ಜೂನ್ 5 ರಂದು ನಡೆಯಲಿರುವ 'ಸ ರಿ ಗ ಮ ಪ' ಗ್ರ್ಯಾಂಡ್ ಫಿನಾಲೆಯನ್ನು ZEE5 ನಲ್ಲಿ ಮೊದಲು ಪ್ರಸಾರ ಮಾಡಲಾಗುತ್ತಿದೆ. ಟಿವಿ ಪ್ರಸಾರಕ್ಕೂ ಮುನ್ನ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಿರುವುದು ಇದೇ ಮೊದಲು. 

ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ 'ಸ ರಿ ಗ ಮ ಪ' ಗ್ರ್ಯಾಂಡ್ ಫಿನಾಲ್ ಸಮೀಪಿಸಿದೆ. ಸ್ಪರ್ಧಿಗಳು ಸಕಲ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಇದರ ಅಂತಿಮ ಸುತ್ತಿನ ಸ್ಪರ್ಧೆಯು ZEE5 ನಲ್ಲಿ ಪ್ರಸಾರ ಆಗಲಿದೆ. ಆಮೇಲೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಮುಂದಿನ ತಿಂಗಳು ಜೂನ್ 5ರಂದು 'ಸರಿಗಮಪ' ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅಂತಿಮ ಸ್ಪರ್ಧೆಯಲ್ಲಿ ಯಾರು ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಿದೆ.

ZEE Kannada ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ 'ಸರಿಗಮಪ' ಶೋ ರಾಜ್ಯದ ಸಾಂಸ್ಕೃತಿಕ ಲೋಕದಲ್ಲಿ ತನ್ನ ವಿಶಿಷ್ಟ ಛಾಪು ಮೂಡಿಸಿದೆ. ಲಕ್ಷಾಂತರ ಸಂಗೀತ ಪ್ರಿಯರ ಹೃದಯಗಳನ್ನು ಗೆದ್ದಿರುವ ಹೆಗ್ಗಳಿಕೆಯ ಈ ಕಾರ್ಯಕ್ರಮವು ಈಗ ಡಿಜಿಟಲ್‌ ಲೋಕದಲ್ಲೊಂದು ದಾಪುಗಾಲು ಹಾಕುತ್ತಿದೆ. ಟಿವಿಯಲ್ಲಿ ಪ್ರಸಾರವಾಗುವ ಮುಂಚೆಯೇ ZEE5 ನಲ್ಲಿ ಪ್ರಸಾರವಾಗಲಿದೆ. ಟಿವಿಗೂ ಮುನ್ನ ಈ ಡಿಜಿಟಲ್‌ ವೇದಿಕೆಯಲ್ಲಿ ಮೊದಲ ಬಾರಿಗೆ ಪ್ರಸಾರ ಮಾಡಲಾಗುತ್ತಿದೆ.

ಈ ವಾಹಿನಿಯು ತನ್ನೆಲ್ಲ ಚಂದಾದಾರರಿಗೆ ಈ ಜನಪ್ರಿಯ ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಪರ್ಧೆಯನ್ನು ಮುಂಚಿತವಾಗಿಯೇ ವೀಕ್ಷಿಸುವ ವಿಶೇಷ ಅವಕಾಶ ಕಲ್ಪಿಸಲಿದೆ. ಈ ಉಪಕ್ರಮವು ಡಿಜಿಟಲ್ ಮನರಂಜನೆಗೆ ಪ್ರಮುಖ ತಾಣವನ್ನಾಗಿ zee5 ವೇದಿಕೆಯ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ. ZEE5ನಲ್ಲಿ, ಈ ಸೀಸನ್‌ನ "ಅತ್ಯಂತ ಜನಪ್ರಿಯ ಗಾಯಕ"ನ ಆಯ್ಕೆ ಮಾಡಬಹುದು. ಮೇ 14 ರಿಂದ ಆರಂಭವಾದ ಮತದಾನದ ಆಯ್ಕೆ ಪ್ರಕ್ರಿಯೆ ಜೂನ್‌ 5 ರಂದು ನಡೆಯಲಿರುವ ಗ್ರ್ಯಾಂಡ್‌ ಫಿನಾಲೆಯ 2 ದಿನ ಮೊದಲು ಕೊನೆಗೊಳ್ಳಲಿದೆ.

ಇನ್ನೂ ಚಂದಾದಾರರು ತಮ್ಮ ಅಚ್ಚುಮೆಚ್ಚಿನ ಸ್ಪರ್ಧಿಗಳಿಗೆ ಮತ ಚಲಾಯಿಸಲು ZEE5 appಗೆ ಲಾಗಿನ್ ಆಗಬಹುದು. ಇದರಲ್ಲಿ ಭಾಗವಹಿಸುವವರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಒಬ್ಬ ಅದೃಷ್ಟಶಾಲಿ ಮತದಾರನು "ಅತ್ಯಂತ ನೆಚ್ಚಿನ ಮತದಾರ" ಅಭಿವಾದನಕ್ಕೂ ಪಾತ್ರವಾಗಬಹುದು. ಅಪರೂಪದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಪಡೆಯಬಹುದು.

ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿರುವ ಈ ಅಂತಿಮ ಸುತ್ತಿನಲ್ಲಿ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

ZEE5ನ ಮತ್ತು zee ಕನ್ನಡದ ವಹಿವಾಟು ಮುಖ್ಯಸ್ಥ ದೀಪಕ್ ಶ್ರೀರಾಮುಲು ಅವರು ಪ್ರತಿಕ್ರಿಯಿಸಿ, ಝೀ5 ನಲ್ಲಿ ಪ್ರಸಾರವಾಗುವ ಪ್ರಾದೇಶಿಕ ಭಾಷೆಗಳಲ್ಲಿನ ಕಾರ್ಯಕ್ರಮಗಳು ನಮ್ಮ ವಹಿವಾಟು ಬೆಳವಣಿಗೆಯ ಹಾಗೂ ಹೆಚ್ಚೆಚ್ಚು ವೀಕ್ಷಕರನ್ನು ತಲುಪುವುದರ ಪ್ರಮುಖ ಆಧಾರಸ್ತಂಭವಾಗಿ ಮುಂದುವರೆದಿದೆ. ಸಮುದಾಯಗಳನ್ನು ಸಂಪರ್ಕಿಸುವಲ್ಲಿ ಸಂಗೀತವು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಝೀ ಕನ್ನಡದ 'ಸರಿಗಮಪ' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯ ಸಂಭ್ರಮಾಚರಣೆಯಾಗಿದೆ ಎಂದು ಅವರು ಹೇಳಿದ್ದಾರೆ.