ಕಲರ್ಸ್ ಕನ್ನಡದಲ್ಲಿ 'ಸರಸ್ವತಿ ಚಂದ್ರ' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದ್ದು, ಇದರಲ್ಲಿ ಚಮನ್ ನಾಯ್ಕ್ ಮತ್ತು ಅರ್ಪಿತಾ ಮೋಹಿತೆ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರು ಮತ್ತು ಸುಧಾರಾಣಿ ಕಮ್‌ಬ್ಯಾಕ್ ಮಾಡುತ್ತಿರುವ ಈ ಧಾರಾವಾಹಿಯು ಅಪ್ಪ-ಮಗನ ಸೆಂಟಿಮೆಂಟ್ ಕಥೆಯನ್ನು ಹೊಂದಿದೆ.
ಇಂದು ಕಲಾವಿದರಿಗೆ ಸೀರಿಯಲ್ಗಳಲ್ಲಿ ಸಕತ್ ಡಿಮಾಂಡ್ ಇದ್ದೇ ಇದೆ. ಅದೇ ಇನ್ನೊಂದೆಡೆ, ಹೊಸ ಹೊಸ ಮುಖಗಳನ್ನು ಪರಿಚಯಿಸಲು ನಿರ್ದೇಶಕರು, ನಿರ್ಮಾಪಕರು ಮುಂದಾಗುತ್ತಿದ್ದಾರೆ. ಹೀಗೆ ಹೊಸ ಮುಖಗಳು ಸೀರಿಯಲ್ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವುದು ಇದೆ. ಅದೇ ಸಾಲಿಗೆ ಈಗ ಹೊಸ ಹ್ಯಾಂಡ್ಸಮ್ ನಾಯಕನ ಪರಿಚಯವಾಗುತ್ತಿದೆ. ಅವರ ಹೆಸರು ಚಮನ್ ನಾಯ್ಕ್. ಇದಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿರುವ ಚಮನ್ ಅವರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅವರೀಗ 'ದೃಷ್ಟಿಬೊಟ್ಟು' ಸೀರಿಯಲ್ ನಾಯಕಿ ಅರ್ಪಿತಾ ಮೋಹಿತೆ ಅವರಿಗೆ ಜೋಡಿಯಾಗಲಿದ್ದಾರೆ. ಇದೇ ಸೀರಿಯಲ್ನಲ್ಲಿ ಬಹಳದಿನಗಳ ನಂತರ 'ಮುಖ್ಯಮಂತ್ರಿ' ಚಂದ್ರು- ಸುಧಾರಾಣಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
ಯಾವುದೀ ಸೀರಿಯಲ್?
ಈ ಸೀರಿಯಲ್ ಹೆಸರು ‘ಸರಸ್ವತಿ ಚಂದ್ರ’ (Saraswathi Chandra). ಕಲರ್ಸ್ ಕನ್ನಡದಲ್ಲಿ ಈ ಸೀರಿಯಲ್ ಬಿಡುಗಡೆಗೆ ಸಿದ್ಧವಾಗಿದೆ. ಇದರ ಚಿಕ್ಕದೊಂದು ಪ್ರೊಮೋ ಇದಾಗಲೇ ರಿಲೀಸ್ ಮಾಡಿದೆ ವಾಹಿನಿ. ಅದರಲ್ಲಿ ಮುಖ್ಯಮಂತ್ರಿ ಚಂದ್ರು, ಸುಧಾರಾಣಿ, ನಾಯಕ, ನಾಯಕಿ ಸೇರಿದಂತೆ ನಿರ್ಮಾಣ ಸಂಸ್ಥೆ ಕುರಿತು ಮಾಹಿತಿ ನೀಡಲಾಗಿದೆ. ಅಂದಹಾಗೆ ಬಹುತೇಕ ಸೀರಿಯಲ್ಗಳಂತೆಯೇ ಇದು ಕೂಡ ರೀಮೇಕ್ ಎನ್ನಲಾಗುತ್ತಿದೆ. ಬಿಡುಗಡೆಯಾಗಿರುವ ಪ್ರೊಮೋದಲ್ಲಿ, ಮುಖ್ಯಮಂತ್ರಿ ಚಂದ್ರು ಅವರ ಯೌವನಾವಸ್ಥೆಯನ್ನು ತೋರಿಸಲಾಗಿದೆ. ಇದರಲ್ಲಿ ಹೆರಿಗೆಯ ದೃಶ್ಯವಿದ್ದು, ಮಗು ಹುಟ್ಟಿದ ತಕ್ಷಣ ಅನಾಥ ಆಶ್ರಮದ ಮುಂದೆ ಬಿಟ್ಟು ಬರ್ತಾರೆ. ಮಗು ಸತ್ತೋಯ್ತು ಅಂತ ತಾಯಿಗೆ ಹೇಳು ಎಂದು ನರ್ಸ್‌ಗೆ ಹೇಳ್ತಾರೆ ಮುಖ್ಯಮಂತ್ರಿ ಚಂದ್ರು ಅವರು. ಆದ್ದರಿಂದ ಇದೊಂದು ಅಪ್ಪ-ಮಗನ ಸೆಂಟಿಮೆಂಟ್ ಸೀರಿಯಲ್ ಎಂದು ಊಹಿಸಬಹುದಾಗಿದೆ.
ಇನ್ನು ನಟನ ಬಗ್ಗೆ ಇದಾಗಲೇ ತಿಳಿಸಲಾಗಿದೆ. ನಟಿ ಅರ್ಪಿತಾ ಮೋಹಿತೆ, ಕಿರುತೆರೆಗೆ ಪರಿಚಯವಾಗಿದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಜಯ್ ಸೂರ್ಯ ನಾಯಕರಾಗಿದ್ದ‘ದೃಷ್ಟಿಬೊಟ್ಟು’ ಸೀರಿಯಲ್ ಮೂಲಕ. ನಂತರ ನಟಿ ತೆಲುಗು ಭಾಷೆಗೆ ಕಾಲಿಟ್ಟಿದ್ದರು. ಸ್ಟಾರ್ ಮಾ ವಾಹಿನಿಯಲ್ಲಿ ‘ವಾರಸರಲು’ ಧಾರಾವಾಹಿಯಲ್ಲಿ ನಾಯಕಿಯಾಗಿದ್ದಾರೆ. ಈಗ ‘ಸರಸ್ವತಿ ಚಂದ್ರ’ ಧಾರಾವಾಹಿ ಮೂಲಕ ಕನ್ನಡದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಸೀರಿಯಲ್ ಯಾವಾಗ?
ಕನ್ನಡ ಕಿರುತೆರೆಯಲ್ಲಿ 50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ, ಕ್ರಿಯೇಟಿವ್ ಲೀಡರ್ ಆಗಿ ಕೆಲಸ ಮಾಡಿರುವ ನವೀಲಗರಿ ಸೋಮು ಹಾಗೂ ನಿರ್ದೇಶಕ ಹರ್ಷಪ್ರಿಯಾ ಅವರು ಜೊತೆಗೆ ಸೇರಿ ‘ಮಹ’ ಹೊಸ ನಿರ್ಮಾಣ ಸಂಸ್ಥೆಯನ್ನ ಹುಟ್ಟು ಹಾಕಿದ್ದಾರೆ. ಈ ಪ್ರೊಡಕ್ಷನ್ ಹೌಸ್ ಉದ್ಘಾಟನೆ ಮಾಡಿದ್ದು ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಹಾಗೂ ಬಿಗ್ ಬಾಸ್ ನಿರ್ದೇಶಕ ಪ್ರಕಾಶ್ ಗೋಪಾಲಕೃಷ್ಣನ್. ಸದ್ಯ ಸೀರಿಯಲ್ ಯಾವಾಗ ಆರಂಭ ಎನ್ನುವುದು ಖಾತರಿಯಾಗಿಲ್ಲ. ಯಾವ ಸೀರಿಯಲ್ ಮುಗಿಯಲಿದೆ ಎನ್ನೋದು ನೋಡಬೇಕಿದೆ.







