ್‌ ಆಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹ್ಯಾಪಿ ಬರ್ತ್‌ಡೇ ರೀಲ್ಸ್‌ ಮೂಲಕವೇ ವೈರಲ್‌ ಆಗಿರುವ ಗಂಗಾ ಕೂಡ ಬಿಗ್‌ಬಾಸ್‌ ಅಗ್ನಿಪರೀಕ್ಷೆಯ ವೇದಿಕೆ ಏರಿದ್ದಾರೆ. ಆದರೆ, ಅವರಿಗೆ ಬಿಗ್‌ಬಾಸ್‌ಗೆ ಹೋಗೋ ಅರ್ಹತೆಯೇ ಇಲ್ಲ ಎಂದು ಸಂಗೀತಾ ಶೃಂಗೇರಿ ಅವರಿಗೆ ಗೇಟ್‌ಪಾಸ್‌ ನೀಡಿರುವುದು ಕಂಡಿದೆ.

ಬಿಗ್‌ಬಾಸ್‌ ನಮಗೆ ಯಾಕೆ ಅವಕಾಶ ನೀಡಬೇಕು, ನಮ್ಮಲ್ಲಿ ಅಂಥ ಸಾಮರ್ಥ್ಯವೇನಿದೆ ಅನ್ನೋದನ್ನು ತೋರಿಸುವ ವೇದಿಕೆ ಅಗ್ನಿಪರೀಕ್ಷೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಕಿರುಚಾಡುವ ರೀಲ್ಸ್‌ನಿಂದಲೇ ಫೇಮಸ್‌ ಆಗಿರುವ ಗಂಗಾ ಜಡ್ಜ್‌ಗಳ ಗಮನಸೆಳೆಯಲು ಭಿನ್ನ-ವಿಭಿನ್ನ ಪ್ರಯತ್ನ ಮಾಡಿದರು. ನಾನು ಪಕ್ಕಾ ಎಂಟರ್‌ಟೇನ್‌ಮೆಂಟ್‌ ಕೊಡುತ್ತೇನೆ. ಇದರಲ್ಲಿ ಅನುಮಾನವೇ ಬೇಡ ಮೇಡಮ್‌ ಎಂದು ವೇದಿಕೆಯಲ್ಲೇ ನೆಲದ ಮೇಲೆ ಬಿದ್ದು ಬೇಡಿಕೊಳ್ಳಲು ಆರಂಭಿಸಿದರು.

ಸಂಗೀತಾ ಕೊಟ್ಟ ಕಾರಣವೇನು?

ಆದರೆ, ಇದು ಸಂಗೀತಾ ಶೃಂಗೇರಿಗೆ ಹಿಡಿಸಲಿಲ್ಲ. ಅವರ ವರ್ತನೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮ್ಮ ಇಂಥ ಕ್ರಿಂಜ್‌ ವರ್ತನೆಗಳನ್ನು ನಾವು ಎಂಟರ್‌ಟೇನ್‌ಮೆಂಟ್‌ ಎಂದು ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ. ಬಿಗ್‌ಬಾಸ್‌ನಲ್ಲಿ ಇಂಥ ನಡವಳಿಕೆಯ ವ್ಯಕ್ತಿ ಇರೋದನ್ನು ನಾವ ಬಯಸೋದಿಲ್ಲ ಎಂದು ಹೇಳುತ್ತಲೇ ಅವರನ್ನು ಶೋನಿಂದ ನೇರವಾಗಿ ರಿಜೆಕ್ಟ್‌ ಮಾಡಿದ್ದಾರೆ. ಇನ್ನೊಂದೆಡೆ ವಿನಯ್‌ ಗೌಡ ಕೂಡ, ನೀವು ಮಾಡಿರೋ ರೀಲ್ಸ್‌ಅನ್ನು ನಿಮ್ಮ ಮಗಳು ನೋಡುತ್ತಾಳಾ ಎಂದು ಪ್ರಶ್ನಿಸಿದ್ದಾರೆ. ನೋಡ್ತಾಳೆ ಸರ್‌ ಎಂದು ಗಂಗಾ ಹೇಳಿದ್ದಕ್ಕೆ, ನಿಮ್ಮ ವರ್ತನೆಯನ್ನು ನೋಡಿ ಅವರೂ ಅದೇ ಥರ ಮಾಡಿದರೆ? ಎಂದು ಪ್ರಶ್ನೆ ಮಾಡಿದ್ದಾರೆ. ರಿಜೆಕ್ಟ್‌ ಮಾಡಿದ ಬೆನ್ನಲ್ಲೇ ಕಣ್ಣೀರು ಒರೆಸಿಕೊಂಡು, ಯಾರಿಗೂ ಏನನ್ನೂ ಹೇಳದೆ ಗಂಗಾ ಬೆನ್ನು ತಿರುಗಿಸಿ ಹೋಗಿದ್ದೂ ಪ್ರೋಮೋದಲ್ಲಿ ದಾಖಲಾಗಿದೆ.

ಬಿಗ್‌ಬಾಸ್‌ ಎಂಟ್ರಿಗೆ ಬರೀ ಎಂಟರ್‌ಟೇನ್‌ಮೆಂಟ್‌ ಇದ್ರೆ ಸಾಲೋದಿಲ್ಲ, ನಾಟಕೀಯತೆ, ಗಿಮಿಕ್‌ ಇರಲೇಬಾರದು. ಒಬ್ಬ ವ್ಯಕ್ತಿಯ ನಿಜ ವ್ಯಕ್ತಿತ್ವ, ಧೈರ್ಯಶಾಲಿ ಧೋರಣೆ ಇರಬೇಕು ಅನ್ನೋದು ಪ್ರೋಮೋ ನೋಡಿದರೆ ಗೊತ್ತಾಗುತ್ತದೆ. ಅದಕ್ಕೆ ತಕ್ಕಂತೆ ಪ್ರೋಮೋಗೆ, 'ಅಗ್ನಿಪರೀಕ್ಷೆ ಪಾರಾಗೋದು easy ಅಂದ್ಕೊಂಡ್ರಾ? ಆಗಲ್ಲ ಬಾಸ್...' ಎಂದು ಕಲರ್ಸ್‌ ಕನ್ನಡ ಶೀರ್ಷಿಕೆ ಇಟ್ಟಿದೆ.