ಹಿರಿಯ ನಟಿ ಪವಿತ್ರಾ ಲೋಕೇಶ್ ಅವರ ತಾಯಿ ಪಾರ್ವತಿ ಲೋಕೇಶ್, ಮಗಳ ಮೊದಲ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಸೂರ್ಯ ಜೊತೆಗಿನ ಆ ವಿವಾಹವು ಕೇವಲ ಎರಡು ತಿಂಗಳಲ್ಲಿ ಮುರಿದುಬಿದ್ದಿದ್ದು, ಆತ ಹಣಕ್ಕಾಗಿ ಮತ್ತು ಅನುಮಾನದಿಂದ ಪವಿತ್ರಾಗೆ ನೀಡಿದ ಹಿಂಸೆಯ ಬಗ್ಗೆ ವಿವರಿಸಿದ್ದಾರೆ.
ಬೆಂಗಳೂರು (ಜೂ.3): ಹಿರಿಯ ನಟಿ ಪವಿತ್ರಾ ಲೋಕೇಶ್ ಇಂದು ಸುಂದರ ಸಂಸಾರದಲ್ಲಿದ್ದಾರೆ. ಸುಚೇಂದ್ರ ಪ್ರಸಾದ್ ಅವರಿಂದ ಬೇರೆಯಾದ ಬಳಿಕ 2023ರಿಂದ ವಿಜಯಕೃಷ್ಣ ನರೇಶ್ ಅವರನ್ನು ಮದುವೆಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಸಂಪೂರ್ಣ ವಾಸ ಹೈದರಾಬಾದ್‌ನಲ್ಲಿಯೇ. ಹಾಗಂತ ಇದು ಪವಿತ್ರಾ ಲೋಕೇಶ್ ಅವರ 2ನೇ ವಿವಾಹವಲ್ಲ. ಇದು ಆಕೆಯ ಮೂರನೇ ವಿವಾಹ. ಸುಚೇಂದ್ರ ಪ್ರಸಾದ್ ಅವರೊಂದಿಗಿನ ರಿಲೇಷನ್‌ಷಿಪ್‌ಗಿಂತ ಮುನ್ನ 2007ರಲ್ಲಿ ಆಕೆಗೆ ಮದುವೆ ಕೂಡ ಆಗಿತ್ತು. ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಸೂರ್ಯ ಎನ್ನುವವರನ್ನು ಪವಿತ್ರಾ ಲೋಕೇಶ್ ಮದುವೆಯಾಗಿದ್ದರು. ಆದರೆ, ಈ ಮದುವೆ ಎರಡು ತಿಂಗಳು ಕೂಡ ಉಳಿಯಲಿಲ್ಲ.
ಇದರ ಬಗ್ಗೆ ಪವಿತ್ರಾ ಲೋಕೇಶ್ ಅವರ ತಾಯಿ ಹಾಗೂ ಹಿರಿಯ ನಟ ದಿ.ಮೈಸೂರು ಲೋಕೇಶ್ ಅವರ ಪತ್ನಿ ಪಾರ್ವತಿ ಲೋಕೇಶ್ ಚಿತ್ರಲೋಕ ಡಾಟ್‌ಕಾಮ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಮಗಳ ಸಂಸಾರದ ಕಷ್ಟಗಳನ್ನು ಕಂಡು ಅವರು ಬೇಸರಪಟ್ಟುಕೊಂಡಿದ್ದಾರೆ.
'ಪವಿತ್ರಾಳ ಮೊದಲ ಮದುವೆ ಆಗಿದ್ದು ಆಂಧ್ರದ ಹೈದರಾಬಾದ್‌ನಲ್ಲಿ. ಸೂರ್ಯ ಅಂತಾ ಅವನ ಹೆಸರು. ಮದುವೆ ಅಲ್ಲಿನ ದೇವಸ್ಥಾನದಲ್ಲಿ ನಡೆದಿತ್ತು. ಅಲ್ಲೆಲ್ಲಾ ರಾತ್ರಿ ಹಾಗೂ ಬೆಳಗಿನ ಜಾವದ ಸಂಪ್ರದಾಯಗಳೇ ಜಾಸ್ತಿ. ಮದುವೆಗೆ ನಾನೂ ಹೋಗಿದ್ದೆ. ಎಲ್ಲರೂ ಬಂದಿದ್ರು. ನಮ್ಮ ಅತ್ತೆ ಮನೆಯವರೂ ಬಂದಿದ್ರು. ಅದು ಲವ್ ಮ್ಯಾರೇಜ್ ಅಲ್ಲ. ಬೆಂಗಳೂರಿನಲ್ಲಿದ್ದ ಪಕ್ಕದ ಮನೆಯವರು ಒಬ್ಬರು ಯಾರೋ ಸಾಫ್ಟ್‌ವೇರ್ ಇಂಜಿನಿಯರ್‌ಅನ್ನು ತೋರಿಸಿಕೊಟ್ಟಿದ್ದರು. ಆತ ಸಿನಿಮಾದಲ್ಲಿ ಇದ್ದಿರಲಿಲ್ಲ' ಎಂದು ಹೇಳಿದ್ದಾರೆ.
ಸಾಕಷ್ಟು ವರದಕ್ಷಿಣೆ ಕೂಡ ಕೊಟ್ಟಿದ್ದೆವು
ಸಾಕಷ್ಟು ಖರ್ಚು ಮಾಡಿ ಮದುವೆ ಮಾಡಿದ್ದೆವು ಎಂದ ಪಾರ್ವತಿ ಲೋಕೇಶ್, 'ಪವಿತ್ರಾ ಬೆಂಗಳೂರಿನಲ್ಲಿ ಇದ್ದ ಮನೆಯಲ್ಲಿ ಒಬ್ಬರು ತೆಲುಗಿನವರು ಇದ್ರು. ಅವರು ತೋರಿಸಿಕೊಟ್ಟ ಹುಡುಗ. ಮದುವೆಗೂ ಅವರು ವರದಕ್ಷಿಣೆ ಎಲ್ಲಾ ತೆಗೆದುಕೊಂಡಿದ್ದರು. ಸುಮ್ಮನೆ ಮಾಡಿಕೊಳ್ಳಲಿಲ್ಲ. ನಾವು ಅವರು ಕೇಳಿದ್ದ ಬೆಳ್ಳಿ, ಚಿನ್ನದ ಸಾಮಾನುಗಳ ಲಿಸ್ಟ್ ಕೊಟ್ಟಿದ್ರು. ಈಗಿನ ಅಂದಾಜಲ್ಲಿ ನೋಡಿದ್ರೆ ಅದೆಲ್ಲಾ ಜಾಸ್ತೀನೇ ಆಗುತ್ತೆ. ಬೆಳ್ಳಿ ಸಾಮಾನಿ, ಹುಡುಗನಿಗೆ ಚೈನು, ಮದುವೆ ಖರ್ಚು, ರಿಸೆಪ್ಶನ್ ಖರ್ಚು ಎಲ್ಲವೂ ಇದ್ದವು' ಎಂದಿದ್ದಾರೆ.
ದಾಸ್ ಪ್ರಕಾಶ್ ಪ್ಯಾರಡೈಸ್‌ನಲ್ಲಿ ರಿಸೆಪ್ಶನ್ ನಡೆದಿತ್ತು. ಅವಳ ಜೀವನದಲ್ಲಿ ಏನೇನೆಲ್ಲಾ ಆಗೋಯ್ತು. ಎರಡು ತಿಂಗಳು ಕೂಡ ಇರೋಕೆ ಆಗಲಿಲ್ಲ. ಅವನೆಲ್ಲಾ ದುಡ್ಡು ಕಿತ್ಕೊಂಡು ಹೋದ. ಆಗ ತೆಲುಗಲ್ಲಿ ಒಂದು ಸೀರಿಯಲ್ ಮಾಡ್ತಾ ಇದ್ದಳು. ಸಿನಿಮಾದಿಂದ ಎಲ್ಲಾ ದುಡ್ಡು ಈಕೆಗೆ ಬರುತ್ತೆ ಅಂತಾ ಆಕೆಯಲ್ಲಿದ್ದ ಎಲ್ಲಾ ದುಡ್ಡನ್ನು ಕಿತ್ಕೊಂಡು ಬಿಟ್ಟರು. ಆಕೆಗೆ ನೆಮ್ಮದಿ ಇಲ್ಲದ ಹಾಗೆ ಆಯ್ತು. ಆ ಬಳಿಕ ಆಕೆಯ ಬದುಕಲ್ಲಿ ಬಂದಿದ್ದು ಸುಚೇಂದ್ರ ಪ್ರಸಾದ್. ಅವರು ಯಾವುದೋ ಒಂದು ಸೀರಿಯಲ್ ಟೈಮ್‌ನಲ್ಲಿ ಪರಿಚಯವಾಗಿದ್ದರು ಎಂದು ಹೇಳಿದ್ದಾರೆ.
ಆಕೆಯ ಮೇಲೆ ಅನುಮಾನ ಪಡ್ತಾ ಇದ್ದ
ಪವಿತ್ರಾ ಮೇಲೆ ಆತ ಅತಿಯಾಗಿ ಅನುಮಾನ ಪಡ್ತಿದ್ದ ಎಂದ ತಾಯಿ, 'ಸಿನಿಮಾದಲ್ಲಿ ಪವಿತ್ರಾ ಮಾಡೋ ಸೀನ್‌ಗಳನ್ನು ನೋಡಿ ಆತ ಅನುಮಾನ ಪಡ್ತಾ ಇದ್ದ. ಮದುವೆಯಾದ ಎರಡೇ ತಿಂಗಳಲ್ಲಿ ಟಾರ್ಚರ್ ಶುರುವಾಗಿತ್ತು. ಮೈಸೂರಿಗೆ ಬಂದು ಹೇಳಿಕೊಂಡಿದ್ದಳು. ಶೂಟಿಂಗ್ ಸೆಟ್‌ಗೆ ಬಂದು ಬೈಯೋದು. ಈ ಸೀನ್ ಯಾಕೆ ಮಾಡಬೇಕು ನೀನು ಅಂತೆಲ್ಲಾ ಕೇಳೋದು ಮಾಡ್ತಿದ್ದ. ಇದರಿಂದ ಆಕೆಗೆ ಹಿಂಸೆ ಆಗ್ತಾ ಇತ್ತು. ಆಕೆಯ ಬಳಿ ಒಂದು ಕಾರ್ ಇತ್ತು. ಅದನ್ನು ಮಾರಿಬಿಡು ಎಂದು ಅದನ್ನು ಮಾರಾಟ ಮಾಡಿದ. ಇದೆಲ್ಲವೂ ಹೈದರಾಬಾದ್‌ನಲ್ಲೇ ಆಗಿತ್ತು. ಮದುವೆಗೆ ಬಂದಂತ ವಸ್ತು ಎಲ್ಲವನ್ನೂ ಅವರೇ ತೆಗೆದುಕೊಂಡರು. ಆಕೆಯ ಹೆಸರಿನಲ್ಲಿದ್ದ ಬಾಂಡ್ ಎಲ್ಲವನ್ನೂ ಅವರೇ ಕ್ಯಾಶ್ ಮಾಡಿಕೊಂಡರು. ಇಷ್ಟೆಲ್ಲಾ ಸಂಕಷ್ಟಗಳನ್ನು ಎದುರಿಸಿ ಬಂದಾಗ ಆಕೆಯ ಲೈಫ್‌ನಲ್ಲಿ ಬಂದಿದ್ದು ಸುಚೇಂದ್ರ ಪ್ರಸಾದ್ ಎಂದು ತಾಯಿ ಪಾರ್ವತಿ ಹೇಳಿದ್ದಾರೆ.


