ಪುಟ್ಟಕ್ಕನ ಮಕ್ಕಳು ಪ್ರಧಾನ ಪಾತ್ರಕ್ಕೆ ಹೊಸ ಪ್ರತಿಭೆ ಆಯ್ಕೆ: ಸೀರಿಯಲ್ ಬಿಡುತ್ತಿರುವವರು ಯಾರು?
ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಪ್ರಧಾನ ಪಾತ್ರಕ್ಕೆ ಹೊಸ ಪ್ರತಿಭೆಯ ಎಂಟ್ರಿ ಆಗುತ್ತಿದೆ ಎಂದು ಹೇಳಿರುವ ಆರೂರು ಜಗದೀಶ್ ಅವರು, ಈಗ ಈ ಯುವತಿಯ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ. ಯಾರೀಕೆ? ಯಾವ ಪಾತ್ರ?
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಹಳ ತಿಂಗಳು ಟಿಆರ್ಪಿಯಲ್ಲಿ ನಂಬರ್ 1 ಸ್ಥಾನದಲ್ಲಿತ್ತು. ಆದರೆ ಬರಬರುತ್ತಾ ಈ ಸೀರಿಯಲ್ ಅನ್ನು ಮೀರಿ ಬೇರೆ ಬೇರೆ ಸೀರಿಯಲ್ಗಳು ಅತಿ ಹೆಚ್ಚು ವೀಕ್ಷಣೆ ಕಾಣುತ್ತಿವೆ. ತನ್ನ ಮೂವರು ಹೆಣ್ಣುಮಕ್ಕಳನ್ನು ಪುಟ್ಟಕ್ಕ ಒಂಟಿಯಾಗಿ ಸಾಕಿದ ಪರಿ, ಅವರನ್ನು ದಡ ಸೇರಿಸಲು ಪಟ್ಟ ಶ್ರಮ ಇವೆಲ್ಲವೂ ಹಲವಾರು ಮಹಿಳೆಯರಿಗೆ ಸ್ಫೂರ್ತಿಯಾಗಿತ್ತು. ಇದೀಗ ಸೀರಿಯಲ್ ಮುಂದೆ ಸಾಗಿದಂತೆ ಬೇರೆ ಬೇರೆ ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಬಂಗಾರಮ್ಮನ ಜಾಗದಲ್ಲಿ ಸಿಂಗಾರಮ್ಮ ಬಂದು ಕುಳಿತುಕೊಂಡಿರುವುದಕ್ಕೆ ಇದಾಗಲೇ ಸಾಕಷ್ಟು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಸುಂದರವಾದ ಸೀರಿಯಲ್ ತನ್ನ ಮೂಲತನವನ್ನೇ ಕಳೆದುಕೊಳ್ಳುತ್ತಿದೆ ಎಂದು ಹಲವರು ವ್ಯಥೆ ಪಡುತ್ತಿದ್ದಾರೆ. ಪುಟ್ಟಕ್ಕನನ್ನು ನೋಡಿ ಅದೆಷ್ಟೋ ಮಹಿಳೆಯರು ಸ್ಫೂರ್ತಿಯಿಂದ ತಾವೂ ಆಕೆಯಂತೆ ಮಕ್ಕಳನ್ನು ಸಾಕುತ್ತಿದ್ದಾರೆ. ಆದರೆ ಯಾಕೋ ಸೀರಿಯಲ್ ಹಳ್ಳ ಹಿಡಿಯುತ್ತಿದೆ ಎಂದೇ ಬಹುತೇಕ ಕಮೆಂಟಿಗರು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ.
ಇದರ ನಡುವೆಯೇ ಇದೀಗ ಪುಟ್ಟಕ್ಕನ ಮಕ್ಕಳು ನಿರ್ದೇಶಕ ಆರೂರು ಜಗದೀಶ್ ಅವರು ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ. ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅವರು, ನಮಸ್ತೆ …. ಪುಟ್ಟಕ್ಕನ ಮಕ್ಕಳು ಧಾರವಾಹಿಯ ಲೀಡ್ ಪಾತ್ರಕ್ಕೆ ಆಡಿಷನ್ ಕರೆ ಕೊಟ್ಟಾಗ email ಮೂಲಕ ಬಂದಿರುವ 1,600 ಹುಡುಗಿಯರ ಪೈಕಿ ಈ ಹುಡುಗಿ ಆಯ್ಕೆ ಆಗಿದ್ದಾಳೆ, ನಮ್ಮ ಕರೆಗೆ ಓಗೊಟ್ಟು ಬಯೊಡೆಟ ಕಳಿಸಿದ ಎಲ್ಲಾರಿಗೂ ಧನ್ಯವಾದಗಳು. ಆಯ್ಕೆಯಾಗಿರುವ ಈ ಹುಡುಗಿಗೆ ನಿಮ್ಮೆಲ್ಲರ ಆಶೀರ್ವಾದ, ಹಾರೈಕೆ ಇರಲಿ. ಆಯ್ಕೆ ಆಗದೇ ಇರುವವರು ಮುಂದಿನ ದಿನಗಳಲ್ಲಿ ಬೇರೆ ಪಾತ್ರಕ್ಕೆ ಪರಿಗಣನೆ ಮಾಡಲಾಗುವುದು. ಹಾಗೆನೇ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಯಶಸ್ವಿಗೆ ಪ್ರೋತ್ಸಾಹಿಸುವ ಎಲ್ಲಾ ಪ್ರೀತಿಯ ನೋಡುಗರಿಗೆ ನಮ್ಮ ಕೃತಜ್ಞತೆಗಳು ಎಂದು ಬರೆದುಕೊಂಡು ಈ ನಟಿಯ ಫೋಟೋ ಶೇರ್ ಮಾಡಿದ್ದಾರೆ.
ತುಳಸಿ ಗರ್ಭಿಣಿ: ಆಗಿದ್ದೇ ಬೇರೆ- ತಿಳಿದುಕೊಂಡದ್ದೇ ಬೇರೆ; ಸೀರಿಯಲ್ಗೆ ಇದೇನಿದು ಟ್ವಿಸ್ಟ್?
ಅಂದಹಾಗೆ, ಕಳೆದ ಜುಲೈ ತಿಂಗಳಿನಲ್ಲಿಯೇ ಆರೂರು ಜಗದೀಶ್ ಆಡಿಷನ್ಗೆ ಆಹ್ವಾನ ನೀಡಿದ್ದರು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟಿಯೊಬ್ಬರು ಬೇಕಾಗಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಎಂದು ಬರೆದುಕೊಂಡಿದ್ದರು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಹೊಸ ಪ್ರಧಾನ ಪಾತ್ರಕ್ಕೆ 23 ರಿಂದ 26 ವಯಸ್ಸಿನ ಒಳಗಿನ, ಸ್ಪಷ್ಟವಾಗಿ ಕನ್ನಡ ಮಾತನಾಡುವ, ನಟನೆ ಗೊತ್ತಿರುವ, ಗುಡ್ ಲುಕ್ ಇರುವ ಹುಡುಗಿ ಬೇಕಾಗಿದ್ದಾರೆ ಎಂದು ಹೇಳುವ ಮೂಲಕ ಇ-ಮೇಲ್ ವಿಳಾಸ ಕೊಟ್ಟಿದ್ದರು. ಈ ಪಾತ್ರಕ್ಕೆ 1,600 ಯುವತಿಯರು ಮುಂದೆ ಬಂದಿರುವುದಾಗಿ ಈಗ ಅವರು ಹೇಳಿದ್ದಾರೆ. ಆದರೆ ಈ ಹೊಸ ನಟಿ ಯಾರು, ಎಲ್ಲಿಯವರು, ಇವರ ಹಿನ್ನೆಲೆ ಏನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಸದ್ಯ ಹಳ್ಳಿಯ ಲುಕ್ನಲ್ಲಿ ಇರುವ ಹುಡುಗಿಯ ಪಾತ್ರಕ್ಕಾಗಿ ಆರೂರು ಅವರು ಹುಡುಕಾಟ ನಡೆಸುತ್ತಿದ್ದರು ಎಂದು ಈ ಹೊಸ ನಟಿಯ ಲುಕ್ ನೋಡಿ ತಿಳಿದುಬಂದಿದೆ.
ಆದರೆ ಇದೀಗ ಸೀರಿಯಲ್ನಿಂದ ಯಾವುದಾದರೂ ಪಾತ್ರ ಹೊರಕ್ಕೆ ಹೋಗಲಿದೆಯೇ ಎನ್ನುವ ಚರ್ಚೆ ಶುರುವಾಗಿದೆ. ಪ್ರಧಾನ ನಟಿಯ ರೋಲ್ ಎಂದರೆ ಸಹನಾ, ಸ್ನೇಹಾ ಮತ್ತು ಸುಮಾ. ಇವರಲ್ಲಿ ಸದ್ಯದ ಮಟ್ಟಿಗೆ ನಾಯಕಿಯರಾಗಿರುವುದು ಸಹನಾ ಮತ್ತು ಸ್ನೇಹಾ. ಇಬ್ಬರಲ್ಲಿ ಯಾರು ಹೊರಕ್ಕೆ ಹೋಗಲಿದ್ದಾರೆ, ಅಥವಾ ಇನ್ನೊಂದು ಹೊಸ ಪಾತ್ರದ ಸೃಷ್ಟಿ ಆಗಲಿದೆಯಾ ಎನ್ನುವುದು ತಿಳಿದಿಲ್ಲ. ಈ ಬಗ್ಗೆ ಆರೂರು ಜಗದೀಶ್ ಅವರ ಪೋಸ್ಟ್ಗೆ ಹಲವರು ಪ್ರಶ್ನೆ ಕೂಡ ಕೇಳಿದ್ದು, ಅದಕ್ಕೆ ಅವರು ಉತ್ತರ ನೀಡದೇ ಗೋಪ್ಯವಾಗಿ ಇಟ್ಟಿದ್ದಾರೆ. ಸಹನಾ ಅವರು ಡಾನ್ಸ್ ಕರ್ನಾಟಕ ಡಾನ್ಸ್ ಷೋನಲ್ಲಿ ಇದ್ದು, ಬಹುಶಃ ಅವರೇ ಸೀರಿಯಲ್ ಬಿಟ್ಟು ಹೋಗುತ್ತಿರಬಹುದು ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಪ್ರಧಾನ ರೋಲ್ ಎಂದರೆ ಸ್ನೇಹಾಳದ್ದು. ಅವಳೇ ಹೋಗುತ್ತಿರಬಹುದು ಎಂದು ಮತ್ತೆ ಕೆಲವರು ಹೇಳಿದ್ದಾರೆ. ಆದರೆ ಇನ್ನು ಕೆಲವರದ್ದು ಅವರ್ಯಾರೂ ಅಲ್ಲ, ಹೊಸ ಪಾತ್ರದ ಸೃಷ್ಟಿಯಾಗಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಹೊಸ ಹುಡುಗಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಲೋ ತಾಂಡವ್, ಶ್ರೇಷ್ಠಾ ಬೇಕೇನೋ ನಿನಗೆ? ಕೋಲು ಹಿಡಿದು ಬಂದ ಅಜ್ಜಿ ಕೋಪಕ್ಕೆ ತಾಂಡವ್ ಸುಸ್ತೋ ಸುಸ್ತು!