ಸಚಿವ ಹಾಗೂ ನ್ಯಾಷನಲ್ ಟ್ರಾವೆಲ್ಸ್ ಮಾಲೀಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್, ತಮ್ಮ ತಂದೆಯ ಕುತೂಹಲಕಾರಿ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ರಾವೆಲ್ಸ್ ಬಸ್ಸುಗಳಲ್ಲಿ ನಡೆಯುತ್ತಿದ್ದ ವಂಚನೆಯನ್ನು ಪತ್ತೆಹಚ್ಚಲು, ಜಮೀರ್ ಅವರೇ ಬುರ್ಖಾ ಧರಿಸಿ ಪ್ರಯಾಣಿಕರಂತೆ ಬಸ್ ಹತ್ತಿದ್ದರು.

ಬೆಂಗಳೂರು (ಜ.21): ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್‌ ಅಹ್ಮದ್‌ ಖಾನ್ ರಾಜಕಾರಣಿ ಮಾತ್ರವಲ್ಲ ಉದ್ಯಮಿ ಕೂಡ. ಸಾರಿಗೆ ಕ್ಷೇತ್ರದಲ್ಲಿ ಬಹ ವರ್ಷಗಳ ಅನುಭವ ಹೊಂದಿರುವ ವ್ಯಕ್ತಿ. ಅವರ ಮಾಲೀಕತ್ವದ ನ್ಯಾಷನಲ್‌ ಟ್ರಾವೆಲ್ಸ್‌ ಇಂದು ದಕ್ಷಿಣ ಭಾರತದ ಪ್ರಮುಖ ಟ್ರಾವೆಲ್ಸ್‌ ಕಂಪನಿಯಾಗಿ ಹೆಸರು ಮಾಡಿದೆ. ಈ ಬಸ್‌ ಕಂಪನಿಯನ್ನು ಎನ್‌ಟಿ ಜಮೀರ್‌ ಅಹ್ಮದ್‌ ಖಾನ್‌ ಅಸೋಸಿಯೇಟ್ಸ್‌ ನಡೆಸುತ್ತಿದೆ. ಅದರೊಂದಿಗೆ ಟ್ರಾವೆಲ್‌ ಏಜೆನ್ಸಿಯನ್ನೂ ನಡೆಸುತ್ತಿದ್ದಾರೆ. ನ್ಯಾಷನಲ್‌ ಟ್ರಾವೆಲ್ಸ್‌ ಕಂಪನಿಯನ್ನು ಆರಂಭಿಸಿದ್ದು ಜಮೀರ್‌ ಅಹ್ಮದ್‌ ಖಾನ್‌ ಅವರ ತಂದೆ ಬಿಪಿ ಬಶೀರ್‌ ಅಹ್ಮದ್‌ ಖಾನ್‌. ಅದನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದು ಜಮೀರ್‌ ಅಹ್ಮದ್‌.

ಇವರ ಪುತ್ರ ಜೈದ್‌ ಖಾನ್‌ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ಕಲ್ಟ್‌ ಪ್ರಚಾರಕ್ಕಾಗಿ ವಿವಿಧ ಮಾಧ್ಯಮಗಳ ಮುಂದೆ ಸಂದರ್ಶನ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಜೈದ್‌ ಖಾನ್‌ ಎಲ್ಲಿಯೇ ಹೋದರೂ ಅವರಿಗೆ ಪ್ರಶ್ನೆ ಎದುರಾಗುವುದು ತಂದೆಯ ಬಗ್ಗೆಯೇ. ಅಷ್ಟರ ಮಟ್ಟಿಗೆ ಜಮೀರ್‌ ಅಹ್ಮದ್‌ ಖಾನ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ.

ಮೆಟ್ರೋಸಾಗಾದ ಜೊತೆಗಿನ ಸಂದರ್ಶನದಲ್ಲಿ ಜೈದ್‌ ಖಾನ್‌ ಅವರಿಗೆ, ಜನರಿಗೆ ಸಾಮಾನ್ಯವಾಗಿ ತಿಳಿಯದ ಜಮೀರ್‌ ಅಹ್ಮದ್‌ ಖಾನ್‌ ಅವರ ನಾಲ್ಕು ತಮಾಷೆಯ ಪ್ರಸಂಗ ಹೇಳಿ ಎಂದು ಕೇಳಲಾಯಿತು. ಅದಕ್ಕೆ ಜೈದ್‌ ಖಾನ್‌, ಅವರು ತುಂಬಾ ರೇಗಿಸ್ತಾರೆ ಎಂದು ಹೇಳಿದರು.

ಬುರ್ಖಾ ಧರಿಸಿ ಜಮೀರ್‌ ಬಸ್‌ ಹತ್ತಿದ್ಯಾಕೆ?

ಇದೇ ವೇಳೆ ಒಂದು ಘಟನೆಯನ್ನೂ ಅವರು ನೆನಪಿಸಿಕೊಂಡರು. 'ನಮ್ಮದು ಟ್ರಾವೆಲ್ಸ್‌ ಬ್ಯುಸಿನೆಸ್‌ ಇದೆ. ಇಲ್ಲಿದ ಹೋಗುವ ಬಸ್‌ಗಳಲ್ಲಿ 50 ಪ್ಯಾಸೆಂಜರ್‌ ಹತ್ತಬಹುದು ಅಂತಾ ಇರುತ್ತೆ. ಇಲ್ಲಿಂದ ಒಂದು 30 ಜನ ಮಾತ್ರ ಟಿಕೆಟ್‌ ಬುಕ್‌ ಮಾಡಿಕೊಂಡು ಪ್ರಯಾಣ ಮಾಡ್ತಾರೆ. ಅಲ್ಲಿ 20 ಸೀಟ್‌ ಖಾಲಿ ಇದ್ದಿರುತ್ತೆ. ಆದ್ರೆ ಹೈದರಾಬಾದ್‌ನಲ್ಲಿ ಇಳಿಯುವಾಗ 50 ಜನ ಇರ್ತಿದ್ದರು. ಇದು ಹೇಗೆ ಸಾಧ್ಯ ಅಂತಾ ಅಪ್ಪ ಯೋಚ್ನೆ ಮಾಡ್ತಿದ್ದರು. ಇಲ್ಲಿ ವಿಚಾರ ಏನೆಂದರೆ, ಡ್ರೈವರ್‌ಗಳು ಮಧ್ಯದಲ್ಲಿ ಗಾಡಿ ನಿಲ್ಲಿಸಿ, ಸಾಮಾನ್ಯವಾಗಿ ನಮ್ಮ ಬಸ್‌ನಲ್ಲಿ ಪ್ರಯಾಣ ಮಾಡುವ ಟ್ರಾವೆಲರ್‌ಗಳು ಇರ್ತಿದ್ದರಲ್ಲ, ಅವರ ನಂಬರ್‌ಗಳನ್ನು ಪಡೆದುಕೊಂಡಿರುತ್ತಿದ್ದ. 1000 ರೂಪಾಯಿ ಕೊಡೋದ್ಯಾಕೆ, 500 ರೂಪಾಯಿ ನನಗೆ ಕೊಡಿ.ನಾನೇ ನಿಮ್ಮನ್ನು ಪಿಕಪ್‌ ಮಾಡಿಕೊಂಡು ಹೋಗುತ್ತೇನೆ ಅಂತಿದ್ದ. ಆಗ ಸಿಸಿಟಿವಿ ಎಲ್ಲಾ ಬಸ್‌ನಲ್ಲಿ ಇದ್ದಿರಲಿಲ್ಲ. ಇದನ್ನ ಕಂಡು ಹಿಡಿಯೋದು ಹೇಗೆ ಅನ್ನೋದೇ ನಮ್ಮ ಸಮಸ್ಯೆ ಆಗಿತ್ತು. ಆಗ ಒಂದು ದಿನ ಅಪ್ಪ ಅವರೇ ಬುರ್ಖಾ ಹಾಕಿಕೊಂಡು ಪ್ಯಾಸೆಂಜರ್‌ ತರ ಮಧ್ಯದದಲ್ಲೇ ಬಸ್‌ ಹತ್ತಿ ಇದನ್ನ ಕಂಡುಹಿಡಿದಿದ್ದರು. ಆಮೇಲೆ ಡ್ರೈವರ್‌ನ ಕೆಲಸದಿಂದ ಆಚೆ ಹಾಕಿದ್ದರು ಎಂದು ಹೇಳಿದ್ದಾರೆ.

ಇನ್ನು ಡಿಟೆಕ್ಟಿವ್‌ ಆಗಿ ಜಮೀರ್‌ ಅಹ್ಮದ್‌ ಕೆಲಸ ಮಾಡಿದ್ದನ್ನು ಜನರು ತಮಾಷೆಯಾಗಿ ಸಂಭ್ರಮಿಸಿದ್ದಾರೆ. 'ಅದುಕ್ಕೆ ಹೇಳೋದು ಕಳ್ಳನ ನಂಬುದ್ರು ಕುಳ್ಳನ್ ನಂಬಾರ್ದು ಅಂತಾ..' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಜಮೀರ್‌ ಭಾಯ್‌ ಅಸಲಿ ಧುರಂದರ್‌..' ಎಂದು ಕೆಲವರು ಬರೆದಿದ್ದರೆ,ಶಕ್ತಿ ಯೋಜನೆ ಬರೋಕು ಮುಂಚೆಯೇ ಜಮೀರ್‌ ಭಾಯ್‌ ಬುರ್ಖಾ ಧರಿಸಿ ಬಸ್‌ ಹತ್ತಿದ್ರು ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದಿದ್ದಾರೆ.

View post on Instagram