ಬಿಗ್‌ಬಾಸ್‌ಗೆ ಮೇಘನಾ ರಾಜ್‌ ಹೋಗುತ್ತಾರೆ ಎಂಬ ವದಂತಿಗಳ ಬಗ್ಗೆ ಸ್ವತಃ ನಟಿ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿರುವ ಮೇಘನಾ, ಸಿನಿಮಾ ಮತ್ತು ಧಾರಾವಾಹಿಗಳಿಂದ ದೂರ ಉಳಿದಿದ್ದಾರೆ.

ನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆ. 28ರಿಂದ ಶೋ ಆರಂಭವಾಗಲಿದೆ ಎಂದು ವಾಹಿನಿ ಈಗಾಗಲೇ ಘೋಷಣೆ ಮಾಡಿರುವ ಕಾರಣ ಯಾರೆಲ್ಲಾ ಈ ಶೋಗೆ ಹೋಗುತ್ತಾರೆ ಅನ್ನೋ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಬಿಗ್‌ಬಾಸ್‌ ಆರಂಭಕ್ಕೂ ಮುನ್ನ ಇಂಥದ್ದೊಂದು ಚರ್ಚೆಗಳು ಆಗೋದು ಹೊಸ ವಿಷಯವೂ ಅಲ್ಲ. ಅದೇ ರೀತಿಯಲ್ಲಿ ಈ ಬಾರಿಯೂ ಚರ್ಚೆಗಳು ಶುರುವಾಗಿದೆ. ಕಿರುತೆರೆ ನಟಿಯಾರದ ರಾಮಚಾರಿ ಚಾರು ಪಾತ್ರದ ಮೌನ, ದೃಷ್ಟಿಬೊಟ್ಟು ಸೀರಿಯಲ್‌ನ ನಾಯಕನಟ ವಿಜಯ್‌ ಸೂರ್ಯ ಸೇರಿದಂತೆ ಸಾಕಷ್ಟು ಜನರ ಹೆಸರು ಕೇಳಿಬರುತ್ತಿದೆ. ಈ ಎಲ್ಲದರ ನಡುವೆ ಕೇಳಿ ಬಂದಿರುವ ಮತ್ತೊಂದು ಹೆಸರು ನಟಿ ಮೇಘನಾ ರಾಜ್‌.

ಸಿನಿಮಾಗಳಿಂದ ಮೇಘನಾ ದೂರ

ಮಗನ ಅರೈಕೆಯಲ್ಲಿಯೇ ಸದ್ಯ ಬ್ಯುಸಿಯಾಗಿರುವ ಮೇಘನಾ ರಾಜ್‌, ಸಿನಿಮಾ ಹಾಗೂ ಸೀರಿಯಲ್‌ಗಳಿಂದಲೂ ದೂರವಿದ್ದಾರೆ. ಅಲ್ಲೊಂದು ಇಲ್ಲೊಂದು ರಿಯಾಲಿಟಿ ಶೋಗಳಲ್ಲಿ ಗೆಸ್ಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಮಗನ ಜೊತೆ ಇರುವುದೇ ಅವರಿಗೆ ಈಗ ಫುಲ್‌ಟೈಮ್‌ ಕೆಲಸ. ಹೀಗಿರುವ ಹಂತದಲ್ಲಿ ಮೇಘನಾ ರಾಜ್‌ ಈ ಬಾರಿಯ ಬಿಗ್‌ಬಾಸ್‌ಗೆ ಸ್ಪರ್ಧಿಯಾಗಿ ಹೋಗುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

ಎಲ್ಲವೂ ಸುಳ್ಳು ಎಂದ ಮೇಘನಾ ರಾಜ್‌

ಆದರೆ, ಈ ಊಹಾಪೋಹ ದೊಡ್ಡದಾಗುವ ಮುನ್ನವೇ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ. 'ಇದು ಸಂಪೂರ್ಣ ಸುಳ್ಳು!ಈ ರೀತಿಯ ಸುದ್ದಿಗಳು ವೀಕ್ಷಕರು ಮತ್ತು ಅಭಿಮಾನಿಗಳನ್ನು ತಪ್ಪುದಾರಿಗೆಳೆಯುತ್ತವೆ, ಇಂತಹ ಸುಳ್ಳು ಸುದ್ದಿಗಳನ್ನು ನಂಬುವಂತೆ ಮಾಡುತ್ತದೆ! ನಾನು ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮದ ಭಾಗವಾಗಿಲ್ಲ. ಎಲ್ಲಾ ಗೌರವಾನ್ವಿತ ಸುದ್ದಿ ವಾಹಿನಿಗಳು ಇಂತಹ ಸುದ್ದಿಗಳನ್ನು ಪ್ರಕಟಿಸುವ ಮೊದಲು ನನ್ನೊಂದಿಗೆ ಕನಿಷ್ಠ ಪಕ್ಷ ಮಾತನಾಡಿ ಸುದ್ದಿ ಪ್ರಕಟಿಸಬೇಕು' ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ.

ಮೇಘನಾ ರಾಜ್‌ ವಿಚಾರದಲ್ಲಿ ಕೆಲವೊಂದು ಊಆಪೋಹಗಳು ಕೂಡ ಹೊಸತಲ್ಲ. ಚಿರಂಜೀವಿ ಸರ್ಜಾ ನಿಧನದ ಬಳಿಕ ಅವರ ವಿಚಾರದಲ್ಲಿ ಲೆಕ್ಕವಿಲ್ಲದಷ್ಟು ಊಹಾಪೋಹಗಳು ಎದ್ದಿದ್ದವು. ಎಲ್ಲದಕ್ಕೂ ಅವರು ಕಾಲ ಕಾಲಕ್ಕೆ ಸ್ಪಷ್ಟನೆ ನೀಡುತ್ತಾ ಬಂದಿದ್ದರು. ಇದಕ್ಕೂ ಮುನ್ನ ಮೇಘನಾ ರಾಜ್‌ ಹಾಗೂ ವಿಜಯ್‌ ರಾಘವೇಂದ್ರ ಮದುವೆ ಆಗುತ್ತಾರೆ ಎನ್ನುವ ಸುದ್ದಿಗಳಯ ದೊಡ್ಡ ಪ್ರಮಾಣದಲ್ಲಿ ಹಬ್ಬಿದ್ದವು. ಇದಕ್ಕೂ ಇಬ್ಬರೂ ಸ್ಪಷ್ಟನೆ ನೀಡಿ ಅಂಥಾ ಯಾವ ಯೋಚನೆಗಳೂ ಇಲ್ಲ ಎಂದಿದ್ದರು.

ಹೊಸ ಮನೆ ಕಟ್ಟಿಸಿರುವ ಮೇಘನಾ ರಾಜ್‌

ಸಿನಿಮಾ ಕ್ಷೇತ್ರದಲ್ಲಿಯೇ ಹೊಸ ಹೊಸ ಯೋಚನೆಗಳಲ್ಲಿ ಮೇಘನಾ ರಾಜ್‌ ತೊಡಗಿಕೊಂಡಿದ್ದಾರೆ. ಇನ್ನು ಮಗ ರಾಯನ್‌ ರಾಜ್‌ ಸರ್ಜಾ ಜೊತೆಗಿನ ಜೀವನವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಹೊಸ ಮನೆ ಕೂಡ ಕಟ್ಟಿಸಿಕೊಂಡಿರುವ ಮೇಘನಾ ರಾಜ್‌ ಅದರ ಗೃಹಪ್ರವೇಶವನ್ನೂ ಅದ್ದೂರಿಯಾಗಿ ಮಾಡಿದ್ದರು. ಇದರ ನಡುವೆ ಅವರು ಬಿಗ್‌ಬಾಸ್‌ಗೆ ಹೋಗುತ್ತಾರೆ ಅನ್ನೋ ವದಂತಿ ಹಬ್ಬಿದ್ದವು. ಈ ಕುರಿತಾಗಿ ಸ್ಪಷ್ಟನೆ ನೀಡಿ ಇಂಥ ವಿಚಾರಗಳು ತಮ್ಮ ಎದುರು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.