ಕಲರ್ಸ್ ಕನ್ನಡದ ‘ನಂದಗೋಕುಲ’ ಧಾರಾವಾಹಿಯಲ್ಲಿ ನಂದನ ಹಿರಿಯ ಮಗಳು ಧನ್ಯಾ ಪಾತ್ರದಲ್ಲಿ ನಟಿಸಿದ ನಟಿ ರಕ್ಷಿತಾ ರವೀಂದರ್ ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದು, ಇದೀಗ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಸಂಭ್ರಮದ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಾಯಿಯಾದ ಸಂಭ್ರಮದಲ್ಲಿ ನಂದಗೋಕುಲ ನಟಿ

ಇತ್ತೀಚೆಗಷ್ಟೇ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ದ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ ದ ನಟಿ ರಕ್ಷಿತಾ ರವೀಂದರ್ ಇದೀಗ ತಾಯಿಯಾದ ಸಂಭ್ರಮದಲ್ಲಿದ್ದಾರೆ. ನಟಿ ರಕ್ಷಿತಾ ಪತಿ ಜೀವನ್ ಕಿಶೋರ್ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊ ಒಂದನ್ನು ಹಂಚಿಕೊಂಡು ‘ Little prince has arrived’ ಎಂದು ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ರಕ್ಷಿತಾ ಸೀಮಂತ ಕಾರ್ಯಕ್ರಮ ನಡೆದಿದ್ದು, ‘ನಂದಗೋಕುಲ’ ಧಾರಾವಾಹಿಯ ನಟ-ನಟಿಯರು ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನ ಮನ ಗೆದ್ದ ತುಂಬು ಕುಟುಂಬದ ಕಥೆಯ ಧಾರಾವಾಹಿ ಅಂದ್ರೆ ಅದು ‘ನಂದಗೋಕುಲ’. ಗಿರಿಜಾ ಮತ್ತು ನಂದ ದಂಪತಿಗಳಿಗೆ ಐವರು ಮಕ್ಕಳು. ಮಾಧವ, ಕೇಶವ ಮತ್ತು ವಲ್ಲಭ ಎನ್ನುವ ಮೂವರು ಗಂಡು ಮಕ್ಕಳು ಹಾಗೂ ಧನ್ಯಾ ಮತ್ತು ರಕ್ಷಾ ಎನ್ನುವ ಇಬ್ಬರು ಹೆಣ್ಣುಮಕ್ಕಳು. ಹಿರಿಯ ಮಗಳು ಧನ್ಯಾ ಪಾತ್ರದಲ್ಲಿ ನಟಿಸುತ್ತಿದ್ದವರು ನಟಿ ರಕ್ಷಿತಾ. ರಕ್ಷಿತಾ ಧಾರಾವಾಹಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದರು. ಉಳಿದ ಮಕ್ಕಳಂತಲ್ಲದೇ ಸ್ವಲ್ಪ ಖಡಕ್ ಮಾತುಗಳ, ಎಲ್ಲರ ಮುಂದೆ ತಂದಿಡುವ ಬುದ್ದಿ ಇರುವ ಪಾತ್ರ ಧನ್ಯಾಳದ್ದು. ಆದರೆ ನಟಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗಲೆಲ್ಲಾ ಸದ್ದು ಮಾಡುತ್ತಲೇ ಇರುತ್ತಾರೆ. ನಂದಗೋಕುಲ ಧಾರಾವಾಹಿಗೆ ಎಂಟ್ರಿ ಕೊಟ್ಟ ಬಳಿಕವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ತಾಯ್ತನದ ಸಂಭ್ರಮವನ್ನು ಅನುಭವಿಸಿದ್ದಾರೆ ರಕ್ಷಿತಾ.

ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಕ್ಷಿತಾ

ಈವೆಂಟ್ ಆರ್ಗನೈಸರ್ ಆಗಿರುವ ನಟಿ ರಕ್ಷಿತಾ , ಕಳೆದ ವರ್ಷ ಆಗಸ್ಟ್‌ನಲ್ಲಿ ಜೀವನ್‌ ಕಿಶೋರ್‌ ಎನ್‌ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಹಳ ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ‘ನಂದಗೋಕುಲ’ ಧಾರಾವಾಹಿ ಕಲಾವಿದರು ಕೂಡ ಭಾಗಿಯಾಗಿದ್ದರು. ಇನ್ನು ಇತ್ತೀಚೆಗೆ ನಡೆದ ಸೀಮಂತ ಸಮಾರಂಭದಲ್ಲಿ ನಂದಗೋಕುಲ ಧಾರಾವಾಹಿಯ ಮೂವರು ಸೊಸೆಯಂದಿರಾದ ಪ್ರಿಯಾ, ಮೀನಾ ಮತ್ತು ಅಮೂಲ್ಯ ಅಂದರೆ, ಅರ್ಪಿತಾ ಗೌಡ, ಮೇಘಾ ವಿ ಮತ್ತು ಊರ್ಜಿತಾ ವಲ್ತಾಜೆ ಆಗಮಿಸಿದ್ದರು. ಇದೀಗ ನಟಿಯರು ಈಗಷ್ಟೇ ತಾಯಿಯಾಗಿರುವ ರಕ್ಷಿತಾ ಅವರಿಗೆ ಶುಭ ಕೋರಿದ್ದಾರೆ. ಅಲ್ಲದೇ ತಾಯಿ ಮತ್ತು ಮಗು ಆರೋಗ್ಯವಾಗಿ ಇರಲೆಂದು ಹಾರೈಸಿದ್ದಾರೆ.